ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೀಘ್ರದಲ್ಲಿ ನಗರದ ಚಿತ್ರಣ ಬದಲು

ಆರು ತಿಂಗಳಲ್ಲಿ ಕಸದ ಸಮಸ್ಯೆ ಪರಿಹಾರ: ಸಿದ್ದರಾಮಯ್ಯ ವಿಶ್ವಾಸ
Last Updated 23 ನವೆಂಬರ್ 2014, 19:30 IST
ಅಕ್ಷರ ಗಾತ್ರ

ರಾಜರಾಜೇಶ್ವರಿನಗರ:  ‘ನಗರದಲ್ಲಿ ನಿತ್ಯ 4,000 ದಿಂದ 4,500 ಮೆಟ್ರಿಕ್‌ ಟನ್‌ ಕಸ ಉತ್ಪಾದನೆಯಾಗುತ್ತಿದೆ. ಇನ್ನು 6 ತಿಂಗಳಲ್ಲಿ ಸಂಪೂರ್ಣವಾಗಿ ಕಸದ ಸಮಸ್ಯೆ ಬಗೆಹರಿಸಲಾಗುವುದು. ಬೆಂಗಳೂರು ಅಭಿವೃದ್ಧಿಪಡಿಸಲು ಸಮಗ್ರ ರೂಪುರೇಷೆ ಸಿದ್ಧವಿದೆ. ಇನ್ನು ಕೆಲವೇ ತಿಂಗಳಲ್ಲಿ ಬೆಂಗಳೂರು ಚಿತ್ರ­ಣವೇ ಬದಲಾಗಲಿದೆ’ ಎಂದು ಮುಖ್ಯ­ಮಂತ್ರಿ ಸಿದ್ದರಾಮಯ್ಯ ಹೇಳಿದರು.

ಐಡಿಯಲ್‌ ಹೋಮ್ಸ್‌ ಕೋ-ಆಪರೇಟಿವ್‌ ಬಿಲ್ಡಿಂಗ್‌ ಸೊಸೈಟಿ ಲಿಮಿಟೆಡ್‌ನ ಸುವರ್ಣ ಮಹೋತ್ಸವ ಭವನವನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.

‘ಬೆಂಗಳೂರು ನಗರ ಯೋಜನೆಯೇ ಇಲ್ಲದೆ ಬೆಳೆದಿದೆ. ಹೀಗಾಗಿ, ಇಲ್ಲಿ ಕಸದ ಸಮಸ್ಯೆ, ನೀರಿನ ಸಮಸ್ಯೆ, ಮಳೆ ಬಂದಾಗ ಚರಂಡಿಯ ನೀರು ರಸ್ತೆಯ ಮೇಲೆ ಹರಿಯುವ ಸಮಸ್ಯೆ ಇನ್ನೂ ಅನೇಕ ಸಮಸ್ಯೆಗಳಿವೆ. ನಗರವನ್ನು ಯಾವುದೇ ದೂರದೃಷ್ಟಿಯಿಲ್ಲದೆ ರೂಪಿಸಿರು­ವುದ­ರಿಂದ ಇಂತಹ ಸಮಸ್ಯೆಗಳು ಹೆಚ್ಚಾಗಿವೆ’ ಎಂದರು.

‘ಮುಂದಿನ ಬಜೆಟ್‌ನಲ್ಲಿ ಎಲ್ಲ ಗೃಹ ನಿರ್ಮಾಣ ಸಂಘಗಳನ್ನು ಒಂದೇ ಪ್ರಾಧಿಕಾರದ ವ್ಯಾಪ್ತಿಗೆ ತಂದು ಸೊಸೈಟಿ ಮೂಲಕ ನಿವೇಶನಗಳನ್ನು ಹಂಚಿಕೆ ಮಾಡಲು ಸರ್ಕಾರ ಮುಂದಾಗಿದ್ದು, ಗೃಹ ನಿರ್ಮಾಣ ಸಂಘಗಳಿಗೆ ಎಲ್ಲ ರೀತಿಯ ಸಹಕಾರ ಮತ್ತು ಪ್ರೋತ್ಸಾಹ ನೀಡಲಾಗುವುದು’ ಎಂದು ಹೇಳಿದರು.

‘ಬಿಡಿಎ ವತಿಯಿಂದ  ಅರ್ಜಿಯ ಹಿರಿತನದ ಆಧಾರದ ಮೇಲೆ 24,000 ನಿವೇಶನಗಳನ್ನು ಹಂಚಿಕೆ ಮಾಡುವು­ದರ ಜತೆಗೆ ರಾಜ್ಯದ ಎಲ್ಲಾ ಪಟ್ಟಣ, ನಗರಗಳಲ್ಲಿ ಬಡ ಮತ್ತು ಮಧ್ಯಮ ವರ್ಗದವರಿಗೆ ಕಡಿಮೆ ದರದಲ್ಲಿ ವಸತಿ ಮತ್ತು ನಿವೇಶನಗಳನ್ನು ಹಂಚಿಕೆ ಮಾಡಲು ಸರ್ಕಾರ ಮುಂದಾಗಿದೆ’ ಎಂದು ತಿಳಿಸಿದರು.

‘ಹಿಂದಿನ ಬಿಜೆಪಿ ಸರ್ಕಾರ 2010ರಲ್ಲಿ ಬಿಡಿಎ ವತಿಯಿಂದ 10 ಸಾವಿರ ನಿವೇಶನ ದೊರಕಿಸಿಕೊಡುವ ಭರವಸೆ ನೀಡಿತ್ತು, ಆ ಅವಧಿಯಲ್ಲಿ ಒಂದೇ ಒಂದು ನಿವೇಶನ ನೀಡಲು ಸಾಧ್ಯ­ವಾ­ಗಿಲ್ಲ, ಕುಡಿಯುವ ನೀರು, ಕಸದ ಸಮಸ್ಯೆ ಉಲ್ಬಣಗೊಳ್ಳಲು ಬಿಜೆಪಿ ಸರ್ಕಾರ ಕಾರಣ’ ಎಂದರು.

ಸಹಕಾರ ಸಚಿವ ಎಚ್‌.ಎಸ್‌. ಮಹದೇವಪ್ರಸಾದ್‌, ‘ನಗರದಲ್ಲಿ ಇಲ್ಲಿಯ­ವರೆಗೆ ಬಿಡಿಎ 1.25 ಲಕ್ಷ ನಿವೇಶನ ನೀಡಿದರೆ, ಗೃಹ ನಿರ್ಮಾಣ ಸಂಘಗಳು 2.50 ಲಕ್ಷ ನಿವೇಶನ ಮತ್ತು ವಸತಿ ಸೌಲಭ್ಯವನ್ನು ಕಲ್ಪಿಸಿಕೊಟ್ಟಿವೆ’ ಎಂದು  ಹೇಳಿದರು.

ಐಡಿಯಲ್‌ ಹೋಮ್ಸ್‌ ಕೋ-ಆಪರೇ­ಟಿವ್‌ ಬಿಲ್ಡಿಂಗ್‌ ಸೊಸೈಟಿ ಉಪಾಧ್ಯಕ್ಷ ಎಂ.ರಾಜ್‌ಕುಮಾರ್‌,  ‘ಸಂಸ್ಥೆಗೆ ಅಂತರರಾಷ್ಟ್ರೀಯ ಪ್ರಶಸ್ತಿ ಲಭಿಸಿದ್ದು, ಮುಂದಿನ ದಿನಗಳಲ್ಲಿ ಲಾಭವಿಲ್ಲದೆ ಎಲ್ಲ ಸಾಮಾನ್ಯ ಜನರಿಗೂ ಕಡಿಮೆ ದರದಲ್ಲಿ ದೊಡ್ಡ ಆಲದಮರ ಬಳಿಯ ದೊನ್ನೇನ­ಹಳ್ಳಿ, ಎಲೆಕ್ಟ್ರಾನಿಕ್ ಸಿಟಿ ಸಮೀಪದ ಕೈಲಾಸನಹಳ್ಳಿ, ಹೊಸ­ಹಳ್ಳಿಯಲ್ಲಿ ಸಾವಿರಾರು ನಿವೇಶನ­ಗ­ಳನ್ನು ಹಂಚಿಕೆ­ಮಾಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT