ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಸೇನಾ ಜತೆ ಮೈತ್ರಿಗೆ ಬಿಜೆಪಿಯಲ್ಲೇ ಅಪಸ್ವರ

ಷರತ್ತುಗಳಿಗೆ ಒಪ್ಪದೆ ಮೆತ್ತಗಾಗಿಸಲು ಕಾರ್ಯತಂತ್ರ?
Last Updated 25 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮಹಾರಾಷ್ಟ್ರ­ದಲ್ಲಿ ಸರ್ಕಾರ ರಚನೆ ಬಗ್ಗೆ ಒಂದೆಡೆ ಬಿಜೆಪಿ ಮತ್ತು ಶಿವಸೇನೆ ನಡುವೆ ತೆರೆಮರೆಯ ಮಾತುಕತೆ ನಡೆದಿದೆ. ಮತ್ತೊಂದೆಡೆ, ಶಿವಸೇನಾ ಜತೆ ಸರ್ಕಾರ ರಚಿಸುವುದಕ್ಕೆ ಬಿಜೆಪಿಯಲ್ಲೇ ಅಪಸ್ವರ ಕೇಳಿಬಂದಿದೆ. ಎನ್‌ಸಿಪಿ ಬಾಹ್ಯ ಬೆಂಬಲ ಪಡೆದು ಬಿಜೆಪಿ ಏಕಾಂಗಿಯಾಗಿ ಸರ್ಕಾರ ರಚಿ­ಸುವುದೇ ಸೂಕ್ತ ಎಂದು ಹಲವು ಬಿಜೆಪಿ ಶಾಸಕರು ಅಭಿಪ್ರಾಯಪಟ್ಟಿ­ದ್ದಾರೆ ಎನ್ನ­ಲಾಗಿದೆ. ಒಟ್ಟಾರೆ ಬೆಳವಣಿಗೆ ನೋಡಿ­ದರೆ, ಯಾವುದೇ ಷರತ್ತುಗಳಿಗೆ ಒಪ್ಪದೆ ಶಿವಸೇನಾವನ್ನು ಮೆತ್ತಗಾಗಿ­ಸುವ ಕಾರ್ಯ­ತಂತ್ರವನ್ನು ಬಿಜೆಪಿ ಅನುಸರಿಸುತ್ತಿರುವಂತೆ ತೋರುತ್ತಿದೆ.

ಈ ಮಧ್ಯೆ, ಆಸ್ಪತ್ರೆಯೊಂದರ ಉದ್ಘಾ­ಟ­ನೆಗೆ ಶನಿವಾರ ಇಲ್ಲಿಗೆ ಬಂದಿದ್ದ ಪ್ರಧಾನಿ ಮೋದಿ ಅವರನ್ನು ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ದೇವೇಂದ್ರ ಫಡ್ನವಿಸ್‌, ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕರಾಗಿದ್ದ ವಿನೋದ್‌ ತಾವ್ಡೆ ಮತ್ತಿತರರು ವಿಮಾನ ನಿಲ್ದಾಣದಲ್ಲಿ ಭೇಟಿಯಾಗಿದ್ದರು.

ಶಿವಸೇನಾ ಜತೆಗಿನ ಮರುಮೈತ್ರಿ ಮಾಡಿಕೊಳ್ಳುವ ಬಗ್ಗೆ ಪಕ್ಷದ ಬಹುತೇಕ­ರಲ್ಲಿ ಅಸಮಾಧಾನ ಇರುವುದನ್ನು ಈ ಮುಖಂಡರು ಮೋದಿ ಅವರಿಗೆ ಈ ಸಂದರ್ಭದಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ. ಮೋದಿ ಅವರು ಎನ್‌ಡಿಎ ಸಂಸದರಿಗೆ ಭಾನುವಾರ ನೀಡಲಿರುವ ಔತಣಕೂಟದಲ್ಲಿ ತಮ್ಮ ಪಕ್ಷದ ಎಲ್ಲಾ ಸಂಸದರು ಸಂಸದರು ಭಾಗವಹಿಸಲಿದ್ದಾರೆ ಎಂದು ಶಿವಸೇನಾ ಸಂಸದ ರಾವುತ್‌ ಸ್ಪಷ್ಟಪಡಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಹೊಸ ಸರ್ಕಾರವು ಅ. ೨೯ ಅಥವಾ ೩೦ರಂದು ಅಧಿಕಾರ ಸ್ವೀಕರಿಸುವ ಸಾಧ್ಯತೆ ಇದೆ. ಸರ್ಕಾರ ರಚನೆ ಸಂಬಂಧ ಚರ್ಚೆ ನಡೆಸುವುದಕ್ಕೆ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರು ಸೋಮವಾರ ಮುಂಬೈಗೆ ತೆರಳುವ ಸಾಧ್ಯತೆ ಇದೆ. ಮಹಾರಾಷ್ಟ್ರ ವೀಕ್ಷಕರಾದ ರಾಜನಾಥ್‌ ಅವರ ಸಮ್ಮುಖದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ನಡೆಯಲಿದೆ ಎಂದು ಪಕ್ಷದ ಮೂಲಗಳು ಹೇಳಿವೆ. ಮಹಾರಾಷ್ಟ್ರ ಮುಖ್ಯಮಂತ್ರಿ ಗಾದಿಗೆ ಹಲವರ ಹೆಸರು ಕೇಳಿಬರುತ್ತಿದ್ದರೂ ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ದೇವೇಂದ್ರ ಫಡ್ನವಿಸ್‌ ಹೆಸರು ಮುಂಚೂಣಿಯಲ್ಲಿದೆ.

ನಾಗಪುರ ವರದಿ: ಈ ನಡುವೆ ನಿತಿನ್‌ ಗಡ್ಕರಿ ಹಾಗೂ ಫಡ್ನವಿಸ್‌ ಅವರು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿರುವುದು ರಾಜಕೀಯ ವಲಯದಲ್ಲಿ ಹೊಸ ಊಹಾಪೋಹಕ್ಕೆ ಕಾರಣವಾಗಿದೆ. ಮೋದಿ ಅವರ ಮುಂಬೈ ಭೇಟಿಗೆ ಕೆಲವೇ ತಾಸುಗಳ ಮೊದಲು ಇಬ್ಬರೂ ಭಾಗವತ್‌ ಅವರನ್ನು ಭೇಟಿ ಮಾಡಿದ್ದು ಕುತೂಹಲಕ್ಕೆ ಕಾರಣವಾಗಿದೆ.

ಹೆಲ್ಮೆಟ್‌ ಹಾಕದೆ ಸ್ಕೂಟರ್‌ ಓಡಿಸಿದ ಗಡ್ಕರಿ
ಕೇಂದ್ರ ಭೂಸಾರಿಗೆ ಸಚಿವರೂ ಆದ ನಿತಿನ್‌ ಗಡ್ಕರಿ ಅವರು ನಾಗಪುರದಲ್ಲಿರುವ ಆರ್‌ಎಸ್‌ಎಸ್‌ ಪ್ರಧಾನ ಕಚೇರಿಗೆ ಶನಿವಾರ ಹೆಲ್ಮೆಟ್‌ ಧರಿಸಿದೇ ಸ್ಕೂಟರ್‌ನಲ್ಲಿ ಬಂದು ಹೊಸ ವಿವಾದಕ್ಕೆ ಕಾರಣರಾಗಿದ್ದಾರೆ.

ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರನ್ನು ಭೇಟಿ ಮಾಡುವು­ದಕ್ಕಾಗಿ  ಗಡ್ಕರಿ ಅವರು ನಗರದ ಮಹಲ್‌ ಪ್ರದೇಶದಲ್ಲಿರುವ ಆರ್‌ಎಸ್‌ಎಸ್‌ ಪ್ರಧಾನ ಕಚೇರಿಗೆ ತಮ್ಮ ಬಿಳಿ ಬಣ್ಣದ ಸ್ಕೂಟರ್‌ನಲ್ಲಿ ಬಂದ ದೃಶ್ಯವನ್ನು ಟಿ.ವಿ ವಾಹಿನಿಗಳು ಪ್ರಸಾರ ಮಾಡಿವೆ. ಹೆಲ್ಮೆಟ್‌  ಧರಿಸಿದೆ ಬಂದಿರುವುದು ಸಂಚಾರ ನಿಯಮ ಉಲ್ಲಂಘನೆಯಲ್ಲವೇ ಎಂದು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಗಡ್ಕರಿ ಉತ್ತರ ನೀಡಲಿಲ್ಲ.

‘ಜನಸಾಮಾನ್ಯರು ಈ ರೀತಿ ನಡೆದುಕೊಳ್ಳುವುದು ದೊಡ್ಡ ವಿಷಯ ಅಲ್ಲ. ಆದರೆ, ಕೇಂದ್ರದ  ಸಚಿವರು ಈ ರೀತಿ ನಡೆದುಕೊಂಡಿದ್ದು ಸರಿಯಲ್ಲ. ಕಾನೂನು ಜಾರಿ ಮಾಡುವ­ವರೇ ಅದನ್ನು ಉಲ್ಲಂಘಿಸಿದರೆ ಹೇಗೆ’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್‌ ಸಿಂಗ್‌ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಕೂಡ ಗಡ್ಕರಿ ಅವರು ಹೆಲ್ಮೆಟ್‌ ಧರಿಸಿದೇ ಸ್ಕೂಟರ್‌ ಓಡಿಸುತ್ತಿದ್ದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿತ್ತು ಎಂದು ಸುದ್ದಿವಾಹಿನಿ­ಯೊಂದು ಹೇಳಿದೆ. ಸಂಚಾರ ನಿಯಮ ಉಲ್ಲಂಘಿಸಿದ್ದ­ಕ್ಕಾಗಿ ನಾಗಪುರ ಸಂಚಾರ ಪೊಲೀಸರು ಗಡ್ಕರಿ ವಿರುದ್ಧ ಕ್ರಮ ಜರುಗಿಸುವರೇ ಎನ್ನುವುದು ತಕ್ಷಣಕ್ಕೆ ಗೊತ್ತಾಗಿಲ್ಲ. ದ್ವಿಚಕ್ರವಾಹನ ಓಡಿಸುವಾಗ ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಬೇಕು. ಈ ನಿಯಮ ಉಲ್ಲಂಘಿಸಿದರೆ ರೂ೧೦೦ ದಂಡ ತೆರಬೇಕಾಗುತ್ತದೆ ಎಂದು ನಾಗಪುರ ಸಂಚಾರ ಪೊಲೀಸ್‌ ವೆಬ್‌ಸೈಟ್‌ನಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT