ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕನ ರಜೆ ಮೇಲೆ ಕಳಿಸಿದ ಶ್ರೀ ಶ್ರೀ ಶಾಲೆ

ವಿದ್ಯಾರ್ಥಿನಿಯರ ಜತೆ ಅನುಚಿತ ವರ್ತನೆ?
Last Updated 25 ಜುಲೈ 2014, 19:46 IST
ಅಕ್ಷರ ಗಾತ್ರ

ಬೆಂಗಳೂರು: ವಿಬ್ಗಯೊರ್‌ ಶಾಲಾ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಪ್ರಕರಣದ ಬೆನ್ನಲ್ಲೇ, ನಗರದ ಮತ್ತೊಂದು ಖಾಸಗಿ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕನೊಬ್ಬ ವಿದ್ಯಾರ್ಥಿ­ನಿಯರೊಂದಿಗೆ ‘ಅನುಚಿತವಾಗಿ ವರ್ತಿ­­ಸಿ­­ರುವ’ ಸಂಗತಿ ಬೆಳಕಿಗೆ ಬಂದಿದ್ದು, ಶಾಲಾ ಆಡಳಿತ ಮಂಡಳಿಯು ಆತನನ್ನು ‘ದೀರ್ಘ ರಜೆ’ ಮೇಲೆ ಕಳುಹಿಸಿದೆ.

ಕನಕಪುರ ರಸ್ತೆಯ ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದ ಶಿಕ್ಷಕ ಡಿ.ಆರಿಫುಲ್ಲಾ, ವಿದ್ಯಾರ್ಥಿನಿಯರ ಜತೆ ಅನುಚಿತವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ. ಈ ಸಂಬಂಧ ವಿದ್ಯಾರ್ಥಿ­ನಿ­ಯರು ಜುಲೈ 21ರಂದು ಶಾಲೆಯ ಪ್ರಾಂಶುಪಾಲರಿಗೆ ದೂರು ನೀಡಿ­ದ್ದಾರೆ. ಆ ದೂರು ಆಧರಿಸಿ ಮಾರನೇ ದಿನವೇ ಆರೀಫ್‌ಗೆ ಎಚ್ಚರಿಕೆ ನೀಡಿ,  ರಜೆಯ ಮೇಲೆ ಕಳುಹಿಸಿದ್ದಾರೆ. ಆತ ಒಂದು ವರ್ಷ­ದಿಂದ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಎಂದು  ಆಡಳಿತ ಮಂಡಳಿಯ ಸದಸ್ಯರು ತಿಳಿಸಿದ್ದಾರೆ.

ಈ ವಿಷಯವಾಗಿ ಆಡಳಿತ ಮಂಡಳಿಯು ಪೋಷಕರೊಂದಿಗೆ ಶುಕ್ರ­ವಾರ ಸಭೆ ಕೂಡ ನಡೆಸಿ ಚರ್ಚಿಸಿದೆ.  ‘ಅನುಚಿತವಾಗಿ ವರ್ತಿಸಿದ್ದರಿಂದ ಆರೀಫ್‌ನಿಗೆ ಎಚ್ಚರಿಕೆ ನೀಡಿ, 15 ದಿನ ರಜೆ ಮೇಲೆ ಕಳುಹಿಸಲಾಗಿದೆ.

ವಿದ್ಯಾರ್ಥಿನಿಯರ ಮೇಲೆ ಯಾವುದೇ ಲೈಂಗಿಕ ದೌರ್ಜನ್ಯ ನಡೆದಿಲ್ಲ’ ಎಂದು  ಪ್ರಾಂಶುಪಾಲರಾದ ಸುಮಾ ಅತ್ರಿ ಹೇಳಿದ್ದಾರೆ.
‘ವಿದ್ಯಾರ್ಥಿನಿಯೊಬ್ಬಳು ನೀಡಿದ ದೂರಿನ ಮೇಲೆ ಈ ಕ್ರಮ ಕೈಗೊಳ್ಳ­ಲಾಗಿದೆ. ದೈಹಿಕ ಶಿಕ್ಷಣ ಶಿಕ್ಷಕ ತನ್ನನ್ನು ಕೆಟ್ಟ ದೃಷ್ಟಿಯಿಂದ ನೋಡಿದ ಎಂದು ಆ ವಿದ್ಯಾರ್ಥಿನಿ ದೂರಿದ್ದಾಳೆ. ಶಾಲೆ­ಯಲ್ಲಿ ಇದೇ ಮೊದಲ ಬಾರಿ ಈ ರೀತಿಯ ದೂರು ಕೇಳಿಬಂದಿದೆ’ ಎಂದು ಅವರು ತಿಳಿಸಿದ್ದಾರೆ. ಆರೀಫ್‌ನನ್ನು ರಜೆಯ ಮೇಲೆ ಕಳುಹಿಸಿರುವ ಬಗ್ಗೆ ಶಾಲೆಯಿಂದ ಇ–ಮೇಲ್‌ ಬಂದಿದೆ ಎಂದು ಪೋಷಕ­ರೊಬ್ಬರು ಖಚಿತಪಡಿಸಿ­ದ್ದಾರೆ.  ಮೂಲಗಳ ಪ್ರಕಾರ ಕೆಲ ದಿನ­ಗಳ ಹಿಂದೆ ಪ್ರೌಢಶಾಲಾ ವಿದ್ಯಾರ್ಥಿ­ನಿಯರ ಮೇಲೂ ಆತ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ.

‘ಪ್ರಕರಣದ ಬಗ್ಗೆ ಪರಿಶೀಲನೆ ನಡೆಸಲು ಸಮಯ ಬೇಕು. ಶಾಲೆಯಲ್ಲಿ ಯಾವುದೇ ಅನುಚಿತ ಘಟನೆ ನಡೆಯದಂತೆ ತಡೆಗಟ್ಟಲು ಕಟ್ಟೆಚ್ಚರ ವಹಿಸಿದ್ದೇವೆ. ಎಲ್ಲಾ ಸಿಬ್ಬಂದಿ ನೀತಿ ಸಂಹಿತೆ ಪಾಲಿಸುತ್ತಿ­ದ್ದಾರೆ. ಅದಕ್ಕೆ ವಿರುದ್ಧವಾಗಿ ನಡೆದರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಇದೇ ಕಾರಣಕ್ಕಾಗಿ ಆರೀಫ್‌ನನ್ನು ರಜೆ ಮೇಲೆ ಕಳುಹಿಸಲಾಗಿದೆ’ ಎಂದು ಆರ್ಟ್‌ ಆಫ್‌ ಲಿವಿಂಗ್ ಬ್ಯೂರೊ ಇ–ಮೇಲ್‌ ಮೂಲಕ ಸ್ಪಷ್ಟನೆ ನೀಡಿದೆ.

ಗಮನಕ್ಕೆ ಬಂದಿಲ್ಲ: ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಮೊಹಮ್ಮದ್‌ ಮೊಹ್ಸಿನ್, ‘ಈ ಘಟನೆ ಸಣ್ಣದೇ ಇರಲಿ, ದೊಡ್ಡದೇ ಇರಲಿ. ಅವರು ಈ ವಿಷಯವನ್ನು ಇಲಾಖೆಯ ಗಮನಕ್ಕೆ ತರಬೇಕಿತ್ತು.  ಘಟನೆ ಬಗ್ಗೆ ದೂರು ಬಂದರೆ ಕ್ರಮ ಕೈಗೊಳ್ಳುತ್ತೇವೆ’ ಎಂದಿದ್ದಾರೆ.

ಪ್ರಕರಣ ದಾಖಲು
‘ಘಟನೆ ಸಂಬಂಧ ಸ್ವಯಂ­ಪ್ರೇರಿತ ಪ್ರಕರಣ ದಾಖಲಿಸಿ­ಕೊಳ್ಳಲಾಗಿದೆ’ ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಎಡ್ವರ್ಡ್‌ ಥಾಮಸ್‌ ಹೇಳಿದ್ದಾರೆ.

‘ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ (ಪೋಕ್ಸೊ) ಪ್ರಕಾರ ಕೆಟ್ಟ ದೃಷ್ಟಿ­ಯಿಂದ ನೋಡುವುದು ಕೂಡ ಲೈಂಗಿಕ ಕಿರುಕುಳ. ದೈಹಿಕ ಸ್ಪರ್ಶ ಮಾಡದಿದ್ದರೂ ಕೆಟ್ಟ ದೃಷ್ಟಿ­ಯಿಂದ ನೋಡಿ ಪ್ರಚೋದಿ­ಸು­ವುದು ಲೈಂಗಿಕ ದೌರ್ಜನ್ಯ­ವಾಗು­ತ್ತದೆ’ ಎಂದು  ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT