ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಷ್ಯ ‘ಸಿಕ್ಸರ್‌ ಸಿಧು’ ಉಪೇಕ್ಷೆ: ಜೇಟ್ಲಿ ‘ಬೌಲ್ದ್

Last Updated 20 ಮೇ 2014, 19:30 IST
ಅಕ್ಷರ ಗಾತ್ರ

ಅಮೃತಸರ (ಐಎಎನ್ಎಸ್‌): ಬಿಜೆಪಿಯಿಂದ ಕಣಕ್ಕಿಳಿದು ಸೋಲಿನ ಕಹಿ ಉಂಡವರಲ್ಲಿ ಪ್ರಮುಖರಾದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಅರುಣ್‌ ಜೇಟ್ಲಿ ಅವರು ನಗರೀಕರಣದ ಸೂಕ್ಷ್ಮಗಳನ್ನು ಹಾಗೂ ಮಾಧ್ಯಮ ಪ್ರಚಾರದ ಪಟ್ಟುಗಳನ್ನು ಚೆನ್ನಾಗಿ ಅರಿತವರು. ಆದರೂ ಅವರು ಸಿಖ್ಖರ ಪವಿತ್ರ ಸ್ಥಳವಾದ ಅಮೃತಸರ ನಗರದ ಮತದಾರರ ಮನಗೆಲ್ಲುವಲ್ಲಿ ವಿಫಲವಾಗಿದ್ದಾರೆ.

ನರೇಂದ್ರ ಮೋದಿ ಅವರ ಅಲೆ ಉತ್ತರ ಭಾರತದಾದ್ಯಂತ ಬಿಜೆಪಿಗೆ ಭಾರಿ ಲಾಭ ತಂದುಕೊಟ್ಟರೂ ಅಮೃತಸರದಲ್ಲಿ ಜೇಟ್ಲಿ ಅವರಿಗೆ ಮಾತ್ರ ಆ ಲಾಭ ದಕ್ಕಲಿಲ್ಲ. ಹೀಗಾಗಿ ಇದೇ ಮೊದಲ ಬಾರಿಗೆ ನೇರ ಚುನಾವಣೆಗೆ ಧುಮುಕಿದ್ದ ಜೇಟ್ಲಿ ಸೋಲಿನ ರುಚಿ ನೋಡುವಂತಾ­ಯಿತು. ಪಂಜಾಬ್‌ನಲ್ಲಿ ಶಿರೋಮಣಿ ಅಕಾಲಿದಳ– ಬಿಜೆಪಿ ಮೈತ್ರಿ ಸರ್ಕಾರ ಆಡಳಿತದ­ಲ್ಲಿ­ರು­ವುದರ ನಡುವೆ ಸೋಲು ಅವರನ್ನು ಬೆಂಬತ್ತಿತು.

ಇಲ್ಲಿ ಕಾಂಗ್ರೆಸ್‌ ಅಭ್ಯರ್ಥಿ, ಪಂಜಾಬ್‌ ಮಾಜಿ ಮುಖ್ಯ­ಮಂತ್ರಿ ಅಮರಿಂದರ್‌ ಸಿಂಗ್‌ ಅವರು ಜೇಟ್ಲಿ ಅವರನ್ನು ಒಂದು ಲಕ್ಷಕ್ಕೂ ಹೆಚ್ಚು ಮತ­ಗಳಿಂದ ಸೋಲಿಸಿ ನಿಚ್ಚಳ ಗೆಲುವು ದಾಖಲಿಸಿದರು. ನಗರದಲ್ಲಿ ಹರಡಿಕೊಂಡಿರುವ ಐದು ವಿಧಾನಸಭಾ ಕ್ಷೇತ್ರಗಳಲ್ಲೂ ಜೇಟ್ಲಿ ಹಿನ್ನಡೆ ಕಂಡರು. ಈ ಐದರ ಪೈಕಿ ಮೂರು ಕ್ಷೇತ್ರಗಳು ಎಸ್‌­ಎಡಿ– ಬಿಜೆಪಿ ಹಿಡಿತದಲ್ಲಿದ್ದರೂ ಜೇಟ್ಲಿ 18,726ರಿಂದ 36,957 ಮತಗಳವರೆಗೆ ಹಿಂದೆ ಬಿದ್ದರು.

ಕ್ರಿಕೆಟ್‌ ಅಂಗಳದಿಂದ ರಾಜಕೀಯ ಅಖಾಡಕ್ಕಿಳಿದ ಹಾಲಿ ಸಂಸದ ನವಜೋತ್‌ ಸಿಂಗ್‌ ಸಿಧು ಅವರನ್ನು ಈ ಕ್ಷೇತ್ರದಿಂದ ನಿರ್ದಯವಾಗಿ ಕೈಬಿಟ್ಟು ಜೇಟ್ಲಿ ಅವರಿಗೆ ಟಿಕೆಟ್‌ ನೀಡಲಾಗಿತ್ತು. ಎಸ್ಎಡಿ– ಬಿಜೆಪಿ ವರಿಷ್ಠರೊಂದಿಗೆ ಸಂಘರ್ಷ ಹೊಂದಿದ್ದ ಕಾರಣಕ್ಕೆ ಸಿಧು ಅವರಿಗೆ ಇಲ್ಲಿ ಕೊಕ್‌ ನೀಡಲಾಯಿತು. ಆದರೆ ಟಿಕೆಟ್‌ ನಿರಾಕರಿಸುವ ಮುನ್ನ  ಅವರನ್ನು ಬೇರೆ ರೀತಿಯಲ್ಲಾದರೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಯತ್ನ ನಡೆಯಲಿಲ್ಲ.  2004, 2007ರ ಉಪ ಚುನಾವಣೆಯಲ್ಲೂ ಗೆದ್ದಿದ್ದ ಸಿಧು ಅವರನ್ನು ಹೀಗೆ ಕೈಬಿಟ್ಟಿದ್ದು ಜೇಟ್ಲಿ ಅವರಿಗೆ ಮುಳುವಾಗಿ ಪರಿಣಮಿಸಿತು.

ಸಿಧು ಅವರ ಪತ್ನಿ ನವಜೋತ್‌ ಕೌರ್‌ ಅವರು ಪ್ರತಿನಿಧಿಸುವ ಅಮೃತಸರ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ ಜೇಟ್ಲಿ ಸುಮಾರು 32,000 ಮತಗಳ ಹಿನ್ನಡೆ ಕಂಡರು. ಸಿಧು ಅವರನ್ನು ಟೀಕಿಸಿದ್ದ ಸಚಿವ ಅನಿಲ್‌ ಜೋಷಿ ಅವರ ಅಮೃತಸರ ಉತ್ತರ ಕ್ಷೇತ್ರದಲ್ಲೂ ಜೇಟ್ಲಿ ಅವರಿಗೆ 18,726 ಮತಗಳು ಕಡಿಮೆ ಬಿದ್ದವು. ಅಮರಿಂದರ್‌ ಸಿಂಗ್‌ ಬಾದಲ್‌ ಅವರೂ ಈ ಕ್ಷೇತ್ರಕ್ಕೆ ಜೇಟ್ಲಿ ಅವರಂತೆ ಹೊರಗಿ­ನವರೇ. ಅಮರಿಂದರ್‌ ಕೂಡ ಕ್ಷೇತ್ರದ ಕೆಲಸಗಳ ಬಗ್ಗೆ ಅಷ್ಟೇನೂ ಗಮನ ನೀಡುವವರಲ್ಲ ಎಂಬುದೂ ಮತದಾರರಿಗೆ ಗೊತ್ತಿತ್ತು. ಇವೆಲ್ಲದವರ ಹೊರತಾ­ಗಿಯೂ ಜನರು ಜೇಟ್ಲಿ ಅವರನ್ನು ಒಪ್ಪಿಕೊಳ್ಳಲು ಮುಂದಾಗಲಿಲ್ಲ.

ಹಾಗೆ ನೋಡಿದರೆ ಜೇಟ್ಲಿ ಅವರು ಸಿಧುಗೆ ತುಂಬಾ ಹತ್ತಿರದವರೇ. ‘ಸಿಧು ಅವರನ್ನು ತಿದ್ದಿ ತೀಡಿ ರಾಜಕಾರಣಿಯಾಗಿ ಪಳಗಿಸಿದ್ದರಲ್ಲಿ ಜೇಟ್ಲಿ ಅವರೂ ಒಬ್ಬರು’ ಎಂಬ ಮಾತು ಜನಜನಿತ. ಆದರೂ ಇಡೀ ಪ್ರಚಾರ ಅವಧಿಯಲ್ಲಿ ಸಿಧು ಅವರು ಒಮ್ಮೆಯೂ ಕ್ಷೇತ್ರಕ್ಕೆ ಭೇಟಿ ಕೊಡಲಿಲ್ಲ. ಒಟ್ಟಾರೆ ಸಿಧು ಅವರನ್ನು ಎಸ್‌ಎಡಿ ಮತ್ತು ಬಿಜೆಪಿ ನಾಯಕರು ಉದಾಸೀನ ಮಾಡಿದ್ದಕ್ಕೆ ಜೇಟ್ಲಿ ಬೆಲೆ ತೆರಬೇಕಾಗಿ ಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT