ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೌಚಾಲಯ ನಿರ್ಮಾಣ: ಗುರಿ ನಿರ್ಲಕ್ಷ್ಯ ಸಲ್ಲ

ಪಿಡಿಒ, ಕಾರ್ಯದರ್ಶಿಗಳಿಗೆ ಕಾರ್ಯಾಗಾರ
Last Updated 19 ಸೆಪ್ಟೆಂಬರ್ 2014, 10:23 IST
ಅಕ್ಷರ ಗಾತ್ರ

ಚಾಮರಾಜನಗರ: ‘ನಿರ್ಮಲ ಭಾರತ ಅಭಿಯಾನದಡಿ ಗ್ರಾಮ ಪಂಚಾಯಿತಿಮಟ್ಟದಲ್ಲಿ ಕೈಗೆತ್ತಿಕೊಂಡಿರುವ ಶೌಚಾಲಯ ನಿರ್ಮಾಣ ಕಾಮಗಾರಿ ಹೊಣೆಗಾರಿಕೆಯನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಗಂಭೀರವಾಗಿ ತೆಗೆದು ಕೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಡಿ.ಸಿ. ನಾಗೇಂದ್ರ ಹೇಳಿದರು.

ನಗರದ ಜಿಲ್ಲಾಡಳಿತ ಭವನ ಆವರಣದಲ್ಲಿರುವ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಿರ್ಮಲ ಭಾರತ ಅಭಿಯಾನ ಅನುಷ್ಠಾನ ಸಂಬಂಧ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರ ಹಾಗೂ ಯೋಜನೆಯಲ್ಲಿ ಈವರೆಗೆ ಸಾಧಿಸಿರುವ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಶೌಚಾಲಯಗಳ ನಿರ್ಮಾಣಕ್ಕಾಗಿ ನಡೆಸುತ್ತಿರುವ ವಿಶೇಷ ಅಭಿಯಾನದ ಬಗ್ಗೆ ನಿರ್ಲಕ್ಷ್ಯ ಸಲ್ಲದು. ಅಧಿಕಾರಿಗಳು ತಮ್ಮ ಗ್ರಾಮ ಪಂಚಾಯಿತಿ ಕಚೇರಿಯ ಸಹೋದ್ಯೋಗಿಗಳ ನೆರವಿನೊಂದಿಗೆ ಪ್ರಗತಿ ಸಾಧಿಸಲು ಪೂರ್ಣ ಪ್ರಮಾಣದಲ್ಲಿ ತೊಡಗಿಕೊಳ್ಳಬೇಕು. ಯಾವುದೇ, ಸಮಸ್ಯೆ ಎದುರಾದರೆ ಮೇಲಧಿಕಾರಿಗಳ ಗಮನಕ್ಕೆ ತರಬೇಕು ಎಂದರು.

ಪ್ರಸ್ತುತ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಅಲ್ಪಾವಧಿಯೊಳಗೆ 100 ಶೌಚಾಲಯ ನಿರ್ಮಿಸುವ ಗುರಿ ನೀಡಲಾಗಿದೆ. ಆದರೆ, ಇದನ್ನೇ ಗರಿಷ್ಠ ಗುರಿ ಎಂದು ಭಾವಿಸಬೇಕಿಲ್ಲ. ಇದಕ್ಕಿಂತಲೂ ಹೆಚ್ಚಿನ ಪ್ರಗತಿಗಾಗಿ ಉತ್ಸಾಹ ತೋರಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕೇತಮ್ಮ ಮಾತನಾಡಿ, ಜಿಲ್ಲೆಯನ್ನು ಬಯಲು ಶೌಚಮುಕ್ತವಾಗಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ವಿಶೇಷ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿದೆ. ಜನಪ್ರತಿನಿಧಿಗಳು ನಿಮಗೆ ಸಹಕಾರ ನೀಡಲಿದ್ದಾರೆ. ಎಲ್ಲರ ನೆರವು ಪಡೆದು ನಿಗದಿತ ಅವಧಿಯೊಳಗೆ ಶೌಚಾಲಯ ನಿರ್ಮಿಸಿ ಜನರನ್ನು ಬಳಕೆಗೆ ಉತ್ತೇಜಿಸಬೇಕು ಎಂದರು.

ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಎಚ್. ನರಸಿಂಹಮೂರ್ತಿ ಮಾತನಾಡಿ, ಶೌಚಾಲಯ ನಿರ್ಮಾಣ ಕಾರ್ಯದಲ್ಲಿ ಉದ್ಯೋಗ ಖಾತರಿ ಯೋಜನೆ ನಿರ್ವಹಣೆಗೆ ನೇಮಕವಾಗಿರುವ ಎಂಜಿನಿಯರ್‌ಗಳನ್ನು ತೊಡಗಿಸಿಕೊಳ್ಳಬೇಕು. ಶೀಘ್ರವೇ ಪರಿಶೀಲನೆ ನಡೆಸಿ ಕಾಮಗಾರಿ ಪೂರ್ಣಗೊಳಿಸಿದ ಫಲಾನುಭವಿಗಳಿಗೆ ಪ್ರೋತ್ಸಾಹಧನ ವಿತರಿಸಲು ಅಗತ್ಯವಿರುವ ಕ್ರಮಕೈಗೊಳ್ಳಬೇಕು. ಇಲ್ಲವಾದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ವೈಯಕ್ತಿಕ ಶೌಚಾಲಯ ನಿರ್ಮಾಣದ ಮಾಹಿತಿಯನ್ನು ಜಿಪಿಎಸ್‌ಗೆ ಹೊಂದಾಣಿಕೆ ಮಾಡಲಾಗುತ್ತಿದೆ. ಫಲಾನುಭವಿಗಳ ದಾಖಲಾತಿ ಕಾರ್ಯಕ್ಕೂ ಆಧುನಿಕ ತಾಂತ್ರಿಕ ಜ್ಞಾನ ಬಳಸಲಾಗುತ್ತಿದೆ. ಕಾರ್ಯಾದೇಶ ನೀಡುವ ಎಲ್ಲ ಮಾಹಿತಿಯನ್ನು ಪಂಚತಂತ್ರದಲ್ಲಿ ಅಳವಡಿಸಬೇಕಿದೆ. ಹೀಗಾಗಿ, ಯಾವುದೇ ದುರ್ಬಳಕೆಗೆ ಅವಕಾಶವಾಗುವುದಿಲ್ಲ. ಪಾರದರ್ಶಕತೆಯಿಂದ ಎಲ್ಲ ಕೆಲಸವನ್ನು ನಿರ್ವಹಣೆ ಮಾಡಬೇಕಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿಯ ಮುಖ್ಯ ಯೋಜನಾಧಿಕಾರಿ  ಸಿ.ಎಚ್. ವಸುಂಧರಾದೇವಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಶೌಚಾಲಯಗಳ ನಿರ್ಮಾಣಕ್ಕೆ ಜನರ ಮನವೊಲಿಸಲು ಆಯಾ ವ್ಯಾಪ್ತಿಯ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಮುಂದಾಗಲಿದ್ದಾರೆ. ವಿಶೇಷ ಅಭಿಯಾನವನ್ನು ತೀವ್ರಗೊಳಿಸಲು ಅಗತ್ಯವಿರುವ ನೆರವು, ಮಾರ್ಗದರ್ಶನ ನೀಡಲಾಗುವುದು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಸ್ಥಳೀಯ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗುರಿ ಸಾಧಿಸಬೇಕು ಎಂದರು. ಸಭೆಯಲ್ಲಿ ಜಿಲ್ಲಾ ಪಂಚಾಯಿತಿಯ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಪಿ. ಪುಟ್ಟಬುದ್ಧಿ, ಉಪ ಕಾರ್ಯದರ್ಶಿ ಮುನಿರಾಜಪ್ಪ, ಮುಖ್ಯ ಲೆಕ್ಕಾಧಿಕಾರಿ ರವಿಕುಮಾರ್, ಯೋಜನಾ ನಿರ್ದೇಶಕ ಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT