ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ:371(ಜೆ) ಬಳಕೆಗೆ ಸಲಹೆ

ಟ್ಯಾಗೋರ್‌ ಸ್ಮಾರಕ ಸಂಸ್ಥೆ ಎಸ್‌ಆರ್‌ಕೆ ಕಾಲೇಜು ವಿದ್ಯಾರ್ಥಿ ಸಂಘ ಉದ್ಘಾಟನೆ
Last Updated 19 ಏಪ್ರಿಲ್ 2015, 13:58 IST
ಅಕ್ಷರ ಗಾತ್ರ

ರಾಯಚೂರು: ಶೈಕ್ಷಣಿಕವಾಗಿ ಅಭಿವೃದ್ಧಿಯಾದರೆ ದೇಶ –ವಿದೇಶದ ಯಾವುದೇ ರಂಗದಲ್ಲೂ ಸೇವೆ ಸಲ್ಲಿಸಬಹುದು. ಶೈಕ್ಷಣಿಕವಾಗಿ ಅಭಿವೃದ್ಧಿಯಾಗಲು ಸಂವಿಧಾನದ 371(ಜೆ) ಕಲಂ ಬಳಕೆ ಮಾಡಿಕೊಳ್ಳಬೇಕು ಎಂದು ಉಪವಿಭಾಗಾಧಿಕಾರಿ ಎಂ.ಪಿ.ಮಾರುತಿ ಸಲಹೆ ನೀಡಿದರು.

ಟ್ಯಾಗೋರ್ ಸ್ಮಾರಕ ಶಿಕ್ಷಣ ಸಂಸ್ಥೆಯ ಎಸ್‌ಆರ್‌ಕೆ ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿದ್ಯಾರ್ಥಿ ಸಂಘ ಮತ್ತು ಕನ್ನಡ ಸಂಘದ ಉದ್ಘಾಟಿಸಿ ಅವರು ಮಾತನಾಡಿದರು.

ಶೈಕ್ಷಣಿಕವಾಗಿ ಅಭಿವೃದ್ಧಿಯಾಗಲು ಮತ್ತು ಉದ್ಯೋಗ ಗಳಿಸಲು ಹೈದರಾಬಾದ್‌ ಕರ್ನಾಟಕದ ಆರು ಜಿಲ್ಲೆಗಳಿಗೆ ಸಂವಿಧಾನದ 371(ಜೆ) ಕಲಂ ತಿದ್ದುಪಡಿಯಿಂದ ವಿಶೇಷ ಸ್ಥಾನಮಾನ ದೊರೆತಿದೆ. ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ರಾಯಚೂರು ಜಿಲ್ಲೆಯ ಶೈಕ್ಷಣಿಕ ಪ್ರಮಾಣ 2000ನೇ ಇಸ್ವಿಯಿಂದ ಅಭಿವೃದ್ಧಿಯಾಗಿದೆ. ಆದರೆ, ರಾಯಚೂರು ಮತ್ತು ದೇವದುರ್ಗ ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರ ಸಾಕ್ಷರತೆ ಪ್ರಮಾಣ ಇನ್ನೂ ಸುಧಾರಣೆ ಯಾಗಬೇಕು ಎಂದು ತಿಳಿಸಿದರು.

ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ ಎ ಮತ್ತು ಬಿ ವರ್ಗದ ಹುದ್ದೆಗಳಲ್ಲಿ ಶೇ 75 ಹಾಗೂ ಸಿ ಮತ್ತು ಡಿ ಹುದ್ದೆಗಳಲ್ಲಿ ಶೇ 80ರಷ್ಟು ಹುದ್ದೆಗಳಿಗೆ ಸ್ಥಳೀಯರನ್ನು ನೇಮಕಾತಿ ಮಾಡಿಕೊಳ್ಳಲು ಈ ಕಲಂ ಅನುಕೂಲ ಕಲ್ಪಿಸಿದೆ. ಇತ್ತೀಚೆಗೆ ನಡೆದ ಪಿಎಸ್‌ಐ ಪರೀಕ್ಷೆಯಲ್ಲಿ ರಾಯಚೂರು ಜಿಲ್ಲೆಯ 20 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಎಂದರು.

ಜಿಲ್ಲಾ ಗೃಹ ರಕ್ಷಕ ದಳದ ಸಮಾದೇಷ್ಟ ವಿಜಯಾನಂದ ಮಾತನಾಡಿ, ಹಿಂದುಳಿದ ಭಾಗವೆಂಬ ಹಣೆಪಟ್ಟಿಯನ್ನು ಕಳಚಿಕೊಳ್ಳುವುದನ್ನು ವಿದ್ಯಾವಂತರು ಸವಾಲಾಗಿ ಸ್ವೀಕಾರ ಮಾಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಮತ್ತು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎ.ಪಾಪಾರೆಡ್ಡಿ ಮಾತನಾಡಿ, ಹೊಟ್ಟೆಪಾಡಿಗೆ ಶಿಕ್ಷಕರಾಗದೇ ವಿದ್ಯಾದಾನ ಮಾಡುವ ಶಿಕ್ಷಕರಾಗಬೇಕು ಎಂದು ಕಿವಿಮಾತು ಹೇಳಿದರು.

ಪ್ರಧಾನ ಕಾರ್ಯದರ್ಶಿ ದರೂರು ಬಸವರಾಜ ಪಾಟೀಲ, ಉಪಾಧ್ಯಕ್ಷ ಗೋಪಾಲರೆಡ್ಡಿ, ಶಿವಮೂರ್ತಿ, ಅಶೋಕ ಕುಮಾರ, ಆಶಾ ಪ್ರೇಮಲತಾ ಇದ್ದರು.
*
ಮುಖ್ಯಾಂಶಗಳು
* 371(ಜೆ) ಜಾರಿ ಶೈಕ್ಷಣಿಕ, ಉದ್ಯೋಗ ಅವಕಾಶ

*ರಾಯಚೂರು,ದೇವದುರ್ಗ ಮಹಿಳಾ ಸಾಕ್ಷರತೆ ಕಡಿಮೆ
* ಪಿಎಸ್‌ಐ ನೇಮಕಾತಿ:  20 ಅಭ್ಯರ್ಥಿಗಳು ಆಯ್ಕೆ
*
ವಿದ್ಯಾರ್ಥಿಗಳಲ್ಲಿ ಸಾಧನೆ ಮಾಡಲೇಬೇಕು ಎಂಬ ಛಲ ಇರಬೇಕು.  ಧೃಡ ಸಂಕಲ್ಪದಿಂದ ಶ್ರಮಿಸಿದರೆ ಏನಾದರೂ ಸಾಧನೆ ಮಾಡಬಹುದು’
ಮಹೆಬೂಬ ಪಾಷಾ ಮೂಲಿಮನಿ, ಅಧ್ಯಕ್ಷ , ಜಿಲ್ಲಾ ಘಟಕ,ಸ.ನೌ.ಸಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT