ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ ಹಳೇ ಮಂಡ್ಲಿ ಸಂಪೂರ್ಣ ಜಲಾವೃತ

250ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ತುಂಗಾ ಎಡ ನಾಲೆ ನೀರು, ಜನರ ಪರದಾಟ, ತೀರ್ಥಹಳ್ಳಿ ಮಾರ್ಗ 8 ಗಂಟೆ ಬಂದ್‌
Last Updated 28 ಜುಲೈ 2016, 9:58 IST
ಅಕ್ಷರ ಗಾತ್ರ

ಶಿವಮೊಗ್ಗ: ತುಂಗಾ ಎಡ ನಾಲೆ ದಂಡೆ ಮಂಗಳವಾರ ಬೆಳಗಿನ ಜಾವ ಒಡೆದ ಪರಿಣಾಮ ಭಾರಿ ಪ್ರಮಾಣದ ನೀರು ಶಿವಮೊಗ್ಗ ನಗರಕ್ಕೆ ನುಗ್ಗಿದ್ದು, ಹಳೇ ಮಂಡ್ಲಿ, ಸವಾಯಿ ಪಾಳ್ಯ, ಕುರುಬರ ಪಾಳ್ಯ ಹಾಗೂ ಗಂಧರ್ವ ನಗರದ 250ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ.

ನೀರನ ರಸಭಸಕ್ಕೆ ಮನೆಗಳಲಿದ್ದ ಕಾಳು, ಬೇಳೆ, ಅಕ್ಕಿ, ರಾಗಿ, ದಿನಸಿ, ಬಟ್ಟೆ, ಟಿ.ವಿ ಸೇರಿದಂತೆ ನೂರಾರು ಮನೆಗಳ ಬಹುತೇಕ ಸಾಮಗ್ರಿಗಳು ನೀರು ಪಾಲಾಗಿವೆ. ಕೆಲ ಮನೆಗಳಲ್ಲಿ ಇಟ್ಟಿದ್ದ ಹಣ, ಒಡವೆಗಳೂ ಕೊಚ್ಚಿಕೊಂಡು ಹೋಗಿವೆ. ಹಳೇ ಮಂಡ್ಲಿ ಪ್ರದೇಶದಲ್ಲಿ 14 ಮನೆಗಳು ಕುಸಿದಿವೆ.

ಎಚ್ಚರಗೊಳ್ಳುವ ಮುನ್ನವೇ ಜಲರಾಶಿ: ಮಂಡ್ಲಿ, ಸವಾಯಿ ಪಾಳ್ಯ, ಕುರುಬರ ಪಾಳ್ಯ, ಗಂಧರ್ವ ನಗರದ ಜನರು ಬೆಳಗಿನ ಜಾವ ಸವಿ ನಿದ್ದೆಯ ಮಂಪರಿನಿಂದ ಮೇಲೇಳುವ ಸಮಯ ದಲ್ಲೇ ನೀರು ದಿಢೀರ್‌  ನುಗ್ಗಿದೆ. ಕೆಲವರು ಆಗಲೇ ಎದ್ದು ದೈನಂದಿನ ಕೆಲಸ ಕಾರ್ಯಗಳಲ್ಲಿ ತೊಡಗಿ ಕೊಂಡಿದ್ದರು. ಕೆಲವರು ಇನ್ನೂ ನಿದ್ದೆಯಿಂದ ಎಚ್ಚರವಾಗಿರಲಿಲ್ಲ. ಕೆಲವರು  ಕೆಲಸಕ್ಕೆ ಹೋಗುವ ಸಿದ್ಧತೆ ನಡೆಸಿದ್ದರು. ಕೆಲ ಮನೆಗಳಿಂದ ಜನರ ಕೂಗಾಟ, ಚೀರಾಟ ಕೇಳಿ ಹೊರಗೆ ಬಂದವರಿಗೆ ಜಲರಾಶಿಯೇ ಬೇಲಿ ನಿರ್ಮಿಸಿರುವುದು ಗೋಚರಿಸಿತು.

ಜನರು ಎಲ್ಲ ಸಾಮಗ್ರಿಗಳನ್ನೂ ಅಲ್ಲೇ ಬಿಟ್ಟು ಜೀವ ಉಳಿಸಿಕೊಳ್ಳಲು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಕ್ಷಣ ಮಾತ್ರದಲ್ಲೇ ಮನೆಗಳ ಒಳಗೆ ನೀರು ನುಗ್ಗಿ ಎಲೆಕ್ಟ್ರಾನಿಕ್ ಉಪಕರಣ, ದವಸ ಧಾನ್ಯ ಸೇರಿದಂತೆ ಎಲ್ಲ ಸಾಮಗ್ರಿಗಳು ಮುಳುಗಿ ಹೋಗಿವೆ. ಕೆಲ ಮನೆಗಳಲ್ಲಿ ಎರಡು ಮೂರು ಅಡಿ ನೀರು ನುಗ್ಗಿದರೆ, ತಗ್ಗು ಪ್ರದೇಶದ ಮನೆಗಳಲ್ಲಿ 5 ಅಡಿಯವರೆಗೂ ನೀರು ನಿಂತಿದೆ. ಮಕ್ಕಳು, ವೃದ್ಧರನ್ನು ರಕ್ಷಿಸಲು ಉಳಿದ ನಾಗರಿಕರು ಹೆಣಗಾಡಿದರು.

‘ದೇವರ ದಯೆ, ಘಟನೆಯಲ್ಲಿ ಜೀವ ಹಾನಿ ಸಂಭವಿಸಿಲ್ಲ. ರಾತ್ರಿ ಈ ಘಟನೆ ನಡೆದಿದ್ದರೆ ಅನಾಹುತ ಊಹಿಸಲು ಸಾಧ್ಯವಿರಲಿಲ್ಲ’ ಎಂದು ಮಂಡ್ಲಿಯ ಹನುಮಂತಪ್ಪ ದೇವರ ಸ್ಮರಿಸಿದರು.

ತೀರ್ಥಹಳ್ಳಿ ಮಾರ್ಗ 8 ಗಂಟೆ ಬಂದ್‌: ಬೆಳಿಗ್ಗೆ 6ರಿಂದ ಮಧ್ಯಾಹ್ನ  2ರವರೆಗೆ ತೀರ್ಥಹಳ್ಳಿ ಮಾರ್ಗದಲ್ಲಿ ವಾಹನ ಸಂಚಾರ ನಿಷೇಧಿಸಲಾಗಿತ್ತು. ಸ್ಥಳೀಯ ಗ್ರಾಮಗಳಿಗೆ ತೆರಳುವ ವಾಹನಗಳು, ದ್ವಿಚಕ್ರ ವಾಹನ ಸವಾರರು ಪರದಾಡಿದರು. ನಾರಾಯಣ, ಶಂಕರ ಆಸ್ಪತ್ರೆಗಳಿಗೆ ತೆರಳುವ ರೋಗಿಗಳು ಸಾಕಷ್ಟು ಹೆಣಗಾಡಿದರು.

ಜಲಾವೃತ ಭಾಗದ ಶಾಲೆಗಳಿಗೆ ರಜೆ: ಜಿಲ್ಲಾಡಳಿತ ಜಲಾವೃತಗೊಂಡ ಭಾಗದ ಶಾಲೆಗಳಿಗೆ ಮಂಗಳವಾರ ರಜೆ ಘೋಷಿಸಿತು. ಅಲ್ಲಿನ ಎಲ್ಲ ಶಾಲೆಗಳಿಗೂ ನೀರು ನುಗ್ಗಿ ಶಾಲೆಯ ಪೀಠೋಪಕರಣ ನೀರು ಪಾಲಾಗಿದ್ದವು.

ನಗರಕ್ಕೆ ನೀರು ಸರಬರಾಜು ಮಾಡುವ ಪ್ರಮುಖ ಕೇಂದ್ರ ಕೆ.ಆರ್. ನೀರು ಸರಬರಾಜು ಕೇಂದ್ರಕ್ಕೂ ನೀರು ನುಗ್ಗಿದ್ದು, ಎರಡು ಮೋಟಾರ್‌ಗಳಿಗೆ ಹಾನಿಯಾಗಿದೆ. ಇದರಿಂದ ನಗರದ ವಿವಿಧ ಬಡಾವಣೆಗಳ ನೀರು ಪೂರೈಕೆ ಯಲ್ಲೂ ವ್ಯತ್ಯಯವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಮನೆ ಮೇಲ್ಚಾವಣಿ ಏರಿ ಕುಳಿತರು: ತಕ್ಷಣಕ್ಕೆ ನುಗ್ಗಿದ ನೀರಿಗೆ ಹೆದರಿ ಹಲವರು ಮನೆಗಳ ಮೇಲ್ಚಾವಣಿ ಏರಿದರು. ಮನೆಗೆ ನೀರು ನುಗ್ಗುತ್ತಿ ದ್ದರೂ, ಅಸಹಾಯಕ ಪರಿಸ್ಥಿತಿಯಲ್ಲಿ

ಕೆಲವರು ಪರದಾಡಿದರು.

ಕೇವಲ 24 ಗಂಟೆ ಮೊದಲು ಹರಿದಿದ್ದ ನೀರು!: ತುಂಗಾ ಎಡನಾಲೆಗೆ ಬೇಸಿಗೆಯ ನಂತರ ನೀರು ನಿಲುಗಡೆ ಮಾಡಲಾಗಿತ್ತು. ಘಟನೆಗೂ ಕೇವಲ 24 ಗಂಟೆ ಮೊದಲು ಅಂದರೆ, ಜುಲೈ 26ರ ಬೆಳಿಗ್ಗೆಯಿಂದ ನಾಲೆಗೆ 540 ಕ್ಯುಸೆಕ್‌ ನೀರು ಹರಿಸಲಾಗಿತ್ತು. ಘಟನೆ ನಡೆದ ತಕ್ಷಣವೇ ಮತ್ತೊಂದು ಭಾಗದಲ್ಲಿ ನಾಲೆ ದಂಡೆ ಒಡೆದು, ನೀರನ್ನು ಹಳ್ಳಕ್ಕೆ ಹರಿಸಲಾಯಿತು. ಜಲಾಶಯದ ಗೇಟ್‌ ಮುಚ್ಚಿ ಮಧ್ಯಾಹ್ನದ ವೇಳೆಗೆ ನೀರಿನ ಹರಿವನ್ನು ನಿಯಂತ್ರಣಕ್ಕೆ ತರಲಾಯಿತು.

ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ, ಶಾಸಕ ಕೆ.ಬಿ.ಪ್ರಸನ್ನ ಕುಮಾರ್, ಮೇಯರ್ ಎಸ್.ಕೆ. ಮರಿಯಪ್ಪ, ‘ಸೂಡಾ’ ಅಧ್ಯಕ್ಷ ಎನ್.ರಮೇಶ್, ಜಿಲ್ಲಾ ಪಂಚಾಯ್ತಿ ಸಿಇಒ ರಾಕೇಶ್ ಕುಮಾರ್, ಉಪ ವಿಭಾಗಾಧಿಕಾರಿ ಕೃಷ್ಣಮೂರ್ತಿ, ತಹಶೀಲ್ದಾರ್ ಸತ್ಯನಾರಾಯಣ, ಮೇಯರ್‌ ಎಸ್‌.ಕೆ.ಮರಿಯಪ್ಪ, ಆಯುಕ್ತೆ ತುಷಾರ ಮಣಿ, ಆಡಳಿತ ಪಕ್ಷದ ನಾಯಕ ಪಿ.ವಿ.ವಿಶ್ವನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನೀರು ನುಗ್ಗಿದ ಮೊದಲ ಕ್ಷಣ...
ಬೆಳಿಗ್ಗೆ 6ರ ಸುಮಾರಿಗೆ ಮಂಡ್ಲಿ ಹೊರವಲಯದ ನಿಂಗಪ್ಪ, ಸಿದ್ದಪ್ಪ ಅವರ ಮನೆಯಲ್ಲಿ ಕಿರುಚಾಟ ಕೇಳಿಸಿತು. ತಕ್ಷಣವೇ ಅಲ್ಲಿಗೆ ಧಾವಿಸಿ ದೆವು. ಅವರಿಗೆ ವಯಸ್ಸಾಗಿರುವ ಕಾರಣ ಅವರಿಗೆ ಬಾಗಿಲು ತೆರೆಯಲು ಸಾಧ್ಯವಾಗಲಿಲ್ಲ. ಮನೆಯ ಹೆಂಚು ತೆರೆದು, ಅವರನ್ನು ಹೊರ ತರುವಷ್ಟರಲ್ಲಿ ನೀರು ಸುತ್ತಲೂ ಆವರಿಸಿ, ಎಲ್ಲ ಮನೆಗಳತ್ತ ಹರಿದಿತ್ತು. ನಂತರ ಉಳಿದ ಮನೆಗಳಿಂದ ವೃದ್ಧರು, ಮಕ್ಕಳನ್ನು ಹೊರ ಕರೆ ತಂದೆವು ಎಂದು ನೀರು ನುಗ್ಗಿದ ಮೊದಲ ಕ್ಷಣದ ಘಟನೆ ಬಿಚ್ಚಿಟ್ಟರು ಮಂಡ್ಲಿಯ ನಿವಾಸಿ, ಗ್ರಾಮ ಸಹಾಯಕ ರಮೇಶ್‌.

ಶಾಲೆಯಲ್ಲೇ ಗಂಜಿ ಕೇಂದ್ರ ಸ್ಥಾಪನೆ

ನೀರು ನುಗ್ಗಿದ ಪರಿಣಾಮ 2 ಸಾವಿರಕ್ಕೂ ಹೆಚ್ಚು ನಾಗರಿಕರು ನಿರಾಶ್ರಿತರಾಗಿದ್ದಾರೆ. ಅಗ್ನಿ ಶಾಮಕ ಸೇವಾ ಸಿಬ್ಬಂದಿ, ಪೊಲೀಸ್, ಕಂದಾಯ ಇಲಾಖೆ, ಪಾಲಿಕೆ  ಸೇರಿದಂತೆ ವಿವಿಧ ಇಲಾಖೆ ಸಿಬ್ಬಂದಿ, ಸಾರ್ವಜನಿಕರ ಸಹಕಾರದಿಂದ ಎಲ್ಲ ಜನರನ್ನೂ ಸುರಕ್ಷಿತ ಸ್ಥಳಗಳಿಗೆ ತಲುಪಿಸಿದರು.

ನ್ಯೂಮಂಡ್ಲಿ ಎರಡು ಶಾಲೆಗಳಲ್ಲಿ ಗಂಜಿ ಕೇಂದ್ರ ತೆರೆಯಲಾಗಿದ್ದು, ವಸತಿ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಎಲ್ಲರಿಗೂ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ. ಪರಿಸ್ಥಿತಿ ತಿಳಿಯಾಗುವವರೆಗೂ ಗಂಜಿ ಕೇಂದ್ರ ಮುಂದುವರಿಸಲಾಗುವುದು.

10 ಮನೆಗಳು ಸಂಪೂರ್ಣ ಬಿದ್ದಿವೆ. 120 ಮನೆಗಳಿಗೆ ಹಾನಿಯಾಗಿದೆ. ನೀರು ಕಡಿಮೆಯಾಗದ ಹೊರತು ನಷ್ಟದ ಸಂಪೂರ್ಣ ವಿವರ ಸಂಗ್ರಹ ಸಾಧ್ಯವಾಗುತ್ತಿಲ್ಲ. ನಷ್ಟದ ಅಂದಾಜು ತಯಾರಿಸಲು 8 ತಂಡ ರಚಿಸಲಾಗಿದೆ ಎಂದು ತಹಶೀಲ್ದಾರ್ ಸತ್ಯನಾರಾಯಣ ಮಾಹಿತಿ ನೀಡಿದರು.

ಮಾನವೀಯತೆ ಮೆರೆದರು...
ಘಟನೆ ನಡೆದ ತಕ್ಷಣ ಸ್ಥಳಕ್ಕೆ ಆಗಮಿಸಿದ ಕಂದಾಯ ಇಲಾಖೆ, ಪೊಲೀಸರು, ಅಗ್ನಿ ಶಾಮಕ ಸೇವೆ, ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ತಲುಪಿಸಿದರು. ಗಂಜಿ ಕೇಂದ್ರ ತೆರೆದು, ಜನರಿಗೆ ಆಹಾರ ಪೂರೈಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT