ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇಖರ್ ‘ಸರ್ಕಸ್’ ಕಂಪನಿ!

Last Updated 25 ಜೂನ್ 2015, 19:30 IST
ಅಕ್ಷರ ಗಾತ್ರ

ನಿರ್ದೇಶಕ ಪಿ.ಸಿ. ಶೇಖರ್ ತಮಿಳು ಸಿನಿಮಾ ಮಾಡ್ತಾರಂತೆ, ಅದಕ್ಕೆ ತಮಿಳು ನಟ ಸೂರ್ಯ ನಾಯಕನಾಗುತ್ತಾರೆ ಎಂಬ ಗಾಳಿ ಸುದ್ದಿ ಇತ್ತೀಚೆಗೆ ಗಾಂಧಿನಗರದಲ್ಲಿ ಚಾಲ್ತಿಯಲ್ಲಿತ್ತು. ಅದು ಬರೀ ಗಾಸಿಪ್ ಎಂದು ಬಿಡುವಂತಿಲ್ಲ. ಆ ಸುದ್ದಿ ನಿಜವೇ. ಆದರೆ ಅದಕ್ಕಿನ್ನೂ ಕಾಲಾವಕಾಶ ಬೇಕು.

ಈ ಬಗ್ಗೆ ಅವರನ್ನು ಮಾತನಾಡಿಸಿದರೆ ಅವರು ನೀಡುವ ಉತ್ತರ, ‘ಸದ್ಯ ಸೂರ್ಯ ಅವರ ಕೈಯಲ್ಲಿ ಎರಡು ಸಿನಿಮಾಗಳಿವೆ. ಅದು ಮುಗಿದು ನನಗೆ ಕಾಲ್ ಶೀಟ್ ಸಿಗಬೇಕೆಂದರೆ ಒಂದು ವರ್ಷ ಕಾಯಬೇಕು. ಅಷ್ಟರೊಳಗಾಗಿ ಕನ್ನಡದಲ್ಲಿ ಮೂರ್ನಾಲ್ಕು ಚಿತ್ರಗಳನ್ನು ಮಾಡಿಬಿಡುತ್ತೇನೆ’.

ಕನ್ನಡದಲ್ಲಿ ಮೂರ್ನಾಲ್ಕು ಸಿನಿಮಾ ಮಾಡುವ ಯೋಜನೆಯಲ್ಲಿರುವ ಶೇಖರ್ ಸದ್ಯ ಎರಡು ಸಿನಿಮಾಗಳಲ್ಲಿ ಬಿಜಿ. ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆ ‘ರೋಮಿಯೊ’ ಚಿತ್ರ ಮಾಡಿದ್ದ ಶೇಖರ್, ಈಗ ಅದೇ ಗಣೇಶ್ ಜೊತೆ ಎರಡನೇ ಚಿತ್ರ ಮಾಡುತ್ತಿದ್ದಾರೆ. ಚಿತ್ರದ ಹೆಸರು ‘ಸ್ಟೈಲ್ ಕಿಂಗ್’. ಮತ್ತೊಂದು ಚಿತ್ರ ‘ಅರ್ಜುನಾ’. ಇದು ದೇವರಾಜ್ ಮತ್ತು ಪ್ರಜ್ವಲ್ ಒಟ್ಟಾಗಿ ಕಾಣಿಸಿಕೊಂಡಿರುವ ಚಿತ್ರ. ತಮ್ಮ ನಿರ್ದೇಶನದ ಈ ಎರಡೂ ಚಿತ್ರಗಳ ಕುರಿತಾಗಿ ಶೇಖರ್ ‘ಚಂದನವನ’ದ ಜೊತೆ ಮಾತನಾಡಿದ್ದಾರೆ.

‘ಅರ್ಜುನಾ’ ಸಿನಿಮಾದ ಮೂಲಕ ತಂದೆ–ಮಗನನ್ನು ಒಂದೇ ಚಿತ್ರದಲ್ಲಿ ತೋರಿಸುವ ಮೂಲಕ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆಯಲು ಸಜ್ಜಾಗಿದ್ದಾರೆ ಶೇಖರ್. ತಂದೆ–ಮಗನನ್ನು ಒಂದೇ ಚಿತ್ರದಲ್ಲಿ ತೋರಿಸುವುದೂ ಒಂದು ಕಲೆ ಎನ್ನುವ ಶೇಖರ್, ‘ಇದು ಕೇವಲ ತಂದೆ ಮಗನನ್ನು ಒಂದೇ ಚಿತ್ರದಲ್ಲಿ ತೋರಿಸಿ ಆ ಜನಪ್ರಿಯತೆಯ ಲಾಭವನ್ನು ಚಿತ್ರಕ್ಕೆ ಬಳಸಿಕೊಳ್ಳುವ ತಂತ್ರ ಅಲ್ಲ.

ಅದೊಂದು ಅಂಶವಷ್ಟೇ. ಚಿತ್ರಕಥೆಯಲ್ಲಿ ಈ ಇಬ್ಬರನ್ನೂ ಒಟ್ಟಿಗೆ ತರುವ ಒಳ್ಳೆಯ ಅವಕಾಶ ಇರುವುದನ್ನು ಬಳಸಿಕೊಂಡೆ. ಆದರಿಲ್ಲಿ ದೇವರಾಜ್ ಮತ್ತು ಪ್ರಜ್ವಲ್ ತಂದೆ ಮಗನಾಗಿ ಕಾಣಿಸಿಕೊಳ್ಳುತ್ತಿಲ್ಲ’ ಎನ್ನುತ್ತಾರೆ. ತಮ್ಮ ಈ ಹಿಂದಿನ ‘ರೋಮಿಯೊ’, ‘ಚಡ್ಡಿದೋಸ್ತ್’ ಚಿತ್ರಗಳಿಂತ ಭಿನ್ನ ಕಥಾವಸ್ತುವಾಗಿ ‘ಅರ್ಜುನಾ’ ಮೂಡಿಬರಬೇಕು ಎಂಬುದು ಶೇಖರ್ ಆಸೆ. ಹಾಗಾಗಿ ಈ ಬಾರಿ ತಮ್ಮದೇ ಕಾದಂಬರಿಯ ಎಳೆ ಆಯ್ದುಕೊಂಡು ಸಿನಿಮಾ ಮಾಡಿದ್ದಾರೆ.

ವ್ಯಾಪಾರಿ ಚಿತ್ರದ ನಿರ್ವಹಣೆ ಒಂದು ರೀತಿಯಾಗಿದ್ದರೆ ಕಾದಂಬರಿ ಆಧಾರಿತ ಚಿತ್ರಗಳ ನಿರೂಪಣೆಯೇ ಬೇರೆ ರೀತಿಯದ್ದಾಗಿರುತ್ತದೆ ಎನ್ನುವ ಅವರು, ಇವೆರಡೂ ಶೈಲಿಗಳನ್ನೊಳಗೊಂಡ ‘ಬ್ರಿಡ್ಜ್’ ಮಾದರಿಯ ‘ರೋಚಕ ವ್ಯಾಪಾರಿ ಚಿತ್ರ’ ಮಾಡಿದ್ದಾರಂತೆ. ಅರ್ಜುನಾ ಎಂಬ ಪಾತ್ರದ ಸುತ್ತ ಕಥೆ ಸುತ್ತುತ್ತದೆ. ಆ ಪಾತ್ರದಲ್ಲಿ ಪ್ರಜ್ವಲ್ ಮಿಂಚಿದ್ದಾರೆ. ನಾಯಕನಷ್ಟೇ ಪ್ರಾಮುಖ್ಯ ಇರುವ ನಾಯಕಿಯ ಪಾತ್ರಕ್ಕೆ ಭಾಮಾ ಅಭಿನಯಿಸಿದ್ದಾರೆ.  ಎರಡನೇ ಪುಟಕ್ಕೆ...

ಶೇಖರ್ ‘ಸರ್ಕಸ್’ ಕಂಪನಿ!
ಇಡೀ ಚಿತ್ರ ಪ್ರಜ್ವಲ್ ಸುತ್ತಲೇ ಇದ್ದರೂ ಆ ಪಾತ್ರಕ್ಕೆ ಯಾವುದೇ ‘ಹೀರೊಯಿಸಂ’ ಇಲ್ಲ. ದಿನನಿತ್ಯ ಬೆಳಿಗ್ಗೆ ಒಂದು ಬ್ಯಾಗ್ ಹಾಕಿಕೊಂಡು, ಟಿಫಿನ್ ಕ್ಯಾರಿಯರ್ ಇಟ್ಟುಕೊಂಡು ಬೈಕ್‌ನಲ್ಲಿ ಕಚೇರಿಗೆ ತೆರಳುವ ನಮ್ಮ ಅಕ್ಕಪಕ್ಕದ ಸಾಮಾನ್ಯ ವ್ಯಕ್ತಿಯಂತೆ ಪ್ರಜ್ವಲ್ ಪಾತ್ರವೂ ತೋರಲಿದೆ. ಇದು ವಾಸ್ತವಕ್ಕೆ ತುಂಬ ಹತ್ತಿರವಾದ ಸಿನಿಮಾ ಎನ್ನುತ್ತಾರೆ ಶೇಖರ್.

ಕಥೆಯ ಆಯ್ಕೆ ಸಂದರ್ಭದಲ್ಲೇ ಪ್ರಜ್ವಲ್ ಅವರೇ ನಾಯಕ ಎಂಬುದು ಶೇಖರ್ ತಲೆಯಲ್ಲಿ ಅಚ್ಚಾಗಿಬಿಟ್ಟಿತ್ತು. ದೇವರಾಜ್ ಅವರಿಲ್ಲಿ ತನಿಖಾಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ‘ದೇವರಾಜ್ ಅವರ ವೃತ್ತಿಬದುಕನ್ನು ಒಮ್ಮೆ ತಿರುಗಿ ನೋಡಿದರೆ ಅವರು ಇಂತಹ ಪಾತ್ರಗಳಲ್ಲೇ ಜನರಿಗೆ ಹೆಚ್ಚು ಹತ್ತಿರವಾಗಿದ್ದು’ ಎಂದು, ಅವರನ್ನು ಈ ಪಾತ್ರಕ್ಕೆ ಆಯ್ಕೆ ಮಾಡಿದ ಮತ್ತೊಂದು ಕಾರಣವನ್ನು ಬಿಚ್ಚಿಡುತ್ತಾರೆ ಶೇಖರ್.

ಏಪ್ರಿಲ್‌ನಲ್ಲಿ ಸದ್ದಿಲ್ಲದೇ ಚಿತ್ರೀಕರಣ ಆರಂಭಿಸಿ ಮೇ ತಿಂಗಳಲ್ಲಿ ಚಿತ್ರದ ಎಲ್ಲ ಕೆಲಸ ಪೂರೈಸಿದ್ದಾರೆ ನಿರ್ದೇಶಕರು. ಸಂಪೂರ್ಣ ಚಿತ್ರೀಕರಣ ನಡೆದಿರುವುದು ಬೆಂಗಳೂರಿನಲ್ಲೇ. ಶೀಘ್ರದಲ್ಲೇ ಟ್ರೇಲರ್, ಹಾಡುಗಳು ಬಿಡುಗಡೆಯಾಗಲಿವೆ. ಇಷ್ಟೊತ್ತಿಗಾಗಲೇ ಬಿಡುಗಡೆಯಾಗಬೇಕಿದ್ದ ‘ಅರ್ಜುನ’ ಕೊಂಚ ತಡವಾಗಿ, ಅಂದರೆ ಜುಲೈ ಕೊನೆ ಅಥವಾ ಆಗಸ್ಟ್‌ನಲ್ಲಿ ಚಿತ್ರ ಪ್ರೇಕ್ಷಕಪ್ರಭುವಿನ ಮುಂದೆ ಬರಲಿದೆ.

ಸ್ಟೈಲ್ ಕಿಂಗ್
ಗಣೇಶ್ ಅವರನ್ನು ‘ಸ್ಟೈಲ್ ಕಿಂಗ್’ ಆಗಿ ಕಾಣಿಸಲಿದ್ದಾರೆ ಶೇಖರ್. ಗಣೇಶ್ ಈ ಚಿತ್ರದಲ್ಲಿ ಮೊದಲ ಬಾರಿ ದ್ವಿಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಒಂದು ರೆಗ್ಯುಲರ್ ಗಣೇಶ್, ಮತ್ತೊಂದು ಸ್ಟೈಲ್ ಕಿಂಗ್ ಗಣೇಶ್. ಈ ಪಾತ್ರಕ್ಕಾಗಿ ಗಣೇಶ್ ಅವರ ದೇಹಭಾಷೆ, ಗೆಟಪ್ ಎಲ್ಲವನ್ನೂ ತಿದ್ದಲಾಗಿದೆ.

ಅದೂ ಅಲ್ಲದೇ ಆ ಪಾತ್ರಕ್ಕೆ ಇಡಿಯಾಗಿ ಇರುವುದು ಎಂಟೋ ಹತ್ತೋ ಸಂಭಾಷಣೆಗಳು ಮಾತ್ರವಂತೆ. ಈ ಚಿತ್ರಕ್ಕೆ ಕಂಪ್ಯೂಟರ್ ಗ್ರಾಫಿಕ್ಸ್ ಕೆಲಸಗಳು ಹೆಚ್ಚಾಗಿದ್ದು, ಚಿತ್ರೀಕರಣೋತ್ತರ ಕಾರ್ಯಗಳು ನಡೆಯುತ್ತಿವೆ. ಹಾಗಾಗಿ ‘ಅರ್ಜುನ’ ನಂತರ ‘ಸ್ಟೈಲ್ ಕಿಂಗ್’ ತೆರೆಗೆ ಬರಲಿದೆ.
*
ಡೈನಮಿಕ್‌ಗೆ ಆ್ಯಕ್ಷನ್ ಕಟ್
ಡೈನಮಿಕ್ ಸ್ಟಾರ್ ದೇವರಾಜ್ ಅವರೊಂದಿಗೆ ತುಂಬ ನಿರಾಳವಾಗಿ ಕೆಲಸ ಮಾಡಿದ್ದಾರೆ ಶೇಖರ್. ಒಂದು ದೃಶ್ಯದ ಚಿತ್ರೀಕರಣದಲ್ಲಿ ಅಪ್ಪನ ಎದುರು ಅಭಿನಯಿಸಲು ಕೊಂಚ ಹೆದರಿದಂತೆ ಕಂಡಿದ್ದ ಪ್ರಜ್ವಲ್‌ಗೆ ದೇವರಾಜ್ ಅವರೇ ಧೈರ್ಯ ತುಂಬಿ ಆ ದೃಶ್ಯ ಚೆನ್ನಾಗಿ ಮೂಡಿಬರಲು ಕಾರಣರಾಗಿದ್ದಂತೆ. ಅಂದರೆ, ‘ದೇವರಾಜ್ ಅವರು ನಿಜಕ್ಕೂ ಒಬ್ಬ ನಿರ್ದೇಶಕನ ಅಪೇಕ್ಷೆಯನ್ನು ಪೂರೈಸುವ ಕಲಾವಿದ’ ಎಂಬುದು ಶೇಖರ್ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT