ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 15ಕ್ಕೆ ಇಳಿಸಲು ಸೂಚನೆ

ಕಾವೇರಿ ನೀರಿನ ಸೋರಿಕೆ ಪ್ರಮಾಣ
Last Updated 20 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ನಗರಕ್ಕೆ ಪೂರೈಕೆಯಾಗುತ್ತಿರುವ ಕಾವೇರಿ ನೀರಿನಲ್ಲಿ ಶೇ 48ರಷ್ಟು ಸೋರಿಕೆ ಆಗುತ್ತಿದೆ. ಸೋರಿಕೆ ಪ್ರಮಾಣವನ್ನು ಶೇ 15ಕ್ಕೆ ಇಳಿಸಲು ಜಲ­ಮಂಡಳಿ ಕ್ರಮ ಕೈಗೊಳ್ಳಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.

ಸೆಂಟ್ರಲ್‌ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣ­ದಲ್ಲಿ ಗುರುವಾರ ನಡೆದ ಜಲಮಂಡಳಿಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತ­ನಾಡಿ, ‘ಶೇ 52ರಷ್ಟು ಕಾವೇರಿ ನೀರಿನಿಂದ ಮಾತ್ರ ಆದಾಯ ಬರುತ್ತಿದೆ. ಸೋರಿಕೆ ತಡೆಗೆ ಮಂಡಳಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಅನಧಿಕೃತ ನೀರಿನ ಸಂಪರ್ಕ ಹೊಂದಿರುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು’ ಎಂದು ಅವರು ನಿರ್ದೇಶನ ನೀಡಿದರು.

‘ನಗರದಲ್ಲಿ ವಾರ್ಷಿಕ 1 ಸಾವಿರ ಮಿ.ಮೀ. ಮಳೆಯಾಗುತ್ತಿದೆ. ಇದರಲ್ಲಿ ಶೇ 50 ರಷ್ಟು ನೀರನ್ನು ಮಳೆ ನೀರು ಸಂಗ್ರಹದ ಮೂಲಕ ಇಂಗಿಸಿದರೆ ನಗರದ ನೀರಿನ ಸಮಸ್ಯೆ ಬಗೆಹರಿಯುತ್ತದೆ. ಆದರೆ, ಜನರು ಮಳೆ ನೀರು ಸಂಗ್ರಹ ಯೋಜನೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಈ ಯೋಜನೆಯ ಬಗ್ಗೆ ಮಂಡಳಿ ಜನರಲ್ಲಿ ಜಾಗೃತಿ ಮೂಡಿಸಬೇಕು’ ಎಂದರು.

‘ನಗರ ಯೋಜನಾಬದ್ಧವಾಗಿ ಬೆಳದಿಲ್ಲ. 80ರ ದಶಕದ ಬಳಿಕ ನಗರ ಯದ್ವಾತದ್ವಾ ಬೆಳೆದಿದೆ. ಉದ್ಯೋಗ ಅರಸಿ ನಗರಕ್ಕೆ ವಲಸೆ ಬರುವವರ ಸಂಖ್ಯೆಯೂ ಜಾಸ್ತಿ ಆಗಿದೆ. ಇದರಿಂದ ಕಾನೂನು ಸುವ್ಯವಸ್ಥೆಯ ಸಮಸ್ಯೆಯೂ ಆಗುತ್ತಿದೆ’ ಎಂದರು.
ಮೂಲಸೌಕರ್ಯ ಅಭಿವೃದ್ಧಿ ಸಚಿವ ರೋಷನ್‌ ಬೇಗ್‌ ಅಧ್ಯಕ್ಷತೆ ವಹಿಸಿದ್ದರು. ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್‌ ಗುಂಡೂ ರಾವ್‌, ಶಾಸಕರಾದ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಎಸ್‌.ಟಿ.ಸೋಮಶೇಖರ್‌, ಭೈರತಿ ಬಸವರಾಜ್‌, ಆರ್‌.ಅಖಂಡ ಶ್ರೀನಿವಾಸಮೂರ್ತಿ, ಮುನಿರತ್ನ, ಉಪಮೇಯರ್‌ ಕೆ.ರಂಗಣ್ಣ, ಜಲಮಂಡಳಿಯ ಅಧ್ಯಕ್ಷ ಅಂಜುಮ್‌ ಪರ್ವೇಜ್‌ ಮತ್ತಿತರರು ಇದ್ದರು.

2–3 ವರ್ಷಕ್ಕೊಮ್ಮೆ ದರ ಏರಿಸಿ: ರಾಮಲಿಂಗಾ ರೆಡ್ಡಿ
ಜಲಮಂಡಳಿ 2–3 ವರ್ಷಕ್ಕೊಮ್ಮೆ ನೀರಿನ ದರ ಪರಿಷ್ಕರಣೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಸಲಹೆ ನೀಡಿದರು. ‘9 ವರ್ಷಗಳಿಂದ ಮಂಡಳಿ ನೀರಿನ ದರ ಏರಿಸಿರಲಿಲ್ಲ. ಹೀಗಾಗಿ ಮಂಡಳಿ ನಷ್ಟ ಅನುಭವಿಸಿದೆ. ಏಳು ವರ್ಷಗಳಿಂದ ಆಡಳಿತ ನಡೆಸುತ್ತಿದ್ದವರು ದರ ಏರಿಕೆಗೆ ಅನುಮತಿ ನೀಡಿರಲಿಲ್ಲ.

ಈಗ ಅವರೇ ಪ್ರತಿಭಟನೆ ನಡೆಸುತ್ತಿದ್ದಾರೆ. ಸಮರ್ಪಕ ಆದಾಯ ಬಾರದೆ ಇದ್ದರೆ ಸಂಸ್ಥೆಯನ್ನು ನಡೆಸುವುದು ಹೇಗೆ’ ಎಂದು ಅವರು ಪ್ರಶ್ನಿಸಿದರು. ‘ರಾಜಕಾಲುವೆಗಳಲ್ಲಿ ಮಳೆ ನೀರಿನ ಬದಲು ಕೊಳಚೆ ನೀರು ಹರಿಯುತ್ತಿದೆ. ಕೊಳಚೆ ನೀರನ್ನು ಶುದ್ಸೀಕರಿಸಿ ಕಾಲುವೆಗೆ ಬಿಡಬೇಕು’ ಎಂದರು.

ಅನಧಿಕೃತ ಸಂಪರ್ಕದಿಂದಲೇ ಶೇ 22 ಸೋರಿಕೆ
ನಗರಕ್ಕೆ ಪೂರೈಕೆಯಾಗುತ್ತಿರುವ ಶೇ 46ರಷ್ಟು ನೀರು ಲೆಕ್ಕಕ್ಕೆ ಸಿಗುತ್ತಿಲ್ಲ. ಅಂತರರಾಷ್ಟ್ರೀಯ ಮಾನದಂಡದ ಪ್ರಕಾರ ಶೇ 15ರಷ್ಟು ಸೋರಿಕೆ ಅನಿವಾರ್ಯ ಎಂದು ಜಲಮಂಡಳಿ ಸಮಜಾಯಿಷಿ ನೀಡಿದೆ.

ಲೆಕ್ಕಕ್ಕೆ ಸಿಗದೆ ಇರುವ ನೀರಿನ ಪ್ರಮಾಣ ಕಡಿಮೆ ಮಾಡುವ ಉದ್ದೇಶದಿಂದ ನಗರದ ದಕ್ಷಿಣ ವಿಭಾಗದ 52 ಚದರ ಕಿ.ಮೀ. ವಿಸ್ತೀರ್ಣ, ಕೇಂದ್ರ ಭಾಗದ 29 ಚ.ಕಿ.ಮೀ, ಪಶ್ಚಿಮದ 49 ಚ.ಕಿ.ಮೀ ಸೇರಿದಂತೆ ಒಟ್ಟು 130 ಚ.ಕಿ.ಮೀ. ಪ್ರದೇಶದಲ್ಲಿ ಯೋಜನೆ ಕೈಗೊಂಡಿದ್ದು, ಶೇ 65ರಷ್ಟು ಪ್ರಗತಿ ಸಾಧಿಸಲಾಗಿದೆ. ಈ ಯೋಜನೆಯನ್ನು ಉಳಿದ 100 ಚ.ಕಿ.ಮೀ. ಪ್ರದೇಶಕ್ಕೂ ವಿಸ್ತರಿಸಲಾಗುವುದು ಎಂದು ಮಂಡಳಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT