ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಥಿಲಗೊಂಡ ದಶಕಗಳ ಶಾಲೆ

ಸಕಲೇಶಪುರ ತಾಲ್ಲೂಕಿನ ಬ್ಯಾಕರವಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
Last Updated 1 ಆಗಸ್ಟ್ 2015, 9:41 IST
ಅಕ್ಷರ ಗಾತ್ರ

ಸಕಲೇಶಪುರ: ತಾಲ್ಲೂಕಿನ ಬ್ಯಾಕರವಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ಶಿಥಿಲಾವಸ್ಥೆ ತಲುಪಿದೆ. ಮಕ್ಕಳು ಒಳಗೆ ಕುಳಿತಿರು ವಾಗಲೇ ಹೆಂಚುಗಳು ಬೀಳುತ್ತಿವೆ. ಇದರಿಂದ ಮಕ್ಕಳು ಮತ್ತು ಪೋಷಕರಲ್ಲಿ ಆತಂಕ ಮೂಡಿದೆ.

ಪಶ್ಚಿಮಘಟ್ಟದ ಮಲೆನಾಡಿನಲ್ಲಿ ವಾರ್ಷಿಕ ಸರಾಸರಿ 4,500 ಮಿ.ಮೀ. ದಾಖಲೆ ಮಳೆಯಾಗುವ ಈ ಗ್ರಾಮದಲ್ಲಿ ಇರುವ ಈ ಶಾಲೆ ಶಿಥಿಲಗೊಂಡು ದಶಕ ಕಳೆದಿದೆ. ಹೆಂಚುಗಳು ಅಲ್ಲಲ್ಲಿ ಬಿದ್ದು ಹೋಗಿವೆ. ಛಾವಣಿ ತೀರು ಹಾಗೂ ರೀಪುಗಳು ಗೆದ್ದಲು ಹಿಡಿದು ಅಲ್ಲಲ್ಲಿ ಮುರಿದಿವೆ.

ಇದರಿಂದಾಗಿ ಮಳೆ ನೀರು ಶಾಲೆಯ ಒಳಗೆ ಹರಿದು ಗೋಡೆಗಳೆಲ್ಲವೂ ಶಿಥಿಲ ಗೊಂಡಿವೆ. ನೆಲದ ಮೇಲೆ ನೀರು ನಿಂತು ತೇವಾಂಶ ಹೆಚ್ಚಾಗಿ ಕಟ್ಟಡ ಈಗಲೋ ಆಗಲೋ ಬೀಳುವ ಸ್ಥಿತಿ ತಲುಪಿದೆ. ಸುತ್ತಮುತ್ತಲ ಹತ್ತಾರು ಗ್ರಾಮಗಳ ಕೇಂದ್ರ ಸ್ಥಾನದಲ್ಲಿರುವ ಈ ಗ್ರಾಮದಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳ ಶಿಕ್ಷಣಕ್ಕಾಗಿ ಸ್ವಾತಂತ್ರ್ಯಪೂರ್ವ 1936ರಲ್ಲಿ ಈ ಶಾಲೆ ಆರಂಭಿಸಲಾಗಿದೆ.

ಶಾಲಾ ಕಟ್ಟಡ ನಿರ್ಮಾಣ ಮಾಡಿ ಮೂರು ದಶಕ ಕಳೆದಿದೆ. ಈ ಕಟ್ಟಡದ ಒಳಗೆ ಮಕ್ಕಳನ್ನು ಕೂರಿಸಿಕೊಂಡು ಪಾಠ ಮಾಡುವುದಕ್ಕೆ ಶಿಕ್ಷಕರಿಗೆ ಭಯ. ಕಟ್ಟಡ ಅಪಾಯದಲ್ಲಿ ಇರುವುದರಿಂದಾಗಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಹಲವು ಪೊಷಕರು ತಮ್ಮ ಮಕ್ಕಳನ್ನು ಈ ಶಾಲೆಯಿಂದ ಬಿಡಿಸಿ ಬೇರೆ ಶಾಲೆಗಳಿಗೆ ಸೇರಿಸಿದ ಉದಾಹರಣೆಗಳಿವೆ ಎಂದು ಬ್ಯಾಕರವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಜಯ್‌ಕುಮಾರ್‌ ‘ಪ್ರಜಾವಾಣಿ’ಗೆ ಹೇಳುತ್ತಾರೆ. 1ರಿಂದ 7ನೇ ತರಗತಿವರೆಗೆ ಇರುವ ಶಾಲೆಯಲ್ಲಿ ಈಗ ಕೇವಲ 35 ವಿದ್ಯಾರ್ಥಿಗಳು ಉಳಿದುಕೊಂಡಿದ್ದಾರೆ. 

ಜನಪ್ರತಿನಿಧಿಗಳ ಕಡೆಗಣನೆ: ಸುಮಾರು 8 ದಶಕದ ಇತಿಹಾಸ ಹೊಂದಿರುವ ಈ ಶಾಲೆಗೆ ಹೊಸ ಕಟ್ಟಡ ನಿರ್ಮಿಸಿ ಕೊಡು ವಂತೆ ಶಾಸಕರು, ಜಿಲ್ಲಾ ಪಂಚಾಯಿತಿ ಸದಸ್ಯರು, ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರೂ ಇಲ್ಲಿಯವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಆರ್‌. ರವೀಂದ್ರ ದೂರಿದ್ದಾರೆ.

ಶಾಸಕರು ಈಗಲಾದರೂ ಈ ಶಾಲೆಯತ್ತ ಗಮನಹರಿಸಿ ಅಪಘಾತ ಸಂಭವಿಸುವುದಕ್ಕೂ ಮೊದಲು ಶಾಲಾ ಕಟ್ಟಡ ದುರಸ್ತಿಗೊಳಿಸುವುದು ಹಾಗೂ ಹೊಸ ಕಟ್ಟಡ ನಿರ್ಮಾಣ ಮಾಡಲು ಮುಂದಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT