ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರವಣ ದೋಷ ನಿವಾರಣೆಗೆ ಕಾಕ್ಲಿಯರ್‌ ಇಂಪ್ಲಾಂಟ್‌

Last Updated 22 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ಕಿವಿ ಕೇಳಿಸದಿದ್ದರೆ ಏನೆಲ್ಲಾ ಆಗುತ್ತದೆ?... ಇಂತಹದ್ದೊಂದು ಪ್ರಶ್ನೆಯನ್ನು ಕೇಳಿಕೊಳ್ಳುವ ಮೂಲಕ ಮನಸ್ಸಿನೊಳಗಿರುವ ಗುಂಗಿಹುಳವನ್ನು ಬಡಿದೆಬ್ಬಿಸಿ. ಅದಕ್ಕೆ ಸಂಬಂಧಿಸಿದಂತೆ ಉತ್ತರಗಳನ್ನು ಕಲ್ಪಿಸಿಕೊಳ್ಳುತ್ತಾ ಹೋದರೆ ಎದೆಯಲ್ಲಿ ದಿಗಿಲು ಶುರುವಾಗುತ್ತದೆ. ಕೇಳಿಸಿಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಂಡವರು ತಮ್ಮ ಬದುಕಿನ ನಡುವೆ ಏನೆಲ್ಲಾ ಪಡಿಪಾಟಲು ಅನುಭವಿಬೇಕು, ಅಪಹಾಸ್ಯಕ್ಕೆ ಗುರಿಯಾಗಬೇಕು ಎಂಬುದನ್ನು ನೆನೆದರೆ ಬದುಕು ಕಷ್ಟ ಅನಿಸುತ್ತದೆ. ಕಿವುಡನ ಪಟ್ಟ ಕಟ್ಟಿಕೊಂಡು ಶಬ್ದರಹಿತ ಜಗತ್ತಿನಲ್ಲಿ ಬಾಳುವುದು ಸುಲಭವೇನಲ್ಲ.

ಶ್ರವಣ ದೋಷಕ್ಕೆ ಕಾರಣಗಳು
ಹುಟ್ಟಿದ ತಕ್ಷಣ ಮಕ್ಕಳಿಗೆ ಒಎಇ (Otoacoustic Emissions) ಪರೀಕ್ಷೆ ಮಾಡಬೇಕು ಎಂಬ ನಿಯಮ ಇದೆ. ಆದರೆ ಅನೇಕ ವೈದ್ಯರು ಇದನ್ನು ಮಾಡುವುದಿಲ್ಲ. ಹುಟ್ಟಿದ ಮಗುವಿನ ಕಿವಿ ಚೆನ್ನಾಗಿ ಕೆಲಸ ಮಾಡುತ್ತಿದೆ ಇಲ್ಲವೋ ಎಂಬುದನ್ನು ಪ್ರೋಬ್‌ ಬಳಸಿ ನಿಖರವಾಗಿ ತಿಳಿದುಕೊಳ್ಳಬಹುದು. ಶಬ್ದಕ್ಕೆ ಪ್ರತಿಕ್ರಿಯಿಸಲು ಶುರು ಮಾಡಿದಂತೆ ಮಕ್ಕಳು ಎಲ್ಲ ರೀತಿಯಿಂದಲೂ ಬೆಳವಣಿಗೆಗೆ ತೆರೆದುಕೊಳ್ಳುತ್ತಾರೆ. ಒಂದು ವೇಳೆ ಶಬ್ದಕ್ಕೆ ಸ್ಪಂದಿಸುವುದಿಲ್ಲ ಎಂದಾದಲ್ಲಿ ಅವರ ಮಾತಿನ ಕಲಿಕೆಗೆ ತೊಂದರೆಯಾಗುತ್ತದೆ. 

ಹುಟ್ಟಿದ ಮಗುವಿಗೆ ಜಾಂಡೀಸ್‌ ಜಾಸ್ತಿ ಇದ್ದರೆ, ಫಿಟ್ಸ್‌ ಬಂದರೆ, ಸಂಬಂಧದಲ್ಲಿ ಮದುವೆ ಆದವರಿಂದ ಜನಿಸುವ ಮಕ್ಕಳಿಗೆ, ವೈರಲ್‌ ಇನ್‌ಫೆಕ್ಷನ್‌ ಆದರೆ ಶ್ರವಣ ದೋಷದ ಸಮಸ್ಯೆ ಎದುರಾಗುತ್ತದೆ. ಹುಟ್ಟಿದ ತಕ್ಷಣ ಮಕ್ಕಳು ಅಳದಿದ್ದರೆ ಮೆದುಳಿಗೆ ಆಮ್ಲಜನಕ ಪೂರೈಕೆ ಆಗುವುದಿಲ್ಲ. ಆಗ ಕಾಕ್ಲಿಯರ್‌ಗೆ ರಕ್ತ ಪೂರೈಕೆ ಆಗದೇ ಇರುವ ಕಾರಣಕ್ಕೂ ಕಿವಿ ಕೇಳಿಸದಂತಾಗುತ್ತದೆ.

ಶ್ರವಣ ಸಾಧನ ಕೈಕೊಟ್ಟರೆ...
ಕಿವಿ ಕೇಳಿಸದಿರಲು ಆನುವಂಶಿಕ ಕಾರಣವೂ ಒಂದು. ತಂದೆ ತಾಯಿಯಲ್ಲಿ ಈ ಸಮಸ್ಯೆ ಇಲ್ಲದಿದ್ದರೂ ಅದು ಮಕ್ಕಳಲ್ಲಿ ಕಾಣಿಸಿಕೊಳ್ಳಬಹುದು. ಹಾಗೆಯೇ, ಇಬ್ಬರು ಮಕ್ಕಳಲ್ಲಿ ಒಂದು ಮಗುವಿಗೆ ಇದ್ದು ಮತ್ತೊಂದಕ್ಕೆ ಇಲ್ಲದೇ ಇರಬಹುದು. ಶ್ರವಣ ದೋಷವನ್ನು ಪ್ರಾಥಮಿಕ ಹಂತದಲ್ಲೇ ಗುರುತಿಸುವುದು ತುಂಬ ಮುಖ್ಯ. ಮಕ್ಕಳು ಬೆಳೆಯುತ್ತಾ ಹೋದಂತೆ ಅವರು ಕೇಳಿಸಿಕೊಳ್ಳುವ ಶಕ್ತಿ ಕಡಿಮೆಯಾಗುತ್ತಾ ಹೋಗುತ್ತದೆ. ಕೊನೆಗೊಂದು ದಿನ ಕಿವಿ ಕೇಳಿಸದಂತೇ ಆಗಿಬಿಡುತ್ತದೆ. ವೈದ್ಯರು ಶ್ರವಣ ದೋಷ ಪತ್ತೆ ಹಚ್ಚಿದ ನಂತರ ಅವರ ಕೇಳಿಸಿಕೊಳ್ಳುವಿಕೆಗೆ ಶ್ರವಣ ಸಾಧನಗಳು ನೆರವಾಗುತ್ತದೆ. 

ಆದರೆ ಕಿವುಡುತನದ ತೊಂದರೆ ಶೇ 80 ದಾಟಿದಾಗ ಶ್ರವಣ ಸಾಧನಗಳು ಉಪಯೋಗಕ್ಕೆ ಬರುವುದಿಲ್ಲ. ತೀವ್ರತರನಾದ ಕಿವುಡುತನ ಅನುಭವಿಸುತ್ತಿರುವ ವ್ಯಕ್ತಿಗಳಿಗೆ ಈ ಶ್ರವಣ ಸಾಧನಗಳು ಶಬ್ದ ಕೇಳಿಸಲು ನೆರವಾಗುತ್ತವೆಯೇ ವಿನಹ, ಅದಕ್ಕೆ ಪ್ರತಿಕ್ರಿಯಿಸಲು ಅನುವು ಮಾಡಿಕೊಡುವುದಿಲ್ಲ. ಅಂದರೆ, ಶಬ್ದ ಕೇಳಿಸುತ್ತಿದೆ, ಯಾರೋ ಕರೆಯುತ್ತಿದ್ದಾರೆ ಎಂಬುದು ಆ ವ್ಯಕ್ತಿಗೆ ಗೊತ್ತಾಗುತ್ತದೆ. ಆದರೆ ಸಂಭಾಷಣೆ ನಡೆಸುವ ಸಾಮರ್ಥ್ಯ ಇರುವುದಿಲ್ಲ. ಸಮಸ್ಯೆ ಈ ಹಂತಕ್ಕೆ ಬಂದಾಗ ಕಾಕ್ಲಿಯರ್‌ ಇಂಪ್ಲಾಂಟ್‌ ಮಾಡಿಸಿಕೊಳ್ಳುವುದು ಅನಿವಾರ್ಯ. 

ವೆರಿಯಾ ಸರ್ಜರಿ
ಕಾಕ್ಲಿಯರ್‌ನಲ್ಲಿ ಸಮಸ್ಯೆ ಇದೆ, ಶ್ರವಣ ಸಾಧನಗಳಿಂದ ಉಪಯೋಗ ಆಗುತ್ತಿಲ್ಲ ಎಂದಾಗ ಸರ್ಜರಿಯೊಂದೇ ಪರಿಹಾರ.  ‘ಶೇ 70ಕ್ಕಿಂತಲೂ ತೀವ್ರವಾದ ಕಿವುಡತನದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಕಾಕ್ಲಿಯರ್‌ ಇಂಪ್ಲಾಂಟ್‌ ವರದಾನವಾಗಿದೆ. ಈ ಸರ್ಜರಿಯ ಹೆಸರು ವೆರಿಯಾ (VERIA) ಅಂತ. ಗ್ರೀಸ್‌ನ ವೈದ್ಯ ಪ್ರಿಪಾಂಡ್‌ ಎನ್ನುವವರು ಕಂಡುಹಿಡಿದ ತಂತ್ರಜ್ಞಾನವಿದು.

ಮೊದಲಿಗೆ ಕಾಂಕ್ಲಿಯರ್‌ ಇಂಪ್ಲಾಂಟ್‌ ದೊಡ್ಡವರಿಗೆ ಅಂತ ಶುರುವಾಗಿದ್ದು. ಈಗ ಒಂದು ವರ್ಷದ ಮಗುವಿಗೂ ಮಾಡುವಷ್ಟು ತಂತ್ರಜ್ಞಾನ ಇದರಲ್ಲಿ ಅಭಿವೃದ್ಧಿಯಾಗಿದೆ. ಈ ಸರ್ಜರಿಗೆ ಎರಡು ಮೂರು ತಾಸು ಹಿಡಿಯುತ್ತದೆ. ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಯ ಕಿವಿಯ ತಮಟೆ ಮತ್ತು ಸ್ಕಿನ್‌ ಅನ್ನು ಮೇಲೆತ್ತಿ ಅಪರೇಷನ್‌ ಮಾಡಲಾಗುತ್ತದೆ. ತಮಟೆ ಎತ್ತಿದ ತಕ್ಷಣ ಕಾಕ್ಲಿಯರ್‌ ಕಾಣಿಸುತ್ತದೆ. ಕಾಕ್ಲಿಯರ್‌ಗೆ 1.2 ಮಿಲಿ ಮೀಟರ್‌ನಷ್ಟು ಗಾತ್ರದ ತೂತು ಮಾಡಿ ಅಲ್ಲಿ ಎಲೆಕ್ಟ್ರೋಡ್‌ ಕೂರಿಸುತ್ತೇವೆ.

ಅಪರೇಷನ್‌ ಆದ ನಂತರ ಎರಡು ವಾರದ ಮೇಲೆ  ಡಿವೈಸ್‌ ಕೊಡುತ್ತೇವೆ. ಈ ಸರ್ಜರಿ ಕಡಿಮೆ ಅವಧಿಯದ್ದಾದರೂ ಇದನ್ನು ಮಾಡಲು ತುಂಬ ತಂತ್ರಗಾರಿಕೆ ಇರಬೇಕು. ನಮ್ಮ ದೇಶದಲ್ಲಿ ಈ ಬಗೆಯ ಸರ್ಜರಿಯನ್ನು ತುಂಬ ಕಡಿಮೆ ಸೆಂಟರ್‌ಗಳು ಮಾಡುತ್ತಿವೆ’ ಎನ್ನುತ್ತಾರೆ ಬೆಂಗಳೂರಿನ ಕಾಕ್ಲಿಯರ್‌ ಇಂಪ್ಲಾಂಟ್‌ ಅಂಡ್‌ ಇಎನ್‌ಟಿ ಸೆಂಟರ್‌ನ ತಜ್ಞ ವೈದ್ಯೆ ಡಾ. ವಾಸಂತಿ ಆನಂದ್‌.

ಸಹಾಯಧನ ಲಭ್ಯ
11 ತಿಂಗಳ ಮಗುವಿನಿಂದ 65 ವಯಸ್ಸಿನ ವ್ಯಕ್ತಿಗಳೂ ಸೇರಿದಂತೆ ಈವರೆಗೆ 90ಕ್ಕೂ ಅಧಿಕ ಕಾಕ್ಲಿಯರ್‌ ಇಂಪ್ಲಾಂಟ್‌ ಸರ್ಜರಿ ಮಾಡಿರುವ ಡಾಕ್ಟರ್‌ ವಾಸಂತಿ ಅವರ ಎಲ್ಲ ಸರ್ಜರಿಗಳು ಯಶಸ್ವಿಯಾಗಿವೆ. ಕಾಕ್ಲಿಯರ್‌ ಇಂಪ್ಲಾಂಟ್‌ ಕ್ಷೇತ್ರದಲ್ಲಿನ ಅವರ ನೈಪುಣ್ಯ ಅನೇಕರ ಮೊಗದಲ್ಲಿ ನಗು ಮೂಡಿಸಿದೆ.

‘ಹಿಯರಿಂಗ್‌ ಏಡ್‌ ಬೆನಿಫಿಟ್‌ ಬರದೇ ಹೋದರೆ ಇಂಪ್ಲಾಂಟ್‌ ಮಾಡುವುದು ಅನಿವಾರ್ಯ. ಕಾಕ್ಲಿಯರ್‌ ಇಂಪ್ಲಾಂಟ್‌ ಸರ್ಜರಿ ಅಂದರೆ ಜನರಲ್ಲೂ ಭಯವಿದೆ. ದುಬಾರಿ ಸರ್ಜರಿ ಎಂಬುದು ಇನ್ನೊಂದು ಕಾರಣ. ಈ ಸರ್ಜರಿಯ ಆರಂಭಿಕ ಶುಲ್ಕವೇ  ₹5.80 ಲಕ್ಷ ಇದೆ. ಹಣ ಹೆಚ್ಚು ಎಂಬ ಕಾರಣಕ್ಕೆ ಅನೇಕರು ಇದು ದೊಡ್ಡ ಅಪರೇಷನ್‌ ಎಂದು ಭಯ ಬೀಳುತ್ತಾರೆ. ಆದರೆ, ಅಪರೇಷನ್‌ ಏನೇನೂ ದೊಡ್ಡದಲ್ಲ.

ಈ ಸರ್ಜರಿ ಮಾಡಿಸಿಕೊಂಡ ಅನೇಕ ಪುಟ್ಟ ಮಕ್ಕಳು ಸಂಜೆ ವೇಳೆಗೆ ಆಡಿಕೊಂಡು ಇರುತ್ತಾರೆ. ಕಾಕ್ಲಿಯರ್‌ ಇಂಪ್ಲಾಂಟ್‌ ಡಿವೈಸ್‌ ನಮ್ಮ ದೇಶದಲ್ಲಿ ಸಿಗುವುದಿಲ್ಲ. ಒಮ್ಮೆ ಸರ್ಜರಿ ಮಾಡಿಸಿಕೊಂಡ ಎಂಟು ತಿಂಗಳ ಮಗು ತನ್ನ ಎಂಬತ್ತನೇ ವಯಸ್ಸಿನವರೆಗೂ ಒಂದೇ ಡಿವೈಸ್‌ ಅನ್ನು ಬಳಸಬಹುದು. ಅಷ್ಟು ದಕ್ಷತೆಯಿಂದ ಕೂಡಿರುತ್ತದೆ. ಹಾಗಾಗಿ ಸರ್ಜರಿಯೂ ಸ್ವಲ್ಪ ದುಬಾರಿಯದ್ದಾಗಿದೆ.

ಅಂದಹಾಗೆ, ಈ ಸರ್ಜರಿಗೆ ಸರ್ಕಾರದಿಂದ ಧನಸಹಾಯವೂ ದೊರೆಯುತ್ತದೆ. ಪ್ರಧಾನಮಂತ್ರಿಗಳ ರಾಷ್ಟ್ರೀಯ ನಿಧಿಯಿಂದ ಮೂರು ಲಕ್ಷದವರೆಗೆ ಧನ ಸಹಾಯ ಸಿಗುತ್ತದೆ. ಹಾಗೆಯೇ, ರಾಜ್ಯದ ಮುಖ್ಯಮಂತ್ರಿಗಳ ನಿಧಿ ಹಾಗೂ ಆರೋಗ್ಯ ಸಚಿವರಿಂದಲೂ ಧನ ಸಹಾಯ ಸಿಗುತ್ತದೆ’ ಎನ್ನುತ್ತಾರೆ ವಾಸಂತಿ.

ಕಾಕ್ಲಿಯರ್‌ ಇಂಪ್ಲಾಂಟ್‌ ಮಾಡಿಸಿಕೊಂಡ ನಂತರ ಆಡಿಟರಿ ವರ್ಬಲ್‌ ಥೆರಪಿಗೆ ಒಳಪಡುವುದು ತುಂಬ ಮುಖ್ಯ. ಈ ಡಿವೈಸ್‌ಗೆ ಮಗು ಹೊಂದಿಕೊಳ್ಳಲು ಮೊದಮೊದಲು  ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಆನಂತರ ನಿಧಾನವಾಗಿ ಶಬ್ಬಕ್ಕೆ ಸ್ಪಂದಿಸತೊಡಗುತ್ತದೆ. ಥೆರಪಿ ಸಂದರ್ಭದಲ್ಲಿ ಶಬ್ದಗಳ ಮುಖೇನ ಪ್ರತಿಕ್ರಿಯಿಸುವುದನ್ನು ಹೇಳಿಕೊಡಲಾಗುತ್ತದೆ.

ಶಬ್ದವನ್ನು ಗ್ರಹಿಸಿ ಮಗು ಮಾತು ಕಲಿಯಲು ಶುರು ಮಾಡುತ್ತದೆ. ಅಶರ್‌ ಸಿಂಡ್ರೋಮ್‌ ಇರುವ ಮಕ್ಕಳ ವಿಚಾರದಲ್ಲಿ ಅವರ ಪೋಷಕರು ತುಂಬ ಗಮನವಹಿಸಬೇಕು. ಇಂಪ್ಲಾಂಟ್ ಮಾಡಿಸಿಕೊಂಡ ಮಕ್ಕಳು ಸಾಮಾನ್ಯ ಮಕ್ಕಳಂತೆ ಮಾತನಾಡಲು, ಶಾಲೆಗೆ ಹೋಗುವಂತಾಗಲೂ ಅವರ ಪೋಷಕರು ಒಂದು ವರ್ಷ ತುಂಬ ಶ್ರಮವಹಿಸಬೇಕು. 

ಹೆಚ್ಚಿನ ಮಾಹಿತಿಗೆ: 080 2656 5135, 99001 16499

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT