ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಥಿಲ

ಕಥೆ
Last Updated 19 ಜುಲೈ 2014, 19:30 IST
ಅಕ್ಷರ ಗಾತ್ರ

‘ಬಾವಿ ನೀರು ಬಾಯಿಗೆ ಹಾಕಲೇ ಆಗ್ತಿಲ್ಲೆ. ಆ ನಮ್ನಿ ವಾಸ್ನೆ. ಹತ್ತು ಹೆಗ್ಗಣ ಬಿದ್ದು ಕೊಳೆತರೆ ಹೆಂಗಾಗ್ತೋ ಹಾಂಗೆ... ಬಾವಿಂದ ತುಂಬಿದ ಕೊಡ ಮೇಲೆ ಬಂದ್ರೆ ಸಾಕು... ಹೊಟ್ಟೆ ತೊಳಸಿ ಬಂದಾಂಗಾಗ್ತು...’ ಸ್ಕೈಪ್‌ನಲ್ಲಿ ನಮ್ಮೆದುರು ಕೂತ ಆಯಿ ಮುಖ ಕಿವುಚಿಕೊಳ್ಳುತ್ತಿದ್ದಳು. ಬೆಳ್ಳಂಬೆಳಗ್ಗೆ ಬಾವಿಯ ನೀರು ಬಾಯಿಗೆ ಹಾಕಿ ಹಿಂದಿನ ಏಳೇಳು ಜನ್ಮ ನೆನಪಾಗಿದ್ದನ್ನು ಪರಿಪರಿಯಾಗಿ ವಿವರಿಸುತ್ತಿದ್ದಳು.

ನಮ್ಮನೆಯ ಹಿತ್ತಲುಕಡೆಯಲ್ಲಿದ್ದ ಬಾವಿಯ ನೀರನ್ನು ಬಳಸುವುದು ಹಾಗಿರಲಿ, ಬಾವಿಯ ಪಕ್ಕ ಕೂತು ಬಟ್ಟೆ ತೊಳೆಯಲೂ ಕೆಲಸದ ಹುಡುಗಿ ಗೋಪಿ ಬೆಳಗ್ಗೆ ಖಡಾಖಂಡಿತವಾಗಿ ನಿರಾಕರಿಸಿದ್ದಳಂತೆ. ನೀರಿನ ವಾಸನೆಗೋ ಅಥವಾ ಗೋಪಿಯ ಮಾತಿಗೋ, ಒಟ್ಟಾರೆ ಆಯಿ ಯಾವುದಕ್ಕೆ ಹೆಚ್ಚು ಸಂಕಟಪಡುತ್ತಿದ್ದಳು ಎಂಬುದನ್ನು ನನಗೂ ನಿರ್ಧರಿಸಲಾಗಲಿಲ್ಲ. ಯಾವುದಕ್ಕೂ ಹೀಗೆಲ್ಲ ಮುಖ ಕಿವುಚುವವಳಲ್ಲ ಆಯಿ ಎಂಬಲ್ಲಿಗೆ ಬಾವಿಯಿಂದ ಅಂಥಾ ದುರ್ನಾತವೇ ಬರುತ್ತಿರಬೇಕು. ನೀರಿಗೆ ಏನು ಬಿತ್ತು ಹಾಗಾದರೆ?

‘ಗೊತ್ತಿಲ್ಲೆ ಮಾಣಿ. ಹಡ್ಬೆ ನಾಯೊ, ಬೆಕ್ಕೋ ಬಿತ್ತೇನ ಹೇಳಿ ಬುಟ್ಟಿ ಇಳಸಿ, ಪಾತಾಳ ಗರುಡ ಬಿಟ್ಟು ಎಲ್ಲಾ ನೋಡಿದ್ದಾತು. ದೊಡ್ಡದೆಂತದೂ ಕಾಣ್ತಿಲ್ಲೆ. ಆದರೆ ನಮ್ಮನೆ ಬಾವಿ ನೀರಿನ ಅವಸ್ಥೆ ಯಾವತ್ತೂ ಹೀಂಗಾಗಿತ್ತಿಲ್ಲೆ. ರಾಮರಾಮಾ!’ ಮನೆಗಿದ್ದ ಒಂದೇ ಬಾವಿಯ ನೀರು ಹಾಳಾಗಿರುವುದಕ್ಕಿಂತ ಹೆಚ್ಚಿನ ತಲೆಬಿಸಿ ನನಗಾಗಿದ್ದು ಅಪ್ಪ-ಆಯಿಯ ಕುಡಿಯುವ ನೀರಿನ ವ್ಯವಸ್ಥೆಯ ಬಗ್ಗೆ. ಪಕ್ಕದ ಮನೆಯ ಬಾವಿಯಿಂದ ನೀರು ತರಬಹುದಾದರೂ ಅದಕ್ಕಾಗಿ 25 ಮೆಟ್ಟಿಲುಗಳನ್ನಾದರೂ ಹತ್ತಿಳಿಯಬೇಕು.

ಅಪ್ಪನಿಗೆ 72 ವರ್ಷ, ಆಯಿಗೂ ೬೫ರ ಮೇಲೆಯೇ ಆಯಿತು. ಅವರಿಗಿನ್ನೆಷ್ಟು ನೀರು ಹೊರಲು ಸಾಧ್ಯ? ಆದರೆ ಸದ್ಯಕ್ಕೆ ಅದೊಂದೇ ದಾರಿ. ಕುಡಿಯುವ ಮಟ್ಟಿಗಾದರೂ ಮೆಟ್ಟಿಲು ಇಳಿದು-ಹತ್ತಿ ನೀರು ತಂದುಕೊಳ್ಳಲೇ ಬೇಕು. ಉಳಿದಿದ್ದಕ್ಕೆ ನೀರು...? ‘ಪಂಚಾಯತದ ನೀರು ಬತ್ತು ಬಿಡು. ಅದನ್ನೇ ಪೈಪ್ ಹಾಕಿ ನಮ್ಮನೆ ಟ್ಯಾಂಕಿಗೆ ತುಂಬಿದರಾತು. ಈ ಬೇಸಿಗೆಲ್ಲಿ ನೀರೇ ಕಡಿಮೆ ಅಂಬೊತ್ತಿಗೆ ಇದ್ದಿದ್ದೂ ಉಪಯೋಗಿಲ್ಲದ ಹಾಂಗಾಂತು. ಈಗ ಮೊದಲಿನಾಂಗೆ ಬಾವಿ ಇಳಿದು ಸೋಸಲ್ಲೆ ಯಾರೂ ಇಲ್ಲೆ ಮಾರಾಯ. ಇವರು ಬೆಳಗಿಂದ ಗುದ್ದಾಡಿದ್ರೂ ಬಾವಿಗೆ ಎಂತ ಬಿತ್ತು ಹೇಳದೇ ಗೊತ್ತಾಗ್ತಿಲ್ಲೆ’.

ಆಯಿ ಅಲವತ್ತುಕೊಳ್ಳುತ್ತಿರಬೇಕಾದರೆ ಅಪ್ಪ ‘ಕೇಳಿದ್ಯನೇ’ ಎನ್ನುತ್ತಾ ಓಡಿಬಂದರು. ಅವರದ್ದಂತೂ ಉಟ್ಟ ಲುಂಗಿ, ತೊಟ್ಟ ಬನಿಯನ್ನು ಎಲ್ಲ ಒದ್ದೆ. ನೀರೋ ಬೆವರೋ ತಿಳಿಯಲಿಲ್ಲ. ‘ವರ್ಲೆ ವರ್ಲೆ’ ಎಂದು ಮೇಲುಸಿರು ಬಿಡುತ್ತಾ ಕಂಪ್ಯೂಟರ್ ಪರದೆಯ ಮೇಲಿದ್ದ ನನ್ನ ಮುಖ ನೋಡಿ, ‘ಗೊತ್ತಾತನಾ... ವರ್ಲೆ ಬಿಜ್ಜು ಬಾವಿ ನೀರಿಗೆ’ ಎನ್ನುತ್ತಾ ಎಲ್ಲಿಂದ ಬೀಳುತ್ತಿದೆ, ಹೇಗೆ ಬೀಳುತ್ತಿದೆ ಎಂದೆಲ್ಲಾ ವರ್ಣಿಸಿ, ಬಾವಿಯತ್ತ ದಾಪುಗಾಲಿಕ್ಕಿದರು. ಬೆನ್ನಿಗೆ ಆಯಿಯೂ ಇದ್ದಳು.

***
ಸಕ್ರೆಬೈಲಿನ ಹೈಸ್ಕೂಲಿನಲ್ಲಿ ಮುಖ್ಯೋಪಾಧ್ಯಾಯರಾಗಿ ನಿವೃತ್ತರಾದ ಮೇಲೆ ಅಪ್ಪ ಅರೆಕಾಲಿಕ ಕೃಷಿಕರಾಗಿದ್ದರು. ಮನೆಯ ಸುತ್ತಲಿನ ಸೊಂಪಾದ ಜಾಗದಲ್ಲೇ ಮನೆ ಬಳಕೆಗೆ ಬೇಕಾದ ತರಕಾರಿ-ಸೊಪ್ಪು ಬೆಳೆಯುತ್ತಾ, ಬಳಕೆಗೆ ಮೀರಿದ್ದನ್ನು ನೆಂಟರು, ಇಷ್ಟರಿಗೆ ದಾನ ಮಾಡುತ್ತಾ, ಮೊದಲೇ ನೆಟ್ಟಿದ್ದ ಹಣ್ಣಿನ ಗಿಡಗಳ ದೇಖರೇಖಿ ನೋಡುತ್ತಾ ಇದ್ದರು. ಉಳಿದ ಹೊತ್ತಿನಲ್ಲಿ ಸಮಾನ ಮನಸ್ಕರೊಂದಿಗೆ ಒಂದು ಹವ್ಯಾಸಿ ತಾಳಮದ್ದಳೆ ಕೂಟ ಮಾಡಿಕೊಂಡಿದ್ದರು. ಮೊದಲೆಲ್ಲಾ ಸಂಗ್ರಹಿಸಿಟ್ಟದ್ದ ಕಪಾಟುಗಟ್ಟಲೆ ಪುಸ್ತಕಗಳನ್ನು ಓದುತ್ತಿದ್ದರು.

ಹಾಗಾಗಿ ಅವರಿಗೆ ಹೊತ್ತೇ ಇಲ್ಲ. ಅವರ ಒಬ್ಬಳೇ ಮಗಳು ಹೈದರಾಬಾದ್‌ನಲ್ಲಿ ಸಂಸಾರೊಂದಿಗಳಾಗಿದ್ದಾಳೆ. ಅವರಿಗಿರುವ ಒಬ್ಬನೇ ಮಗನಾದ ನಾನು ಅಮೆರಿಕದ ಸಿಲಿಕಾನ್ ವ್ಯಾಲಿಯಲ್ಲಿದ್ದೇನೆ. ಇಲ್ಲಿಗೆ ಬಂದು ಕೆಲವು ವರ್ಷಗಳಾಗಿವೆ. ಇಲ್ಲಿಗೆ ಬಂದ ಬಹುಪಾಲು ಜನರಂತೆ ನಾನೂ ವಾಪಸ್ಸು ಹೋಗಬೇಕೆಂದು ಬಾಯಲ್ಲಿ ಹೇಳುತ್ತಾ ಮುಹೂರ್ತ ಕೂಡದೆ ಇಲ್ಲಿಯೇ ಬೇರು ಬಿಡುತ್ತಿದ್ದೇನೆ. ನಾನು ಮರಳಿ ಬರುವ ಬಗ್ಗೆ ಅಪ್ಪ, ಆಯಿಯ ನಿರೀಕ್ಷೆಗಳೇನೊ... ನೇರವಾಗಿ ಕೇಳುವ ಸಾಹಸ ನಾನೂ ಮಾಡಿಲ್ಲ, ತಿಳಿಸುವ ಪ್ರಯತ್ನ ಅವರೂ ನಡೆಸಿಲ್ಲ.

ಹಾಗಾಗಿ ಈ ಕುರಿತು ಸುರಕ್ಷಿತ ಅಂತರವೊಂದನ್ನು ಇಬ್ಬರೂ ಕಾಯ್ದುಕೊಂಡು, ಸೌಹಾರ್ದಯುತವಾಗಿ ಬಾಳುತ್ತಿದ್ದೇವೆ.
ನನ್ನಜ್ಜ ಸಕ್ರೆಬೈಲಿನಲ್ಲಿ ಕಟ್ಟಿಸಿದ್ದ ಈ ಮನೆಯಲ್ಲಿ ಗೆದ್ದಲು ಕಾಟ ಆರಂಭವಾಗಿ ಒಂದೆರಡು ವರ್ಷಗಳೇ ಆಗಿವೆ. ಕಾಕತಾಳೀಯವೋ ಎಂಬಂತೆ ಸರಿಸುಮಾರು ಅದೇ ಸಮಯದಿಂದ ಆಯಿಗೂ ಬಿಪಿ ಶುರುವಾಗಿದೆ. ವಯಸ್ಸಾಗಿದ್ದಕ್ಕೋ, ಗೆದ್ದಲು ಕಾಟಕ್ಕೋ, ಈ ಗೆದ್ದಲಿನಿಂದ ಅಪ್ಪ ಪಡುತ್ತಿದ್ದ ‘ಸುಖ’ಕ್ಕೋ... ಅಂತೂ ಬಿಪಿ ಶುರುವಾಗಿದ್ದು ಯಾವುದಕ್ಕೆ ಎಂದು ಖಚಿತವಾಗಿ ಅವಳಿಗೂ ಗೊತ್ತಿಲ್ಲ. ಆದರೆ ಗೆದ್ದಲು ಕಾಟ ಹೆಚ್ಚಾದಂತೆಲ್ಲಾ ಅಪ್ಪನ ವಿಚಿತ್ರ ಸ್ಥಿತಪ್ರಜ್ಞತ್ವವೂ ಹೆಚ್ಚುತ್ತಿತ್ತು. ಆಯಿಯ ಬಿಪಿ ಏರುತ್ತಿತ್ತು.

ಕಳೆದ ಬಾರಿ ನಾನು ಊರಿಗೆ ಹೋದಾಗಲೇ ಗೇರೆಣ್ಣೆ ಬಾಟಲಿಯನ್ನು ಹಿಡಿದುಕೊಂಡು ‘ಆಡು ಆನೆಯ ನುಂಗಿ, ಗೋಡೆ ಸುಣ್ಣವ ನುಂಗಿ...’ ಎಂದು ದೊಡ್ಡದಾಗಿ ಹಾಡುತ್ತ ಪ್ರಧಾನ ಬಾಗಿಲ ಸಂದಿಮೂಲೆಗಳಿಗೆಲ್ಲಾ ಅಪ್ಪ ಔಷಧಿ ಬಳಿಯುತ್ತಿದ್ದ. ಚಂದದ ಕೆತ್ತನೆಗಳಿದ್ದ ಎರಡಡಿ ಅಗಲದ ಬಾಗಿಲ ಪಟ್ಟಿಯಲ್ಲಿ, ಅಸಂಖ್ಯಾತ ರಂಧ್ರಗಳನ್ನು ಕೊರೆದಿದ್ದ ಅಗಣಿತ ಗೆದ್ದಲು ಹುಳುಗಳನ್ನು ನೋಡಿಯೇ ನನಗೆ ತಲೆಬಿಸಿ ಆಗಿತ್ತು. ‘ಇವರ ಒಗ್ಗಟ್ಟು ಸಾಮಾನ್ಯದ್ದಲ್ಲ ಮಾರಾಯ! ಈ ಸಾರಿ ಹೈದರಾಬಾದಿಗೆ ಹೋಗಿ ಬಪ್ಪಷ್ಟರಲ್ಲಿ ಅಡಿಗೆ ಮನೆ ನಾಗೊಂದಿಗೇನೆ ಜಗಿದು ಪುಡಿ ಮಾಡಿದ್ದ.

ಒಂದೊಂದು ಸಾರಿ ವರ್ಲೆ ಎದ್ದರೆ ಹೀಂಗೆ ಲಕ್ಷಾಂತರ ಸಂಖೆಲ್ಲಿ ಇರ್ತ’ ಎಂದು ವರ್ಣಿಸುತ್ತಾ ಮೊರಗಟ್ಟಲೆ ಹುಳುಗಳನ್ನು ಗುಡಿಸಿಹಾಕಿದ್ದ. ಕುತೂಹಲದಿಂದ ಕಣ್ಣು ಪಿಳಿಗುಡಿಸುತ್ತಿದ್ದ ಮೊಮ್ಮಕ್ಕಳತ್ತ ‘ನೀವೂ ಮಾಡಿನೋಡಿ’ ಎಂಬಂತೆ ಮೊರ ಮುಂದೆ ಚಾಚಿದ್ದ. ‘ಯಕ್ಕೀ’ ಎಂದು ಕೂಗುತ್ತಾ ಮೈ ಕುಡುಗಿಕೊಳ್ಳುತ್ತಿದ್ದ ಮಕ್ಕಳನ್ನು ಕಂಡ ಆಯಿ ‘ಕಾಲೆಲ್ಲ ತುರಿಕೆ ಶುರುವಾಗ್ತು. ಆಚೆ ಹೋಗಿ ಮಕ್ಳೆ’ ಎಂದು ಅವರನ್ನು ಹೊರಗೆ ಕಳಿಸಿ ಅಪ್ಪನನ್ನು ತರಾಟೆಗೆ ತೆಗೆದುಕೊಂಡಿದ್ದಳು. ‘ಗೆಜ್ಜಲು ತಿಂಬ ಕರಡಿ ಖರ್ಜೂರದ ಸವಿಯನೆತ್ತ ಬಲ್ಲುದಯ್ಯಾ...’ ಎಂದು ಇನ್ನೂ ದೊಡ್ಡದಾಗಿ ಹಾಡುತ್ತಿದ್ದ ಅಪ್ಪನನ್ನು ಕಂಡು ಆಯಿಗೊಂದೇ ಏನು, ನನಗೂ ಬಿಪಿ ಏರಿದಂತಾಗಿತ್ತು.

ಅಲ್ಲಿಂದ ಶುರುವಾಗಿದ್ದ ಈ ಸಮಸ್ಯೆ, ಈಗಂತೂ ಮಿತಿಮೀರಿ ಹೋಗಿತ್ತು. ಅಕ್ಕಪಕ್ಕದ ಮನೆಗಳಲ್ಲಿಯೂ ಈ ಸಮಸ್ಯೆ ಆರಂಭವಾಗಿತ್ತು. ಸ್ಕೈಪ್‌ನಲ್ಲಿ ದಿನಾ ಅದರದ್ದೇ ಸುದ್ದಿ. ಪ್ರತಿದಿನ ಬೆಳಗ್ಗೆ ಸ್ಕೈಪ್‌ನಲ್ಲಿ ಆಯಿಗೆ ಸ್ವಲ್ಪ ಹೊತ್ತಾದರೂ ನನ್ನ, ಇವಳ ಮತ್ತು ಮಕ್ಕಳ ಜೊತೆ ಮಾತಾಡಲೇಬೇಕು. ಆಗ ನಮಗೂ ರಾತ್ರಿ ಊಟದ ಹೊತ್ತಾಗುವುದರಿಂದ ಒಂದರ್ಧ ಗಂಟೆಯ ವೀಡಿಯೊ ಚಾಟ್ ಸಾಮಾನ್ಯ. ಆಯಿ, ಅಪ್ಪನನ್ನು ಇಷ್ಟರಮಟ್ಟಿಗೆ ಕಂಪ್ಯೂಟರೀಕರಣಗೊಳಿಸಲು ಇನ್ನಿಲ್ಲದ ಸಾಹಸಪಟ್ಟಿದ್ದೇನೆ. ಮೊದಲಿಗೆ, ನಮ್ಮ ಹಳ್ಳಿ ಮನೆಯ ಒಂದೊಂದೂ ಪ್ಲಗ್ ಪಾಯಿಂಟ್‌ಗಳು ಒಂದೊಂದು ಅಳತೆಯಲ್ಲಿದ್ದವು.

ಅವುಗಳಿಗೆ ಯಾವುದಾದರೂ ಪ್ಲಗ್‌ಪಿನ್ ಚುಚ್ಚಲು ಯತ್ನಿಸಿದರೆ ವಿಪರೀತ ಬಿಗಿಯಾಗಿ ಸ್ವಿಚ್‌ಬೋರ್ಡೇ ಕಿತ್ತು ಕೈಗೆ ಬರುತ್ತಿತ್ತು ಅಥವಾ ತೀರಾ ಅಳ್ಳಕವಾಗಿ ಶಾರ್ಟ್ ಆಗುತ್ತಿತ್ತು. ಹಾಗೆಂದೇ ಐರನ್‌ಬಾಕ್ಸ್, ಆಡಿಯೊ ಸಿಸ್ಟಮ್‌ಗಳನ್ನು ಸುಟ್ಟು ತೆಗೆದಿದ್ದೂ ಆಗಿತ್ತು. ಪ್ಲಗ್ ಪಾಯಿಂಟ್‌ಗಳನ್ನೆಲ್ಲಾ ಹೊಸದಾಗಿ ಮಾಡಿಸಿದ ನಂತರವೂ ಇಲೆಕ್ಟ್ರಾನಿಕ್ ಉಪಕರಣಗಳು ಸುಟ್ಟು ಹೋದ ಮೇಲೆ, ತಪಾಸಣೆಗೆ ಬಂದಿದ್ದ ಇಲೆಕ್ಟ್ರೀಶಿಯನ್ ಮಹಾಶಯ, ‘ಈ ಮನೆಯ ಅರ್ಥಿಂಗ್ ಸರಿಯಿಲ್ಲ. ಅದನ್ನೆಲ್ಲ ಹೊಸದಾಗಿ ಮಾಡಬೇಕು’ ಎಂದು ಉಸುರಿದ.

ಅದೆಲ್ಲವನ್ನೂ ಸರಿ ಮಾಡಿಸುವಷ್ಟರಲ್ಲೇ ತಲೆಚಿಟ್ಟು ಹಿಡಿದಿದ್ದ ಆಯಿಗೆ, ಈ ಕಂಪ್ಯೂಟರ್ ತಮ್ಮನೆಗೆ ಸಾಲಾವಳಿಯಲ್ಲ ಎನಿಸಿತು. ‘ಅಲ್ಲಿ ಕುಂತು ಏನಾದ್ರೂ ಒಂದೊಂದ್ ಹೇಳಲಡ್ಡೀಲ್ಲೆ ನೀನು. ಇಲ್ಲಿ ಪಡಿಪಾಟ್ಲು ಯಂಗಕ್ಕೇ ಗೊತ್ತು. ಮತ್ತೊಂದ್ ಸಾರಿ ಕಂಪ್ಯೂಟರ್ ಸುದ್ದಿ ಎತ್ತೀರೆ ನೋಡು’ ಎಂದು ಫೋನ್ ಕುಕ್ಕಿದ್ದಳು. ಮುಂದಿನ ಸಾರಿ ಮಕ್ಕಳೊಂದಿಗೆ ಊರಿಗೆ ಹೋಗಿದ್ದ ನನ್ನವಳು ತನ್ನ ಲ್ಯಾಪ್‌ಟಾಪಿನಲ್ಲಿ ನನ್ನೊಂದಿಗೆ ವೀಡಿಯೊ ಚಾಟ್ ಮಾಡಿ ಆಯಿಗೆ ತೋರಿಸಿದ್ದಳು. ಈ ಸೌಲಭ್ಯ ಇದ್ದರೆ ತಮಗೆ ಅನುಕೂಲ ಎಂಬುದನ್ನು ಇಬ್ಬರಿಗೂ ಮನದಟ್ಟು ಮಾಡಿಸಿ, ಹೊಸದೊಂದು ಕಂಪ್ಯೂಟರ್ ಕೊಂಡು, ಬೇಕಾದ ವ್ಯವಸ್ಥೆ ಮಾಡಿಸಿದ್ದಳು. ಆದರೆ ಅವರ ಕಂಪ್ಯೂಟರ್ ಕಲಿಕೆ ಸರಿಯಾಗಿ ಆಗುವುದರೊಳಗೇ ಇವಳ ರಜೆ ಮುಗಿದುಹೋಗಿತ್ತು.

ಅಲ್ಲಿಗೆ ಶುರುವಾಯ್ತು ಹೊಸ ರಾಮಾಯಣ. ಪ್ರತಿದಿನ ಗಂಟೆಗಟ್ಟಲೆ ಫೋನ್‌ನಲ್ಲಿ ವಿವರಿಸಿ ನನ್ನ ಗಂಟಲು ಒಣಗಿದರೂ, ಹಿಂದಿನ ದಿನ ಹೇಳಿಕೊಟ್ಟಿದ್ದನ್ನು ಮಾರನೆಯ ದಿನಕ್ಕೆ ಮರೆತುಬಿಡುತ್ತಿದ್ದರು; ಮತ್ತೆ ಸ್ಕೈಪ್ ಆನ್ ಆಗುತ್ತಿರಲಿಲ್ಲ. ಸರಿಯಾಗಿ ಇಂಗ್ಲಿಷ್ ಬಾರದ ಬ್ರೆಜಿಲ್ ದೇಶದ ಕ್ಲಯಂಟುಗಳ ಜೊತೆ ದಿನಗಟ್ಟಲೆ ಕಾನ್ಫರೆನ್ಸ್ ಕಾಲ್ ಮಾಡಿದಾಗಲೂ ನಾನು ಇಷ್ಟು ಸುಸ್ತಾಗಿದ್ದಿಲ್ಲ. ಆಯಿಯಂತೂ ಪ್ರತಿದಿನ ಬಿಪಿ ಮಾತ್ರೆ ತೆಗೆದುಕೊಳ್ಳಲು ಶುರುಮಾಡಿದ್ದಳು.

‘ರಾತ್ರೆ ಆಟ ನೋಡಿದ್ದಕ್ಕೆ ಕಣ್ಣು ಉರಿತು’ ಎನ್ನುತ್ತಾ ಅಪ್ಪ ಕಂಪ್ಯೂಟರ್ ನೋಡುವುದನ್ನೇ ಬಿಟ್ಟುಬಿಟ್ಟಿದ್ದ. ‘ಹಿಡಿದ ಕೆಲಸ ಪೂರ್ತಿ ಮಾಡಿದ್ದೇ ಇಲ್ಲೆ ನಿನ್ನ ಜಾಯಮಾನಕ್ಕೆ! ಯೂ ಜಸ್ಟ್ ಡಂಪ್ಡ್ ದ ಸಿಸ್ಟಮ್ ಆನ್ ದೆಮ್ ವಿದೌಟ್ ಟೀಚಿಂಗ್ ದೆಮ್ ದ ಬೇಸಿಕ್ಸ್ ಆಫ್ ಇಟ್’ ಎಂದು ಇವಳ ಮೇಲೆ ನಾನು ಹರಿಹಾಯ್ದಿದ್ದೂ ಆಯಿತು. ಅಂತೂ ಐದಾರು ತಿಂಗಳುಗಳ ಸತತ ಗುದ್ದಾಟದ ನಂತರ ಕಂಪ್ಯೂಟರಿನಲ್ಲಿ ತಮಗೆ ಬೇಕಾದಷ್ಟನ್ನು ಮಾಡಿಕೊಳ್ಳುವಷ್ಟು ಅಪ್ಪ, ಆಯಿ ತಯಾರಾದರು. ಅದೇ ಹೊತ್ತಿಗೆ ಹೈದರಾಬಾದ್‌ನಿಂದ ಅಕ್ಕನ ಮಕ್ಕಳಿಬ್ಬರು ರಜಕ್ಕೆ ಬಂದಿದ್ದರಿಂದ ನನ್ನ ಕೆಲಸವನ್ನು ಬಹಳಷ್ಟು ಹಗುರ ಮಾಡಿದ್ದರು.

ಹಾಗಾಗಿ ಈಗ ಆಯಿಯ ದೋಸ್ತರು ಸರ್ವವ್ಯಾಪಿ! ‘ಮೊನ್ನೆ ಸತ್ಯಭಾಮೆ ಶಿಕ್ಕಿತ್ತು. ಅದರ ಮೊಮ್ಮಗಳು ಏನು ಚಂದಿದ್ದು ಅಂಬೆ... ಬಟ್ಟಲುಗಣ್ಣು, ಬಟ್ಟಲುಮುಖ ಆಗಿ. ಈಗೆಲ್ಲಾ ಬಾಲವಾಡಿಗೆ ಹೋಗ್ತಡ ಕೂಸು...’ ಎಂದು ಅವಳ ಹಳೆಯ ಫ್ರೆಂಡುಗಳ ಮಕ್ಕಳು, ಮೊಮ್ಮಕ್ಕಳ ವರದಿಯನ್ನೆಲ್ಲಾ ನನಗೆ ನೀಡುತ್ತಿದ್ದಳು. ಇಷ್ಟಲ್ಲಾ ಹೇಗೆ ಗೊತ್ತು ಎಂದು ಕೇಳಿದ್ದಕ್ಕೆ ‘ಅವೆಲ್ಲಾ ಯನ್ನ ಫೇಸ್‌ಬುಕ್ ಫ್ರೆಂಡ್ಸು’ ಎಂಬ ಉತ್ತರ!
***
ಅಂದು ಆಫೀಸ್‌ನಿಂದ ಬರುವಾಗ ಇಂಡಿಯನ್ ಮಾರ್ಕೆಟ್‌ನಿಂದ ದಿನಸಿ ಖರೀದಿಸಿ, ಅಲ್ಲೇ ಗುಜರಾತಿ ಫುಲ್ಕಾ ಪಾರ್ಸಲ್ಲಿಗೆ ಆರ್ಡರ್ ಕೊಟ್ಟು ಕ್ಯೂನಲ್ಲಿದ್ದಾಗ ನನ್ನ ಐಫೋನಿಗೆ ಮೇಲೊಂದು ಒತ್ತರಿಸಿಕೊಂಡು ಬಂತು. ನಮ್ಮ ಟೌನ್ ಹೋಮ್ ಸಮುಚ್ಚಯದ ಹೋಮ್ ಓನರ್ ಅಸೋಸಿಯೇಶನ್‌ನಿಂದ ಬಂದದ್ದು. ಎಲ್ಲಾ ಮನೆಗಳ ಫ್ಯೂಮಿಗೇಶನ್ ಸೇರಿದಂತೆ ಕೆಲವು ಪ್ರಸ್ತಾಪಗಳ ಬಗ್ಗೆ ಚರ್ಚಿಸಲು ಸಭೆ ಕರೆದಿದ್ದರ ಬಗ್ಗೆ ಮೇಲ್‌ನಲ್ಲಿತ್ತು. ಇಲ್ಲಿನ ಮನೆಗಳೆಲ್ಲಾ ಮರದ್ದಾಗಿರುವುದರಿಂದ ನಿಗದಿತ ವರ್ಷಗಳಿಗೊಮ್ಮೆ ಫ್ಯೂಮಿಗೇಶನ್ ಮಾಡಬೇಕಿತ್ತು.

ಅಂದರೆ, ಮನೆ ಮಂದಿಯನ್ನೆಲ್ಲಾ ತೆರವುಗೊಳಿಸಿ ಇಡೀ ಸಮುಚ್ಚಯಗಳನ್ನು ಹೊದಿಕೆಗಳಿಂದ ಮುಚ್ಚಿ, ಒಳಗೆಲ್ಲಾ ವಿಷದ ಗಾಳಿ ತುಂಬಲಾಗುತ್ತದೆ. ಕೆಲ ಸಮಯದ ನಂತರ ವಿಷದ ಗಾಳಿಯನ್ನು ಹೊರಬಿಟ್ಟು, ಹೊದಿಕೆ ತೆಗೆದು ಗೆದ್ದಲು, ಕ್ರಿಮಿ-ಕೀಟಾದಿಗಳೆಲ್ಲಾ ಸತ್ತವೇ ಎಂದು ಖಾತ್ರಿ ಮಾಡಿಕೊಳ್ಳುತ್ತಾರೆ. ಅವೆಲ್ಲಾ ಸತ್ತ ನಂತರ ನಮ್ಮನ್ನು ಬದುಕಲು ಬಿಡುತ್ತಾರೆ. ಇಲ್ಲಿನ ಮರದ ಮನೆಗಳಿಗೆ ಗೆದ್ದಲೊಂದು ಬಹುದೊಡ್ಡ ಹೆದರಿಕೆ. ಅಲ್ಲಿಗೆ, ಈ ಸಭೆಯ ನೆಪದಲ್ಲಿ ಈ ವಾರಾಂತ್ಯದ ಎಲ್ಲಾ ಬರ್ತಡೇ ಪಾರ್ಟಿಗಳನ್ನು ನನ್ನವಳ ಮೇಲೆಯೇ ಬಿಡಬೇಕೆಂದು ಹೊಂಚಿಕೊಂಡೆ. ಪಾಪ! ಅವಳಿಗದು ಒಗ್ಗದ್ದು ಎಂದು ನಿಂತಲ್ಲೇ ನಗುಬಂತು.

ರಾತ್ರಿ ಸ್ಕೈಪ್ ಆನ್ ಮಾಡುತ್ತಿದ್ದಂತೆಯೇ ಅಪ್ಪ ಶುರು ಹಚ್ಚಿದ್ದ. ‘ನಿನ್ನೆ ರಾತ್ರಿಯ ಆಟ ಏನು ಮಸ್ತಿತ್ತು ಗೊತ್ತಿದ್ದ... ವರ್ಲಾಸುರ ಸಂಹಾರ. ಮೊದಲಿಗೆ ವೇಷಯೆಲ್ಲಾ ನಿನ್ನ ಆಯಿದೇ. ಬೆಳಗಿನ ಜಾವಕ್ಕಷ್ಟೇ ಯನ್ನ ಪ್ರವೇಶ’ ಎಂದೆಲ್ಲಾ ಹೇಳುತ್ತಾ ನಗುತ್ತಿದ್ದ. ಬರೀ ಗೆದ್ದಲು ಗುಡಿಸಿ, ಔಷಧ ಹೊಡೆದೇ ರಾತ್ರಿ ಪೂರೈಸಿದ್ದಾಯ್ತು ಎನ್ನುತ್ತಿದ್ದ ಅವನ ಮುಖದಲ್ಲಿ ಸುಸ್ತು ಸೂಸುತ್ತಿತ್ತು. ಬಚ್ಚಲು ಮನೆಯ ಮೂಲೆಯಲ್ಲಿ ಎದ್ದು ಗೋಡೆಯೆಲ್ಲಾ ಪಸರಿಸಿದ್ದ ಗೆದ್ದಲುಗಳನ್ನು ಆಯಿ ಇನ್ನೂ ಸೊಂಟ ಬಗ್ಗಿಸಿ ಗುಡಿಸುತ್ತಿಳು.

‘ಒಂದ್ಸಾರಿ ಗುಡಿಸಿ ಹಾಕೇ ಅಂದ್ರೆ ಆಗ್ತಿಲ್ಲೆ ಅಂತು ಗೋಪಿ. ಒರ್ಲೆ ಔಸ್ದಿ ನಾತಕ್ಕೆ ನಂಗೆ ಕೆಮ್ ಬತ್ತದೆ ಅಂತಲಾ! ಒಂದ್ ಕೆಲ್ಸ ಸರಿ ಮಾಡ್ತಿಲ್ಲೆ. ಬರೀ ಸುಂಪಾಣ್ಗಿತ್ತಿ’ ಎನ್ನುತ್ತಾ ಗೆದ್ದಲಿನ ಮೇಲಿನ ಕೋಪವನ್ನು ಕೆಲಸದ ಹುಡುಗಿಯ ಮೇಲೆ ಆಯಿ ತೀರಿಸಿಕೊಳ್ಳುತ್ತಿದ್ದಳು. ಅಂತೂ ಪ್ರತಿದಿನ ಮನೆಯಿಂದ ಗೆದ್ದಲಿನ ವರದಿ ಕೇಳಬೇಕಾಗುತ್ತಿತ್ತು. ‘ಅಡಿಗೆ ಮನೆ ಮೂಲೆಲ್ಲಿಟ್ಟಿದ್ದ ಹಳೆ ಕಡಗಲು ವರ್ಲೆಗಾಹುತಿ, ಕಿಟಕಿ ಮೂಲೆಯೆಲ್ಲಾ ವರ್ಲೆಮಯ, ಅಜ್ಜನ ಮಂಚದ ಕಟ್ಟೆಲ್ಲಾ ವರ್ಲೆಪಾಲು, ಅಟ್ಟದ ಕಂಬವೂ ವರ್ಲೆಗೆ ಪಳಾರ, ಕಪಾಟಿನ ಪುಸ್ತಕ ಪುಡಿಪ್ಪುಡಿ, ಆಚೆ ಮನೆಯ ಕೊಟ್ಟಿಗೆ ಗೋಡೆಗೆಲ್ಲಾ ಕನ್ನ...’ ಹೀಗೆ.

ಇದ್ಯಾಕೋ ಸುಖಕ್ಕೆ ಬಂದ ಶಿವರಾತ್ರಿ ಅಲ್ಲ ಅನಿಸತೊಡಗಿತು. ಪೆಸ್ಟ್ ಕಂಟ್ರೋಲ್ ಸಂಸ್ಥೆಗಳಿಗೆ ಹೇಳಿದರೆ ಹೇಗೆ ಎಂಬ ಯೋಚನೆ ಬಂತು. ಆದರೆ ಸಕ್ರೆಬೈಲು ಬಿಡಿ, ಅಲ್ಲಿಂದ 20 ಕಿ.ಮೀ. ದೂರದ ಪೇಟೆಯಲ್ಲೂ ಅಂಥವರು ಯಾರೂ ಇರಲಿಲ್ಲ. ಇದಕ್ಕಾಗಿ ಪೇಟೆಯಲ್ಲಿ ದೊರೆಯುವ ಎಲ್ಲಾ ಔಷಧಿಗಳನ್ನೂ ತಂದು ನೋಡಿದ್ದಾಯ್ತು. ಯಾಕೋ ಗೆದ್ದಲು ನಿಯಂತ್ರಣಕ್ಕೆ ಬರುವಂತೆ ಕಾಣಲಿಲ್ಲ. ಅಕ್ಕಪಕ್ಕದ ಮನೆಗಳಲ್ಲೂ ಗೆದ್ದಲು ಉಪಟಳ ಇದ್ದರೂ ಈ ಪ್ರಮಾಣದಲ್ಲಿಲ್ಲ.

ನಮ್ಮನೇಲಿ ಯಾಕೆ ಹೀಗೋ ಎಂದು ಆಯಿ ಅಲವತ್ತುಕೊಳ್ಳುತ್ತ ಹೊಸದೊಂದು ಜಾಗದಲ್ಲಿ ಗೆದ್ದಲು ಗುಡಿಸಲು ಹೋಗುತ್ತಿದ್ದಳು. ‘ಬೆಂಗಳೂರೋ ಇನ್ಯಾವೂರಿಂದ್ಲೊ ವರ್ಲೆ ಔಷಧಿ ಹೊಡಿಯೋರನ್ನ ಕರೆಸಲಾಗಿತ್ತು. ಇನ್ನು ಹೀಂಗೇ ಆದರೆ ಮನೆಯ ತೊಲೆ ಜಂತಿಗೆಲ್ಲಾ ವರ್ಲೆ ಹಿಡಿದು ಒಂದಿನ ಮನೇನೆ ತಲೆ ಮ್ಯಾಲೆ ಬೀಳ್ತೇನ. ನಿನ್ನ ಅಪ್ಪಂಗೆ ಹೇಳಿದ್ರೆ ಒಂದು ಕೆಲಸವೂ ಸಾರದ್ವಾರಲ್ಲ ಮಾಣಿ’ ಎಂಬ ಆಯಿಯ ಮಾತಿನಿಂದ ನನಗಂತೂ ಗಾಬರಿಯೇ ಆಗತೊಡಗಿತು. ‘ವರ್ಲೆ ಎಲ್ಲಾ ಬದಿಗೂ ಇರ್ತು ಆಯಿ. ಅಲ್ಲಲ್ಲ, ಈ ಅಮೆರಿಕದಲ್ಲೂ ವರ್ಲೆ ಕಾಟ ಇದ್ದಿದ್ದೇ. ಅದಕ್ಕೆ ಮುಂದಿನ ತಿಂಗಳು ಮೂರು ದಿನ ಮನೆ ಬಿಟ್ಟುಕೊಡವ್ವು.

ಒಳಗೆಲ್ಲಾ ಔಷಧಿ ಹೊಡೀತ’ ಎಂದು ಆಕೆಗೆ ಸಮಾಧಾನ ಮಾಡುತ್ತಾ ಇಲ್ಲಿನ ಫ್ಯೂಮಿಗೇಶನ್ ವಿವರ ತಿಳಿಸಿದೆ. ಆಯಿಗಂತೂ ಪರಮ ಸೋಜಿಗ. ‘ಅಲ್ಲೆಲ್ಲಾ ಅಷ್ಟೊಂದು ಚೊಕ್ಕಾಗಿ ಪಟ್ಟಗೆ ಇರ್ತು. ವರ್ಲೆ ಅಂದ್ರೆ ನಂಬಲ್ಲಡಿಯ. ಒಂದ್ಸಾರಿ ವರ್ಲೆ ಸುರುವಾತೂಂದ್ರೆ ಮುಗೀತು. ನಮ್ ಮನೆ-ಮಠಾನೆಲ್ಲಾ ಒಳಗಿಂದೊಳಗೇ ತಿಂದು ಹಾಕ್ತ. ಅಂತೂ ಯಾವ ಊರಿಗ್ ಹೋಗು, ಯಾವ ದೇಶಕ್ ಹೋಗು, ಮನುಷ್ಯ ಇದ್ದಲ್ಲೀವರಿಗೆ ವರ್ಲೆನೂ ಇದ್ದಿದೇಯ ಅಂತಾತು’ ಎಂದು ಸಮಾಧಾನ ಮಾಡಿಕೊಂಡಳು. ‘ಗೆದ್ದಲು ಮನೆಯ ಮಾಡಿ ಸರ್ಪಕ್ಕೆ ಇಂಬಾದಂತೆ...’ ಎಂದು ಒಳಗೆಲ್ಲೋ ಅಪ್ಪನ ಹಾಡು ಕೇಳುತ್ತಿತ್ತು.
***
ನನಗಂತೂ ಸಮಾಧಾನ ಇರಲಿಲ್ಲ. ಆಯಿ ಹೇಳಿದಂತೆ ಮನೆಯ ಜಂತಿ ತೊಲೆಗೆಲ್ಲಾ ಗೆದ್ದಲು ಹಿಡಿದು ಮನೆಯೇ ತಲೆ ಮೇಲೆ ಬಿದ್ದರೇನು ಗತಿ? ಆ ಹಳೆಮನೆಯನ್ನು ಕೆಡವಿ ಈಗಿನ ಕಾಲಕ್ಕೆ ತಕ್ಕ ಹೊಸ ಮನೆ ಕಟ್ಟಿಸಿದರೆ ಹೇಗೆ ಎಂಬ ಯೋಚನೆ ಫಕ್ಕನೆ ಬಂತು. ನನ್ನವಳಿಗಂತೂ ಈ ಯೋಚನೆ ತುಂಬಾ ಇಷ್ಟವಾಗಿ, ಪೆನ್ನು ಕಾಗದ ಹಿಡಿದು ಪ್ಲಾನ್ ಶುರು ಮಾಡಿಯೇಬಿಟ್ಟಳು. ಆ ದೊಡ್ಡ ಮನೆಯ ಬದಲಿಗೆ ಅಗತ್ಯವಿದ್ದಷ್ಟಕ್ಕೇ ಕಟ್ಟಿಕೊಂಡರೆ ಅವರಿಗೂ ಕ್ಲೀನಿಂಗ್ ತಾಪತ್ರಯ ತಪ್ಪುತ್ತದೆ ಎಂಬ ಅವಳ ಯೋಚನೆ ನನಗೂ ಹೌದೆನಿಸಿತು.

ಮನೆಯ ಹಾಲ್‌ನಿಂದ ದೊಡ್ಡ ಮಾವಿನ ಮರ ಕಾಣಬೇಕು, ಯಜಮಾನರ ರೂಮಿನ ಕಿಟಕಿಯಿಂದ ಗೇಟು ಕಾಣಬೇಕು, ಅಡಿಗೆ ಮನೆಯಿಂದ ಹೆಬ್ಬಾಗಿಲು ಕಾಣಬೇಕು ಎಂದೆಲ್ಲಾ ಪುಟಗಟ್ಟಲೆ ಬರೆದು-ಗೀಚಿ, ಹರಿದು-ಮಡಚಿ ಒಂದೆರಡು ಪ್ಲಾನ್ ಸಹ ಸಿದ್ಧ ಮಾಡಿಬಿಟ್ಟಳು. ಅದನ್ನು ಅತ್ಯುತ್ಸಾಹದಿಂದ ಅಂದಿನ ಸ್ಕೈಪ್ ಭೇಟಿಯಲ್ಲಿ ಮಂಡಿಸಿಯೂಬಿಟ್ಟಳು. ಆಯಿಗಂತೂ ಪರಮಾನಂದವಾಯಿತು. ಮನೆಯ ಇಷ್ಟು ಸದಸ್ಯರಲ್ಲಿ ದೇವರು ಕೊಟ್ಟ ಬುದ್ಧಿಯನ್ನು ಉಪಯೋಗಿಸುವುದು ತನ್ನ ಸೊಸೆ ಮಾತ್ರವೇ ಎಂದೆಲ್ಲಾ ಆಯಿ ಕೊಂಡಾಡಿದಳು. ಹಳೆಯದನ್ನೆಲ್ಲಾ ಗುಡಿಸಿ ತೊಳೆದು ಹೊಸತು ತರುತ್ತೇನೆಂದರೆ ಯಾರಿಗೆ ಬೇಡ?

ಅಪ್ಪನಿಗೆ ಬೇಡವಾಗಿತ್ತು! ‘ಥೋ ಥೋ! ನೆಗಡಿಯಾದ್ದಕ್ಕೆ ಮೂಗು ಕೊಯ್ಯಲ್ಲೆ ಬತ್ತ? ಇದೆಲ್ಲಾ ಎಲ್ಲರ ಮನೇಲ್ಲೂ ಇದ್ದಿದ್ದೇ. ಮನೆ ಕೆಡಗದೂ ಬ್ಯಾಡ, ಕಟ್ಟದೂ ಬ್ಯಾಡ’ ಎಂದು ಸಾರಾಸಗಟಾಗಿ ನಮ್ಮ ಪ್ರಸ್ತಾಪವನ್ನು ತಳ್ಳಿಹಾಕಿ ಎಲ್ಲರನ್ನೂ ಒಮ್ಮೆ ಪೆಚ್ಚಾಗಿಸಿದ. ಗೆದ್ದಲಿಗೆ ಹೆದರಿ ಮಾಸ್ತರರು ಮನೆ ಮುರಿಸಿದರೆಂದು ಊರೆಲ್ಲಾ ಸುದ್ದಿಯಾದೀತು ಎಂದೆಲ್ಲಾ ಆಯಿಯನ್ನು ಹೆದರಿಸಿದ. ‘ಹಾಂಗೆಲ್ಲಾ ಮಾತಾಡೋವ್ರು ಇಲ್ಲಿ ಬಂದು ವರ್ಲೆ ಗುಡಿಸಿ ಔಷಧಿ ಹಾಕತ್ವ ಕೇಳಿ ಮೊದ್ಲು! ಇನ್ನು ಯನ್ನತ್ರ ಈ ವರ್ಲೆ ಚಾಕರಿ ಮಾಡಲ್ಲೆ ಸಾಧ್ಯಯಿಲ್ಲೆ’ ಎಂದೆಲ್ಲಾ ಆಯಿ ಗುಡುಗಿದಳು.

ಇಬ್ಬರಿಗೂ ದೊಡ್ಡ ಯುದ್ಧವೇ ನಡೆದು ನಾವೇ ಕದನ ವಿರಾಮ ಹಾಡಬೇಕಾಯಿತು. ಆಯಿಗೆ ಬಹುಶಃ ನನ್ನಜ್ಜನ ಕಾಲದ ಆ ದೊಡ್ಡ ಮಣ್ಣಿನ ಮನೆಯಲ್ಲಿ ಏಗಿ ಸಾಕಾಗಿತ್ತು. ಆದರೆ ಅಪ್ಪನಿಗೆ ಅದೇ ಮನೆ ಬೇಕಾಗಿತ್ತು. ಹಾಗಾಗಿ ಅವರ ಮುಸುಕಿನ ಗುದ್ದಾಟ ಕೆಲಕಾಲ ಮುಂದುವರಿಯಿತು. ದಿನದಿಂದ ದಿನಕ್ಕೆ ತೀವ್ರವಾಗುತ್ತಿದ್ದ ಗೆದ್ದಲಿನ ಸಮಸ್ಯೆಗಂತೂ ಒಂದು ಪೂರ್ಣವಿರಾಮ ಹಾಕಲೇಬೇಕಾದ್ದರಿಂದ ಮತ್ತೊಂದು ಪ್ರಸ್ತಾಪವನ್ನು ಅವರ ಮುಂದಿಟ್ಟೆ. ಇರುವ ಮನೆಯನ್ನು ಅಲ್ಲಿಯೇ ಬಿಟ್ಟು ಅವರೇ ಬೇರೆ ಮನೆಗೆ ಹೋಗುವುದು.

ಹತ್ತಿರದ ಪೇಟೆಯಲ್ಲಿ ಅಪಾರ್ಟ್‌ಮೆಂಟುಗಳೆಲ್ಲಾ ತಲೆ ಎತ್ತುತ್ತಿದ್ದವು ಅಥವಾ ಸೈಟು ಕೊಂಡು ಹೊಸ ಮನೆಯನ್ನೇ ಕಟ್ಟಿಸಬಹುದಿತ್ತು. ಇದರಿಂದ ಅವರಿಗೂ ಅನುಕೂಲ, ನಮಗೂ ನಿರಾಳ ಎಂಬುದು ನಮ್ಮ ಯೋಚನೆಯಾಗಿತ್ತು. ಇದಕ್ಕೆ ಆಯಿ ಅರೆಮನಸ್ಸಿನ ಒಪ್ಪಿಗೆ ಸೂಚಿಸಿದರೆ, ಅಪ್ಪನದ್ದು ಗೊತ್ತೇ ಇದೆಯಲ್ಲ! ‘ಹೆಹ್ಹೆ, ಶನಿಕಾಟಕ್ಕೆ ಹೆದ್ರಿ ಶೀಗೆಮಟ್ಟಿ ಹೊಕ್ಕಂಗಾತು. ವರ್ಲೆಗೆ ಹೆದ್ರಿ ಮನೆ ಬಿಟ್ಟಿಕ್ಕೆ ಹೋಪಲ್ಲಾಗ್ತ? ಅದೂ ಅಲ್ದೆ, ಯನ್ನ ತಾಳಮದ್ಲೆ ದೋಸ್ತರೆಲ್ಲಾ ಸಕ್ರೆಬೈಲಲ್ಲೇ ಇಪ್ಪದು.

ಅದೆಲ್ಲಾ ಬಿಟ್ಟು ಪ್ಯಾಟೆಗೆ ಹೋಗಿ ಕುಂತ್ರೆ ಹ್ಯಾಂಗೆ? ಇನ್ನೊಂದೆರಡು ವಾರಕ್ಕೆ ಆಚೆ ಮನೆಲ್ಲೇ ಇದ್ದು ಯಂಗಳ ಆಟ’ ಎಂದು ಬಡಬಡಿಸಿದ. ಅಪ್ಪನ ಇಂಥದ್ದೇ ಕಾರಣಗಳನ್ನು ಕೇಳಿ ಸುಸ್ತಾಗಿದ್ದ ಆಯಿ ‘ಇನ್ನು ಯಂಗಕ್ಕೇ ಒರ್ಲೆ ಹಿಡಿದ ಮೇಲೆ ಒಟ್ಟಿಗೇ ಮನೆಯಿಂದ ಹೊರಗೆ ಹಾಕಿದ್ರಾತು’ ಎಂದು ದುಃಖಿಸಿದಳು. ಯಾವುದಕ್ಕೂ ಒಪ್ಪಿಕೊಳ್ಳದ ಅಪ್ಪನ ಹಟ ಕಂಡು ನನಗೂ ಬೇಸರವಾಯಿತು. ಇದಿಷ್ಟಕ್ಕೂ ಕಳಶಪ್ರಾಯವಾಗಿ ಈಗ ಬಾವಿ ನೀರಿಗೇ ಗೆದ್ದಲು ಬಿದ್ದು ನೀರೆಲ್ಲಾ ಹಾಳಾಗಿಹೋಗಿತ್ತು.
***
ನಮ್ಮ ವಸತಿ ಸಮುಚ್ಚಯದ ಫ್ಯೂಮಿಗೇಶನ್‌ಗೆ ನೀಡಿದ್ದ ದಿನಾಂಕ ಸಮೀಪಿಸಿತ್ತು. ವಿಕೇನ್ ಎಂಬ ವಿಷಾನಿಲವನ್ನು ಮನೆಯೊಳಗೆಲ್ಲಾ ತುಂಬುವ ಕಾರಣದಿಂದ, ನಾವು ಮನೆ ತೆರವು ಮಾಡುವ ಮುನ್ನ ಮನೆಯ ಎಲ್ಲಾ ವಸ್ತುಗಳನ್ನೂ ಸೂಕ್ತ ರೀತಿಯಲ್ಲಿ ಸೀಲ್ ಮಾಡಬೇಕಿತ್ತು. ಮನೆಗೆ ಮರಳಿ ಬಂದ ಮೇಲೆ ಪಾತ್ರೆ, ಬಟ್ಟೆಗಳನ್ನೆಲ್ಲಾ ಒಮ್ಮೆ ವಾಷರ್‌ಗೆ ತುಂಬಿದರೆ ಸಾಕಿತ್ತು. ಆದರೆ ಆಹಾರ ವಸ್ತುಗಳದ್ದೇ ತಲೆನೋವಾಗಿತ್ತು.

ಫ್ಯೂಮಿಗೇಶನ್ ಸಂಸ್ಥೆಯೇ ನೀಡಿದ್ದ ವಿಶೇಷ ಪಾಲಿಥೀನ್ ಬ್ಯಾಗ್‌ನಲ್ಲಿ ಎಲ್ಲಾ ಆಹಾರ ವಸ್ತುಗಳನ್ನೂ ಡಬಲ್ ಸೀಲ್ ಮಾಡಬೇಕಿತ್ತು. ಮನೆಯ ಎಲ್ಲಾ ಕಪಾಟು, ಡ್ರಾಗಳನ್ನು ತೆಗೆದಿರಿಸಿ, ಒಳ-ಹೊರಗಿನ ಗಿಡಗಳನ್ನೆಲ್ಲಾ ಮನೆಯಿಂದ ಎರಡಡಿ ದೂರಕ್ಕೆ ಸ್ಥಳಾಂತರಿಸಬೇಕಿತ್ತು. ಇದಕ್ಕೆಲ್ಲಾ ಸಣ್ಣ ಕೈಪಿಡಿಯೊಂದನ್ನು ಸಂಸ್ಥೆ ನಮಗೆ ನೀಡಿದ್ದರಿಂದ ಅದರಂತೆ ನಾವು ಸಿದ್ಧಗೊಳಿಸಬೇಕಿತ್ತು. ಎರಡು ದಿನ ಸ್ನೇಹಿತರ ಮನೆಯಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆಯಾಗಿತ್ತು. ಮನೆಯ ದಾಖಲೆ, ಕಾಗದ-ಪತ್ರಗಳು, ಬೆಲೆಬಾಳುವಂಥವು ಎಲ್ಲವನ್ನೂ ಬೇರೆಡೆ ಸಾಗಿಸಿ, ಮನೆಯನ್ನು ಫ್ಯೂಮಿಗೇಟರ್‌ಗಳ ವಶಕ್ಕೊಪ್ಪಿಸಿ ಬಂದಾಗಿತ್ತು.

ಈ ಗಡಿಬಿಡಿಯ ಕಾರಣದಿಂದ ಸುಮಾರು ನಾಲ್ಕಾರು ದಿನಗಳ ಕಾಲ ಅಪ್ಪ, ಆಯಿಯೊಂದಿಗೆ ನಮಗ್ಯಾರಿಗೂ ಮಾತನಾಡಲಾಗಲಿಲ್ಲ. ಮನೆಗೆ ಮರಳಿ ಬಂದ ಮೇಲೆ ಅಸ್ತವ್ಯಸ್ತವಾಗಿ ಬಿಟ್ಟುಹೋಗಿದ್ದ ಮನೆಯನ್ನು ಒಂದು ವ್ಯವಸ್ಥೆಗೆ ತಂದುಕೊಳ್ಳುವಷ್ಟರಲ್ಲಿ ಮಕ್ಕಳಿಗೂ ಆರೋಗ್ಯ ಕೈಕೊಟ್ಟಿತ್ತು. ಮನೆಯ ಅವ್ಯವಸ್ಥೆಯ ಜೊತೆ ಆಸ್ಪತ್ರೆ ಓಡಾಟವೂ ಸೇರಿ ನಮಗೂ ಸುಸ್ತಾಗುವಂತಾಗಿತ್ತು. ಅಂತೂ ಏಳೆಂಟು ದಿನಗಳ ನಂತರ ವಿರಾಮದಲ್ಲಿ ಆಯಿಯೊಂದಿಗೆ ಮಾತನಾಡಲು ಕೂತೆ. ಆದರೆ ನಮಗಿಂತಲೂ ಹೆಚ್ಚು ದಣಿವಾದಂತಿತ್ತು ಆಕೆಯ ಮುಖ.

‘ಮನೆ ಎದುರಿಗೆ ರಸ್ತೆ ಮಾಡಲ್ಲೆ ಬಂದವ್ವು ನೆಲ ಅಗೆದು ನೀರಿನ ಪೈಪು ತುಂಡಾಗೋಜು. ಹಾಂಗಾಗಿ ಪಂಚಾಯತದ ನೀರು ಬಾರದೆ ಎಂಟು ದಿನಾತು. ನಮ್ಮನೆ ಬಾವಿ ನೀರು ಭಯಂಕರ ವಾಸನೆ. ಏನು ಮಾಡಿದ್ರೂ ನೀರು ಸರೀನೇ ಆಜಿಲ್ಲೆ. ಅದ್ಕೆ ಆಚೆ ಮನೆಯಿಂದ ನೀರು ಹೊತ್ತೂ ಹೊತ್ತೂ ಸಾಕಾಗೋತು’ ಎಂದ ಆಯಿಯ ಮುಖ ನೋಡಿ ನನಗೇ ತಾಳ್ಮೆ ಕೆಡುವಷ್ಟಾಯಿತು. ಬಾವಿ ನೀರಿಗೆ ಉಪ್ಪು, ಸುಣ್ಣ, ಬ್ಲೀಚಿಂಗ್ ಪುಡಿ... ಹೀಗೆ ಯಾರಾರಿಂದ ಏನೇನು ಸಲಹೆ ಬಂದರೂ ಪಾಲಿಸಿದ್ದರು. ಆದರೆ ನೀರು ಮಾತ್ರ ಸರಿಯಾಗಿರಲಿಲ್ಲ.

ಕೆಳಗಿನ ಮನೆಯಿಂದ ನೀರು ಹೊತ್ತು ಹೈರಾಣಾಗಿದ್ದ ಅಪ್ಪನೂ ಸಹ ಸುತ್ತ ನಾಲ್ಕಾರು ಊರು ಓಡಾಡಿ ಬಾವಿಯನ್ನು ಶುಚಿಮಾಡಲು ಯಾರನ್ನೋ ಒಪ್ಪಿಸಿ ಹಿಂದಿನ ದಿನವಷ್ಟೇ ಕರೆತಂದಿದ್ದ. ಬೇಸಿಗೆಯಲ್ಲಿ ಆ ಬಾವಿಯ ನೀರು ತಂತಾನೇ ಕಡಿಮೆ ಆಗುತ್ತಿತ್ತು. ಹಾಗಾಗಿ ಬಂದವರು ಬಾವಿ ನೀರನ್ನೆಲ್ಲಾ ಖಾಲಿ ಮಾಡಿ, ಹೂಳೆಲ್ಲಾ ಮೊಗೆದು ತೆಗೆದು ಸ್ವಚ್ಛ ಮಾಡಿದ್ದರು. ಒರತೆಯಿಂದ ಇನ್ನು ಮೇಲೆ ಹೊಸ ನೀರು ಬಂದು ಬಾವಿ ತುಂಬಬೇಕಿತ್ತು. ಆವರೆಗೂ ಕೆಳಗಿನ ಮನೆಯಿಂದ ನೀರು ಹೊರುವುದು ಅವರಿಗೆ ಅನಿವಾರ್ಯವಾಗಿತ್ತು.
***
ಆ ದಿನ ಆಯಿಯ ಜೊತೆ ಮಾತಾಡುತ್ತಿರುವಾಗಲೇ ಅವಳ ಅಕ್ಕನ ಅಳಿಯ ಮನೆಗೆ ಬಂದ. ನನಗೂ ಆ ಭಾವನೊಂದಿಗೆ ಮಾತನಾಡಿ ಬಹಳ ದಿನಗಳಾದ್ದರಿಂದ ಹರಟೆ ಕೊಚ್ಚಲಾರಂಭಿಸಿದೆ. ಅದೂ ಇದೂ ಮಾತಾಡಿ ಮನೆಯಲ್ಲಿ ಉದ್ಭವಿಸಿದ್ದ ಸಮಸ್ಯೆಯ ಬಗ್ಗೆಯೂ ಪ್ರಸ್ತಾಪಿಸಿದೆ. ನಾನೇ ಖುದ್ದಾಗಿ ಮನೆಯ ಸಮಸ್ಯೆಗೆ ಹೆಗಲು ಕೊಡಲಾರದ್ದಕ್ಕೆ ಒಳಗೊಳಗೇ ಕೊರಗೂ ಇತ್ತೇನೊ, ಅಂತೂ ನಾನಾಗೇ ಅವನಲ್ಲಿ ಸಲಹೆ ಕೇಳಿದೆ. ಕಾರಣ, ಬಾವಿ ನೀರಿನ ಕಿರಿಕಿರಿ ಪರಿಹಾರ ಆದಂತೆ ಇರಲಿಲ್ಲ.

ಹೊಸ ಒರತೆಯೂ ವಾಸನೆ ಮುಕ್ತವಾಗಿಲ್ಲ, ಹೊರಗಿನ ಬಳಕೆಗೆ ಅಡ್ಡಿಯಿಲ್ಲ. ಆದರೆ ಆ ನೀರನ್ನು ಕುಡಿಯಲು ಸಾಧ್ಯವಿಲ್ಲ ಎನ್ನುತ್ತಾ ಆಯಿ ಕೆಳಗಿನ ಮನೆಯಿಂದ ಕುಡಿಯುವ ನೀರು ಹೊರುತ್ತಿದ್ದಳು. ‘ಇಂಥಾ ಹಣೀ ನೀರು. ಇದನ್ನೂ ಕುಡಿಯಲ್ಲೆ ಆಗ್ತಿಲ್ಲೆ ಅಂದ್ರೆ ಮಳ್ಳೇ ಸೈ’ ಎಂದು ಅಪ್ಪ ಹರಿಹಾಯುತ್ತಿದ್ದ. ಸಮಸ್ಯೆ ಏನಾಗಿದೆ ಎಂಬುದೇ ನನಗೆ ಬಗೆಹರಿಯುತ್ತಿರಲಿಲ್ಲ. ಆಗಷ್ಟೇ ಮನೆಗೆ ಬಂದಿದ್ದ ಭಾವ ಜಲದ ಸೆಲೆಯನ್ನೂ ನೋಡುತ್ತಿದ್ದ. ಅಂದರೆ, ಹೊಸದಾಗಿ ಬಾವಿ ತೆಗೆಸುವವರು ಸ್ಥಳೀಯ ವಿಧಾನದಲ್ಲಿ ಈತನಿಂದ ಜಲದ ಸೆಲೆ ಎಲ್ಲಿದೆ ಎಂದು ನೋಡಿಸುತ್ತಿದ್ದರು.

ಹಾಗಾಗಿ ನಾವೂ ಹೊಸ ಬಾವಿಯನ್ನೇ ತೆಗೆಸಿಬಿಡಬಹುದು ಎಂಬ ಯೋಚನೆ ನನ್ನ ತಲೆಯಲ್ಲಿ ಉದಯಿಸಿತ್ತು. ‘ಹೋ! ಅಡ್ಡಿಲ್ಲೆ. ಜಲ ನೋಡಿದ್ರಾತು’ ಎಂದು ಆತ ಎದ್ದೇಬಿಟ್ಟ. ನಮ್ಮಿಬ್ಬರ ಈ ಮಾತುಕತೆ ನಡೆಯುವವರೆಗೆ ಸುಮ್ಮನೆ ಕುಳಿತಿದ್ದ ಅಪ್ಪ, ಧಡಕ್ಕನೆ ಎದ್ದು ‘ಎಂತಾ ಅಂದೆ...?’ ಎಂದು ನನ್ನತ್ತ ಕೆಕ್ಕರಿಸಿ ನೋಡಿ, ಭಾವನ ಕೈ ಹಿಡಿದು ಬಾವಿಯ ಮನೆಗೆ ದಾಪುಗಾಲಿಕ್ಕಿದ. ಕಂಪ್ಯೂಟರ್ ಟೇಬಲ್ಲಿನ ಎದುರಿಗಿದ್ದ ತೆರೆದ ಕಿಟಕಿಯಿಂದ ಬಾವಿ ಮನೆಯ ವಿದ್ಯಮಾನ ಸ್ಪಷ್ಟವಾಗಿ ಕಾಣಿಸುತ್ತಿತ್ತು.

ನೀರು ತರಲು ಕೆಳಮನೆಗೆ ಹೋಗುತ್ತಿದ್ದ ಆಯಿಯ ಕೈಯಿಂದ ಕೊಡ ಕಸಿದುಕೊಂಡ ಅಪ್ಪ ನಮ್ಮನೆ ಬಾವಿಗೆ ಇಳಿಸಿದ. ‘ಹೊಸಾ ಬಾವಿ ತೆಗೀತ್ನಡ, ಹೊಸ ಬಾವಿ! ತಲೆ ಸರೀ ಇದ್ದ ಈ ಮಾಣಿಗೆ’ ಎಂದೆಲ್ಲಾ ಕೂಗಾಡುತ್ತಾ ಮೈಮೇಲೆ ಬಂದವರಂತೆ ಬಾವಿಯಿಂದ ನೀರೆತ್ತಿ ಎತ್ತಿ ಸುತ್ತಲಿದ್ದ ಬಕೆಟ್ಟು, ಬಾನಿಗಳಿಗೆ ತುಂಬುತ್ತಿದ್ದ. ಭಾವ ಮತ್ತು ಆಯಿ ಉಸಿರಾಡುವುದನ್ನೂ ಮರೆತವರಂತೆ ನಿಂತಿದ್ದರು.

‘ನೋಡು... ನೀನೇ ನೋಡು, ಎಂಥಾ ಹಣೀ ನೀರು... ಬಾಯಿ ತೆಗೆದರೆ ಎಲ್ಲಾ ಹೊಸಾದು! ನಮಗಾಗಿ ಹೊಸಾ ಸ್ವರ್ಗನೇ ಸೃಷ್ಟಿ ಮಾಡಲ್ಲೆ ಹೊಂಟಿದ್ದ ನಿನ್ ಮಗ... ತ್ರಿಶಂಕು ಸ್ವರ್ಗ!’ ಎಂದು ತಾಳ್ಮೆಗೆಟ್ಟವರಂತೆ ಕೂಗುತ್ತಾ ನೀರು ಎತ್ತಿ ತುಂಬುತ್ತಲೇ ಇದ್ದ ಅಪ್ಪ.
‘ಅಪ್ಪಾ... ಸ್ವಲ್ಪ ತಡಿ... ಕೇಳಿಲ್ಲಿ... ಅದು ಹಾಂಗಲ್ಲ... ನಾ ಹೇಳಿದ್ದು...’– ನಾನು ಎಷ್ಟೇ ಕೂಗಿಕೊಂಡರೂ ಕಂಪ್ಯೂಟರ್ ಪರದೆಯಿಂದ ನನ್ನ ಧ್ವನಿ ಹೊರಗಿದ್ದ ಅವರನ್ನು ತಲುಪುತ್ತಲೇ ಇರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT