ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ಮರುಹೊಂದಾಣಿಕೆಯ ಸೂಕ್ಷ್ಮಗಳು

ಸಣ್ಣ ಶಾಲೆಗಳ ಸಮರ್ಥ ನಿರ್ವಹಣೆಗೆ ಪ್ರತ್ಯೇಕ ಕಾರ್ಯನೀತಿ ಅಗತ್ಯ
Last Updated 22 ಜುಲೈ 2016, 19:30 IST
ಅಕ್ಷರ ಗಾತ್ರ

ರಾಜ್ಯದ ಪ್ರಾಥಮಿಕ ಶಿಕ್ಷಣ ಕ್ಷೇತ್ರದಲ್ಲಿ ಈಗ ಶಿಕ್ಷಕರ ಮರುಹೊಂದಾಣಿಕೆಯದ್ದೇ ಸುದ್ದಿ. ಹೆಚ್ಚುವರಿ ಶಿಕ್ಷಕರನ್ನು ಗುರುತಿಸಿ, ಅಗತ್ಯವಿರುವ ಶಾಲೆಗಳಿಗೆ ಸ್ಥಳಾಂತರ ಮಾಡುವ ಪ್ರಕ್ರಿಯೆ ನಡೆದಿದೆ.

ಮಕ್ಕಳ ಸಂಖ್ಯೆಯ ಕೊರತೆಯ ಕಾರಣದಿಂದ ಶಿಕ್ಷಕರು ಹೆಚ್ಚುವರಿಯಾಗುವ ಹಾಗೂ ಅವರನ್ನು ಮರುಹಂಚಿಕೆ ಮಾಡುವ ಪ್ರಕ್ರಿಯೆ ಕಳೆದ ಕೆಲವು ವರ್ಷಗಳಿಂದ ನಡೆಯುತ್ತಿದೆ. ಅಗತ್ಯಕ್ಕೆ ಅನುಗುಣವಾಗಿ ಶಿಕ್ಷಕರ ಮರುಹಂಚಿಕೆ ಮಾಡುವ ಕಾರ್ಯ ಮುಖ್ಯ.

ನಗರದ ಹಾಗೂ ಆಸುಪಾಸಿನ ಶಾಲೆಗಳಲ್ಲಿ ಶಿಕ್ಷಕರ ಸಂಖ್ಯೆ ಅಗತ್ಯಕ್ಕಿಂತ ಹೆಚ್ಚಿರುತ್ತದೆ. ಆದರೆ ಹಳ್ಳಿಗಾಡಿನ  ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇರುತ್ತದೆ. ಶಿಕ್ಷಕರ ಬಯಕೆಗೆ ತಕ್ಕಂತೆ ವರ್ಗಾವಣೆ ನಡೆಯುವುದರಿಂದ ಸಾಮಾನ್ಯವಾಗಿ ಹಳ್ಳಿಗಾಡಿನ ಶಾಲೆಗಳಲ್ಲಿ ಶಿಕ್ಷಕರ ಕೊರತೆಯುಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ನಡೆದಿರುವ ಶಿಕ್ಷಕರ ಮರುಹೊಂದಾಣಿಕೆ  ಅಗತ್ಯ ಕ್ರಮವೆಂದೇ ಅರ್ಥೈಸಬೇಕಾಗುತ್ತದೆ.

ಕರ್ನಾಟಕ, ಕೇರಳ ಸೇರಿದಂತೆ  ಅನೇಕ ರಾಜ್ಯಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ತೀವ್ರವಾಗಿ ಇಳಿಮುಖವಾಗುತ್ತಿದೆ. ನಮ್ಮ ರಾಜ್ಯದ ಒಟ್ಟು 21,654  ಸರ್ಕಾರಿ ಕಿರಿಯ ಶಾಲೆಗಳ ಪೈಕಿ ಐದಕ್ಕಿಂತ ಕಡಿಮೆ  ಮಕ್ಕಳಿರುವ ಶಾಲೆಗಳು 625 (2.88%). ಹತ್ತಕ್ಕಿಂತ ಕಡಿಮೆ ಮಕ್ಕಳಿರುವ ಶಾಲೆಗಳ ಸಂಖ್ಯೆ 2,199 (10.15%). 30ಕ್ಕಿಂತ ಕಡಿಮೆ ಮಕ್ಕಳಿರುವ ಶಾಲೆಗಳು 11,147 (51.47%). 60ಕ್ಕಿಂತ ಕಡಿಮೆ ಮಕ್ಕಳಿರುವ  5,440 (25.12%) ಶಾಲೆಗಳು ಇವೆ.

ಅಂದರೆ ಒಟ್ಟು 19,411 (89.64%) ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ 60ಕ್ಕಿಂತ ಕಡಿಮೆಯಿದೆ. ಉಳಿಕೆ 2,243  ಶಾಲೆಗಳಲ್ಲಿ ಮಾತ್ರ 60ಕ್ಕಿಂತ ಹೆಚ್ಚು ಮಕ್ಕಳಿದ್ದಾರೆ.

ಅದೇ ರೀತಿ ರಾಜ್ಯದ ಒಟ್ಟು 22,447 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಪೈಕಿ 32 ಶಾಲೆಗಳಲ್ಲಿ 5ಕ್ಕಿಂತ ಕಡಿಮೆ ಮಕ್ಕಳು, 1,308 (5.82%) ಶಾಲೆಗಳಲ್ಲಿ 30ಕ್ಕಿಂತ ಕಡಿಮೆ, 3,852  (17.60%) ಶಾಲೆಗಳಲ್ಲಿ 60ಕ್ಕಿಂತ ಕಡಿಮೆ ಮಕ್ಕಳು, 3,740 (16.6%) ಶಾಲೆಗಳಲ್ಲಿ 90ಕ್ಕಿಂತ ಕಡಿಮೆ ಮಕ್ಕಳು ಹಾಗೂ 3,062 (13.64%) ಶಾಲೆಗಳಲ್ಲಿ 120ಕ್ಕಿಂತ ಕಡಿಮೆ ಮಕ್ಕಳು ಇದ್ದಾರೆ. ಅಂದರೆ ಒಟ್ಟು 11,994 (53.43%) ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 120ರೊಳಗೆ ಮಕ್ಕಳಿದ್ದಾರೆ. ಉಳಿಕೆ 10,453 ಶಾಲೆಗಳಲ್ಲಿ 120ಕ್ಕಿಂತ ಹೆಚ್ಚು ಮಕ್ಕಳಿದ್ದಾರೆ.

ದಿನೇ ದಿನೇ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವ ಶಾಲೆಗಳು ಹೆಚ್ಚಾಗುತ್ತಿರುವುದನ್ನು ಈ ಅಂಕಿ-ಅಂಶಗಳು ದೃಢಪಡಿಸುತ್ತವೆ. ಜನಸಂಖ್ಯಾ ದರದ ಕುಸಿತ, ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆಯ ಕಾರಣದಿಂದ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಉಚಿತವಾಗಿ ದಾಖಲಿಸುತ್ತಿರುವುದು ಹಾಗೂ ಇಂಗ್ಲಿಷ್ ಭಾಷೆಯ ವ್ಯಾಮೋಹದಿಂದ ಪೋಷಕರು ಮಕ್ಕಳನ್ನು ಖಾಸಗಿ ಶಾಲೆಗಳಿಗೆ ದಾಖಲಿಸುವ ಕಾರಣಗಳಿಂದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಗಣನೀಯವಾಗಿ ಕುಸಿಯುತ್ತಿದೆ. ಈ ಸನ್ನಿವೇಶಗಳು ಅನಿವಾರ್ಯವಾಗಿ ಸರ್ಕಾರಿ ಶಾಲೆಗಳಲ್ಲಿ ಬಹುವರ್ಗ ಬೋಧನೆಯ ಅನಿವಾರ್ಯವನ್ನು ತಂದೊಡ್ಡಿವೆ.

ತರಗತಿಗೊಬ್ಬ ಶಿಕ್ಷಕರನ್ನು ನೇಮಿಸಿ, ಸರ್ಕಾರಿ ಶಾಲೆಗಳನ್ನು ಬಲಪಡಿಸಬೇಕೆಂಬ ಹಕ್ಕೊತ್ತಾಯವಿದ್ದರೂ, ಅತಿ ಕಡಿಮೆ ಮಕ್ಕಳಿರುವ ತರಗತಿಗಳಿಗೆ ಒಬ್ಬೊಬ್ಬ ಶಿಕ್ಷಕರನ್ನು ನೀಡುವಷ್ಟು ಆರ್ಥಿಕ ಸಂಪನ್ಮೂಲ ನಮ್ಮಲ್ಲಿಲ್ಲ. 2–3 ಮಕ್ಕಳಿಗೆ ಒಬ್ಬ ಶಿಕ್ಷಕರನ್ನು ನೀಡಿದರೂ ಅಷ್ಟು ಕಡಿಮೆ ಮಕ್ಕಳಿಗೆ ಪಾಠ ಬೋಧನೆ ಮಾಡಲು ಪೂರಕವಾದ ತರಗತಿಯ ವಾತಾವರಣ ಸೃಷ್ಟಿಯಾಗದೆ ಶಿಕ್ಷಕರಿಗೇ ಪ್ರೇರಣೆ ಬರುವ ಸಾಧ್ಯತೆಯಿರುವುದಿಲ್ಲ. ಜೊತೆಗೆ ಮಕ್ಕಳಿಗೆ ಸಾಮಾಜಿಕ ವಾತಾವರಣ ದೊರೆಯುವುದು ಕಷ್ಟ.

ಇಂತಹ ಸನ್ನಿವೇಶದಲ್ಲಿ ರಾಷ್ಟ್ರಮಟ್ಟದಲ್ಲಿ ರೂಪಿತವಾಗಿರುವ ಶಿಕ್ಷಣ ಹಕ್ಕು ಕಾಯ್ದೆಗೆ ತಿದ್ದುಪಡಿ ತರಬೇಕು. ಮಕ್ಕಳ– ಶಿಕ್ಷಕರ ಅನುಪಾತವನ್ನು ಪ್ರಸ್ತುತ ಇರುವ ಒಬ್ಬ ಶಿಕ್ಷಕರಿಗೆ 30 ಮಕ್ಕಳಿಗೆ ಬದಲಾಗಿ 20 ಅಥವಾ 25 ಮಕ್ಕಳಿಗೆ ಒಬ್ಬ ಶಿಕ್ಷಕರನ್ನು ನೀಡುವಂತೆ ಕಾಯ್ದೆ ಬದಲಾವಣೆ ಮಾಡಿ, ಅದಕ್ಕೆ ಅಗತ್ಯವಾದ ಆರ್ಥಿಕ ಸಂಪನ್ಮೂಲವನ್ನು ರಾಜ್ಯ ಸರ್ಕಾರಗಳಿಗೆ ಒದಗಿಸಬೇಕು.

ಜೊತೆಗೆ ಖಾಸಗಿ ಶಾಲೆಗಳಲ್ಲಿ ಬಡವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ನೀಡಿ, ಅವರ ವೆಚ್ಚವನ್ನು ಸರ್ಕಾರವು ಖಾಸಗಿ ಶಾಲೆಗಳಿಗೆ ಪಾವತಿಸುವ ವ್ಯವಸ್ಥೆಯನ್ನು ಮಾರ್ಪಡಿಸಲು ಕಾಯ್ದೆಗೆ ತಿದ್ದುಪಡಿ ಮಾಡಲು ಆಲೋಚಿಸಬಹುದು.

ನೆರೆಯ ಕೇರಳದಲ್ಲಿ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಸರ್ಕಾರಿ ಮತ್ತು ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಮೂರು ಕಿ.ಮೀ. ವ್ಯಾಪ್ತಿಯಲ್ಲಿ ಸರ್ಕಾರಿ ಮತ್ತು ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಗಳು ಇಲ್ಲದಿದ್ದಲ್ಲಿ ಮಾತ್ರ ಬಡ ವಿದ್ಯಾರ್ಥಿಗಳಿಗೆ ಖಾಸಗಿ ಶಾಲೆಯಲ್ಲಿ ಪ್ರವೇಶ ದೊರೆಯುವಂತೆ ಆರ್.ಟಿ.ಇ. ಕಾಯ್ದೆಯಲ್ಲಿ ನಿಯಮ ರೂಪಿಸಲಾಗಿದೆ.

ಇದೇ  ನಿಯಮವನ್ನು ರಾಜ್ಯದಲ್ಲೂ ತಂದಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿಯ ಕುಸಿತವನ್ನು ತಡೆಗಟ್ಟಬಹುದು. ಆರ್.ಟಿ.ಇ. ಕಾಯ್ದೆಯು  ಬಡಮಕ್ಕಳಿಗೆ ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಪ್ರವೇಶಾವಕಾಶ ಒದಗಿಸಿ, ಕಲಿಯುವ ಅವಕಾಶ ನೀಡುತ್ತಿದ್ದರೂ, ಸರ್ಕಾರಿ ಶಾಲೆಗಳ ಹಿತರಕ್ಷಣೆಗಾಗಿ ಈ ಅಂಶವನ್ನು ಪುನರ್ ಪರಿಶೀಲಿಸುವ ಅಗತ್ಯವಿದೆ.

ಸಣ್ಣ ಶಾಲೆಗಳ ಶಿಕ್ಷಕರು ತರಗತಿಗಳ ನಿರ್ವಹಣೆ ಹಾಗೂ ಪಾಠ ಬೋಧನೆಯಲ್ಲಿ ಕೆಲವು ಸವಾಲುಗಳನ್ನು ಎದುರಿಸುತ್ತಾರೆ. 60ರೊಳಗೆ ಮಕ್ಕಳಿರುವ ಕಿರಿಯ ಪ್ರಾಥಮಿಕ ಶಾಲೆಗಳ ಇಬ್ಬರು ಶಿಕ್ಷಕರು 1 ರಿಂದ 5ನೇ ತರಗತಿಗಳ 21 ವಿಷಯಗಳನ್ನು ಕಲಿಸಬೇಕಾಗುತ್ತದೆ. ಅದೇ ರೀತಿ 4 ಅಥವಾ 5 ಶಿಕ್ಷಕರಿರುವ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿನ ಶಿಕ್ಷಕರು 1 ರಿಂದ 7ನೇ ತರಗತಿಯವರೆಗೆ 33 ವಿಷಯಗಳನ್ನು ಕಲಿಸಬೇಕಾಗುತ್ತದೆ.

ಇಂತಹ ಸಣ್ಣ ಶಾಲೆಗಳಲ್ಲಿ ಅಳವಡಿಸಿಕೊಳ್ಳಬೇಕಾದ ಬೋಧನಾ ವಿಧಾನ, ತರಗತಿಗಳ ಹಂಚಿಕೆ ಇತ್ಯಾದಿಗಳ ಕುರಿತಂತೆ ಶಿಕ್ಷಕರಿಗೆ ಅಗತ್ಯವಾದ ಬೆಂಬಲ, ಮಾರ್ಗದರ್ಶನದ ಅಗತ್ಯವಿದೆ. ಇದಕ್ಕಾಗಿ ಸಣ್ಣಶಾಲೆಗಳ ಸಮರ್ಥ ನಿರ್ವಹಣೆಗೆ ಪ್ರತ್ಯೇಕವಾದ ಕಾರ್ಯನೀತಿ ಅಗತ್ಯವಾಗಿದೆ.

ಸಾಮಾನ್ಯ ಶಾಲೆಗಳಲ್ಲಿರುವ ಪಠ್ಯಕ್ಕಿಂತ ಭಿನ್ನವಾದ ಪಠ್ಯಕ್ರಮ ಹಾಗೂ ಬೋಧನಾ ವ್ಯವಸ್ಥೆಯನ್ನು ಸಣ್ಣ ಶಾಲೆಗಳಲ್ಲಿ ರೂಪಿಸಲು ಸಾಧ್ಯವೇ ಎಂಬ ಬಗ್ಗೆ ಚಿಂತಿಸಿ, ಪ್ರಯೋಗಗಳಿಗೆ ಮುಂದಾಗುವ ಅವಶ್ಯಕತೆಯಿದೆ.

ಪ್ರಸ್ತುತ ಬಹುವರ್ಗದ ಕಲಿಕಾ ವಿಧಾನವಾದ ನಲಿ-ಕಲಿ ಪದ್ಧತಿಯಲ್ಲಿ 1ರಿಂದ 3ನೇ ತರಗತಿಯವರೆಗೆ ಕಲಿಸಲು ಅವಕಾಶವಿದೆ. ಆದಾಗ್ಯೂ ನಲಿ-ಕಲಿಯಲ್ಲಿ 1, 2ನೇ ತರಗತಿಗಳನ್ನು ಜೊತೆಗೂಡಿಸಿಕೊಂಡು ಕಲಿಸುವಷ್ಟು ಸಮರ್ಥವಾಗಿ 1, 2 ಮತ್ತು 3ನೇ ತರಗತಿಗಳನ್ನು ಒಟ್ಟಿಗೆ ಸೇರಿಸಿಕೊಂಡು ಪರಿಣಾಮಕಾರಿಯಾಗಿ ಕಲಿಸಲು ಆಗುತ್ತಿಲ್ಲ ಎಂಬ ಅಭಿಪ್ರಾಯ ಶಿಕ್ಷಕರಲ್ಲಿದೆ. ಅದಕ್ಕಾಗಿ 1 ಮತ್ತು 2ನೇ ತರಗತಿಗಳನ್ನು ಒಂದು ತರಗತಿ ಹಾಗೂ 3, 4ನೇ ತರಗತಿಗಳನ್ನು ಒಂದು ತರಗತಿಯಾಗಿ ಮಾಡಿ, ನಲಿ-ಕಲಿ ಅಳವಡಿಸುವ ಕುರಿತು  ಚಿಂತಿಸಬಹುದು. 

1 ರಿಂದ 4ನೇ ತರಗತಿಯವರೆಗೆ ಕನ್ನಡ, ಪರಿಸರ ಅಧ್ಯಯನ ಹಾಗೂ ಗಣಿತ ವಿಷಯಗಳ ಪರಿಕಲ್ಪನೆಗಳನ್ನು ಸಮನ್ವಯಗೊಳಿಸಿ, ಕನ್ನಡ ಭಾಷೆಯೊಳಗೆ ಅಡಕಗೊಳಿಸಿ, ಸಂಯೋಜಿತ ಪಠ್ಯವಸ್ತುವನ್ನು ರೂಪಿಸಿ, ಕಲಿಸಬಹುದೇ ಎಂಬ ಬಗ್ಗೆ ಅಧ್ಯಯನ ಕೈಗೊಂಡು, ಪ್ರಾಯೋಗಿಕವಾಗಿ ಅನುಷ್ಠಾನ ಮಾಡುವತ್ತ ಚಿಂತಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT