ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣದ ನಂದಗೋಕುಲ

Last Updated 19 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

‘ನಮ್ಮ ಕಾಲೇಜಿನ ಆವರಣದೊಳಗೆ ಕಾಲಿಡುವ ಮುನ್ನ ಅವರೆಲ್ಲ ಹದಿಹರೆಯದ ಹುಡುಗರು ಆಗಿರುತ್ತಾರೆ. ಓದುವ ಅನಿವಾರ್ಯ ಅವರಿಗೆ ಗೊತ್ತಿರುತ್ತದೆ. ಆದರೆ ವಯೋಸಹಜ ಚಾಂಚಲ್ಯವೂ ಅವರಲ್ಲಿರುತ್ತದೆ.

ಕಾಲೇಜಿನೊಳಗೆ ಕಾಲಿಟ್ಟೊಡನೆ ಮೊದಲ ಆದ್ಯತೆ ಹಾಜರಾತಿಗೆ. ಎರಡನೆಯದು ಶಿಸ್ತಿಗೆ ಮೂರನೆಯದು ನೈತಿಕ ಮೌಲ್ಯಗಳಿಗೆ ಎನ್ನುವುದು ಅರ್ಥವಾಗುತ್ತದೆ. ಈ ಮೂರನ್ನೂ ಅಳವಡಿಸಿಕೊಂಡ ಎಲ್ಲ ವಿದ್ಯಾರ್ಥಿಗಳೂ ಕಾಲೇಜಿನಿಂದಾಚೆ ಕಾಲಿಡುವಾಗ ಜವಾಬ್ದಾರಿಯುತ ನಾಗರಿಕನಾಗಿರುತ್ತಾನೆ. ಇಂಥ ಪರಂಪರೆ ಕಳೆದ 6 ದಶಕಗಳಿಂದ ತಪ್ಪದೆ ನಡೆದು ಬರುತ್ತಿದೆ’

ಎಂ.ಎಸ್‌. ರಾಮಯ್ಯ ಸಮೂಹ ಶಿಕ್ಷಣ ಸಂಸ್ಥೆಗಳ ಮಾತೃ ಸಂಸ್ಥೆಯಾಗಿರುವ ಗೋಕುಲ ಶಿಕ್ಷಣ ಪ್ರತಿಷ್ಠಾನದ ಉಪಾಧ್ಯಕ್ಷ ಎಂ.ಆರ್‌. ಸೀತಾರಾಮ್‌ ಅವರು ತಮ್ಮ ಶಿಕ್ಷಣ ಸಂಸ್ಥೆಯ ಉದ್ದೇಶ ಹಾಗೂ ಕಾರ್ಯ ವೈಖರಿಯನ್ನು ಕೆಲವೇ ಮಾತುಗಳಲ್ಲಿ ಬಣ್ಣಿಸಿದ್ದು ಹೀಗೆ.

ತಮ್ಮ ಸಂಸ್ಥೆಯ ತಂತ್ರಜ್ಞಾನ ಶಾಖೆಯ ಕಾರ್ಯವೈಖರಿ ಹಾಗೂ ವೈಶಿಷ್ಟ್ಯವನ್ನು ಅವರಿಲ್ಲಿ ಹಂಚಿಕೊಂಡಿದ್ದಾರೆ.

ವಿಶಾಲವಾದ ಕ್ಯಾಂಪಸ್‌ನಲ್ಲಿ ವಿವಿಧ ಹಿನ್ನೆಲೆ, ಪ್ರದೇಶ, ಸ್ತರಗಳಿಂದ ಬಂದ ವಿದ್ಯಾರ್ಥಿಗಳು ಇಲ್ಲಿ ಆತ್ಮವಿಶ್ವಾಸದ ಉಡುಗೆ, ಉತ್ಸಾಹದ ತೊಡುಗೆಯಲ್ಲಿ ಮಿಂಚುತ್ತಾರೆ. ಮತ್ತೆ ಬೇರೆ ಯಾವ ಭೇದಗಳೂ ಇವರಲ್ಲಿ ಇಣುಕುವುದಿಲ್ಲ. ಆದರೆ ಸೀತಾರಾಮ್‌ ಅವರ ಪ್ರಕಾರ ಇದನ್ನು ಸಾಧಿಸುವುದೇ ಸವಾಲು.

ಗ್ರಾಮೀಣ ಭಾಗದಿಂದ ಬಂದ ಮಕ್ಕಳು, ಉತ್ತರ ಭಾರತದಿಂದ ಬಂದ ಮಕ್ಕಳು ಇಂಗ್ಲಿಷ್‌ ಎಂದರೆ ಹೌಹಾರುತ್ತಾರೆ. ಮೊದಲ ಸೆಮಿಸ್ಟರ್‌ನಲ್ಲಿ ಬ್ರಿಜ್‌ ಕೋರ್ಸ್‌ ಮಾಡಲಾಗುತ್ತದೆ. ಕಾಮೆಡ್‌ ಕೆ ಅಭ್ಯರ್ಥಿ ಇರಲಿ, ಸಾಮಾನ್ಯ ವರ್ಗದ ಅಭ್ಯರ್ಥಿಯೇ ಇರಲಿ ಎಲ್ಲರಿಗೂ ಸಮಾನ ಅವಕಾಶ ಹಾಗೂ ಸಮಾನ ಅನುಕೂಲಗಳನ್ನು ನೀಡಲಾಗುತ್ತದೆ.

ಪ್ರತಿ ಹತ್ತು ವಿದ್ಯಾರ್ಥಿಗಳಿಗೆ ಒಬ್ಬ ಸಂಯೋಜಕರನ್ನು ನೇಮಿಸಲಾಗುತ್ತದೆ. ಪ್ರತಿ 10 ಸಂಯೋಜಕರಿಗೆ ಮತ್ತೊಬ್ಬ ಮುಖ್ಯಸ್ಥರನ್ನು. ಹೀಗೆ ಈ ಪಿರಾಮಿಡ್‌ ಬೆಳೆಯುತ್ತ ಹೋಗುತ್ತದೆ. ಪ್ರತಿ ವಿದ್ಯಾರ್ಥಿಗಳೂ ಒಬ್ಬರಲ್ಲ ಒಬ್ಬರು ಶಿಕ್ಷಕರ ನಿಗರಾಣಿಯಲ್ಲಿರುತ್ತಾರೆ. ವಿದ್ಯಾರ್ಥಿಗಳ ಉತ್ತರ ಪತ್ರಿಕೆಯನ್ನು ಮೌಲ್ಯ ಮಾಪನ ಮಾಡುವಂತೆ ವಿದ್ಯಾರ್ಥಿಗಳೂ ತಮ್ಮ ಗುರುಗಳ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡುತ್ತಾರೆ. ಹೀಗಾಗಿ ಇಬ್ಬರೂ ಜಾಗೃತರಾಗಿರುತ್ತಾರೆ. ಈ ವ್ಯವಸ್ಥೆಯಿಂದಾಗಿ ಗುರುಗಳೂ ಎಚ್ಚರದಿಂದಿರುತ್ತಾರೆ.

ಕೆಲವೊಮ್ಮೆ ವಯೋಸಹಜ ಚಾಂಚಲ್ಯದಿಂದ ಮಕ್ಕಳು ಓದಿನಿಂದ ವಿಮುಖರಾಗುವುದು ಇದೆ. ಅಂಥ ಸಂದರ್ಭದಲ್ಲಿ ಅವರಿಗಾಗಿ ಆಪ್ತ ಸಮಾಲೋಚಕರೂ ಇದ್ದಾರೆ. ಅವರೊಂದಿಗೆ ಆಪ್ತ ಸಮಾಲೋಚನೆ ಮಾಡಿ, ಬದುಕಿನ ಗುರಿಗಳನ್ನು ಸ್ಪಷ್ಟ ಪಡಿಸಲಾಗುತ್ತದೆ. ಸಕಾಲದಲ್ಲಿ ದೊರೆತ ನೆರವಿನಿಂದಾಗಿ ಅದೆಷ್ಟೋ ಜನ ಹುಡುಗರು ಮತ್ತೆ ತಮ್ಮ ಗುರಿಯತ್ತ ಸಾಗಿರುವ ಉದಾಹರಣೆಗಳೂ ಸಾಕಷ್ಟಿವೆ.

ಕ್ಯಾಂಪಸ್‌ನಿಂದಾಚೆ ವಸತಿ ವ್ಯವಸ್ಥೆ ಮಾಡಿಕೊಂಡಿರುವ ಮಕ್ಕಳ ಮೇಲೆಯೂ ಒಂದು ನಿಗಾ ಇಡಲಾಗುತ್ತದೆ. ಹೆಚ್ಚಾಗಿ ಮಕ್ಕಳ ಹಾಜರಾತಿಯಲ್ಲಿ ಒಂದಿನಿತು ವ್ಯತ್ಯಾಸವಾದರೂ ಅದು ಕೂಡಲೇ ಸಂಯೋಜಕರ ಗಮನಕ್ಕೆ ಬರುತ್ತದೆ. ಅವರು ಪಾಲಕರೊಂದಿಗೆ ಚರ್ಚಿಸುತ್ತಾರೆ. ಮಕ್ಕಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರೆ. ಗೈರು ಹಾಜರಾತಿಗೆ ಕಾರಣವನ್ನು ಕಂಡು ಹಿಡಿದು ಮುಂದೆ ಹಾಗಾಗದಂತೆ ನೋಡಲಾಗುತ್ತದೆ. ಹಾಜರಾತಿಗೆ ಹೆಚ್ಚು ಮಹತ್ವ ನೀಡುವುದರಿಂದ ಮಕ್ಕಳಿಗೆ ಮತ್ತಿತರ ವ್ಯವಹಾರಗಳಿಗೆ ಸಮಯ ಸಿಗದಂತೆ ಆಗುತ್ತದೆ. ಆದರೆ ಪಠ್ಯೇತರ ಚಟುವಟಿಕೆ ಹಾಗೂ ಕ್ರೀಡೆಗೆ ಸಾಕಷ್ಟು ಸಮಯ ನೀಡಲಾಗುತ್ತದೆ. ಪ್ರೋತ್ಸಾಹವೂ ನೀಡಲಾಗುತ್ತದೆ. ಸದ್ಯಕ್ಕೆ ಶಿಕ್ಷಣದ ಮುಖ್ಯ ಗುರಿ ಉದ್ಯೋಗ ಸಂಪಾದನೆ. ಕ್ಯಾಂಪಸ್‌ ಆಯ್ಕೆಗೆ ಹೆಚ್ಚು ಮಹತ್ವ ನೀಡಿದ್ದೇವೆ. 

ಸೀತಾರಾಮ್‌ ಅವರ ಆಡಳಿತ ಕಚೇರಿಯಲ್ಲಿ ಪೆನ್ಸಿಲ್‌ನಿಂದ ಗೆರೆಚಿತ್ರಕಲೆಯಲ್ಲಿ ಗೀತೋಪದೇಶದ ಪುಟ್ಟ ಚಿತ್ರವೊಂದಿದೆ. ಅದನ್ನು ಅತಿ ಮುಚ್ಚಟೆಯಿಂದ ಫ್ರೇಮ್‌ ಹಾಕಿ ಇರಿಸಿರುವ ಅವರಿಗೆ ಆ ಚಿತ್ರವೆಂದರೆ ಇನ್ನಿಲ್ಲದ ಕಕ್ಕುಲತೆ. ಕಾರಣ ಆ ಚಿತ್ರವನ್ನು ಬಿಡಿಸಿದ್ದು ಇಸ್ರೇಲ್‌ ಮೂಲದ ಜೆವಿಶ್‌ ವಿದ್ಯಾರ್ಥಿ. ಇವರ ಸಂಸ್ಥೆಯಲ್ಲಿ ಕಲಿಯುವಾಗ ಭಾರತೀಯ ಸಂಸ್ಕೃತಿಯ ಬಗ್ಗೆ ಆಸಕ್ತಿ ಹುಟ್ಟಿದ ಆ ವಿದ್ಯಾರ್ಥಿಯು ಸಮಯ ಸಿಕ್ಕಾಗಲೆಲ್ಲ ಪೌರಾಣಿಕ, ಇತಿಹಾಸ ಮತ್ತು ಮಹಾಕಾವ್ಯಗಳ ಬಗ್ಗೆ ಇವರ ಬಳಿ ಚರ್ಚಿಸುತ್ತಿದ್ದ.

ಬಿಡುವಿದ್ದಾಗಲೆಲ್ಲ ಗ್ರಂಥಾಲಯದಲ್ಲಿ ಲಭ್ಯ ಇರುವ ಸಾಹಿತ್ಯವನ್ನು ಓದುತ್ತಿದ್ದ. ಕೊನೆಯ ದಿನ ಕಾಲೇಜಿನಿಂದಾಚೆ ಹೋಗಬೇಕಾದರೆ ಈ ಗೀತೋಪದೇಶದ ಚಿತ್ರ ಬರೆದು ಸೀತಾರಾಮ್‌ ಅವರಿಗೆ ಸಮರ್ಪಿಸಿ ಹೊರಟಿದ್ದ.

ಈ ಚಿತ್ರ ಆಗಾಗ ನಮ್ಮ ಧ್ಯೇಯ ಉದ್ದೇಶಗಳನ್ನು ನೆನಪಿಸುತ್ತದೆ. ಈ ಸಂಸ್ಥೆಯ ಸ್ಥಾಪನೆಯ ಸಾರ್ಥಕ್ಯವನ್ನೂ ಸಂಕೇತಿಸುತ್ತದೆ ಎನ್ನುತ್ತಾರೆ ಅವರು.

*ದೂರದರ್ಶಿತ್ವ
ಎಂ.ಆರ್‌. ಸೀತಾರಾಮ್‌ ಅವರು ಎಂ.ಎಸ್‌. ರಾಮಯ್ಯ ಅವರ ಮಗ. ಕಾಂಗ್ರೆಸ್‌ನ ಸಕ್ರಿಯ ರಾಜಕಾರಣಿ ಆಗಿರುವ ಅವರು ಸದ್ಯ ಎಂಎಲ್‌ಸಿ ಆಗಿದ್ದಾರೆ. ಬಿಎಸ್ಸಿ ಪದವೀಧರರಾಗಿರುವ ಅವರಲ್ಲಿ ಶಿಕ್ಷಣ ತಜ್ಞರ ಸಹಜಗುಣವಾದ ದೂರದರ್ಶಿತ್ವ, ವಿಶಾಲ ಮನೋಭಾವ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT