ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುದ್ಧೀಕರಣ ಪ್ರಕ್ರಿಯೆ ಅಗತ್ಯ

Last Updated 19 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಐಪಿಎಲ್‌ನ ಸ್ಪಾಟ್‌ ಫಿಕ್ಸಿಂಗ್‌  ಮತ್ತು ಬೆಟ್ಟಿಂಗ್‌ ಹಗರಣಕ್ಕೆ  ಸಂಬಂಧಿ­ಸಿದಂತೆ ನಿವೃತ್ತ ನ್ಯಾಯಮೂರ್ತಿ ಮುದ್ಗಲ್‌ ಅವರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ತನಿಖಾ ವರದಿಯಲ್ಲಿ ಐಸಿಸಿ ಅಧ್ಯಕ್ಷ  ಶ್ರೀನಿವಾಸನ್‌ ನಿರ್ದೋಷಿ ಎಂದಿರುವುದು ಚರ್ಚೆಗೆ ಗ್ರಾಸ ಒದಗಿಸಿದೆ. ಶ್ರೀನಿವಾಸನ್‌ ಬಿಸಿ­ಸಿಐ ಅಧ್ಯಕ್ಷರಾಗಿದ್ದಾಗ ಅವರ ಮೂಗಿನ ಅಡಿಯಲ್ಲೇ ಐಪಿಎಲ್‌ ಚಟು­ವಟಿಕೆ­ಗಳು ನಡೆದಿವೆ.

ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಅಧಿಕಾರಿ ಗುರು­ನಾಥ್‌ ಮೇಯಪ್ಪನ್‌ ಅವರು ಹಗರಣದಲ್ಲಿ ಪಾಲ್ಗೊಂಡಿದ್ದರು ಎನ್ನುವುದಕ್ಕೆ ಸಾಕ್ಷ್ಯ­ಗಳಿವೆ ಎಂದು ತನಿಖಾ ವರದಿಯಲ್ಲಿ ಹೇಳಲಾಗಿದೆ. ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಶ್ರೀನಿವಾಸನ್‌ ಅವರಿಗೇ ಸೇರಿದ್ದು. ಮೇಯಪ್ಪನ್‌ ಆವರು ಶ್ರೀನಿವಾಸನ್‌ ಅಳಿಯ. ಪ್ರಸಕ್ತ ಹಗರಣದಲ್ಲಿ ಶ್ರೀನಿವಾಸನ್‌ ಪಾತ್ರದ ಬಗ್ಗೆ ಸಾಕ್ಷ್ಯಾ­ಧಾರ­ಗಳು ಇರಲಿಕ್ಕಿಲ್ಲ, ನಿಜ. ಆದರೆ ಅವರ ಅಧಿಕಾರಾವಧಿ­ಯಲ್ಲಿಯೇ ಅವರ ಸುತ್ತಲೂ ಬೆಳೆದ ಹಗರಣದ ಹುತ್ತದ ಬಗ್ಗೆ ಅವರು ಕಣ್ಣು ಮುಚ್ಚಿ ಕುಳಿತಿ­ದ್ದಂತೂ ಸರಿಯಲ್ಲ.

ಬಿಸಿಸಿಐನಂತಹ ಅತ್ಯಂತ ಪ್ರಮುಖ ಕ್ರೀಡಾಸಂಸ್ಥೆಯ ಆಡಳಿತಗಾರರಾಗಿ ಹಿಂದೆ ಅವರು ಬೇಜವಾಬ್ದಾರಿಯಿಂದ ನಡೆದು­ಕೊಂಡಿ­ದ್ದರು ಎಂದು ಮುದ್ಗಲ್‌ ಸಮಿತಿಯ ವರದಿಯಲ್ಲಿಯೂ ಹೇಳ­ಲಾಗಿದೆ. ಬಿಸಿ­ಸಿಐ ಒಂದು ಸಾರ್ವಜನಿಕ ಸಂಸ್ಥೆ. ಅದರೊಳಗೆ ಏನು ನಡೆದಿದೆ ಎನ್ನುವುದು ಜನ­ರಿಗೂ ಗೊತ್ತಾಗಬೇಕು. ಆದರೆ ಪ್ರಸಕ್ತ ಬಿಸಿಸಿಐ ಆ ಮಟ್ಟಿಗಿನ ಪಾರ­ದರ್ಶಕತೆಯನ್ನು ಕಾಪಾಡಿಕೊಂಡಿಲ್ಲ ಎನ್ನುವುದೂ ನಿಜ. ಹೀಗಾಗಿಯೇ ಈ ಸಂಸ್ಥೆ ಹತ್ತು ಹಲವು ಹಗರಣಗಳ ಕೂಪವಾಗಿದೆ.

ಮುದ್ಗಲ್‌ ವರದಿಯಲ್ಲಿ ಕಳಂಕಿತ ಎಂದು ಪರಿಗಣಿಸಿರುವ ಐಪಿಎಲ್‌ ಆಡಳಿತಾಧಿಕಾರಿ ಸುಂದರರಾಮನ್‌ ಅವರನ್ನು ಬಿಸಿಸಿಐ ಈಚೆಗೆ ಸಮರ್ಥಿಸಿ­ಕೊಂಡಿದೆ. ಈ ಮೂಲಕ ಸುಪ್ರೀಂಕೋರ್ಟ್‌ ನೇಮಿಸಿದ ಮುದ್ಗಲ್‌ ಸಮಿ­ತಿಯ ವರದಿಯ ಸತ್ಯಾಸತ್ಯತೆಯನ್ನೇ ಅದು ಪ್ರಶ್ನಿಸಿದಂತಾಗಿದೆ. ಇದೇ ವೇಳೆ ಭಾರತ ತಂಡದ ಮಾಜಿ ನಾಯಕ ಸುನಿಲ್‌ ಗಾವಸ್ಕರ್‌ ‘ಶ್ರೀನಿವಾಸನ್‌ ಮೌನ’­ವನ್ನು ಪ್ರಶ್ನಿಸಿದ್ದಾರೆ. ಇಂತಹ ಗೊಂದಲಮಯ ವಾತಾವರಣ­ದ­ಲ್ಲಿಯೇ ಶ್ರೀನಿವಾಸನ್‌ ಮತ್ತೆ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಏರಲು ಪ್ರಯತ್ನ­ಗಳನ್ನು ನಡೆಸಿದ್ದಾರೆ.

ಚುನಾವಣೆಗೂ ಸಿದ್ಧತೆಗಳು ನಡೆದಿವೆ. ಈ ಸಂದಿಗ್ಧ ಸಂದರ್ಭದಲ್ಲಿ ಕ್ರೀಡಾ ಸಂಸ್ಥೆಗಳ ನೈತಿಕ ಜವಾಬ್ದಾರಿ ಏನು ಎಂಬ ಕುರಿತು ಮರುಚಿಂತನೆ ನಡೆಯಬೇಕಿದೆ.  ಜತೆಗೆ ಜಗತ್ತಿನ ಅತ್ಯಂತ ಶ್ರೀಮಂತ ಕ್ರೀಡಾ­ಡ­ಳಿತ ಸಂಸ್ಥೆಗಳಲ್ಲಿ ಒಂದಾಗಿರುವ ಬಿಸಿಸಿಐ ಆಡಳಿತ ಪಾರದರ್ಶಕ ತಳಹದಿ­ಯಲ್ಲಿ ನಡೆಯುವಂತೆ ನೋಡಿಕೊಳ್ಳಬೇಕಿದೆ. ಮಾಹಿತಿ ಹಕ್ಕು ಕಾನೂನಿನ ವ್ಯಾಪ್ತಿ­ಯೊಳಗೆ ಬಿಸಿಸಿಐಯನ್ನು ತರುವ ಮೂಲಕ  ಈ ಸಂಸ್ಥೆಯೊಳಗಿನ ಅವ್ಯ­ವಹಾರಗಳನ್ನು ಕನಿಷ್ಠ ಮಟ್ಟಿಗಾದರೂ ತಡೆಯಲು ಸಾಧ್ಯವಾಗ­ಬಹುದು.

ಕ್ರಿಕೆಟ್‌ ಈ ನೆಲದ ಜನಪ್ರಿಯ ಕ್ರೀಡೆ. ಕೋಟ್ಯಂತರ ಯುವಜನರಿಗೆ ನಮ್ಮ ಕ್ರಿಕೆಟ್‌ ತಾರೆಗಳೇ ಮಾದರಿ. ಇಂತಹ ತಾರೆಗಳು, ಕ್ರಿಕೆಟ್‌ ಸಂಸ್ಥೆ ಕಳಂಕಿತ ಎನಿ­ಸಿ­ಕೊಂಡರೆ ಅದು ಯುವಜನರ ಮನಸ್ಸಿನ ಮೇಲೂ ಪ್ರತಿಕೂಲ ಪರಿಣಾಮ ಬೀರುವಂತಹದ್ದು. ಈ ನಿಟ್ಟಿನಲ್ಲಿ  ದೇಶದ ಕ್ರಿಕೆಟ್‌ ಆಡಳಿತದ ಶುದ್ಧೀಕರಣ ಪ್ರಕ್ರಿಯೆಗೆ ಚಾಲನೆ ಸಿಗಬೇಕಿದೆ. ಬಿಸಿಸಿಐನ ಪ್ರತಿಯೊಬ್ಬ ಸದಸ್ಯನೂ ಆತ್ಮ­ವಿಮರ್ಶೆ ಮಾಡಿಕೊಳ್ಳಬೇಕಿದೆ. ಈ ಮೂಲಕ ದೇಶದಲ್ಲಿ ಕ್ರಿಕೆಟ್‌ ಇನ್ನಷ್ಟೂ ಜನಜನಿತಗೊಳ್ಳಲು ಸಾಧ್ಯವಿದೆ. ಈ ದಿಸೆಯಲ್ಲಿ ಕ್ರಿಕೆಟ್‌ ಆಡಳಿತಗಾರರು ಹೊಸ ಹೆಜ್ಜೆ ಇಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT