ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೀಘ್ರ 25 ಸಾವಿರ ಮೊಬೈಲ್‌ ಟವರ್‌

ಕೇಂದ್ರ ಸಚಿವ ರವಿಶಂಕರ ಪ್ರಸಾದ್‌ ಭರವಸೆ
Last Updated 26 ಮೇ 2015, 20:13 IST
ಅಕ್ಷರ ಗಾತ್ರ

ಬೆಂಗಳೂರು: ‘ದೇಶದಾದ್ಯಂತ 25 ಸಾವಿರ  ಮೊಬೈಲ್‌ ಟವರ್‌ಗಳನ್ನು ಹಾಗೂ 600 ದೂರವಾಣಿ ವಿನಿಮಯ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ದೂರಸಂಪರ್ಕ ಕ್ಷೇತ್ರವನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ಉದ್ದೇಶ ಇದೆ’ ಎಂದು   ಕೇಂದ್ರ ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್‌ ಪ್ರಸಾದ್‌ ಹೇಳಿದರು.

ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ನಾವು ಅಧಿಕಾರಕ್ಕೆ ಬಂದ ಬಳಿಕ 15 ಸಾವಿರ ಹೊಸ ಮೊಬೈಲ್‌ ಟವರ್‌ಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ. ದೇಶದಲ್ಲಿ 98 ಕೋಟಿ ಮೊಬೈಲ್‌ ಬಳಕೆದಾರರಿದ್ದು, ಇದನ್ನು 100 ಕೋಟಿಗೆ ಏರಿಸುವ ಗುರಿ ನಮ್ಮದು. ಪ್ರಸ್ತುತ 30 ಕೋಟಿ ಇಂಟರ್‌ನೆಟ್‌ ಸಂಪರ್ಕಗಳಿದ್ದು ಅವುಗಳನ್ನು 50 ಕೋಟಿಗೆ ಹೆಚ್ಚಿಸಲು ಕ್ರಮ ಕೈಗೊಂಡಿದ್ದೇವೆ.  ನಷ್ಟದಲ್ಲಿರುವ ಬಿಎಸ್‌ಎನ್‌ಎಲ್‌  ಹಾಗೂ ಎಂಟಿಎನ್‌ಎಲ್‌ ಸಂಸ್ಥೆಗಳನ್ನು  ಸರಿದಾರಿಗೆ ತರಲು ಪ್ರಯತ್ನಿಸುತ್ತಿದ್ದೇವೆ’ ಎಂದರು.

‘ಡಿಜಿಟಲ್‌ ಭಾರತ, ಭಾರತದಲ್ಲೇ ತಯಾರಿಸುವುದು ಹಾಗೂ ಆರ್ಥಿಕವಾಗಿ ಸಧೃಡವಾದ ಭಾರತವನ್ನು ರೂಪಿಸುವುದು ನಮ್ಮ ಕನಸು. ಡಿಜಿಟಲ್‌ ಭಾರತವನ್ನು ರೂಪಿಸುವಲ್ಲಿ ಬೆಂಗಳೂರು ಪ್ರಮುಖ ಪಾತ್ರ ವಹಿಸಬೇಕಾಗಿದೆ’ ಎಂದರು.

‘ಎಲೆಕ್ಟ್ರಾನಿಕ್‌ ಉತ್ಪನ್ನಗಳನ್ನು ದೇಶದಲ್ಲೇ ಉತ್ಪಾದಿಸಲು 21 ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಆಟೊಮೊಬೈಲ್‌ ಹಾಗೂ ಎಲೆಕ್ಟ್ರಾನಿಕ್‌ ಉತ್ಪಾದನಾ ಕ್ಷೇತ್ರದಲ್ಲಿ ₨  20 ಸಾವಿರ ಕೋಟಿ ಬಂಡವಾಳ ಹೂಡಿಕೆ ಆಗಲಿದೆ’ ಎಂದರು.

ಕೇಂದ್ರ ಸರ್ಕಾರದ ಒಂದು ವರ್ಷದ ಸಾಧನೆಗಳ ಬಗ್ಗೆ ಮಾಹಿತಿ ನೀಡಿದ ಅವರು, ‘ಹಣದುಬ್ಬರಕ್ಕೆ ಕಡಿವಾಣ ಹಾಕಿದ್ದೇವೆ. ಬ್ಯಾಂಕ್‌ ಖಾತೆ ಇಲ್ಲದವರಿಗೆ ಜನ–ಧನ ಯೋಜನೆ ಮೂಲಕ ಖಾತೆ ಕೊಡಿಸಿದ್ದು,  ಹಣಕಾಸಿನ ನೆರವು ಸಿಗದ ವರ್ಗಕ್ಕೆ ಮುದ್ರಾ ಬ್ಯಾಂಕ್‌  ಮೂಲಕ ಸಾಲ ಸೌಲಭ್ಯ ಕೊಡಿಸಿದ್ದು, ಆರ್ಥಿಕ ಭದ್ರತೆ ಇಲ್ಲದವರಿಗೆ ವಿಮೆ ಹಾಗೂ ಪಿಂಚಣಿ ಯೋಜನೆಗಳ ಮೂಲಕ ಭದ್ರತೆ ಒದಗಿಸಿದ್ದೇವೆ’ ಎಂದರು.

‘ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ. ಕರ್ನಾಟಕದಲ್ಲಿ ನಮ್ಮ ಪಕ್ಷದ ಸರ್ಕಾರ ಇಲ್ಲದಿರಬಹುದು. ಆದರೆ, ದೇಶದ ಅಭಿವೃದ್ಧಿಯಲ್ಲಿ ಕರ್ನಾಟಕ ಪಾತ್ರವೂ ಮಹತ್ವವಾದುದು ಎಂದೇ ನಾವು ಭಾವಿಸುತ್ತೇವೆ’ ಎಂದರು.

‘ಜಿ–20 ರಾಷ್ಟ್ರಗಳ ಪೈಕಿ ಅತಿವೇಗದಲ್ಲಿ ಅಭಿವೃದ್ಧಿ ಹೊಂದುತ್ತಿರುವ ದೇಶ ನಮ್ಮದು. ವಿದೇಶಿ ಬ್ಯಾಂಕ್‌ಗಳಲ್ಲಿರುವ ಕಪ್ಪು ಹಣವನ್ನು ಮರಳಿ ತರಲು ಕಠಿಣ ಕಾನೂನು ರೂಪಿಸಿದ್ದೇವೆ. ವಿದೇಶಿ ನೇರ ಬಂಡವಾಳ ಹೂಡಿಕೆ ಹಾಗೂ ವಿದೇಶಿ ಸಾಂಸ್ಥಿಕ ಹೂಡಿಕೆಯಲ್ಲೂ ಗಣನೀಯ ಹೆಚ್ಚಳ ಆಗಿದೆ’ ಎಂದರು.

‘ಯುಪಿಎ ಸರ್ಕಾರದ   ಹಗರಣಗಳ ಸರಮಾಲೆಯಿಂದಾಗಿ ವಿದೇಶದಲ್ಲಿ ಭಾರತೀಯರು ಮುಜುಗರ ಅನುಭವಿಸಬೇಕಾಗಿತ್ತು. ನಮ್ಮ ಸರ್ಕಾರ ಬಂದ ಬಳಿಕ ಪರಿಸ್ಥಿತಿ ನಿವಾರಣೆ ಆಗಿದೆ.  ವಿದೇಶದಲ್ಲಿ ಭಾರತೀಯರನ್ನು ಉದ್ದೇಶಿಸಿ ಮಾತನಾಡುವಾಗ ಪ್ರಧಾನಿ ನರೇಂದ್ರ ಮೋದಿ ಅವರು ಅದನ್ನೇ ಹೇಳಿದ್ದಾರೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ, ರಾಷ್ಟ್ರೀಯ ಉಪಾಧ್ಯಕ್ಷ  ಬಿ.ಎಸ್‌.ಯಡಿಯೂರಪ್ಪ, ಸಂಸದ ಪಿ.ಸಿ.ಮೋಹನ್‌, ಶಾಸಕರಾದ ಆರ್‌.ಅಶೋಕ್‌, ಸುರೇಶ್‌ ಕುಮಾರ್‌, ಸಿ.ಟಿ.ರವಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT