ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವರಾತ್ರಿ ವಿಶೇಷ

ನಮ್ಮೂರ ಊಟ
Last Updated 13 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಇದೇ 17ರಂದು ಶಿವರಾತ್ರಿ. ಶಿವನ ಜಪಿಸುತ್ತ ದಿನವಿಡೀ ಉಪವಾಸಗೈಯುವ ಶಿವರಾತ್ರಿ ಇನ್ನೇನು ಬಂದೇ ಬಿಟ್ಟಿದೆ. ಒಂದೆಡೆ ಜಾಗರಣೆ ಮಾಡುತ್ತ ಶಿವನ ಸ್ಮರಣೆಗೈಯುತ್ತ ಇನ್ನೊಂದೆಡೆ ಉಪವಾಸ ಇರುವುದು ಈ ದಿನದ ವಿಶೇಷ. ಸೂರ್ಯ ಮುಳುಗುತ್ತ ಚಂದ್ರನ ಆಗಮನ ಆಗುತ್ತಿದ್ದಂತೆಯೇ ಉಪವಾಸ ಮುಗಿಯುತ್ತದೆ.

ದಿನಪೂರ್ತಿಯ ದಣಿವನ್ನು ನಿವಾರಿಸಿಕೊಳ್ಳಲು, ಉಪವಾಸದಿಂದ ನಿಶ್ಯಕ್ತಗೊಂಡಿರುವ ದೇಹವನ್ನು ಚೇತನಗೊಳಿಸಲು ಸಾಬೂದಾನಿಯ ವಿಶೇಷ ತಿನಿಸುಗಳನ್ನು ಮಾಡುವುದು ಸಾಮಾನ್ಯ. ಇದರಲ್ಲಿ ಹೆಚ್ಚು ಕಾಬ್ರೋಹೈಡ್ರೇಟ್ ಗುಣವಿದೆ.  ಹೈದರಾಬಾದ್‌ ಕರ್ನಾಟಕದಲ್ಲಿ ಶಿವರಾತ್ರಿಯ ಉಪವಾಸದ ನಂತರ ಭರ್ಜರಿ ಫಳಾರವಿರುತ್ತದೆ. ಸೂಸಲಾ ಅಥವಾ ಮಂಡಕ್ಕಿ ಒಗ್ಗರಣೆ, ಬಜ್ಜಿ ಜೊತೆಗೆ ಗಾರಗಿ ಸವಿಯುವುದೇ ಶಿವಶಿವಾ... ಸದಾನಂದ... ಸಂಪನ್ನ!

ಗಾರಿಗೆ

ಸಾಮಗ್ರಿಗಳು: ಗೋಧಿ ಹಿಟ್ಟು:1 ಕಪ್, ಬೆಲ್ಲ:3/4 ಕಪ್, ನೀರು:ಬೆಲ್ಲ ನೆನೆಸುವಷ್ಟು

ಮಾಡುವ ವಿಧಾನ: ಬೆಲ್ಲ ಮತ್ತು ನೀರು ಹಾಕಿ ಎಳೆ ಪಾಕ ಬರುವವರೆಗೆ ಕಾಯಿಸಿ.ಒಲೆಯಿಂದ ಕೆಳಗಿಳಿಸಿ. ಗೋಧಿ ಹಿಟ್ಟು ಹಾಕಿ ಚೆನ್ನಾಗಿ ಕಲಸಿ.ಚಪಾತಿಯಂತೆ ಸ್ವಲ್ಪ ದಪ್ಪ ಲಟ್ಟಿಸಿ ಬೇಕಾದ ಆಕಾರಕ್ಕೆ ಕತ್ತರಿಸಿ.ಎಣ್ಣೆಯಲ್ಲಿ ಕರಿಯಿರಿ.ಒಣ ಕೊಬ್ಬರಿ ಪುಡಿ ಮತ್ತು ಗಸಗಸೆ ಉದುರಿಸಿ.

ಮಂಡಾಳು ಒಗ್ಗರಣೆ

ಸಾಮಗ್ರಿಗಳು: ಕಡ್ಲೆ ಪುರಿ:1 ಲೀಟರ್. ಹುರಿಗಡಲೆ ಪುಡಿ:2 ಟೇಬಲ್ ಸ್ಪೂನ್. ಈರುಳ್ಳಿ:1 ಹಸಿಮೆಣಸಿನಕಾಯಿ:ರುಚಿಗೆ ತಕ್ಕಷ್ಟು ಒಗ್ಗರಣೆಗೆ: ಎಣ್ಣೆ,ಸಾಸಿವೆ, ಜೀರಿಗೆ, ಕರಿವೆಸೊಪ್ಪು, ಕೊತ್ತುಂಬರಿ,ಅರಿಸಿನದ ಪುಡಿ

ಮಾಡುವ ವಿಧಾನ: 15 ನಿಮಿಷ ನೀರಲ್ಲಿ ಮಂಡಕ್ಕಿ ನೆನಸಿ.ನೀರು ಹಿಂಡಿ ಒಂದು ಪಾತ್ರೆಗೆ ಹಾಕಿ,ಹುರಿಗಡಲೆ ಪುಡಿ,   ಸ್ವಲ್ಪ ಸಕ್ಕರೆ,ನಿಂಬೆರಸ,ಉಪ್ಪು ಕಲಸಿಡಿ. ಒಗ್ಗರಣೆ ಹಾಕಿ ಕಲಿಸಿದ ಮಂಡಕ್ಕಿ ಬೆರಸಿ,ಕೊತ್ತುಂಬರಿ ಸೊಪ್ಪಿನಿಂದ ಅಲಂಕರಿಸಿ.

ಕಡಲೆ ಉಸ್ಲಿ

ಸಾಮಗ್ರಿಗಳು: ಕಡಲೆ ಕಾಳು :1 ಕಪ್, ಈರುಳ್ಳಿ:1, ಹಸಿಮೆಣಸಿನಕಾಯಿ:ರುಚಿಗೆ ತಕ್ಕಷ್ಟು, ಹುಣಸೆ ರಸ:ಸ್ವಲ್ಪ. ಒಗ್ಗ್ಗರಣೆಗೆ: ಎಣ್ಣೆ, ಸಾಸಿವೆ, ಜೀರಿಗೆ, ಕರಿವೆಸೊಪ್ಪು, ಕೊತ್ತುಂಬರಿ, ಅರಿಸಿನದ ಪುಡಿ.

ಮಾಡುವ ವಿಧಾನ: ಕದಲೆ ಕಾಳನ್ನು ಹಿಂದಿನ ದಿನ ನೆನಸಿಡಿ.ಕುಕ್ಕರಲ್ಲಿ 2-3 ವ್ಹಿಸ್ಲ್ ಒಡೆಸಿ.ಒಗ್ಗರಣೆಯಲ್ಲಿ ಈರುಳ್ಳಿ,ಹಸಿಮೆಣಸಿನಕಾಯಿ ಹಾಕಿದ ನಂತರ ಹುಣಸೆರಸ ಹಿಂಡಿ ಸ್ವಲ್ಪ ಕುದಿಯಲು ಬಿಡಿ.ಉಪ್ಪು(ಬೆಲ್ಲ ರುಚಿಗೆ ಬೇಕಾದರೆ)ಹಾಕಿ,ಕಡಲೆ ಕಾಳು ಹಾಕಿ ಚೆನ್ನಗಿ ಕಲಸಿ ಕೊತ್ತುಂಬರಿ ಸೊಪ್ಪಿನಿಂದ ಅಲಂಕರಿಸಿ.

ಫ್ರೂಟ್ ಮಿಕ್ಸ್

ಸಾಮಾಗ್ರಿಗಳು: 4 ಕಪ್ ಸಾಬೂದಾನಿ 2ಚಮಚ ಸಕ್ಕರೆ - ಒಂದೂವರೆ ಕಪ್ ಹಾಲು, ಒಂದೂವರೆ ಕಪ್ ತುರಿದ ತೆಂಗಿನ ತುರಿ -  2 ಬಾಳೆಹಣ್ಣು , 2 ಚಮಚ ದಾಳಿಂಬೆ, ಅರ್ಧ ಸೇಬು, 10- 12 ದ್ರಾಕ್ಷಿ ಹಣ್ಣು

ವಿಧಾನ: ಸಾಬೂದಾನಿಯನ್ನು 10 ಗಂಟೆ ನೆನೆಸಿಡಿ.  ಒಂದು ಪಾತ್ರಯಲ್ಲಿ ಹಾಲನ್ನು ಕುದಿಸಿ. ಕುದಿಯುತ್ತಿರುವ ಹಾಲಿಗೆ ನೆನೆಸಿಟ್ಟ ಸಾಬೂದಾನಿ ಹಾಕಿ ಐದು ನಿಮಿಷ ಕುದಿಸಿ. ಕುದ್ದ ನಂತರ ಗ್ಯಾಸ್ ಆಫ್ ಮಾಡಿ ಸ್ವಲ್ಪ ಹೊತ್ತು ತಣ್ಣಗಾಗಲು ಬಿಡಿ. ಅದಕ್ಕೆ ಸಕ್ಕರೆ, ಬಾಳೆಹಣ್ಣು, ತುರಿದು ತೆಂಗಿನ ಕಾಯಿ ಸೇರಿಸಿ ಸೌಟಿನಿಂದ ತಿರುಗಿಸಿ. ನಂತರ ಅದಕ್ಕೆ ಸೇಬು, ದ್ರಾಕ್ಷಿಗಳು ಮತ್ತು ದಾಳಿಂಬೆ ಹಣ್ಣು ಸೇರಿಸಿದರೆ ರುಚಿಕರವಾಗಿರುವ ಫ್ರೂಟ್ ಸಾಬೂದಾನಿ ಮಿಕ್ಸ್ ರೆಡಿ.

ಸಾಬೂದಾನಿ ವಡೆ

ಅಗತ್ಯದ ಸಾಮಗ್ರಿ: 200ಗ್ರಾಂ ಸಾಬೂದಾನಿ, 200 ಗ್ರಾಂ ಆಲೂಗಡ್ಡೆ, 4 ಬ್ರೆಡ್, 2 ಹಸಿಮೆಣಸಿನಕಾಯಿ, 2 ಚಮಚ ಖಾರದ ಪುಡಿ, ಚಿಟಿಕೆ ಇಂಗು, ಅರ್ಧ ಹೋಳು ಶುಂಠಿ, ರುಚಿಗೆ ಉಪ್ಪು, ಒಂದು ಬಟ್ಟಲು ತುಪ್ಪ 1 ನಿಂಬೇಹಣ್ಣು

ವಿಧಾನ: ಸಾಬೂದಾನಿಯನ್ನು ಒಂದು ಗಂಟೆ ಮುಂಚೆ ನೆನೆಯಲು ಇಡಿ. ಸಿಪ್ಪೆ ತೆಗೆದ ಆಲೂಗಡ್ಡೆಯನ್ನು ಕುದಿಸಿ, ಪುಡಿ ಮಾಡಿಕೊಳ್ಳಿ. ನಂತರ ಬ್ರೆಡ್ಡನ್ನು ತುಂಡು ಮಾಡಿ, ಆಲೂಗಡ್ಡೆ ಪುಡಿಯೊಂದಿಗೆ ಮಿಕ್ಸ್ ಮಾಡಿ.
ನೆಂದಿರುವ ಸಾಬೂದಾನಿಯನ್ನೂ ಇದರ ಜೊತೆ ಸೇರಿಸಿ. ಇದಕ್ಕೆ ತುಪ್ಪ ಬಿಸಿ ಮಾಡಿ ಹಾಕಿ. ಜೊತೆಗೆ, ಕತ್ತರಿಸಿದ ಹಸಿಮೆಣಸಿನಕಾಯಿ, ಶುಂಠಿ, ಖಾರದ ಪುಡಿ, ಇಂಗು, ನಿಂಬೇ ರಸ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ನಾದಿಕೊಳ್ಳಿ. ಇದನ್ನು ಒಂದು ಗಂಟೆ  ಹಾಗೆಯೇ ಬಿಟ್ಟು ನಂತರ ಹಿಟ್ಟಿನ ಉಂಡೆ ಮಾಡಿ ಎಣ್ಣೆಯಲ್ಲಿ ಕರಿಯಬೇಕು.

ಮಿಲ್ಕ್ ಶೇಕ್

ಸಾಮಗ್ರಿಗಳು: ಅರ್ಧ ಕಪ್ ಸಾಬೂದಾನಿ, ಒಂದೂವರೆ ಕಪ್ ಹಾಲು, 6-7 ಚಮಚ ಸಕ್ಕರೆ, ಒಂದು ಕಪ್ ಇಷ್ಟದ ಐಸ್ಕ್ರೀಂ ಒಂದು ಚಮಚ ಏಲಕ್ಕಿ ಪುಡಿ.

ವಿಧಾನ: ಮೊದಲಿಗೆ ಸಾಬೂದಾನಿಯನ್ನು ನೆನೆಸಿಟ್ಟು ಬೇಯಿಸಿಕೊಳ್ಳಿ. ಹಾಲು, ಐಸ್ಕ್ರೀಂ, ಸಕ್ಕರೆ ಮತ್ತು ಏಲಕ್ಕಿ ಪುಡಿ ಮಿಕ್ಸಿಯಲ್ಲಿ ತಿರುಗಿಸಿ. ಬೇಯಿಸಿಕೊಂಡಿರುವ  ಸಾಬೂದಾನಿಯನ್ನು ಇದಕ್ಕೆ ಸೇರಿಸಿ. ಹಾಗೆಯೇ ತಿನ್ನಬಹುದು ಇಲ್ಲವೇ ಸ್ವಲ್ಪ ಹೊತ್ತು ತಣಿಸಿ ಸವಿಯಲೂಬಹುದು.

ಸಾಬೂದಾನಿ  ಇಡ್ಲಿ

ಸಾಮಗ್ರಿಗಳು: ಕಾಲು ಕಪ್ ಸಾಬೂದಾನಿ, 4 ಚಮಚ ಚಿರೋಟಿ ರವೆ, 2 ಚಿಕ್ಕ ಟೊಮೆಟೊ, 2 ಚಿಕ್ಕ ಈರುಳ್ಳಿ, ಒಂದೂವರೆ ಕಪ್ ಮಜ್ಜಿಗೆ ಅಥವಾ ಮೊಸರು, ಕಾಲು ಕಪ್ ಶೇಂಗಾ ಬೀಜ, ಅರ್ಧ ಚಮಚ ಜೀರಿಗೆ, ಚಿಕ್ಕ ಶುಂಠಿ, ಒಂದು ಹಸಿಮೆಣಸು, ಉಪ್ಪು ರುಚಿಗೆ, ಸ್ವಲ್ಪ ಒಣ ದ್ರಾಕ್ಷಿ ,ಗೋಡಂಬಿ, ಒಂದು ಬಟ್ಟಲು ಹಸಿ ಬಟಾಣಿ, ಕ್ಯಾರೆಟ್, ಕಾರ್ನ್ ಸ್ವಲ್ಪ, ಕೊತ್ತಂಬರಿಸೊಪ್ಪು ಸ್ವಲ್ಪ

ವಿಧಾನ: ಸಾಬೂದಾನಿ, ಶೇಂಗಾಬೀಜ, ಶುಂಠಿ, ಜೀರಿಗೆ ಹಾಗೂ ರವೆಯನ್ನು ರಾತ್ರಿ ಮೊಸರು ಅಥವಾ ಮಜ್ಜಿಗೆಯಲ್ಲಿ ನೆನೆಸಿಡಿ. ಮರುದಿನ ಬೆಳಿಗ್ಗೆ ಈ ಮಿಶ್ರಣಕ್ಕೆ ಸಣ್ಣಗೆ ಕತ್ತರಿಸಿದ ಈರುಳ್ಳಿ , ಟೊಮೆಟೊ, ಕೊತ್ತಂಬರಿ ಸೊಪ್ಪು,ಹಸಿ ಬಟಾಣಿ, ಕಾರ್ನ್, ದ್ರಾಕ್ಷಿ, ಗೋಡಂಬಿ ಉಪ್ಪು ಎಲ್ಲವನ್ನು ಸೇರಿಸಿ ಮಿಕ್ಸ್ ಮಾಡಿಕೊಳ್ಳಿ. ಇಡ್ಲಿ ಪಾತ್ರೆಗೆ ಇದನ್ನು ಹಾಕಿ 15 ನಿಮಿಷಗಳ ಕಾಲ ಇಡ್ಲಿಯ ಹದಕ್ಕೆ ಬೇಯಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT