ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ಚುನಾವಣೆ: ಜಾತಿ, ಬಣಗಳ ಮೇಲಾಟ

Last Updated 27 ನವೆಂಬರ್ 2014, 10:30 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯ 9 ತಾಲ್ಲೂಕುಗಳ ಶಿಕ್ಷಕರ ಸಂಘದ ನಿರ್ದೇಶಕರ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಸ್ಪರ್ಧಾ ಕಣ ರಂಗೇರಿದೆ. ತುರುವೇಕೆರೆ ತಾಲ್ಲೂಕಿನಲ್ಲಿ ಅವಿರೋಧ ಆಯ್ಕೆ ನಡೆದಿದೆ. ತುಮಕೂರು, ತಿಪಟೂರು, ಗುಬ್ಬಿ, ಕುಣಿಗಲ್‌, ಚಿಕ್ಕನಾಯಕನಹಳ್ಳಿ, ಶಿರಾ, ಕೊರಟಗೆರೆ, ಮಧುಗಿರಿ, ಪಾವಗಡ ತಾಲ್ಲೂಕಿಗೆ ಚುನಾವಣೆ ನಡೆಯುತ್ತಿದೆ. ನ. 29ರಂದು ಮತದಾನ ನಡೆಯಲಿದೆ. ಆಯಾ ಕ್ಷೇತ್ರ ಶಿಕ್ಷಣಾ­ಧಿಕಾರಿಗಳು ಚುನಾವಣಾ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುವರು.

ಬಹಿರಂಗ ಭರಾಟೆ ಕಂಡು ಬಾರದಿದ್ದರೂ ಅಂತ­ರ್ಗಾಮಿಯಾಗಿ ಚುನಾವಣಾ ಆಖಾಡ ರಂಗೇ­ರಿದೆ. ಎರಡು–ಮೂರು ಬಣಗಳಲ್ಲಿ ಶಿಕ್ಷಕರು ಹಂಚಿ ಹೋಗಿರುವುದು ಈ ಸಲದ ಚುನಾವಣೆಯ ವಿಶೇಷವಾಗಿದೆ. ಪ್ರತಿಷ್ಠೆಯ ಜತೆಗೆ ರಾಜಕೀಯ ಸ್ಥಾನಮಾನದ ಆಸೆ ಸ್ಪರ್ಧೆ ತೀವ್ರವಾಗಲು ಕಾರಣವಾಗಿದೆ.

ಮೊದಲೆಲ್ಲ ಶಿಕ್ಷಕರು ರಾಜಕಾರಣಿ­ಗಳೊಂದಿಗೆ, ರಾಜಕೀಯ ಪಕ್ಷಗಳೊಂದಿಗೆ ಗುರು­ತಿ­ಸಿಕೊಳ್ಳುತ್ತಿದ್ದು ಕಡಿಮೆ. ಆದರೆ ಈಗ ರಾಜಕೀಯ ಜಿದ್ದಾಜಿದ್ದಿ, ಜಾತಿವಾರು ವಿಂಗಡಣೆ, ವಿಧಾನಸಭಾ ಚುನಾವಣೆಯಲ್ಲಿ ಶಿಕ್ಷಕರ ಮೇಲೆ ಪ್ರಭಾವ ಬೀರುವ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ಓಲೈಕೆ ಹೆಚ್ಚಿದ ಕಾರಣ ಸಂಘದ ಪದಾಧಿಕಾರಿಗಳಾಗಲೂ ತುದಿಗಾಲ ಮೇಲೆ ನಿಲ್ಲಲು ಕಾರಣ ಎನ್ನುತ್ತಾರೆ ಶಿಕ್ಷಕರೊಬ್ಬರು.

ವಿಧಾನಸಭೆ ಚುನಾವಣೆಯಂತೆಯೇ ಶಿಕ್ಷಕರ ಸಂಘದ ಚುನಾವಣೆಯಲ್ಲೂ ಕೆಲವು ತಾಲ್ಲೂಕುಗಳಲ್ಲಿ ಜಾತಿವಾರು ಲೆಕ್ಕಾಚಾರ ನಡೆದಿದೆ. ಈ ಆಧಾರದ ಮೇಲೆಯೇ ಮತ ಕೇಳಲಾಗುತ್ತಿದೆ. ಚಿಕ್ಕನಾಯನಕಹಳ್ಳಿ ತಾಲ್ಲೂಕಿ­ನಲ್ಲಿ ಕುರುಬರಿಗೆ ಅಧಿಕಾರ ತಪ್ಪಿಸ­ಬೇಕೆಂಬ ಹೆಸರಿನಲ್ಲಿ ಮತ ಕೇಳುತ್ತಿರುವುದು ಕಂಡು­ಬಂದಿದೆ. ತುರುವೇಕೆರೆಯಲ್ಲಿ ಅವಿರೋಧ ಆಯ್ಕೆ ನಡೆದಿದೆ. ಇದರ ಹಿಂದೆ ಸ್ಪರ್ಧಾಂಕ್ಷಿಗಳಿಗೆ ‘ಪ್ರವಾಸ ಭಾಗ್ಯ’ ಕೆಲಸ ಮಾಡಿದೆ ಎಂಬ ಮಾತು­ಗಳು ಶಿಕ್ಷಕರ ವಲಯದಿಂದ ಕೇಳಿ ಬಂದಿದೆ.

ಅತಿ ಹೆಚ್ಚು ಶಿಕ್ಷಕರಿರುವ ತುಮಕೂರು ತಾಲ್ಲೂಕಿನಲ್ಲಿ ಎನ್‌.ಗೋಪಾಲಕೃಷ್ಣ, ಅಂಬ­ರೀಶ್‌ ಎರಡು ಬಣಗಳ ನಡುವೆ ಬಿರುಸಿನ ಸ್ಪರ್ಧೆ ಕಂಡುಬಂದಿದೆ. ಸದ್ಯ, ಹಂಗಾಮಿ ಅಧ್ಯಕ್ಷರಾಗಿ­ರುವ ಗೋಪಾಲಕೃಷ್ಣ ಮನೆ ಮನೆಗೆ ತೆರಳಿ ಮತಯಾಚನೆಯಲ್ಲಿ ತೊಡಗಿದ್ದಾರೆ. ಪೂರ್ಣಾ­ವಧಿ ಅಧಿಕಾರ ಕೊಡುವಂತೆ ಶಿಕ್ಷಕರ ಮನ­ವೊಲಿ­ಕೆಯಲ್ಲಿ ತೊಡಗಿದ್ದಾರೆ. ಮತ ಯಾಚನೆಯಲ್ಲಿ ಅಂಬರೀಶ್‌ ಗುಂಪು ಕೂಡ ಹಿಂದೆ ಬಿದ್ದಿಲ್ಲ. ಎರಡು ಬಣಗಳ ಪ್ರತಿಷ್ಠೆಯ ನಡುವೆಯೂ ದೇವ­ರಾಜ್‌ ಯಾವ ಬಣದಲ್ಲೂ ಇಲ್ಲದೇ ಪ್ರತ್ಯೇಕವಾಗಿ ಚುನಾವಣೆ ಎದುರಿಸುತ್ತಿರುವುದು ವಿಶೇಷವಾಗಿದೆ.

ಕುಣಿಗಲ್‌ನಲ್ಲಿ ನಾಗರಾಜು ಮತ್ತು ಗೋಪಾಲ್‌ ಬಣಗಳ ನಡುವೆ ಸ್ಪರ್ಧೆ ಕಂಡುಬಂದಿದೆ. ಮೊದಲಿನಿಂದಲೂ ಈ ಎರಡೂ ಬಣಗಳು ಅಧಿಕಾರಕ್ಕಾಗಿ ಮೇಲಾಟ ನಡೆಸಿವೆ.

ಗುಬ್ಬಿ ತಾಲ್ಲೂಕಿನಲ್ಲಿ ಗೊರವಯ್ಯ, ಎನ್‌.ಟಿ.ಪ್ರಕಾಶ್‌ ಒಂದು ಬಣ ಕಟ್ಟಿಕೊಂಡಿದ್ದರೆ, ದಯಾನಂದ್‌ ಅವರ ಮತ್ತೊಂದು ಗುಂಪು ಇದೆ. ಗೊರವಯ್ಯ ಬಣ ಕಳೆದ 10 ವರ್ಷಗಳಿಂದ ಅಧಿಕಾರ ಇಟ್ಟುಕೊಂಡಿದೆ. ಜಾತಿ ಆಧಾರದ ಮೇಲೆ ಲೆಕ್ಕಾಚಾರ ನಡೆದಿದೆ. ಜತೆಗೆ ಹೊಸಬರಿಗೆ ಅಧಿಕಾರ ಸಿಗಬೇಕೆಂಬ ಹೆಸರಿನಲ್ಲಿಯೂ ಮತಯಾಚನೆ ನಡೆದಿದೆ.

ತಿಪಟೂರಿನಲ್ಲಿ ಜಿ.ಆರ್‌.ಜಯರಾಂ, ಎಸ್‌.ಸಿ.­ರಮೇಶ್‌, ಚಿಕ್ಕನಾಯಕನಹಳ್ಳಿಯಲ್ಲಿ ಪರಶಿವ­ಮೂರ್ತಿ, ಶಿವಕುಮಾರ್ ಬಣ ಇದೆ. ಮಧು­ಗಿರಿಯಲ್ಲಿ ವೆಂಕಟೇಶ್‌ ನೇತೃತ್ವದಲ್ಲಿ ಶಿಕ್ಷಕರ ಸ್ನೇಹಿತರ ಬಳಗದ ಹೆಸರಿನಲ್ಲಿ ಮತಯಾಚನೆ ನಡೆದಿದೆ. ಸಂಜಯ್‌ ಬಣದಲ್ಲಿ ಗುರು ಹಿತರಕ್ಷಣಾ ಸಿಂಡಿಕೇಟ್‌ ಹೆಸರಿನಲ್ಲಿ ಮತಯಾಚನೆ ನಡೆದಿದೆ.

ತುಮಕೂರು ಹೊರತುಪಡಿಸಿದರೆ ಶಿರಾದಲ್ಲಿ ಅತಿ ಹೆಚ್ಚು 60 ಮಂದಿ ಕಣದಲ್ಲಿದ್ದು ತೀವ್ರ ಕುತೂಹಲ ಕೆರಳಿಸಿದೆ. ಚುನಾವಣೆ ದಿನಾಂಕ ಘೋಷಣೆಗೆ ಮುನ್ನವೇ ಇಲ್ಲಿನ ಶಿಕ್ಷಕರ ಬಣಗಳು ಮತಯಾಚನೆ ಮೂಲಕ  ಬಿರುಸಿನ ಸ್ಪರ್ಧೆಗೆ ಕಾರಣವಾಗಿದ್ದವು. ಹಿಮಾಂಶು, ದೊಡ್ಡಣ್ಣ, ಓಂಕಾರೇಶ್ವರ ಅವರ ಮೂರು ಬಣಗಳಲ್ಲಿ ಶಿಕ್ಷಕರು ಹಂಚಿ ಹೋಗಿದ್ದಾರೆ. ಒಂದೊಂದು ಮತಕ್ಕೂ ಅತ್ಯಂತ ಬೇಡಿಕೆ ಕಾಣುತ್ತಿದೆ.

ಪಾವಗಡದಲ್ಲೂ ಮೂರು ಬಣಗಳಿದ್ದು, ಹಳಬರಿಂದ ಅಧಿಕಾರ ತಪ್ಪಿಸಬೇಕೆಂದು ಹೊಸ­ಬರ ಬಣ ಪ್ರಚಾರ ನಡೆಸಿದೆ. ಹಳಬರು, ಹೊಸಬರನ್ನು ಜೊತೆಯಾಗಿಸಿಕೊಂಡು ಪಾಂಡು­ರಂಗಯ್ಯ, ರಾಜಾನಾಯ್ಕ ಬಣ ಮತಯಾಚನೆ­ಯಲ್ಲಿ ತೊಡಗಿದೆ. ಹಳಬರು, ಹೊಸಬರ ನಡುವೆ ಲಾಭ ಯಾರಿಗೆ ಎಂಬ ಲೆಕ್ಕಚಾರ ಇಲ್ಲಿ ನಡೆಯುತ್ತಿದೆ.

ಕೊರಟಗೆರೆಯಲ್ಲೂ ಎಸ್‌.ಕೆ.ನಾಗರಾಜ್‌, ಪರಮೇಶ್‌, ಹನುಮಂತರಾಯಪ್ಪ ಅವರ ಮೂರು ಬಣಗಳ ನಡುವೆ ತೀವ್ರ ಪೈಪೋಟಿ ಕಾಣಿಸಿದೆ.

ಶಿಕ್ಷಕರು ಸ್ಥಳೀಯರಾಗಿರುವುದು ಕೂಡ ಚುನಾವಣಾ ಕಣ ರಂಗೇರಲು ಕಾರಣವಾಗಿದೆ. ಸಂಬಳದ ಜತೆಗೆ ತೋಟಗಾರಿಕೆ, ಹೈನುಗಾರಿ­ಕೆಯಲ್ಲೂ ಬಹಳಷ್ಟು ಶಿಕ್ಷಕರು ತೊಡಗಿಕೊಂಡಿ­ದ್ದಾರೆ. ತೆಂಗು, ಅಡಿಕೆಗೆ ಹೆಚ್ಚಿನ ಬೆಲೆ ಬಂದಿರುವ ಕಾರಣ ಚುನಾವಣಾ ಕಣದಲ್ಲಿ ಹಣ ಹರಿಯಲು ಆರಂಭಿಸಿದೆ ಎನ್ನುತ್ತಾರೆ ತುಮಕೂರು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಅಧಿಕಾರಿಯೊಬ್ಬರು.

ಮತದಾನದ ಹಿಂದಿನ ದಿನ ಹಣ, ಗಿಫ್ಟ್ ಹಂಚಿಕೆ­ಯಾಗಬಹುದು ಎಂಬುದು ಬಹುತೇಕ ಶಿಕ್ಷಕರ ಅನಿಸಿಕೆಯಾ­ಗಿದೆ. ಬಾಡೂಟ, ಮದ್ಯ­ಪಾನ ಗೋಷ್ಠಿಗಳು ಈಗಾಗಲೇ ಆರಂಭ­ಗೊಂಡಿವೆ. ಶಿಕ್ಷಕರಾಗಿರುವ ಕಾರಣ ಕದ್ದುಮುಚ್ಚಿ ಪಾರ್ಟಿಗಳು ನಡೆಯುತ್ತಿವೆ ಎಂಬ ಮಾತುಗಳು ಕೇಳಿಬಂದಿವೆ.

ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗಳಲ್ಲಿ ಶಿಕ್ಷಕರ ಕೆಲಸಗಳು ಸರಿಯಾಗಿ ಆಗುವುದಿಲ್ಲ. ಸಂಘದ ಪದಾಧಿಕಾರಿಗಳಾಗಿದ್ದರೆ ಹೆಚ್ಚುಗೌರವ. ಅಲ್ಲದೇ ಶಿಕ್ಷಕರು ಕೂಡ ಕೆಲಸಕ್ಕೆ ತಮ್ಮನ್ನೇ ಅವಲಂಬಿಸು­ವುದರಿಂದ ಚುನಾವಣೆಯಲ್ಲಿ ಹೆಚ್ಚು ಸ್ಪರ್ಧಾಂಕ್ಷಿ­ಗಳು ಇರಲು ಕಾರಣವಾಗಿದೆ ಎನ್ನುತ್ತಾರೆ ಶಿಕ್ಷಕರು.

ಶಾಲೆಗೆ ಚಕ್ಕರ್‌:  ಚುನಾವಣೆಯಿಂದಾಗಿ ಸ್ಪರ್ಧೆ­ಯಲ್ಲಿರುವ ಸಾಕಷ್ಟು ಶಿಕ್ಷಕರು ಶಾಲೆಗೆ ಹೋಗದೆ ಮತಯಾಚನೆಗಾಗಿ ಓಡಾಟದಲ್ಲಿರು­ವುದು ಕಂಡುಬಂದಿದೆ. ಕೆಲವರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಶಿಕ್ಷಕರ ಮೇಲೆ ಪ್ರಭಾವ ಬೀರುವ ಪ್ರಯತ್ನದಲ್ಲಿ ತೊಡಗಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಶಾಲೆಗಳಿಗೆ ಅಲ್ಲದೇ ಮನೆಮನೆಗೆ ತೆರಳಿಯೂ ಮತಯಾ­ಚನೆಯಲ್ಲಿ ತೊಡಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT