ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಷ್ಟಾಚಾರದ ಪ್ರಭುತ್ವ

Last Updated 21 ಮೇ 2015, 19:30 IST
ಅಕ್ಷರ ಗಾತ್ರ

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬರ ಮಾಡಿಕೊಳ್ಳುವಾಗ ಛತ್ತೀಸಗಡದ ಐಎಎಸ್‌ ಅಧಿಕಾರಿ ಅಮಿತ್‌ ಕಟಾರಿಯ ಅವರು ತಂಪು ಕನ್ನಡಕ ಧರಿಸಿದ್ದು ಶಿಷ್ಟಾಚಾರಕ್ಕೆ ವಿರುದ್ಧವಾಗಿತ್ತೆಂದು ರಾದ್ಧಾಂತವಾಯಿತು. ಇದೇ ಕಾರಣಕ್ಕೆ ಆ ಅಧಿಕಾರಿಗೆ ನೋಟಿಸ್‌ ಕೊಟ್ಟು ಎಚ್ಚರಿಕೆ ನೀಡಲಾಗಿದೆ.

ಈ ನಿಲುವಿಗೆ ವಿರುದ್ಧವೆಂಬಂತೆ ಬುಧವಾರದ (ಮೇ 20) ಪತ್ರಿಕೆಗಳಲ್ಲಿ ಅಮೆರಿಕದ ಅಧ್ಯಕ್ಷ ಬರಾಕ್‌ ಒಬಾಮ ಅವರು ತಮ್ಮ ಕಚೇರಿಯ ಮಹಿಳಾ ಅಧಿಕಾರಿಗಳಿಬ್ಬರಿಗೆ ಮಳೆಯಿಂದ ರಕ್ಷಣೆ ನೀಡಲು ಕೊಡೆ ಹಿಡಿದು ಪಕ್ಕದ ಕಟ್ಟಡಕ್ಕೆ ಕರೆದೊಯ್ದ ಚಿತ್ರ ಪ್ರಕಟವಾಗಿದೆ. ಒಬ್ಬ ಅಧಿಕಾರಿ ಒಬಾಮರ ಬೆನ್ನಿನ ಮೇಲೆ ಕೈಹಾಕಿ ನಡೆಯುವ ಸಲಿಗೆ ತೆಗೆದುಕೊಂಡದ್ದು ಗಮನಾರ್ಹ.

ಇವೆರಡೂ ಬೆಳವಣಿಗೆಗಳು ನಮ್ಮ ಪ್ರಜಾಪ್ರಭುತ್ವದ ಬಗ್ಗೆ ಪ್ರಶ್ನೆಗಳನ್ನು ಹುಟ್ಟಿಸುತ್ತವೆ.  ಪ್ರಜೆಯೇ ಪ್ರಭುವೆಂದು ಪರಿಗಣಿಸಿ ನಾವು ನಮಗೆ ಸಂವಿಧಾನವನ್ನು ಅರ್ಪಿಸಿ ಕೊಂಡ 65 ವರ್ಷಗಳ ನಂತರವೂ ನಾವೆಲ್ಲಿದ್ದೇವೆ?

ಈ ಸಲದ ನಮ್ಮ ಗಣರಾಜ್ಯೋತ್ಸವದ ಅತಿಥಿಯಾಗಿದ್ದ ಅಮೆರಿಕದ ಅಧ್ಯಕ್ಷರನ್ನು ಒಬಾಮ ಎನ್ನುವ ಬದಲು ಬರಾಕ್‌ ಎಂದು ಕರೆದು ಅಂತರರಾಷ್ಟ್ರೀಯ ಸಂಪ್ರದಾಯವೊಂದಕ್ಕೆ ನಮ್ಮ ಪ್ರಧಾನಿಯೇ ಬೆನ್ನು ಕೊಟ್ಟಿದ್ದರೆಂಬುದು ಹಳೆಯ ವಿಷಯ (ಅಂತರರಾಷ್ಟ್ರೀಯ ರಾಜತಾಂತ್ರಿಕ ವ್ಯವಹಾರಗಳಲ್ಲಿ ಮೊದಲ ಹೆಸರು ಕರೆಯುವ ಸಂಪ್ರದಾಯವಿಲ್ಲ). ಶಿಷ್ಟಾಚಾರವನ್ನು (ಪ್ರೋಟೊಕಾಲ್‌) ಕ್ರೋಡೀಕರಿಸಿದ ಸಂಪ್ರದಾಯಗಳು ಎಂದು ಒಪ್ಪಿಕೊಳ್ಳುವುದಾದರೆ, ಮೋದಿ ಅವರು ಅಮೆರಿಕದ ಅಧ್ಯಕ್ಷರನ್ನು ಸಂಬೋಧಿಸಿದ ರೀತಿಗೂ ಛತ್ತೀಸಗಡದ ಅಧಿಕಾರಿ ಮಾಡಿದ್ದಕ್ಕೂ ಬಹಳ ವ್ಯತ್ಯಾಸವಿಲ್ಲ.

ವಿಷಯದ ಸಂಕೀರ್ಣತೆ ಏನೇ ಇರಲಿ, ನಾವು ಇನ್ನೂ ಉತ್ತಮ ಪ್ರಜಾಪ್ರಭುತ್ವದತ್ತ ವೇಗವಾಗಿಯೇ ಹೋಗಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಸಾರ್ವಜನಿಕ ರಂಗದಲ್ಲಿ ಮುಕ್ತತೆ ಬಯಸುವವರು, ಪ್ರಭುವು ‘ಸಮಾನರಲ್ಲಿ ಮೊದಲಿಗ’ ಎಂಬ ಉದಾತ್ತ ವಿಚಾರಕ್ಕೆ ಬದ್ಧವಾಗಿರುವವರು ನಮ್ಮ ಶಿಷ್ಟಾಚಾರಗಳನ್ನು ಪ್ರಶ್ನಿಸಬೇಕಿದೆ.

ರಾಜಮಹಾರಾಜರ ಕಾಲದಲ್ಲಿ ರಾಜ ಬರುತ್ತಿದ್ದಂತೆ ಪರಾಕು ಹೇಳಬೇಕಿತ್ತು. ರಾಜನ ಪರಮಾಧಿಕಾರವನ್ನು ಪ್ರಚುರಪಡಿಸುವ, ಅದು ಅಬಾಧಿತ ಎಂದು ಸಾರುವ ನಿಟ್ಟಿನಲ್ಲಿ ಇದು ಅವಶ್ಯವಾಗಿತ್ತು. ಏಕೆಂದರೆ ಅವರೆಂದೂ ಚುನಾಯಿತ ಪ್ರತಿನಿಧಿಗಳಾಗಿರಲಿಲ್ಲ, ಅವರ ಅಧಿಕಾರ ವನ್ನು ಸ್ಥಾಯಿಗೊಳಿಸುವ ಯಾವುದೇ ಸರ್ವ ಸಮ್ಮತ ವ್ಯವಸ್ಥೆ ಇರಲಿಲ್ಲ. ಈಗ ನಮಗೆ ಸಂವಿಧಾನವಿದೆ. ಚುನಾಯಿತ ಪ್ರತಿನಿಧಿಗಳ ಅಧಿಕಾರವನ್ನು 5 ವರ್ಷ  ಯಾರೂ ಕಸಿಯಲಾಗದು (ಒಪ್ಪಿತ ದಾರಿಗಳ ಹೊರತು). ಅಂದಮೇಲೆ ನಮ್ಮ ಶಿಷ್ಟಾಚಾರಗಳು ಆಧುನಿಕವಾಗಿರಬೇಕು.

ಮಟ ಮಟ ಮಧ್ಯಾಹ್ನ ಬಿಸಿಲಿನ ತಾಪ ತಡೆಯಲಾಗದೆ ಕೋಟಿನೊಳಗೆ ಬೇಯುತ್ತಾ, ಬೆವರುತ್ತಾ ಪ್ರಭುವಿಗೆ, ಹಿರಿಯ ಅಧಿಕಾರಿಗಳಿಗೆ ಕಾಯುವ ಅಧಿಕಾರಿಗಳನ್ನು ನೋಡಿದರೆ ಅಯ್ಯೋ ಅನಿಸುತ್ತದೆ. ಹೀಗೆ ಶಿಷ್ಟಾಚಾರಕ್ಕಾಗಿ ಕೋಟು ಹಾಕಿಕೊಳ್ಳುವುದರಲ್ಲಿ ಯಾವ ಅರ್ಥವಿದೆ? ಒಂದು ದಶಕದ ಹಿಂದೆ ನಾನು ಗೆಳೆಯರೊಡನೆ ಸಮ್ಮೇಳನವೊಂದಕ್ಕೆ ಕೊಲಂಬೊಗೆ ಹೋದಾಗ ನಮ್ಮಲ್ಲಿ ಇಬ್ಬರು ಕೋಟು ಹಾಕಿಕೊಂಡಿದ್ದರು. ಅವರಿಗೆ ವಿಶೇಷ ಪ್ರಾಶಸ್ತ್ಯ ಸಿಕ್ಕಿತು. ಮುಂದಿನ ಸಾಲಿನಲ್ಲಿ ಕೂರಿಸಿದರು. ಸಮ್ಮೇಳನ ಮುಗಿಯುವವರೆಗೆ ಎದ್ದು ಬರಲಾಗದೆ, ಕೋಟು ತೆಗೆಯಲಾಗದೆ, ಸೆಕೆಯಲ್ಲಿ ಹಿಂಸೆ ಅನುಭವಿಸಿದ್ದನ್ನು ಅವರು ಈಗಲೂ ನೆನೆಯುತ್ತಾರೆ.

2010ರ ಏಪ್ರಿಲ್‌ 2ರಂದು ಭೋಪಾಲ್‌ನಲ್ಲಿ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಫಾರೆಸ್ಟ್‌ ಮ್ಯಾನೇಜ್‌ಮೆಂಟ್‌ನ ಏಳನೇ ಘಟಿಕೋತ್ಸವ ಸಮಾರಂಭದ ನಡುವೆ ಆಗಿನ ಕೇಂದ್ರ ಸಚಿವ ಜೈರಾಂ ರಮೇಶ್‌ ಕಪ್ಪು ಗೌನನ್ನು ಕಿತ್ತೆಸೆದಿದ್ದರು. ಗೌನು ಹಾಕಿಕೊಳ್ಳುವುದನ್ನು ‘ಬರ್ಬರ ವಸಾಹತುಶಾಹಿ ಸಂಪ್ರದಾಯ’ ಎಂದಿದ್ದರು. ಆದರೂ ಶಿಷ್ಟಾಚಾರದ ನೆಪದಲ್ಲಿ ಅನೇಕ ಅವೈಜ್ಞಾನಿಕ ಸಂಪ್ರದಾಯಗಳು ಈಗಲೂ ಮುಂದುವರಿದಿವೆ. ಘಟಿಕೋತ್ಸವಗಳ ರೀತಿ–ನೀತಿ ಬದಲಾಗಲೇ ಇಲ್ಲ.

ಜೈರಾಂ ರಮೇಶ್‌ ಹೇಳಿದಂತೆ ಅನೇಕ ಶಿಷ್ಟಾಚಾರದ ಅಂಶಗಳು ವಸಾಹತುಶಾಹಿಯ ಕೊಡುಗೆಗಳು. ಅವುಗಳನ್ನು ಇಂದಿನ ಆದರ್ಶಗಳಿಗೆ, ಅಗತ್ಯಗಳಿಗೆ ಹೊಂದಿಸಿಕೊಳ್ಳಬೇಕಾಗಿದೆ. ಪ್ರಧಾನಿಗೆ ಅಧಿಕಾರಿ ಗೌರವ ಕೊಡಬೇಕು, ನಿಜ. ತಾತ್ವಿಕವಾಗಿ ಮಾತ್ರವಲ್ಲದೆ ಸಾಂವಿಧಾನಿಕವಾಗಿಯೂ ಅವರು ನಮ್ಮೆಲ್ಲರ ಅಧಿಕಾರದ, ಆಶೋತ್ತರಗಳ ಕೇಂದ್ರಬಿಂದು. ಹಾಗೆಂದು ಪ್ರಜೆ ಅಥವಾ ಅಧಿಕಾರಿ ಸದಾ ಪ್ರಭುವಿನ ಮುಂದೆ ತಲೆ ತಗ್ಗಿಸಿ ನಿಲ್ಲಬೇಕಿಲ್ಲ.

ಪ್ರಜಾಪ್ರಭುತ್ವದ ನಿಜವಾದ ಅರ್ಥದಲ್ಲಿ ಅಧಿಕಾರಿಗಳು ತಮ್ಮ ಮೇಲಿನವರಿಗೆ, ಚುನಾಯಿತ ಪ್ರತಿನಿಧಿಗಳಿಗೆ ಅಧಿಕಾರ ಚಲಾಯಿಸಲು ತಮ್ಮ ಜ್ಞಾನವನ್ನು ಧಾರೆ ಎರೆಯಬೇಕು. ಕನಿಷ್ಠಮಟ್ಟದ ವಿಧೇಯತೆ ಪ್ರದರ್ಶಿಸಬೇಕಾದರೂ ತನ್ನ ಅಭಿಪ್ರಾಯದಲ್ಲಿ  ಯಾವುದು ಸರಿ ಅಥವಾ ತಪ್ಪು ಎಂದು ಮನದಟ್ಟು ಮಾಡಿಕೊಟ್ಟು ಪ್ರಜೆಗಳ ಏಳಿಗೆಗೆ ಶ್ರಮಿಸಬೇಕು. ಅದು ಬಿಟ್ಟು ವಿಧೇಯತೆಯ ಮಿಥ್ಯಾ ಪ್ರದರ್ಶನ ಅಥವಾ ಶಿಷ್ಟಾಚಾರದ ಹೆಸರಿನಲ್ಲಿ ನೋಟಿಸ್‌ ನೀಡಿ ಅಧಿಕಾರಿಗಳ ಮನೋಸ್ಥೈರ್ಯ ಕುಸಿಯುವಂತೆ ಮಾಡುವುದು, ಅಧಿಕಾರ ದರ್ಪದ ಪ್ರದರ್ಶನ ಅಭಿವೃದ್ಧಿಗೆ ಮಾರಕವಾಗುತ್ತದೆ.

ಅಭಿವೃದ್ಧಿಯ ಮಂತ್ರ ಜಪಿಸುತ್ತಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ, ಯೋಜನಾ ಆಯೋಗವನ್ನು ‘ನೀತಿ’ ಆಯೋಗವೆಂದು ಬದಲಿಸಿ ನೆಹರೂ ಕಾಲದ ಕೊಡುಗೆಗಳೇ ಅಪ್ರಸ್ತುತವೆಂದು ಬಿಂಬಿಸಿದೆ. ನ್ಯಾಯಮೂರ್ತಿಗಳ ನೇಮಕ ಮಾಡುವ ‘ಕೊಲಿಜಿಯಂ’ ಪದ್ಧತಿ ಕೈಬಿಡಲು ಯತ್ನಿಸುತ್ತಿದೆ. ಆದರೆ ನೆಹರೂ ಅವರಿಗಿಂತಲೂ ಹಳೆಯದಾದ, ವಸಾಹತುಶಾಹಿ ಕಾಲದ ಪಳೆಯುಳಿಕೆಯಾದ ಶಿಷ್ಟಾಚಾರಗಳಿಗೆ ಇತಿಶ್ರೀ ಹಾಡುವ ಬದಲು ಅವುಗಳ ಬಳಕೆಗೆ ಸಮ್ಮತಿಸಿದ್ದು ಆಶ್ಚರ್ಯಕರ.

ಶಿಷ್ಟಾಚಾರದ ಸಂಹಿತೆಯನ್ನು ಆಮೂಲಾಗ್ರ ಬದಲಾವಣೆ ಮಾಡಬೇಕಾದ ಅಧಿಕಾರಿಗಳು, ಅದರಲ್ಲೂ ವಿಶೇಷವಾಗಿ ಜಿಲ್ಲಾಧಿಕಾರಿಗಳು ಬೃಹತ್‌ ಬಂಗಲೆಗಳಲ್ಲಿರಬೇಕೆ, ಅವರು ಪಡೆಯುವ ಕೆಲವು ಸೌಲಭ್ಯಗಳು ವಸಾಹತುಶಾಹಿ ಕೊಡುಗೆಗಳೇ ಅಥವಾ ಜನಪರ ಕೆಲಸಕ್ಕೆ ಸಹಕಾರಿಯೇ ಎಂಬುದನ್ನು ನಿಶ್ಚಯಿಸಿ ಹೊಸ ಶಿಷ್ಟಾಚಾರಕ್ಕೆ ನಾಂದಿ ಹಾಡಬೇಕಾಗಿದೆ. ಅಷ್ಟಕ್ಕೂ ಛತ್ತೀಸಗಡದ ಅಧಿಕಾರಿ ಒಳ್ಳೆಯ ಉದ್ದ ತೋಳಿನ ಅಂಗಿಯಲ್ಲಿದ್ದರು. ಸಭ್ಯ ಉಡುಗೆಯನ್ನೇ ತೊಟ್ಟಿದ್ದರು. ತಂಪು ಕನ್ನಡಕ ಯಾವ ರೀತಿಯ ಅಸಭ್ಯತೆಯನ್ನು ಪ್ರದರ್ಶಿಸುತ್ತದೆ?

ಕೆಲವು ವಿಚಾರಗಳಲ್ಲಿ ಒಬಾಮ ಆದರ್ಶರೆನಿಸುತ್ತಾರೆ. ಹಾಗೆಂದು ನಮ್ಮ ಹಿರಿಯ ಅಧಿಕಾರಿಯೊಬ್ಬರು ಸಾರ್ವಜನಿಕ ಸ್ಥಳದಲ್ಲಿ ಪ್ರಧಾನಿಯ ಸೊಂಟದ ಮೇಲೆ ಕೈ ಹಾಕುವ ದಿನ ಬರಲಿ ಎನ್ನುವ ಹಂಬಲ ಬೇಕಿಲ್ಲ. ಆದರೆ ತಂಪು ಕನ್ನಡಕ ಹಾಕಿದ್ದಕ್ಕೆ, ಕೋಟು ಧರಿಸದೇ ಇದ್ದುದಕ್ಕೆಲ್ಲ ನೋಟಿಸ್‌ ಕೊಡುವ ಕಾಲವಾದರೂ ದೂರ ಹೋಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT