ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೋಷಿತರ ಪಾಡೇನು?

Last Updated 1 ಮೇ 2015, 19:30 IST
ಅಕ್ಷರ ಗಾತ್ರ

‘ಸಂಗತ’ದಲ್ಲಿ ನಾನು ಬರೆದ ‘ಬಸವತತ್ವ ಮತ್ತು ತ್ರಿವಿಧ ಭಕ್ತರು’ ಲೇಖನಕ್ಕೆ  (ಏ. 21) ಸಿ.ಕೆ. ವಾಸುದೇವಮೂರ್ತಿ ಅವರು ‘ಶೋಭಿಸದ ವಾದ’ (ವಾ.ವಾ., ಏ.27) ಶೀರ್ಷಿಕೆಯಡಿ ಪ್ರತಿಕ್ರಿಯೆ ನೀಡಿದ್ದಾರೆ. ಅದಕ್ಕೆ ಈ ವಿವರಣೆ.

ಬಸವಣ್ಣನವರ ವಚನ ‘ವಿಪ್ರರು ನುಡಿದಂತೆ ನಡೆಯರು...’ ಈ ವಚನವು ನನ್ನದಲ್ಲ; 900 ವರ್ಷಗಳ ಹಿಂದಿನ ಸ್ಥಿತಿಗತಿಯನ್ನು ಕಂಡು ಬಸವಣ್ಣನವರು ವ್ಯಕ್ತಪಡಿಸಿರುವ ವಚನವದು.  ನಾನು ಯಾವೊಂದು ಸಮುದಾಯದ ವಿರೋಧಿಯಲ್ಲ; ಅದರಂತೆ ವಿಪ್ರ ಸಮುದಾಯದ ವಿರೋಧಿಯೂ ಅಲ್ಲ. ನಾನು ಶೋಷಣೆ ಮತ್ತು ಅಸಮಾನತೆಯ ವಿರೋಧಿಯಷ್ಟೇ. ವಿಪ್ರ ಸಮುದಾಯದಲ್ಲಿ  ಮಾತ್ರ ಅವು ಇದ್ದಾವೆಂದೆನಿಸದು. ಇಂದು ಎಲ್ಲ ಸಮುದಾಯಗಳಲ್ಲೂ ಈ ಪಿಡುಗನ್ನು ಕಾಣಬಹುದಾಗಿದೆ.

ಮೇಲಿನ ವಚನವನ್ನು ಉದಾಹರಿಸಿದ್ದು ಬ್ರಾಹ್ಮಣರನ್ನು ನೋಯಿಸುವ ಕಾರಣದಿಂದಲ್ಲ. ಅಂದು ಬಸವಣ್ಣನವರು ಅವರ ಅವಲೋಕನ ಮತ್ತು ಅನುಭಾವಗಳ ತೆಕ್ಕೆಯಲ್ಲಿ ಬಂದದ್ದನ್ನು ಆ ಸಂದರ್ಭಕ್ಕನುಗುಣವಾಗಿ ಹೇಳಿದ್ದಾರೆ. ಇಂದು ಈ ವಿಪ್ರ ಭಾವನೆ ಎಲ್ಲಾ ಜಾತಿ– ವರ್ಗಗಳಲ್ಲಿ ಹಂಚಿ ಹೋಗಿದೆ. ದಲಿತ ವರ್ಗದವರ ಕೆಲವರು ಒಳಗೊಂಡಂತೆ ಇಂದು ಅದು ಬಹಳಷ್ಟು ಜನರಲ್ಲಿ ಬಂದಿರುವುದು ನಿಜ. ವಿಪ್ರ ವರ್ಗದ ಇಂದಿನ ಜನರಲ್ಲೂ ಅಸ್ಪೃಶ್ಯತೆಯನ್ನು ವಿರೋಧಿಸುವವರೂ ಇದ್ದಾರೆ ಎನ್ನುವುದು ಅಷ್ಟೇ ಸತ್ಯ.

ವಿಚಾರವಾದಿಗಳೆಲ್ಲ ಕೇವಲ ವಿಚಾರ ಪ್ರತಿಪಾದಕರಲ್ಲ; ಮಾನವೀಯ ನೆಲೆಯ ಮೇಲೆ ವಿಚಾರಗಳನ್ನು ಪ್ರತಿಪಾದಿಸುತ್ತ ಬಂದಿದ್ದಾರೆ. ಬಸವಣ್ಣನವರ ವಚನಗಳನ್ನು ಪತ್ರಿಕೆಯಲ್ಲಿ ಒಂದುಸಾರಿ ಉದಾಹರಿಸಿದ್ದಕ್ಕೆ ಅದೆಂತಹ ನೋವು! ಅಸ್ಪ್ಪೃಶ್ಯತೆಯ ನೋವನ್ನು ಅನುಭವಿಸಿಕೊಂಡು ಬಂದವರ ಪಾಡೇನು? ನೀವೇ ಒಪ್ಪಿಕೊಂಡಿರುವಂತೆ ವಿಪ್ರರ ನಡುವಿನ ಯಾವುದೋ ಗುಂಪೊಂದು ಹಾಗೆ ವರ್ತಿಸಿರಬಹುದು. ಹಿಂದೆ ಇಂಥ ಗುಂಪುಗಳು ಮಾಡಿರಬಹುದಾದ ತಪ್ಪುಗಳು ಪುನರಾವರ್ತನೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ.

ತಪ್ಪುಗಳ ತಿದ್ದುಪಡಿ; ಜಾಗರೂಕರಾಗಿ ಹೆಜ್ಜೆ ಇಡಿ ಎಂಬಂತೆ ನಾನು ಇಂದು ಎಲ್ಲೂ ಅಸ್ಪ್ಪೃಶ್ಯತೆಯನ್ನು ಅನುಸರಿಸುತ್ತಿಲ್ಲ. ಬದಲಾಗಿ ಅದರ ವಿರುದ್ಧ ಎಲ್ಲ ವಿಧದ ಹೋರಾಟ ಮಾಡುತ್ತಿರುವೆ. ನೀವು ಮನೆಗಳಲ್ಲಿ ಮಾಡಲು ಸಾಧ್ಯವಾಗದ್ದನ್ನು ನಾನು ಮಠದಲ್ಲಿ ಮತ್ತು ಸಾರ್ವಜನಿಕವಾಗಿ ಮಾಡುತ್ತಿರುವುದು ಬಹುಶಃ ನಿಮಗೆ ತಿಳಿದಿರಲಿಕ್ಕಿಲ್ಲ. ತಿಳಿಯಲು ಪ್ರಯತ್ನಿಸಿ.
- ಡಾ. ಶಿವಮೂರ್ತಿ ಮುರುಘಾ ಶರಣರು,
ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT