ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಲೆಗಳ ಮೂಲಕ ಜೀವನಗಾನ

Last Updated 12 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಹೌದೇ? ಇದು ನಾನೇ !
ಲೇ: ಶಿಲ್ಪಿಕಲಾವಿದೆ ಕನಕಾಮೂರ್ತಿ
ಪು: 288; ಬೆ: ರೂ. 375
ಪ್ರ: ಭಾರತೀಯ ವಿದ್ಯಾಭವನ,
ಎಂ.ಪಿ.ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಮತ್ತು ಭವನ್ಸ್ ಪ್ರಿಯಂವದಾ ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್

ಭಾರತದಲ್ಲಿ ಭಾವಶಿಲ್ಪ ಕಲಾವಿದೆಯೊಬ್ಬರು ಭಾರತೀಯ ಭಾಷೆಯಲ್ಲಿ ಬರೆದ, ಆತ್ಮಚರಿತ್ರೆ ಪ್ರಕಾರದ ಮೊದಲ ಪುಸ್ತಕವಿದು. ಸುಮಾರು ೨೫೦ ಪುಟಗಳ ಈ ಪುಸ್ತಕದಲ್ಲಿ ಅಷ್ಟೇ ಸಂಖ್ಯೆಯಲ್ಲಿರುವ, ಪುಸ್ತಕದಾದ್ಯಂತ ಹರಡಿಕೊಂಡಿರುವ ಕಪ್ಪುಬಿಳುಪಿನ ಚಿತ್ರಗಳಿಲ್ಲದೆಯೂ ಇದನ್ನು ಓದಿಬಿಡಬಹುದು. ಆದರೆ ಚಿತ್ರಗಳನ್ನೂ ಆರಂಭಿಕ ವರ್ಣಚಿತ್ರಗಳನ್ನೂ ಬರವಣಿಗೆಯ ‘ಅನಿವಾರ್ಯ’ ಭಾಗವನ್ನಾಗಿಸಿ ಗ್ರಹಿಸಿದಾಗ ಮಾತ್ರ ವಾಚ್ಯ-ಅವಾಚ್ಯ ಅಭಿವ್ಯಕ್ತಿ ಸಂಸ್ಕೃತಿಯು ಕಟ್ಟಿಕೊಟ್ಟಿರುವ ಗ್ರಹಿಕೆಯ ಆಚೆಗಿನ ಅನುಭವವೊಂದು ಈ ಪುಸ್ತಕದಲ್ಲಿ ಸಾಧ್ಯವಾಗುತ್ತದೆ.

ಅಚ್ಚರಿಯ ವಿಷಯವೆಂದರೆ ಕನ್ನಡದ ಪ್ರಮುಖ ಕಲಾಸಾಹಿತಿಗಳ ಭಾಷಾಸಾಮರ್ಥ್ಯಕ್ಕೆ ಸಮನಾದ ಬರವಣಿಗೆಯ ಶೈಲಿ ಕನಕಾಮೂರ್ತಿಯವರ (ಹುಟ್ಟು: ೧೯೪೪) ಈ ಮೂರನೇ ಪುಸ್ತಕದಲ್ಲಿ ಅವರಿಗೆ ಸಿದ್ಧಿಸಿದೆ. ಸುಮಾರು ನೂರ ಇಪ್ಪತ್ತು ಬರಹಗಾರ್ತಿಯರ ಆತ್ಮಚರಿತ್ರೆ ಕನ್ನಡದಲ್ಲಿ ಪ್ರಕಟವಾಗಿದೆಯಂತೆ.

ಇಷ್ಟಾದರೂ, ಪ್ರಸ್ತುತ ಪುಸ್ತಕದ ಅಮೂರ್ತ ಸೂಚನೆಗಳನ್ನು, ಒಳನೋಟಗಳನ್ನು, ಚಿತ್ರ–ಬರಹದ ಸಾಮರಸ್ಯದಿಂದ ಇಲ್ಲಿ ಲಭ್ಯವಿರುವ ಅನರ್ಘ್ಯ ಸಾಂಸ್ಕೃತಿಕ ಹೊಳಹುಗಳನ್ನು ಖಂಡಿತವಾಗಿಯೂ ಕನ್ನಡ ಬರಹಗಾರ್ತಿಯರ ಚರಿತ್ರೆಗಳನ್ನು ಗಮನಿಸುವ ವಿಮರ್ಶಕರು ಭವಿಷ್ಯದಲ್ಲಿ ಗ್ರಹಿಸುವುದಿಲ್ಲವೆನಿಸುತ್ತದೆ. ಇದಕ್ಕೆ ಕಾರಣ ಈ ಪುಸ್ತಕವನ್ನು ‘ದೃಶ್ಯರಂಗ’ದವರೊಬ್ಬರು ‘ಸಾಹಿತ್ಯ’ ಮಾಧ್ಯಮವನ್ನು ಬಳಸಿ ಆತ್ಮಗಾಥೆಯನ್ನು ನಿವೇದಿಸಿರುವುದೇ ಆಗಿದೆ. ಚಿತ್ರಗಳನ್ನೇ, ಛಾಯಾಚಿತ್ರ ದೃಶ್ಯಗಳನ್ನೇ ಬಳಸಿ ಬರಹಗಾರ್ತಿಯೊಬ್ಬರು ತಮ್ಮ ಆತ್ಮಚರಿತ್ರೆಯನ್ನು ಪುಸ್ತಕದ ರೂಪದಲ್ಲಿ ಮೂಡಿಸಿದಲ್ಲಿ ಉಂಟಾಗುವ ‘ಅನ್ಯತೆ’ ಹಾಗೂ ‘ಅಸಂಗತತೆ’ ಈ ಪುಸ್ತಕದ ಅನಿವಾರ್ಯ ಭಾಗವೂ ಆಗಿರುವುದು ಅದಕ್ಕೆ ಕಾರಣ.

ಎಲ್ಲ ಲಲಿತಕಲಾ ಅಕಾಡೆಮಿಗಳು ಯಾವ ಕಾರಣಕ್ಕೂ ಇಂತಹ ಖಡಾಖಂಡಿತವಾದಿ ಕಲಾಬರಹಗಳನ್ನು ಪ್ರಕಟಿಸಿಲ್ಲ, ಮುಂದೆಯೂ ಪ್ರಕಟಿಸಲಾರರು. ಅಕಾಡೆಮಿಯ ಮಿತಿಯಂತೆ ಈ ಕಲಾಲೇಖಕಿಯ ಬಿಚ್ಚುನುಡಿಯೂ ಅದಕ್ಕೆ ಕಾರಣ. ಅದೊಂದು ತೆರನಾದ ಸಾಂಸ್ಥಿಕವಾಗಿಬಿಟ್ಟಿರುವ ಸ್ತ್ರೀವಾದೀ ವಿರೋಧೀ ಸ್ಥಾಯಿಭಾವವೂ ಹೌದು. ಮೈಸೂರಿನ ಹೆಂಗಸರೆಲ್ಲ ಅಷ್ಟು ಬೆಳ್ಳಗಿರುವಾಗ ನಾನೇಕೆ ಕಪ್ಪು ಎನ್ನುವ ಕನಕಾ (ಮಗಳು ಸುಮತಿ ತನ್ನಮ್ಮನನ್ನು ಕರೆಯುವುದೇ ಹಾಗೆ), ಕಪ್ಪಗಿದ್ದೇನೆ ಎಂದು ಕೊರಗುವುದನ್ನು ವಂಶವಾಹಿನಿಯಾಗಿ ಬಳವಳಿಯಾಗಿ ಪಡೆದುದನ್ನು ವಿವರಿಸುತ್ತಾರೆ.

ತನ್ನ ಈ ಊನವನ್ನೇ ಸಶಕ್ತಗೊಳಿಸಿ, ಪದವಿಯ ನಂತರ ತಮ್ಮಂದಿರಿಗೆ ಅಡುಗೆ ಮಾಡಿಬಡಿಸುವ ಉಪಾಯ ಮಾಡಿ ಬೆಂಗಳೂರಿಗೆ– ಅಂದರೆ ತಮ್ಮ ಸಂಸಾರದ, ಕುಟುಂಬದ ಒತ್ತಡವನ್ನು ತಪ್ಪಿಸಿಕೊಂಡು– ಬರುತ್ತಾರೆ. ಶಿಲ್ಪಕಲಾಭ್ಯಾಸವನ್ನು ಕೈಗೊಳ್ಳುವುದಾಗಿ ‘ಅಗ್ನಿಸಾಕ್ಷಿಯಾಗಿ ಪ್ರಮಾಣ ಮಾಡುತ್ತಾರೆ’, ಯೋಗಾನುಯೋಗದಿಂದ ವಿವಾಹವಾದ ನಂತರವೂ ಸಹ. ವಾದಿರಾಜರ ಹತ್ತಿರ ಶಿಲ್ಪ ಕಲಿಯುವುದನ್ನು ಇಷ್ಟಪಡುತ್ತಾರೋ, ಅಥವ ಅವರನ್ನೇ ಇಷ್ಟಪಡುತ್ತಾರೋ ಎಂಬರ್ಥದ ಇತರರ ಕೊಂಕುಗಳನ್ನೂ ಸಹ ಕನಕಾ ಅವರು ಸಮಾಧಾನಕರವಾಗಿಯೇ ಬರೆದುಕೊಂಡು, ಅದೇ ಉಸಿರಿನಲ್ಲಿ, ಹೆಣ್ಣು ಕೆತ್ತಿದಳು ಎಂಬ ಒಂದೇ ಕಾರಣಕ್ಕೆ ವಿಗ್ರಹಗಳನ್ನು ದೇವಾಲಯಗಳಲ್ಲಿ ಏಕೆ ಪ್ರತಿಷ್ಠಾಪಿಸುವುದಿಲ್ಲ? ಎಂಬ ಪ್ರಶ್ನೆಯನ್ನು ಇಡಿಯ ಸಮಾಜಕ್ಕೆ ಕೇಳುವ ಧೈರ್ಯ ಮಾಡಿದ್ದಾರೆ. ಮೆದು ಧ್ವನಿಯಲ್ಲಿ ಕೇಳುವುದರಿಂದ ಅದನ್ನು ದಕ್ಕಿಸಿಕೊಳ್ಳುತ್ತಾರೆ ಕೂಡ!

ಇಡಿಯ ಪುಸ್ತಕದಾದ್ಯಂತ ಇಂತಹ ಬೆಚ್ಚಿಬೀಳಿಸುವ ಅಂಶಗಳನ್ನು ಲೇಖಕಿ ಸಹಜ, ಸಾಧಾರಣವೆಂಬ ಬರವಣಿಗೆಯ ತಂತ್ರಗಾರಿಕೆಯಲ್ಲಿ ಮುಚ್ಚಿಡುತ್ತಲೇ ಅನಾವರಣಗೊಳಿಸುತ್ತಾರೆ. ವಾದಿರಾಜರ ಕಲಾತ್ಮಕ ವ್ಯಕ್ತಿತ್ವವನ್ನು ಆರಾಧಿಸುತ್ತಲೇ ಕಲ್ಲಿನ ಕೆತ್ತನೆಯಲ್ಲಿ ತಮ್ಮತನವನ್ನು ರೂಢಿಸಿಕೊಳ್ಳುವ ಕಷ್ಟದ ವೈರುಧ್ಯಗಳಿವೆ ಈ ಪುಸ್ತಕದಲ್ಲಿ. ಪಿತೃಪ್ರಾಧಾನ್ಯತೆಯನ್ನು ಮಾನ್ಯ ಮಾಡುತ್ತಲೇ ಸ್ವಂತಿಕೆಯನ್ನು ಕಂಡುಕೊಳ್ಳುವಾಗ ಕಲಾವಿದೆಯೊಬ್ಬಳು ಅದೇ ಪಿತೃ ನಿರ್ಮಿತಿಗೆ ಪ್ರತಿರೋಧ ಒಡ್ಡುವ ಅನನ್ಯ ಘಟನೆ ಕನಕಾ ಅವರ ಕಲಾಬದುಕು.

ಕುಟುಂಬದ ಸಾಂಸ್ಥೀಕರಣದ ಒಳಗಿನಿಂದಲೇ ಅದರೊಳಗಿನ ಅಸಮತೆಯನ್ನು ವ್ಯತ್ಯಸ್ಥಗೊಳಿಸಿ, ಸರಿದೂಗಿಸುವ ತಾಳ್ಮೆಯ, ಡಿ.ಆರ್ ಹೇಳುವಂತೆ ‘ಕಾತ್ಯಾಯನಿ’ ಮಾದರಿಯ ಸ್ತ್ರೀವಾದದ ನಿಲುವನ್ನು ಕನಕಾ ಅವರ ಬದುಕು ಮತ್ತು ಬರಹ ನೆನಪಿಸುತ್ತದೆ. ಇದನ್ನು ಮತ್ತೊಂದು ಹಿನ್ನೆಲೆಯಿಂದ ನೋಡಬಹುದು: ಲಾಲ್‌ಬಾಗ್ ಪಶ್ಚಿಮ ದ್ವಾರದ ಕುವೆಂಪು ಪ್ರತಿಮೆ, ಭಾರತೀಯ ವಿದ್ಯಾಭವನದ ಮುಂದಿನ ಶಿಲ್ಪಗಳು, ವಿಶ್ವೇಶ್ವರಯ್ಯ ತಾಂತ್ರಿಕ ಸಂಗ್ರಹಾಲಯದ ರೈಟ್ ಬ್ರದರ್ಸ್ ಶಿಲ್ಪಗಳು, ಇಂತಹ ಹತ್ತಾರು ಸಣ್ಣಪುಟ್ಟ ಪ್ರಮಾಣದ ಶಿಲ್ಪಗಳನ್ನು ನೋಡುತ್ತಲೇ ಬೆಂಗಳೂರನ್ನು ಸುತ್ತುತ್ತಿರುತ್ತೇವೆ. ಆದರೆ ಅವೆಲ್ಲ, ಅಂತಹವೆಲ್ಲವನ್ನು ಇವರೇ ಮಾಡಿದ್ದು ಎನ್ನುವುದು ಮಾತ್ರ ತಕ್ಷಣ ನಮಗೆ ಹೊಳೆಯುವುದಿಲ್ಲ. ರವಿವರ್ಮನಂತೆ, ಎನ್ .ಪುಷ್ಪಮಾಲಾ ಅವರಂತೆ, ಕನಕಾಮೂರ್ತಿಯವರ ಕೃತಿಗಳನ್ನು ನಾವು ಹುಡುಕಿ ಹೋಗಬೇಕಿಲ್ಲ. ಸ್ವತಃ ಅವುಗಳೇ ನಮ್ಮನ್ನು ಎಲ್ಲೆಡೆ ಎದುರುಮಾಡಿಕೊಳ್ಳುತ್ತಿರುತ್ತವೆ, ಗಮನವಿಟ್ಟು ನೋಡಿದಲ್ಲಿ– ಬೆಂಗಳೂರು, ಮೈಸೂರುಗಳ ನಡುವೆ ಮತ್ತು ಈ ಪುಸ್ತಕದಾದ್ಯಂತ!
*
ಮೂರು ಸಂಸ್ಥೆಗಳು ಸೇರಿ ಪ್ರಕಟಿಸಿರುವ ಈ ಪುಸ್ತಕದ ಒಟ್ಟಾರೆ ‘ಹೊರನೋಟದ ವಿನ್ಯಾಸ’ ಒರಟಾಗಿದೆ, ಕನಕಾ ಅವರ ಶಿಲ್ಪಗಳಂತೆ. ಸರಾಗವಾದ ಅಕ್ಷರವಿನ್ಯಾಸ ಹಾಗೂ ಬರವಣಿಗೆ ಓದಿಸಿಕೊಂಡು ಹೋಗುತ್ತದೆ, ಅವರ ಶಿಲ್ಪಗಳಂತೆ. ಅಂದರೆ ಇದು ತೀರಾ ಸಾಧಾರಣ ವಿನ್ಯಾಸದ ಪುಸ್ತಕವಾಗಿ ಕಾಣುತ್ತಲೇ ಅವರ ಕೃತಿಗಳ ಒರಟು ಸ್ವಭಾವದೊಂದಿಗೆ ಸಾತತ್ಯತೆ ಹೊಂದಿಬಿಟ್ಟಿದೆ. ಇಂತಹ ಒರಟು ಮೇಲ್ಮೈನ ಶಿಲ್ಪಗಳನ್ನು ಸೃಷ್ಟಿಸುತ್ತಿದ್ದುದ್ದರಿಂದಲೇ ಎಷ್ಟೋ ಬಾರಿ ಈ ಶಿಲ್ಪಿ–ಬರಹಗಾರ್ತಿಯು ನಯವಾದ ಇಕ್ಕಟ್ಟುಗಳಿಗೆ ಸಿಲುಕಿದ್ದಿದೆ. ಆರ್ಡರ್ ಕೊಟ್ಟವರು ‘ಒರಟಾಯಿತು, ಸಾಕಷ್ಟು ನಯನಾಜೂಕು ಇಲ್ಲ’ ಎಂಬ ಕಾರಣಕ್ಕೆ ಶಿಲ್ಪಗಳು ಸೃಷ್ಟಿಗೊಂಡ ಮೇಲೆ ನಿರಾಕರಿಸಿದ್ದಿದೆ.

ಅವುಗಳನ್ನೇ ಮತ್ಯಾರೋ ಸಹೃದಯರು ಕೊಂಡದ್ದು, ಮೊದಲು ಮುಂಗಡ ಕೊಟ್ಟವರು ಹಣ ಹಿಂಪಡೆಯದೆ ಹೆಚ್ಚು ಕಾಲಾವಧಿ ಕೊಟ್ಟು ತಮಗೆ ಬೇಕಾದ ರೀತಿ ಮತ್ತೆ ನಿರ್ಮಿಸಿಕೊಂಡದ್ದು, ಇವೆಲ್ಲ ಘಟನೆಗಳು, ಹೆಸರುಗಳೊಂದಿಗೆ ನೇರವಾಗಿ ಉಕ್ತವಾಗಿವೆ. ಇವೆಲ್ಲವೂ ಕಳೆದ ನಾಲ್ಕೈದು ದಶಕದ ಬೆಂಗಳೂರಿನ ಕಲಾಪ್ರೋತ್ಸಾಹಕರ ವಾತಾವರಣವೊಂದನ್ನು ನಿರ್ಮಿಸಿಕೊಡುವ ‘ನೆನಪಿನ ಚಿತ್ರಶಾಲೆ’ಯಾಗಿ ಮೂಡಿಬಂದಿದೆ. ‘ಒರಟು’ ಶಿಲ್ಪಶೈಲಿಯ ಕನಕಾರ ಬದುಕಿನಲ್ಲಿ ‘ನಯವಂತಿಕೆ’ಯನ್ನು ರೂಢಿಸಿಕೊಂಡ ಗಂಡಸರೇ ಹೆಚ್ಚು (ಗುರು ವಾದಿರಾಜರು ಮತ್ತವರ ಶಿಲ್ಪ ಶೈಲಿ, ಪತಿ ಮೂರ್ತಿ, ಕಲಾಮಂದಿರದ ಅ.ನ. ಸುಬ್ಬರಾವ್ ಮುಂತಾದವರು). 

ಈ ಪುಸ್ತಕವನ್ನು ಬರೆಯುವ ಬದಲು ಅಕ್ಷರಶಃ ಶಿಲ್ಪವೊಂದನ್ನು ರೂಪಿಸುವಂತೆ ಕಟೆದು ನಿಲ್ಲಿಸಿದ್ದಾರೆ ಕನಕಾ. ಒಂದು ಉಳಿ ಏಟು ಹೆಚ್ಚಾದರೆ ಕಲ್ಲಿನ ಶಿಲ್ಪ ಮತ್ತೆ ಸರಿಪಡಿಸಲಾಗದು. ವಿಮರ್ಶಾತ್ಮಕವಾಗಿ ಹೇಳುವುದಾದರೆ, ಅವರ ಶಿಲ್ಪಗಳಲ್ಲಿ ಶಿಲ್ಪಕ್ಕಿಂತಲೂ ಬೊಂಬೆಗಳ ತತ್ವ (ಡಾಲ್ಸ್ ತತ್ವ) ಹೆಚ್ಚಿದೆ. (ಅಂತರರಾಷ್ಟ್ರೀಯವಾಗಿ ಜೆಫ್ ಕೂನ್ಸ್, ಭಾರತದ ನವ್ಜೋತ್ ಅಲ್ತಾಫ್ ಇಂತಹ ಕಲಾವಿದರು). ಆದ್ದರಿಂದಲೇ ಅವರ ಕೃತಿಗಳನ್ನು ‘ಕಲೆ’ ಎನ್ನುವುದಕ್ಕಿಂತಲೂ ‘ಕುಶಲಕಲೆ’ ಎಂದು ಅಣಕಿಸುವವರ ಬಗ್ಗೆ ಅವರಿಗೆ ಅರಿವಿದೆ.

ಸಾಂಪ್ರದಾಯಿಕರಿಗೆ ಶಿಲ್ಪಶಾಸ್ತ್ರದ ಭಾಷೆಯನ್ನು ವಿಘ್ನಗೊಳಿಸುವವರಂತೆಯೂ, ಆಧುನಿಕ-ಸಮಕಾಲೀನರಿಗೆ ಸಾಂಪ್ರದಾಯಿಕರಂತೆಯೂ ಕಾಣುವ ಕನಕಾಮೂರ್ತಿಯವರ ಕೃತಿಯ ನಿಜಸತ್ವ ಇರುವುದು ಈ ‘ಬೊಂಬೆ-ಪ್ರತಿಮೆಗಳ-ಮಾದರಿ’ಗಳೆಂಬ ಮಾಧ್ಯಮಿಕ ಮಾರ್ಗದಲ್ಲಿ. ಆದ್ದರಿಂದಲೋ ಏನೋ, ಗ್ಯಾಲರಿ–ವಿಮರ್ಶಕರು–ಮಾರುಕಟ್ಟೆಯ ವರ್ತುಲದಿಂದ ಹೊರಗೇ ತಮ್ಮ ನೆಲೆಯನ್ನು ಧೀಮಂತವಾಗಿ ಕಂಡುಕೊಂಡಿದ್ದಾರೆ ಇವರು. ಉದಾಹರಣೆಗೆ ಒಂದೇ ಪ್ರತಿಮೆಯನ್ನು ನೂರಾರು ಪ್ರತಿಗಳನ್ನಾಗಿಸಿ, ಆದಕಾರಣಕ್ಕೆ ಅದನ್ನು ಚಿಕ್ಕದಾಗಿ ನಿರ್ಮಿಸಿ, ಸುಲಭಕ್ಕೆ ಮಾರುವ ಇವರು ತಮ್ಮದೇ ಆರ್ಥಿಕ ನೆಲೆಯನ್ನು ಕಂಡುಕೊಂಡಿರುವುದೂ ಸಹ, ಇವರ ಸಣ್ಣಪ್ರಮಾಣದ ಕೃತಿಗಳ ಮೂಲಸತ್ವಗಳಲ್ಲೊಂದು.

ವಿಶ್ಲೇಷಕ, ತಾತ್ವಿಕ ಬರಹಗಳಿಗೆ ಸಮಾನಾಂತರವಾಗುವಂತೆ ಆತ್ಮನಿರೂಪಣಾ ತಂತ್ರದಲ್ಲಿ ಇವರು ಬರೆದಿರುವುದೂ ಸಹ, ಇಂತಹ ಲಾಲಿತ್ಯದ ಮಾರ್ಗವನ್ನು ದಟ್ಟ ಕಾನನದ ನಡುವೆ ಮೂಡಿಸಿಕೊಂಡಂತಾಗಿದೆ. ಇದರಿಂದಾಗಿ ಅಪ್ರಜ್ಞಾಪೂರ್ವಕವಾಗಿ, ಖ್ಯಾತ ಶಿಲ್ಪಿ ಆರ್.ಎಸ್. ನಾಯ್ಡು ಅವರ ಸಣ್ಣ ಅಳತೆಯ ಪೋರ್ಸಲೀನ್ ಪ್ರತಿಮೆಗಳ ಹಂಚಿಕೆಯ ಸಂಪ್ರದಾಯವನ್ನೂ ಮುಂದುವರೆಸಿದಂತಾಗಿದೆ. ಕನ್ನಡದ ಕಲಾವಿಮರ್ಶೆಗೆ ಇದರ ಅರಿವು ಇದ್ದಂತಿಲ್ಲ.

*
ಇದು ಪರಿಶುದ್ಧವಾದ ಆತ್ಮಚರಿತ್ರೆಯಲ್ಲ. ‘ಅಣ್ಣನ ನೆನಪು’ವಿನಂತೆ ಗುರು ವಾದಿರಾಜ್-ಮಗಳು ಸುಮತಿ-ತಮ್ಮದೇ ವೈಯಕ್ತಿ(ಕಥೆ) ಎಂಬ ತ್ರಿವಳಿ ಸಂಗಮವಾಗಿದೆ ಈ ಪುಸ್ತಕ. ಈ ಕಥನದ ಅರ್ಧ ಪಾಲು ಛಾಯಾಚಿತ್ರ–ರೇಖಾಚಿತ್ರಗಳದ್ದೂ ಆದ್ದರಿಂದ ಕಥನವನ್ನು ಅದರ ರೂಢಿಗತ ಚೌಕಟ್ಟಿನಿಂದಲೂ ಹೊರಕ್ಕೆಳೆದಂತಾಗಿದೆ. ಬರವಣಿಗೆಯಲ್ಲಿ ನೇರತನವಿದೆ, ಆಳವಿಲ್ಲ ಅಥವ ಅದರ ಅವಶ್ಯಕತೆ ಇದ್ದಂತಿಲ್ಲ.

ಒಂದೆರೆಡು ವಾಕ್ಯಗಳಲ್ಲಿ ತಮ್ಮ ಶಿಲ್ಪಜೀವನದ, ಭಾರತೀಯ ನಿಲುವಿನಂತೆ ಕೃತಿರಚಿಸುತ್ತಿದ್ದೇನೆಂಬ ನಿಲುವನ್ನು ವಿಸ್ತರಿಸಿದ್ದರೆ ಸೊಗಸಾಗಿರುತ್ತಿತ್ತು ಅನ್ನಿಸದಿರದು. ಇದು ಅವರಿಗೆ ಸಾಧ್ಯವೂ ಸಹ. ಚಿತ್ರಕಲೆಗೆ ಸೇರುವ ಮುಂಚಿನ ತಮ್ಮ ಜೀವನವೃತ್ತಾಂತದಲ್ಲಿ ತಂದೆಯ ಬೃಹತ್ ಕುಟುಂಬ, ಅದರಲ್ಲಿ ತಂಗಿಯೊಬ್ಬಳು ಹಟಕ್ಕೆ ಬಿದ್ದು ನಾಲ್ಕೈದಡಿ ಅಗಲದ ಒಂದೇ ಬಾಳೆಯೆಲೆಯಲ್ಲಿ ಒಬ್ಬಳೇ ಊಟ ಮಾಡಿದ್ದು, ಗಂಡುಕಾಫಿಯಾದರೆ ಗಂಡ ಮಾಡಿಕೊಡುವುದು, ಹೆಣ್ಣುಕಾಫಿಯಾದರೆ ತಾನು ಮಾಡಿಕೊಡುವುದು ಇತ್ಯಾದಿಯನ್ನು ಉಹಾಹರಿಸುವ ಬರವಣಿಗೆಯ ಹದ ಮತ್ತು ಹಂತವಂತೂ ಸೊಗಸಾದ ನಿರೂಪಣೆಯಿಂದ, ಹಾಸ್ಯ ಪ್ರಜ್ಞೆಯಿಂದ ಮತ್ತಷ್ಟು ಮಗದಷ್ಟು ಬೇಕೆನಿಸುವಂತಿದೆ.

ಉತ್ತರಾರ್ಧದಲ್ಲಿ ಮಾತ್ರ ತಾವು ಮಾಡಿದ ಪ್ರತಿಯೊಂದು ಕೃತಿ, ಅದನ್ನು ಮೆಚ್ಚಿದವರು, ಕೊಂಡವರು, ಅದಕ್ಕಾಗಿ ತಮ್ಮನ್ನು ಸನ್ಮಾನಿಸಿದವರು, ಯಾವ ಯಾವ ಸಂಸ್ಥೆಗಳಲ್ಲಿ ತಮ್ಮ ಕೃತಿಗಳಿವೆ ಎನ್ನುವುದನ್ನು ಸಾರಾಸಗಟಾಗಿ ಒಟ್ಟುಗೂಡಿಸಿರುವುದರಿಂದಾಗಿ, ಮೊದಲರ್ಧವನ್ನೇ ಮೆಲುಕು ಹಾಕುವಂತೆ ಮಾಡುತ್ತದೆ. ಕೊನೆಯಲ್ಲಿ ತಮ್ಮ ಕೃತಿಗಳ ಬಗ್ಗೆ ಬಂದ ಇಂಗ್ಲಿಷ್-ಕನ್ನಡ ಪತ್ರಿಕಾ ಬರಹಗಳಂತೂ ಒಂದೇ ಘಟನೆ, ವಿವರಗಳನ್ನು ನೂರೊಂದನೇ ಬಾರಿ ಪುನರಾವರ್ತಿಸಿಬಿಡುತ್ತವೆ. ತಮ್ಮ ಬರವಣಿಗೆಯನ್ನು ತಮ್ಮ ಬಗ್ಗೆ ಬಂದ ಬರವಣಿಗೆಯೊಂದಿಗೆ ಇರಿಸಿ ನೋಡುವಲ್ಲಿ ಗೆಲ್ಲುವುದು ಕನಕಾಮೂರ್ತಿ ಎಂಬ ಗಾಯಕಿ–ಕಲ್ಲುಶಿಲ್ಪಿ–ಸಾಹಿತಿಯೇ!
*
ಭಾರತೀಯ ಕಲಾವಿದರ ಬಗ್ಗೆ ಬರುತ್ತಿರುವ ಪುಸ್ತಕಗಳನ್ನು ಬಿಡಿ, ಸಾಮಾನ್ಯ ಪ್ರದರ್ಶನಗಳ ಕೆಟಲಾಗ್ ಸಹ ಹೊಳಪು ಅಂದಚಂದಗಳಲ್ಲಿ ಈ ಪುಸ್ತಕವನ್ನು ಮೀರುವಂತಿರುತ್ತವೆ. ಮತ್ತೊಂದೆಡೆ, ಭಾರತೀಯ ಪುಸ್ತಕಗಳು ಪಾಶ್ಚಾತ್ಯರ ಸಾಧಾರಣ ಕೆಟಲಾಗ್‌ಗಳ ಮಟ್ಟವನ್ನೂ ಮುಟ್ಟದಂತಿರುತ್ತವೆ. ಇತ್ತ, ಕೇವಲ ಈ ಪುಸ್ತಕದ ಬರಹವನ್ನು ಮಾತ್ರ ಓದಲು ಸಾಧ್ಯವಿಲ್ಲ, ಅವುಗಳೊಂದಿಗೆ ಚಿತ್ರಗಳೂ ಅನಿವಾರ್ಯ ಪಠ್ಯಗಳೇ, ಎಂ.ಎಸ್. ಮೂರ್ತಿ ಅವರ ‘ದೃಶ್ಯ’ವೆಂಬ ದೃಶ್ಯ ಕಾದಂಬರಿಯಂತೆ. ಗ್ಯಾಲರಿ-ಮಾರುಕಟ್ಟೆ-ಕ್ಯುರೇಟರ್‌ಗಳ ಪರಿಧಿಯ ಹೊರಗೇ ಉಳಿದವರು ಕಲ್ಲುಮನಸ್ಸು ಮಾಡಿ ಕಲಾರಂಗದಲ್ಲಿ ನೆಲೆ ನಿಲ್ಲಲು ಸಾಧ್ಯ ಹಾಗೂ ಅದನ್ನು ದಾಖಲಿಸಲೂ ಸಾಧ್ಯ ಎಂಬುದನ್ನು ಕನಕಾಮೂರ್ತಿ ಅವರ ಕೃತಿಗಳಂತೆ ಈ ಪುಸ್ತಕದಲ್ಲಿನ ಅವರ ಬರವಣಿಗೆ ಹಾಗೂ ಅದರ ವಿನ್ಯಾಸವೂ (ಎಸ್. ಮಧುಸೂದನ್) ನಿರೂಪಿಸಲು ಸಾಧ್ಯವಿದೆ.

ಈ ಪುಸ್ತಕ ಅನ್ಯಭಾಷೆಗಳಿಗೂ, ಅದರಲ್ಲೂ ಇಂಗ್ಲೀಷಿಗೆ ಭಾಷಾಂತರವಾಗುವುದು ಬಹಳ ಮುಖ್ಯ. ಹಾಗಾಗುವುದಕ್ಕೂ ಮುನ್ನ ಅದರ ಬರಹ-ವಿನ್ಯಾಸದ (ಸಂಪಾದಕರ ಕೈಯಲ್ಲಿ) ಸಂಸ್ಕರಣವೂ ಅಷ್ಟೇ ಮುಖ್ಯ. ಕನಕಾಮೂರ್ತಿಯವರ ಶಿಲ್ಪ-ಬರವಣಿಗೆಗಳಂತೆ ಸಾಧಾರಣವಾಗಿ ಕಾಣುತ್ತಲೇ ಅಸಾಧಾರಣತೆಗೆಳೆಸುವ ಪ್ರಸ್ತುತ ಪುಸ್ತಕವು ಕನ್ನಡ ಕಲಾಸಾಹಿತ್ಯಕ್ಕೊಂದು ಅಪರೂಪದ ಕೊಡುಗೆ, ಎಂ.ಟಿ.ವಿ. ಆಚಾರ್ಯರ ‘ಕಲೆ ಮತ್ತು ನಾನು’ ಎಂಬ ಪುಸ್ತಕದಂತೆ. ಇದನ್ನು ಗ್ರಹಿಸಲಾಗದವರು, ಗ್ರಹಿಸಲಿಚ್ಛಿಸದವರಿಗೂ ಸಹ, ಕರ್ನಾಟಕದ ದೃಶ್ಯಭಾಷೆಯನ್ನು ಕುರಿತಾದ ಸಂಗ್ರಹ ಕಾರ್ಯಕ್ಕೆ ಇದೊಂದು ಒಳ್ಳೆಯ ಮಾದರಿ ಹಾಗೂ ಆಕರ ಸಾಮಗ್ರಿ ರೂಪದಲ್ಲಿಯಾದರೂ ಒದಗಿ ಬರುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT