ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಸಂಚಾರಕ್ಕೆ ತವನಿಧಿಯಾದ ದಾಸಿಮಯ್ಯ

ರಂಗಭೂಮಿ
Last Updated 28 ಡಿಸೆಂಬರ್ 2015, 19:51 IST
ಅಕ್ಷರ ಗಾತ್ರ

ಒಂದೂರಿನಲ್ಲಿ ಮೂರು ನಾಟಕ ಪ್ರದರ್ಶನ ನೀಡಿ ಮತ್ತೊಂದು ಊರಿಗೆ ಪ್ರಯಾಣ ಬೆಳೆಸುವುದು. ಅಲ್ಲಿ ಮತ್ತೆ ಮೂರು ನಾಟಕ- ಮಗದೊಂದು ಊರಿಗೆ ಪಯಣ ಬೆಳೆಸುವುದು, ಅಲ್ಲಿ ಮತ್ತೆ ನಾಟಕ. ಕೆಲವು ಊರುಗಳಲ್ಲಿ ಒಂದು ಅಥವಾ ಎರಡು ನಾಟಕ ಪ್ರದರ್ಶನ ಆಗಬಹುದು. ಒಟ್ಟಿನಲ್ಲಿ ಮೂರು ನಾಟಕಗಳು ಶಿವನ ಬತ್ತಳಿಕೆಯಲ್ಲಿರುತ್ತವೆ. ವರ್ಷದ ಆರೇಳು ತಿಂಗಳು ಹೀಗೆ ನಾಟಕ ಎಂಬ ‘ಶಿವ’ ರಾಜ್ಯದ ಒಂದು ತುದಿಯಿಂದ ‘ಸಂಚಾರ’ ಆರಂಭಿಸಿ, ಎಪ್ಪತ್ತು ಎಂಬತ್ತು ಊರು ಸಂಚರಿಸಿ ಮತ್ತೆ ಸಾಣೇಹಳ್ಳಿಗೆ ವಾಪಸ್ಸಾಗುತ್ತಾನೆ.

ಹಾಗೆ ತನ್ನ ಸಂಚಾರದ ಭಾಗವಾಗಿ ಬೆಂಗಳೂರಿನ ಕಲಾಗ್ರಾಮದಲ್ಲಿ ಏರ್ಪಡಿಸಿದ್ದ ಕರ್ನಾಟಕ ನಾಟಕ ಅಕಾಡೆಮಿಯ ತಿಂಗಳ ನಾಟಕದ ವೀಕ್ಷಣೆಗೆ ಈ ತಿಂಗಳು ಶಿವ ಆಗಮಿಸಿದ್ದ. ‘ತವನಿಧಿ ದಾಸಿಮಯ್ಯ’ ಎಂಬ ಒಂದು ನಾಟಕ ಮಾತ್ರ ಪ್ರದರ್ಶನ ನೀಡಿ- ಕರೆದರೆ ಮತ್ತೆ ಬರುವೆ ಎಂದು ಬೇರೆ ಊರಿನ ಭಕ್ತರ ಕೋರಿಕೆಯಂತೆ ಹೊರಟೇಬಿಟ್ಟ. ಬೆಂಗಳೂರಿಗೆ ಬರುವ ಹಿಂದಿನ ದಿನ ಕೊಟ್ಟೂರಿನಲ್ಲಿ ನಾಟಕ ಪ್ರದರ್ಶನ ನೀಡಿದ್ದ ಶಿವ, ಬೆಂಗಳೂರಿನ ನಂತರ ಹೊನ್ನಾಳಿಗೆ ನಡೆದ.

ಈ ಶಿವನ ಸಂಚಾರದಲ್ಲಿ ಸಾಣೇಹಳ್ಳಿಯ ರಂಗಶಾಲೆಯಲ್ಲಿ ಕಲಿತ 15 ವಿದ್ಯಾರ್ಥಿಗಳಿದ್ದರು. ಮೊಲೆ, ಮೀಸೆ ಮೂಡದ ಹದಿಹರೆಯದ ಹುಡುಗ ಹುಡುಗಿಯರು. ಒಬ್ಬರಿಗೆ ಮಾತ್ರ ಮದುವೆಯಾಗಿದೆ. ರಂಗಶಾಲೆಯಲ್ಲಿ ಕಲಿತದ್ದನ್ನು ಪ್ರಯೋಗಕ್ಕೊಳಪಡಿಸುವಂತೆ ಇಲ್ಲಿ ಅವರು ತಮ್ಮ ಶಕ್ತಿಮೀರಿ ನಟಿಸಿದರು.

ಶಹಾಪುರ ತಾಲ್ಲೂಕು ವನದುರ್ಗದ ಅನಂತಕುಮಾರ ದೊರೆ, ಚನ್ನರಾಯಪಟ್ಟಣ ತಾಲ್ಲೂಕು ಆನೇಕರೆಯ ರಂಜಿನಿ, ದಾವಣಗೆರೆ ನಿಟುವಳ್ಳಿಯ ಎಚ್.ಎನ್.ಭೀಮೇಶ್, ಹಿರೇಕೆರೂರು ತಾಲ್ಲೂಕು ಕುಡುಪಲಿಯ ಜಗದೀಶ ನೆಗಳೂರ, ಹಾನಗಲ್ಲಿನ ಜಗದೀಶ ಕಟ್ಟಿಮನಿ, ಹರಪನಹಳ್ಳಿಯ ಬಿ.ಆರ್.ಮಂಜುನಾಥ, ರಾಮದುರ್ಗದ ಮಂಜುನಾಥ ಕಠಾರಿ, ಕ್ಯಾತನಹಳ್ಳಿಯ ಕೆ.ರವಿಕುಮಾರ, ಮುದ್ದೇಬಿಹಾಳ ತಾಲ್ಲೂಕು ತಾರನಾಳದ ಶ್ರೀಕಾಂತ ಪಾಟೀಲ, ಹಿರೇಹಡಗಲಿಯ ಡಿ.ಎಂ.ಶಿವಕುಮಾರ, ಹರಪನಹಳ್ಳಿಯ ಟಿ.ಶ್ಯಾಮಲಾ, ಕೂಡ್ಲಿಗಿಯ ಉಮಾಶ್ರೀ, ನವಲಗುಂದ ತಾಲ್ಲೂಕು ಅಳಗವಾಡಿಯ ಯೋಗೇಶ ಮ. ಬಗಲಿ -ಇವರೆಲ್ಲ ಇಡೀ ರಾಜ್ಯವನ್ನು ಪ್ರತಿನಿಧಿಸುವ ಬೇರೆ ಬೇರೆ ಭಾಗದ ಯುವ ಪ್ರತಿಭಾವಂತರು. ನಾಳಿನ ಭರವಸೆದಾಯಕ ಕಲಾವಿದರು. ಊರಿಂದ ಊರಿಗೆ ಕೊಂಡೊಯ್ಯುವ ಮ್ಯಾನೇಜರ್‌ಗಿರಿ ಜತೆಗೆ ಅತ್ಯುತ್ತಮ ಬೆಳಕಿನ ವಿನ್ಯಾಸ ಮಾಡಿದವರು ಹರಿಹರದ ಮಂಜುನಾಥ ಹಿರೇಮಠ.

ನಾಲ್ಕಾರು ವಾದ್ಯಗಳ ನುಡಿಗಾರಿಕೆ ನಿಭಾಯಿಸಿ ಇವರನ್ನೆಲ್ಲ ವಾಹನದಲ್ಲಿ ಚಾಲಕನಾಗಿ ಕೊಂಡೊಯ್ಯುವ ಗುರುತರ ಹೊಣೆ ನಿಭಾಯಿಸಿದವರು ಹೊಸಪೇಟೆ ತಾಲ್ಲೂಕು ಜಿ.ನಾಗಲಾಪುರದ ಬಡಿಗೇರ ಪ್ರಕಾಶ್ ಅವರು. ಸಾಣೇಹಳ್ಳಿಯಲ್ಲೇ ಕುಳಿತು ರಿಮೋಟ್ ಕಂಟ್ರೋಲ್ ಮಾಡುವವರು ಲಕ್ಕಮುತ್ತೇನಹಳ್ಳಿಯ ರಾಜು. ಇದೆಲ್ಲ ನಡೆಯುವುದು ಸಾಣೇಹಳ್ಳಿಯ ರಂಗ ಗುರುಗಳಾದ ಪಂಡಿತಾರಾಧ್ಯ ಸ್ವಾಮಿಗಳ ಮಾರ್ಗದರ್ಶನದಲ್ಲಿ.

ನಾಟಕದ ವಿನ್ಯಾಸ ಪರಿಕಲ್ಪನೆ ನಿರ್ದೇಶನ -ಹೀಗೆ ಸೃಜನಶೀಲ ಕ್ರಿಯೆಯ ಬಹುಪಾಲು ಹೊಣೆ ಹೊತ್ತವರು ಹೆಸರಾಂತ ರಂಗ ನಿರ್ದೇಶಕ ಮಾಲತೇಶ ಬಡಿಗೇರ ಅವರು. ನೇಕಾರರ ಮನೆಗಳು, ಓಣಿ, ವೃದ್ಧ ಜಂಗಮ ಪ್ರತ್ಯಕ್ಷನಾಗುವುದು ಮತ್ತವನ ಭವ್ಯರೂಪ ದರ್ಶನವಾಗುವುದು ಮುಂತಾದ ದೃಶ್ಯಗಳನ್ನು ಪರಿಕರ ಮತ್ತು ವಸ್ತ್ರವಿನ್ಯಾಸದಲ್ಲಿ ಕಣ್ಣಿಗೆ ಕಟ್ಟುವಂತೆ ಮಾಲತೇಶ ರೂಪಿಸಿದ್ದಾರೆ. ಸಹ ನಿರ್ದೇಶನ ಮಂಡ್ಯ ನವೀನ್‌ಕುಮಾರ್ ಅವರದು. ರಂಗವನ್ನು ಒಟ್ಟಂದದಲ್ಲಿ ವಿನ್ಯಾಸಗೊಳಿಸಿದ ಬಗೆ ಯುವ ಕಲಾವಿದರ ತಪ್ಪುಒಪ್ಪುಗಳನ್ನು ಮನ್ನಿಸಿ ನಾಟಕವನ್ನು ಸರಾಗವಾಗಿ ನೋಡಿಸಿಕೊಂಡು ಹೋಯಿತು. ಒಟ್ಟಿನಲ್ಲಿ ಬೆಳಕು ಮತ್ತು ವಿನ್ಯಾಸ ಅತ್ಯುತ್ತಮವಾಗಿತ್ತು.

ವಾದ್ಯ ನುಡಿಸಲು ಪ್ರಕಾಶ್ ಇದ್ದರು. ಹಾಗಾಗಿ ಹಾಡುಗಾರರ ಗೈರುಹಾಜರಿ ಎದ್ದುಕಾಣಲಿಲ್ಲ. ಸೀಡಿ ಮಾಡಿಸಲಾಗಿತ್ತು. ಶಿವ ಸಂಚಾರದಂತಹ ಪಕ್ಕಾ ಕಸಬುದಾರ ರೆಪರ್ಟರಿ (ಸಂಚಾರಿ ವೃತ್ತಿ ನಾಟಕ ತಂಡ) ಹಾಡುಗಾರರನ್ನು ಹೇಗಾದರೂ ಮಾಡಿ ಕರೆತರಬೇಕು. ದಾಸಿಮಯ್ಯನ ಸುಂದರ ವಚನಗಳ ಗುಂಗು ಹಿಡಿಸುವಂತೆ ಹಾಡುಗಾರಿಕೆ ಮತ್ತಷ್ಟು ಸ್ಪಷ್ಟವಾಗಿ, ಸುಶ್ರಾವ್ಯವಾಗಿ ಇರಬೇಕಿತ್ತು.

ಯಾದಗಿರಿ ಜಿಲ್ಲೆ ಮುದನೂರು ಗ್ರಾಮದ ನೇಕಾರ ಕುಟುಂಬದ ದಾಸಿಮಯ್ಯ ವಚನ ಚಳವಳಿಯ ಆದ್ಯ ಪ್ರವರ್ತಕ. ಬಾಲ್ಯದಲ್ಲಿ ಆ ಕಾಲದ ಪದ್ಧತಿಯಂತೆ ಶ್ರೀಶೈಲದ ಗುರುಕುಲಕ್ಕೆ ಹೋಗಿ ಶಿಕ್ಷಣ ಪಡೆಯುತ್ತಾನೆ. ತನ್ನ ಪರಿಶ್ರಮ ಹಾಗೂ ಸೂಕ್ಷ್ಮಗ್ರಾಹಿತ್ವದಿಂದ ಅಲ್ಲಿ ಆಚಾರ್ಯ ಪದವಿಯನ್ನು ಗಳಿಸಿ ಹೊಸ ವಿಚಾರಗಳನ್ನು ಅಳವಡಿಸಿಕೊಳ್ಳುತ್ತಾನೆ. ಮುದನೂರಿಗೆ ವಾಪಸಾಗಿ ತನ್ನ ನೇಯ್ಗೆ ಕಾಯಕದ ಜತೆಗೆ ಆ ವಿಚಾರಗಳನ್ನೆಲ್ಲ ಪ್ರಯೋಗಕ್ಕೆ ಒಡ್ಡುತ್ತಾನೆ. ಪಟ್ಟಭದ್ರರಿಂದ ಅದಕ್ಕೆ ವಿರೋಧ ಬರುತ್ತದೆ. ಸಿದ್ಧಾಂತಕ್ಕೆ ಬದ್ಧನಾದ ದಾಸಿಮಯ್ಯ ಎಂತಹದೇ ವಿರೋಧಗಳಿಗೆ ಜಗ್ಗುವುದಿಲ್ಲ. ಜನರಲ್ಲಿ ಹೊಸ ವಿಚಾರಗಳನ್ನು ಬಿತ್ತುತ್ತಲೇ ಸಾಗುತ್ತಾನೆ. ಈ ಪ್ರಕ್ರಿಯೆಯಲ್ಲಿ ಆತ ತೋರಿದ ಸೃಜನಾತ್ಮಕ ಪ್ರತಿಕ್ರಿಯೆಯೇ ವಚನಗಳು. ವಚನ ಸಾಹಿತ್ಯಕ್ಕೆ ಇವು ನಾಂದಿ ಹಾಡಿದವು.

ಹೊಸ ವಿಚಾರಗಳು ಕಾಲ ಗತಿಸಿದಂತೆ ಪುರಾಣವಾಗುತ್ತವೆ! ತಮ್ಮ ಕಣ್ಣೆದುರಿನ ಹೋರಾಟಗಾರನೇ ಪವಾಡ ಪುರುಷನಾಗಿ ಗೋಚರಿಸಿಬಿಡುತ್ತಾನೆ! ಜನತೆಯ ಇಂತಹ ಮಿಥ್‌ಗಳನ್ನು ಲೇಖಕ ಕಡೆಗಣಿಸಲಾಗದು. ಅವುಗಳನ್ನು ಪ್ರಸ್ತಾಪಿಸುವ ಜತೆಗೆ ಒಡೆಯುವ ಪ್ರಯತ್ನವನ್ನೂ ಮಾಡುತ್ತಿರುತ್ತಾನೆ. ನಾಟಕಕಾರ ಬಿ.ಆರ್. ಪೋಲಿಸ ಪಾಟೀಲರು ಅದನ್ನಿಲ್ಲಿ ಯಶಸ್ವಿಯಾಗಿ ಮಾಡಿದ್ದಾರೆ. ನೀವು ದೇವಲ ಮಹರ್ಷಿಯ ಏಳನೇ ಅವತಾರವಂತೆ ಹೌದೆ ಎಂದಾಗ ನನಗೆ ಅವತಾರದಲ್ಲಿ ನಂಬಿಕೆ ಇಲ್ಲ. ಇಂತಹ ಪ್ರಶ್ನೆಗೆ ಮಾನ್ಯತೆ ಇಲ್ಲ. ನಾನು ಏನಿರುವೆನೋ ಅದು ಮಾತ್ರ. ಕಾಯಕ ಮಾತ್ರ ನನಗೆ ಮುಖ್ಯ ಎನ್ನುತ್ತಾನೆ. ವಚನಕಾರರ ಚಳವಳಿಯ ಬೀಜ ದಾಸಿಮಯ್ಯನಲ್ಲಿದ್ದವು ಎಂಬುದನ್ನು ಈ ದೃಶ್ಯಗಳು ಅರ್ಥವತ್ತಾಗಿ ಮನಗಾಣಿಸುತ್ತವೆ.

ದಾಸಿಮಯ್ಯ ಮತ್ತು ಆತನ ಪತ್ನಿ ದುಗ್ಗಳೆ ತುಂಬಾ ಶ್ರಮಪಟ್ಟು ಸುಂದರವಾಗಿ ನೇಯ್ದ ವಸ್ತ್ರಗಳಿಗೂ ಒಮ್ಮೆ ಗ್ರಾಹಕರು ಸಿಗುವುದಿಲ್ಲ. ಅದು ಮಾರುಕಟ್ಟೆಯ ಏರುಪೇರಿನ ಫಲ. ಕೊಳ್ಳುವರಿಲ್ಲದೆ ನಿರಾಶನಾಗಿ ಮನೆಗೆ ಹಿಂದಿರುಗುವಾಗ ಅಲ್ಲೊಬ್ಬ ವೃದ್ಧ ಜಂಗಮ ತನಗೆ ಚಳಿ ತಡೆಯಲು ಸಾಧ್ಯವಾಗುತ್ತಿಲ್ಲ, ಏನಾದರೂ ಬಟ್ಟೆ ಕೊಡು ಎಂದು ಕೇಳುತ್ತಾನೆ. ದಾಸಿಮಯ್ಯ ತಾನು ನೇಯ್ದಿದ್ದ ದುಬಾರಿ ವಸ್ತ್ರಗಳನ್ನು ಹೊದಿಸುತ್ತಾನೆ. ದೇವರೇ ಇಲ್ಲಿ ಮಾರುವೇಷದಲ್ಲಿ ಪ್ರತ್ಯಕ್ಷನಾಗಿ ದಾಸಿಮಯ್ಯನಿಂದ ಬಟ್ಟೆ ಬೇಡಿದ ಎಂದೆಲ್ಲಾ ಇಂತಹ ಘಟನೆಗಳು ಪವಾಡದ ಬಣ್ಣ ತಳೆಯುತ್ತವೆ. ನಂಬಿಕೆಗಳಿಗೆ ಮುಕ್ಕಾಗದೆ, ಹೊಸ ವಿಚಾರಗಳಿಗೆ ಎರವಾಗದೆ ನಾಟಕಕಾರ ಅದನ್ನು ಸಂಭಾಷಣೆ ಮೂಲಕ ತಂದಿದ್ದಾರೆ. ನಿರ್ದೇಶಕರು ಸೂಕ್ತವಾದ ವಿನ್ಯಾಸದಿಂದ ಆ ದೃಶ್ಯ ಕಂಗೊಳಿಸುವಂತೆ ಮಾಡಿದ್ದಾರೆ.

ನಾಟಕಕಾರ ಪೋಲಿಸ ಪಾಟೀಲರು ನೂರಾರು ಲಾವಣಿ, ತತ್ವಪದಗಳನ್ನು ರಚಿಸಿದ್ದಾರೆ. ತಾವೇ ಅವನ್ನು ಹಾಡುತ್ತ ನಾಡನ್ನೆಲ್ಲಾ ಸುತ್ತಿದ್ದಾರೆ. ಅವರ ನಾಟಕಗಳ ಭಾಷೆ ಕಾವ್ಯಮಯ. ಕೌಟುಂಬಿಕ ವಾತಾವರಣವನ್ನು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ತರ್ಕದ ಭಾಷೆಯೂ ಇಲ್ಲಿ ಮಧುರವಾಗಿದೆ! ಈ ನಾಟಕಕ್ಕೆ ಅವರು ಹಾಕಿಕೊಂಡ ಹಂದರ ತುಸು ದೊಡ್ಡದು. ಘಟನೆಗಳು ತುಸು ವೇಗವಾಗಿ, ಅವ್ಯಕ್ತವಾಗಿ ಚಲಿಸುತ್ತವೆ. ದಾಸಿಮಯ್ಯ ಎದುರಿಸುವ ಪ್ರತಿಕೂಲ ಪರಿಸ್ಥಿತಿಗಳಲ್ಲಿ ಮತ್ತಷ್ಟು ಘರ್ಷಣೆ ಇರಬೇಕೆನಿಸಿತು. ತರ್ಕ ಹಾಗೂ ದಾಸಿಮಯ್ಯನ ವಚನಗಳು ಕೆಲವೆಡೆ ಸರಿಯಾಗಿ ಕೇಳಿಸುವುದಿಲ್ಲ. ಅದಕ್ಕೆ ಎಳೆಯರಾದ ನಟ ನಟಿಯರೂ ಕಾರಣ.

ಅಸ್ಖಲಿತವಾಗಿ ಸಂಭಾಷಣೆ ನುಡಿಸುವುದನ್ನು ಕಲಿಯಬೇಕು. ಧ್ವನಿಯ ಏರಿಳಿತಕ್ಕೆ ಕಠಿಣ ಪರಿಶ್ರಮ ಬೇಕು. ನಟಿಯರ ಉಚ್ಚಾರ ಸ್ಪಷ್ಟವಾಗಿತ್ತು. ನಟರಲ್ಲಿ ಶ್ರೀಕಾಂತ ಪಾಟೀಲ ಉತ್ತಮ. ಅಷ್ಟರಮಟ್ಟಿನ ಖಚಿತತೆಯಾದರೂ ಉಳಿದ ನಟರಿಗೆ ಬೇಕು. ಜಗದೀಶ ನೆಗಳೂರ ಅವರು ದಾಸಿಮಯ್ಯ ಪಾತ್ರಕ್ಕೆ ಸೊಗಸಾಗಿ ಒಪ್ಪಿದ್ದರೂ, ಮಾತು ತೊದಲಿದಂತೆ ಭಾಸವಾಗುತ್ತಿತ್ತು. ಇದನ್ನೆಲ್ಲ ಸುಧಾರಿಸಿಕೊಂಡರೆ ಮತ್ತಷ್ಟು ಉತ್ತಮ ಪ್ರಯೋಗ ಆಗಬಲ್ಲದು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT