ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುದ್ಧ ನೀರಿದ್ದರೂ ಕುಡಿಯೋರೇ ಇಲ್ಲ

Last Updated 2 ಮೇ 2016, 19:54 IST
ಅಕ್ಷರ ಗಾತ್ರ

ಶುದ್ಧಗಂಗಾ ಘಟಕದಿಂದ ಲಭ್ಯವಾಗುವ ಶುದ್ಧ ನೀರನ್ನು ಉಪಯೋಗಿಸದೆ ಇಂದಿಗೂ ಫ್ಲೋರೈಡ್‌ಯುಕ್ತ ಗಡಸು ನೀರನ್ನೇ ಉಪಯೋಗಿಸುತ್ತಿದ್ದಾರೆ ಗದಗ ಜಿಲ್ಲೆಯ ಹಾತಲಗೇರಿ ಗ್ರಾಮದ ಜನ!

ಗದಗ ಜಿಲ್ಲೆಗೊಮ್ಮೆ ಭೇಟಿ ನೀಡಿದವರಿಗೆ ಅಲ್ಲಿನ ಗಡಸು ನೀರಿನ ಪರಿಚಯ ಇದ್ದೇ ಇರುತ್ತದೆ. ಮಾರ್ಚ್‌ನಿಂದ ಮುಂಗಾರು ಆರಂಭದವರೆಗೆ ಇಲ್ಲಿ ನೀರಿನದ್ದೇ ಸಮಸ್ಯೆ. ಎರಡು ಮೂರು ಕಿಲೋ ಮೀಟರ್ ನಡೆದಾಡಿ ನೀರನ್ನು ತರುವ, ಬೈಕ್, ಆಟೊಗಳಲ್ಲಿ ನೀರನ್ನು ಸಾಗಿಸುವ ಮೂಲಕವೇ ಇಲ್ಲಿನ ಮಂದಿಯ ದಿನಚರಿ ಆರಂಭವಾಗುತ್ತದೆ. 500ರಿಂದ 800ಅಡಿ ತೋಡಿದ ಕೆಲವೇ ಕೆಲವು ಬೋರ್‌ಗಳಲ್ಲಿ ಇಲ್ಲಿ ನೀರು ಲಭ್ಯ. ಅದು ಕೂಡಾ ಗಡಸು ನೀರು. ಇಷ್ಟೆಲ್ಲಾ ನೀರಿನ ಸಮಸ್ಯೆಗಳಿದ್ದರೂ ಶುದ್ಧಗಂಗಾ ಘಟಕದಿಂದ ಲಭ್ಯವಾಗುವ ಶುದ್ಧ ನೀರನ್ನು ಉಪಯೋಗಿಸದೆ ಇಂದಿಗೂ ಫ್ಲೋರೈಡ್‌ಯುಕ್ತ ಗಡಸು ನೀರನ್ನೇ ಉಪಯೋಗಿಸುವ ಹಳ್ಳಿಯೊಂದಿದೆ ಎಂದರೆ ನೀವು ನಂಬುತ್ತೀರಾ?

ಗದಗ ತಾಲ್ಲೂಕಿನಲ್ಲಿರುವ ಹಾತಲಗೇರಿ ಹೆಚ್ಚು ಕಡಿಮೆ 350 ಮನೆಗಳಿಂದ ಕೂಡಿದ ಪುಟ್ಟ ಹಳ್ಳಿ. ಇಲ್ಲೂ ನೀರಿನದ್ದೇ ಸಮಸ್ಯೆ. ಮುಂಗಾರು ಬಂದರಷ್ಟೇ ಇಲ್ಲಿನ ಗದ್ದೆಗಳಲ್ಲಿ ಕೃಷಿ ಚಟುವಟಿಕೆಗಳು ನಡೆಯುತ್ತವೆ. ಇತರ ದಿನಗಳಲ್ಲಿ ನೀರಿಗಾಗಿ ಇಲ್ಲಿನ ಜನ ಏನು ಮಾಡುತ್ತಾರೆ ಎಂಬ ಪ್ರಶ್ನೆ ಮೂಡುವುದು ಸಹಜ. ವಾರಕ್ಕೊಮ್ಮೆ ತುಂಗಭದ್ರಾ ನದಿ ನೀರು ಗ್ರಾಮ ಪಂಚಾಯಿತಿ ವತಿಯಿಂದ ನಲ್ಲಿ ಮೂಲಕ ಪ್ರತಿ ಮನೆಗಳಿಗೂ ಬರುತ್ತದೆ. ಇದನ್ನೇ ನಂಬಿರುವ ಇಲ್ಲಿನ ಜನತೆಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ನಿಟ್ಟಿನಲ್ಲಿ 2012 ಆಗಸ್ಟ್ ತಿಂಗಳಿನಲ್ಲಿ ಈ ಊರಿನ ಜನತೆಯ ಬೇಡಿಕೆಯ ಮೇರೆಗೆ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ರಾಜ್ಯದಾದ್ಯಂತ ಜನಮನ್ನಣೆ ಗಳಿಸಿದ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ‘ಶುದ್ಧಗಂಗಾ’ ಘಟಕವೊಂದನ್ನು ಆರಂಭಿಸಲಾಯಿತು.

ಆರಂಭದ ದಿನಗಳಲ್ಲಿ ನೀರಿಗಾಗಿ ಇಲ್ಲಿಯ 32 ಮಂದಿಗೆ ಗ್ರಾಮಾಭಿವೃದ್ಧಿ ಯೋಜನೆಯಿಂದ ಪ್ರಗತಿನಿಧಿಯನ್ನು ನೀಡಲಾಯಿತು. ಆದರೆ ಅವರ್‍್ಯಾರೂ ನೀರನ್ನು ಕೊಂಡೊಯ್ಯುವತ್ತ ಮನಸ್ಸು ಮಾಡಲಿಲ್ಲ. ಗಡಸು ನೀರಿನ ಬಳಕೆಯಿಂದ ಆರೋಗ್ಯದ ಮೇಲಾಗುವ ತೊಂದರೆಯ ಬಗ್ಗೆ ಜಾಗೃತಿ ಮೂಡಿಸುವ, ಶುದ್ಧಗಂಗಾ ಘಟಕದಿಂದ ದೊರೆಯುವ ಶುದ್ಧ ನೀರನ್ನು ಬಳಸುವ ನಿಟ್ಟಿನಲ್ಲಿ ಗ್ರಾಮಾಭಿವೃದ್ಧಿ ಯೋಜನೆ, ಶುದ್ಧಗಂಗಾ ಘಟಕಕ್ಕೆ ಯಂತ್ರವನ್ನೊದಗಿಸುವ ‘ಅಕ್ವಾಸಫಿ’ ಕಂಪೆನಿ ಮತ್ತು ಇಲ್ಲಿನ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಜಾಲಮ್ಮನವರ ಮುಂದಾಳತ್ವದಲ್ಲಿ ಮನೆ ಭೇಟಿ, ಬೀದಿನಾಟಕ, ಒಕ್ಕೂಟ ಸಭೆ, ಗ್ರಾಮ ಸಭೆ ಭೇಟಿ, ಕೇರಿ ಕೇರಿಯೊಳಗೆ ಡಂಗುರ ಬಾರಿಸುವುದು... ಹೀಗೆ ಹಲವಾರು ಪ್ರಯತ್ನಗಳನ್ನು ಕೈಗೆತ್ತಿಕೊಂಡರೂ ಅದ್ಯಾವುದು ಪ್ರಯೋಜನವಾಗಲಿಲ್ಲ.

ಆರಂಭದ ದಿನಗಳಲ್ಲಿ 150 ಮಂದಿ ನೀರಿಗಾಗಿ ನೋಂದಾಯಿಸಿ ಅವರಲ್ಲಿ 50 ಮಂದಿ ಒಂದು ಲೀಟರ್ ನೀರಿಗೆ ಹತ್ತು ಪೈಸೆಯಂತೆ ನೀಡಿ ಪ್ರತಿನಿತ್ಯ 20 ಲೀಟರ್ ನೀರನ್ನು ಕೊಂಡೊಯ್ಯುತ್ತಿದ್ದರು. ಕ್ರಮೇಣ ಬಳಕೆದಾರರ ಸಂಖ್ಯೆ ಇಳಿಮುಖವಾಗಿ ಕಳೆದ ವರ್ಷ ಘಟಕವನ್ನು ಸ್ಥಗಿತಗೊಳಿಸಲಾಯಿತು. ಗದಗ ಜಿಲ್ಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಆರಂಭಿಸಿದ ಒಟ್ಟು 10 ಶುದ್ಧಗಂಗಾ ಘಟಕಗಳಿದ್ದು, ಉಳಿದ ಒಂಬತ್ತು ಘಟಕಗಳಿಂದ ಪ್ರತಿನಿತ್ಯ ಸಾವಿರಾರು ಲೀಟರ್ ನೀರನ್ನು ಒದಗಿಸಲಾಗುತ್ತದೆ. ಹಾತಲಗೇರಿಯಿಂದ ನಾಲ್ಕು ಕಿಲೋ ಮೀಟರ್ ದೂರದಲ್ಲಿರುವ ಲಕ್ಕುಂಡಿ ಘಟಕದಿಂದ ಪ್ರತಿನಿತ್ಯ ಸಾವಿರಾರು ಲೀಟರ್ ನೀರು ಸರಬರಾಜು ಆಗುತ್ತಿದೆ. ಗದಗ ನಗರದ ಭಾಗದಲ್ಲಿರುವ ಐದು ಘಟಕಗಳ ಮುಂದೆ ಬೆಳ್ಳಂಬೆಳಿಗ್ಗೆ ಜನ ಸಾಲುಗಟ್ಟಿ ನಿಲ್ಲುತ್ತಾರೆ.

ಇಲ್ಲಿಂದ ಹದಿನೈದು ಕಿಲೋ ಮೀಟರ್ ದೂರದ ಬಸವೇಶ್ವರ ನಗರದಲ್ಲಿರುವ ಘಟಕದಿಂದ ಪ್ರತಿನಿತ್ಯ ಒಂದು ಸಾವಿರದಷ್ಟು ಮಂದಿ ನೀರನ್ನು ಕೊಂಡೊಯ್ಯುತ್ತಾರೆ. ಆದರೆ ಹಾತಲಗೇರಿ ಜನತೆಗೆ ಶುದ್ಧನೀರನ್ನು ಬಳಸುವಂತೆ ಮನವೊಲಿಸುವ ಪ್ರಯತ್ನಗಳೆಲ್ಲವೂ ವಿಫಲಗೊಂಡಿವೆ. ಇದೀಗ ಇಲ್ಲಿನ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಜಾಲಮ್ಮನವರು ಶುದ್ಧಗಂಗಾ ಘಟಕದ ನೀರಿನ ಉಪಯೋಗದ ಬಗ್ಗೆ ತಿಳಿವಳಿಕೆ ನೀಡುವ ಪ್ರಯತ್ನವನ್ನು ಮಾಡುತ್ತಾ ಬಂದಿದ್ದಾರೆ. ಗಡಸು ನೀರಿನ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳದ ಇಲ್ಲಿಯ ಜನ ವಾಡಿಕೆಯಂತೆ ನಲ್ಲಿ ನೀರನ್ನೇ ಇಂದಿಗೂ ಬಳಸುತ್ತಿರುವುದು ವಿಪರ್ಯಾಸ.

ಶುದ್ಧಗಂಗಾ ಘಟಕದ ಆರಂಭ ಹೇಗೆ?
ತಮ್ಮ ಊರಿನಲ್ಲಿ ಶುದ್ಧಗಂಗಾ ಘಟಕವನ್ನು ನಿರ್ಮಿಸುವಂತೆ ಪ್ರತಿನಿತ್ಯ ಧರ್ಮಸ್ಥಳಕ್ಕೆ ಹತ್ತಾರು ಬೇಡಿಕೆಗಳು ಬರುತ್ತವೆ. ಈಗಾಗಲೇ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಚಿಕ್ಕಮಗಳೂರು ಜಿಲ್ಲೆಯ ಕಡೂರು, ತರೀಕೆರೆ, ಗದಗ ಜಿಲ್ಲೆಯ ರೋಣ, ರಾಯಚೂರು, ಶಿರಹಟ್ಟಿ, ಬೆಳಗಾವಿ, ಹುಬ್ಬಳ್ಳಿ, ಬಳ್ಳಾರಿ, ಚಾಮರಾಜನಗರ, ಮೈಸೂರು, ಕೋಲಾರ, ದಾವಣಗೆರೆ, ಚಿತ್ರದುರ್ಗ, ಕೊಪ್ಪಳ, ಹಾವೇರಿ, ಹಾಸನ, ತುಮಕೂರು ಹೀಗೆ 16 ಜಿಲ್ಲೆಗಳ 49 ತಾಲ್ಲೂಕುಗಳ 202 ಗ್ರಾಮಗಳಲ್ಲಿ ಶುದ್ಧಗಂಗಾ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಬೇಡಿಕೆ ಬಂದ ಕಡೆಗಳಲ್ಲೆಲ್ಲಾ ಶುದ್ಧಗಂಗಾ ಘಟಕವನ್ನು ಆರಂಭಿಸಲಾಗುತ್ತಿಲ್ಲ.

ಶುದ್ಧಗಂಗಾ ನೀರಿನ ಘಟಕ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಅಲ್ಲಿನ ಗ್ರಾಮ ಪಂಚಾಯಿತಿಯ ಸಹಕಾರ, ಊರವರ ಪಾಲ್ಗೊಳ್ಳುವಿಕೆಯಲ್ಲಿ ಕಾರ್ಯನಿರ್ವಹಿಸುವ ಶುದ್ಧ ಜಲವನ್ನೊದಗಿಸುವ ಯೋಜನೆಯಾಗಿದ್ದು ಒಂದು ಊರಿನಲ್ಲಿ ಈ ಘಟಕ ಆರಂಭಿಸಬೇಕಾದರೆ ಮೊದಲಾಗಿ ಅಲ್ಲಿನ ಗ್ರಾಮ ಪಂಚಾಯಿತಿ ಕಟ್ಟಡವೊಂದನ್ನು ನಿರ್ಮಿಸಿಕೊಡಬೇಕು. ನೀರಿಗಾಗಿ ಬೋರ್ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆಯನ್ನು ಮಾಡಿಕೊಡಬೇಕು. ನೀರು ತುಂಬುವ ಟ್ಯಾಂಕ್, ಗಡಸು ನೀರನ್ನು ಮೃದುಗೊಳಿಸುವ ಯಂತ್ರೋಪಕರಣ, ಘಟಕದ ಸಂಪೂರ್ಣ ನಿರ್ವಹಣೆ, ವಿದ್ಯುತ್ ಬಿಲ್ ಪಾವತಿ, ಯಂತ್ರಗಳ ರಿಪೇರಿ ಜವಾಬ್ದಾರಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯದ್ದು.

ಸಿಬ್ಬಂದಿಯೊಬ್ಬರನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿಯೋಜಿಸುತ್ತದೆ. ಆ ಊರಿನ ಜನರ ಸಂಖ್ಯೆಗೆ ಅನುಗುಣವಾಗಿ ಘಟಕವನ್ನು ನಿರ್ಮಿಸಲಾಗುತ್ತದೆ. 10ಸಾವಿರ ಲೀಟರ್ ನೀರಿನ ಘಟಕ ಕಾರ್ಯ ನಿರ್ವಹಿಸಬೇಕಾದರೆ ಕಡಿಮೆಯೆಂದರೆ ಪ್ರತಿದಿನ 350 ಜನ 20 ಲೀಟರ್‌ನಂತೆ 7ಸಾವಿರ ಲೀಟರ್ ನೀರನ್ನು ಕೊಂಡೊಯ್ಯುವವರಿರಬೇಕು. ಇಲ್ಲವಾದಲ್ಲಿ ಘಟಕವನ್ನು ನಡೆಸುವುದು ಅಸಾಧ್ಯ ಎಂಬುದು ಯಂತ್ರವನ್ನೊದಗಿಸುವ ಕಂಪೆನಿಯ ಎಂಜಿನಿಯರ್‌ ಒಬ್ಬರ ಅನುಭವದ ಮಾತು. ಶುದ್ಧಗಂಗಾ ಘಟಕ ಆರಂಭಿಸುವುದು ಅಷ್ಟು ಸುಲಭದ ಮಾತಲ್ಲ. 5 ಸಾವಿರ ಲೀಟರ್ ನೀರು ತುಂಬುವ ಮೂರು  ಟ್ಯಾಂಕುಗಳು ಬೇಕು.

ಇವುಗಳ ಬೆಲೆ ಹೆಚ್ಚೂ ಕಡಿಮೆ 90ಸಾವಿರ ರೂಪಾಯಿ. ಒಂದು ತಾಸಿಗೆ 500 ಲೀಟರ್ ನೀರನ್ನು ಶುದ್ಧೀಕರಿಸುವ ಯಂತ್ರದ ಬೆಲೆ ₹3ಲಕ್ಷ. ಘಟಕದಲ್ಲಿ ಕಾರ್ಯನಿರ್ವಹಿಸುವ ಪ್ರೇರಕರಿಗೆ 2,500 ರಿಂದ 4ಸಾವಿರ ಮಾಸಿಕ ವೇತನ, 4 ರಿಂದ 5 ಸಾವಿರ ತಿಂಗಳ ವಿದ್ಯುತ್ ಬಿಲ್. ಹೀಗೆ ನಾಲ್ಕೈದು ಲಕ್ಷ ರೂಪಾಯಿ ಖರ್ಚಿದೆ. ಯಂತ್ರಗಳು ಕೆಟ್ಟಾಗ ಕಂಪೆನಿಯವರನ್ನು ಕರೆಸಿ ತುರ್ತು ರಿಪೇರಿ ಮಾಡಿಸುವ ಜವಾಬ್ದಾರಿ ಇರುತ್ತದೆ ಹಾಗೂ ಕಂಪೆನಿಗೆ ವಾರ್ಷಿಕ ನಿರ್ವಹಣಾ ವೆಚ್ಚವನ್ನು ಕೂಡಾ ಪಾವತಿಸಬೇಕಾಗುತ್ತದೆ. ಬಳಕೆದಾರರಿಗೆ ದಿನನಿತ್ಯ ನೀರನ್ನು ನೀಡಿ ಅವರಿಂದ 10 ಲೀಟರ್ ನೀರಿಗೆ ಒಂದು ರೂಪಾಯಿ ಲೆಕ್ಕಾಚಾರದಲ್ಲಿ ಹಣ ಸಂಗ್ರಹಿಸುವುದು ಕಷ್ಟದ ಕೆಲಸ.

ಗಡಸು ನೀರನ್ನೇ ಬಳಸಿದ ಪರಿಣಾಮ ಹಲ್ಲುಗಳು ಕಪ್ಪಾಗಾಗಿರುವುದು, ಜಡತ್ವ, ಚರ್ಮರೋಗ, ಮೂಳೆಗಳ ಸವೆತದಂತಹ ರೋಗಗಳು ಈಗಾಗಲೇ ಈ ಊರಿನಲ್ಲಿ ಮನೆಮಾಡಿವೆ. ಇಲ್ಲಿರುವ ವಿದ್ಯಾವಂತರ ಪ್ರಮಾಣ ಕೂಡಾ ಕಡಿಮೆ. ಅದೇನೇ ಇರಲಿ, ಸುಲಭವಾಗಿ ದೊರೆಯುವ ಶುದ್ಧಗಂಗಾ ನೀರನ್ನು ಬಳಸುವ ಬದಲು ಅದೇ ಗಡಸು ನೀರಿನತ್ತ ಜನ ಆಕರ್ಷಿತವಾಗುತ್ತಿರುವುದು ಬೇಸರದ ಸಂಗತಿ. ಶುದ್ಧಗಂಗಾ ಘಟಕ ಸ್ಥಾಪನೆಗಾಗಿ ಪ್ರತಿನಿತ್ಯ ಪ್ರಯತ್ನಿಸುತ್ತಿರುವ ರಾಜ್ಯದ ಇತರ ಮಂದಿಗೆ ಇಲ್ಲಿನ ಪರಿಸ್ಥಿತಿಯನ್ನು ಕಂಡು ಹಲ್ಲಿದ್ದವನಿಗೆ ಕಡಲೆ ಇಲ್ಲ, ಕಡಲೆ ಇದ್ದವನ ಬಳಿ ಹಲ್ಲು ಇಲ್ಲ ಎಂಬ ಗಾದೆ ನೆನಪಾಗುವುದರಲ್ಲಿ ಸಂಶಯವಿಲ್ಲ.

ಇನ್ನಾದರೂ ಹಾತಲಗೇರಿ ಜನತೆ ಒಟ್ಟಾಗಿ ಶುದ್ಧಗಂಗಾ ಘಟಕದಲ್ಲಿ ದೊರೆಯುವ ಶುದ್ಧನೀರನ್ನು ಬಳಸುವತ್ತ ಮನಸ್ಸು ಮಾಡಬೇಕಾಗಿದೆ. ಇಲ್ಲವಾದಲ್ಲಿ ಮುಂದಿನ ಜನಾಂಗವು ಹತ್ತಾರು ಸಮಸ್ಯೆಗಳೊಂದಿಗೆ ಬದುಕಬೇಕಾದಿತು. ಈ ಊರಿನ ಜನತೆಗೆ ಶುದ್ಧ ನೀರಿನ ಬಳಕೆ ಬಗ್ಗೆ ಅರಿವು ಮೂಡಿಸುವ ಪ್ರಯತ್ನದಲ್ಲಿ ಇತರ ಶಾಲಾ ಕಾಲೇಜುಗಳು ಕೈಜೋಡಿಸಿದರೆ ಹಾತಲಗೇರಿಯ ಮಂದಿ ನಮ್ಮಂತೆ ಬದುಕಿಯಾರು. ಸರಕಾರ, ಜನಪ್ರತಿನಿಧಿಗಳು, ಸ್ವಯಂ ಸೇವಾ ಸಂಸ್ಥೆಗಳು ಜಾರಿಗೆ ತರುವ ಯಾವುದೇ ಯೋಜನೆಗಳ ಬಗ್ಗೆ ತಿಳಿದುಕೊಂಡು ಅದರ ಪ್ರಯೋಜನವನ್ನು ಪಡೆಯದಿದ್ದರೆ ಇಂತಹ ಯೋಜನೆಗಳು ಯಶಸ್ಸು ಕಾಣಲು ಸಾಧ್ಯವಿಲ್ಲ. ಆ ನಿಟ್ಟಿನಲ್ಲಿ ಹಾತಲಗೇರಿ ಜನತೆ ಇನ್ನಾದರೂ ಶುದ್ಧಗಂಗಾ ಘಟಕದ ನೀರನ್ನು ಬಳಸುವತ್ತ ಪ್ರಯತ್ನಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT