ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀನಿವಾಸನ್‌, ಶರದ್‌ ಪವಾರ್‌ ಹಾದಿ ಅಂತ್ಯ

ಒಂದು ರಾಜ್ಯಕ್ಕೆ ಒಂದೇ ಮತ ಕಡ್ಡಾಯ, ಬಿಸಿಸಿಐಗೆ ಆರು ತಿಂಗಳು ಕಾಲಾವಕಾಶ
Last Updated 18 ಜುಲೈ 2016, 19:30 IST
ಅಕ್ಷರ ಗಾತ್ರ

ನವದೆಹಲಿ/ಮುಂಬೈ  (ಪಿಟಿಐ): ನಿವೃತ್ತ ನ್ಯಾಯಮೂರ್ತಿ ಆರ್‌.ಎಂ. ಲೋಧಾ  ನೇತೃತ್ವದ ಸಮಿತಿ ಮಾಡಿರುವ  ಶಿಫಾರಸುಗಳನ್ನು ಸುಪ್ರೀಂ ಕೋರ್ಟ್‌ ಸೋಮವಾರ ಒಪ್ಪಿಕೊಂಡಿರುವ ಕಾರಣ  ಕೆಲವು ಕ್ರಿಕೆಟ್‌ ಆಡಳಿತಗಾರರ ಮುಂದಿನ ದಾರಿ ಮುಚ್ಚಿ ಹೋಗಿದೆ.

ಲೋಧಾ ಸಮಿತಿ ಮಾಡಿರುವ ಹಲವು ಶಿಫಾರಸುಗಳಲ್ಲಿ 70 ವರ್ಷ ವಯಸ್ಸಿನ ಮೇಲ್ಪಟ್ಟವರು ಕ್ರಿಕೆಟ್‌ ಆಡಳಿತದಲ್ಲಿ ಇರಬಾರದು ಎನ್ನುವುದು ಕೂಡ ಒಂದು. ಇದರಿಂದಾಗಿ ಮುಂಬೈ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷ ಶರದ್ ಪವಾರ್‌ (75 ವರ್ಷ)   ಮತ್ತು ತಮಿಳುನಾಡು ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷ ಎನ್‌. ಶ್ರೀನಿವಾಸನ್‌ (71 ವರ್ಷ) ಅವರು ಈಗ ಅಧಿಕಾರದಿಂದ ಕೆಳಗಿಳಿಯಬೇಕಾಗಿದೆ.

ಇವರಷ್ಟೇ ಅಲ್ಲದೇ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್‌ (ಹಿಮಾಚಲ ಪ್ರದೇಶ),  ಕಾರ್ಯದರ್ಶಿ ಅಜಯ್‌ ಶಿರ್ಕೆ (ಮಹಾರಾಷ್ಟ್ರ), ಖಜಾಂಚಿ ಅನಿರುದ್ಧ್‌ ಚೌಧರಿ (ಹರಿಯಾಣ) ಮತ್ತು ಜಂಟಿ ಕಾರ್ಯದರ್ಶಿ ಅಮಿತಾಬ್  ಚೌಧರಿ (ಜಾರ್ಖಂಡ್‌) ಅವರು ತಮ್ಮ ರಾಜ್ಯ ಕ್ರಿಕೆಟ್ ಸಂಸ್ಥೆಗಳಲ್ಲಿ ಇನ್ನೂ ಅಧಿಕಾರದಲ್ಲಿದ್ದಾರೆ. ಲೋಧಾ ಸಮಿತಿಯ ಶಿಫಾರಸಿನ ಪ್ರಕಾರ ಒಬ್ಬ ವ್ಯಕ್ತಿ ಕ್ರಿಕೆಟ್‌ ಆಡಳಿತದಲ್ಲಿ ಒಂದಕ್ಕಿಂತ ಹೆಚ್ಚು ಹುದ್ದೆಗಳನ್ನು ಹೊಂದಿರಬಾರದು ಎನ್ನುವ ನಿಯಮವಿದೆ. ಆದ್ದರಿಂದ ಇವರು ಒಂದು ಹುದ್ದೆಗೆ ರಾಜೀನಾಮೆ ನೀಡಬೇಕಿದೆ.

ಸೌರಾಷ್ಟ್ರ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷ ನಿರಂಜನ್‌ ಷಹಾ ಬಿಸಿಸಿಐನಲ್ಲಿ ಹಿಂದೆ ಹಲವು ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಇವರು ಮಂಡಳಿಯಲ್ಲಿ ಜಂಟಿ ಕಾರ್ಯದರ್ಶಿ, ಉಪಾಧ್ಯಕ್ಷ ಮತ್ತು ಖಜಾಂಚಿಯಾಗಿ ಕೆಲಸ ಮಾಡಿದ್ದರು. ಇವರಿಗೆ ಈಗ 72 ವರ್ಷ ವಯಸ್ಸು.

ಸುಪ್ರೀಂ ಕೋರ್ಟ್‌ ಸೂಚನೆಯ ಬಗ್ಗೆ ಪ್ರತಿಕ್ರಿಯಿಸಿರುವ ನಿರಂಜನ್‌ ‘ಬೇಸರವಾಗಿದೆ, ಆದರೆ ಕೋರ್ಟ್‌ ನಿರ್ಧಾರಕ್ಕೆ ಗೌರವ ನೀಡುತ್ತೇನೆ. ಶಿಫಾರಸುಗಳು ಪೂರ್ಣಪ್ರಮಾಣದಲ್ಲಿ ಜಾರಿಗೆ ಬರಲು 18 ತಿಂಗಳು ಬೇಕಾಗುತ್ತದೆ’ ಎಂದು ಹೇಳಿದ್ದಾರೆ. ಆದರೆ ಕೋರ್ಟ್‌ ಆರು ತಿಂಗಳು ಕಾಲವಕಾಶ ನೀಡಿದೆ.

‘ಸುಪ್ರೀಂ ಕೋರ್ಟ್‌  ನೀಡಿರುವ ತೀರ್ಮಾನದ ಬಗ್ಗೆ ವಿವರವಾಗಿ ಅಧ್ಯಯನ ಮಾಡುತ್ತೇವೆ. ಲೋಧಾ ಸಮಿತಿಯ ಶಿಫಾರಸುಗಳ ಬಗ್ಗೆ ವರದಿ ನೀಡುವಂತೆ ನಮ್ಮ ಮಂಡಳಿಯ ನೂತನ ಸಿಇಒ ರಾಹುಲ್‌ ಜೋಹ್ರಿ ಅವರಿಗೆ ತಿಳಿಸಿದ್ದೇವೆ’ ಎಂದು ರಾಜೀವ್‌ ಶುಕ್ಲಾ ಹೇಳಿದ್ದಾರೆ.

ಎರಡು ರಾಜ್ಯಗಳಿಗೆ ಸಂಕಷ್ಟ: ಒಂದೇ ರಾಜ್ಯದಲ್ಲಿ ತಲಾ ಮೂರು ಕ್ರಿಕೆಟ್‌ ಸಂಸ್ಥೆಗಳನ್ನು ಹೊಂದಿರುವ ಮಹಾರಾಷ್ಟ್ರ ಮತ್ತು ಗುಜರಾತ್‌ಗೆ ಈಗ ಸಂಕಷ್ಟ ಎದುರಾಗಿದೆ.

ಗುಜರಾತ್‌ನಲ್ಲಿ ಬರೋಡ, ಸೌರಾಷ್ಟ್ರ ಮತ್ತು ಗುಜರಾತ್‌ ಕ್ರಿಕೆಟ್‌ ಸಂಸ್ಥೆಗಳಿವೆ. ಮಹಾರಾಷ್ಟ್ರದಲ್ಲಿ ಮುಂಬೈ, ವಿದರ್ಭ ಮತ್ತು ಮಹಾರಾಷ್ಟ್ರ ಸಂಸ್ಥೆಗಳಿವೆ. ಮೊದಲಿನ ನಿಯಮದ ಪ್ರಕಾರ ಎಲ್ಲಾ ರಾಜ್ಯ ಸಂಸ್ಥೆಗಳಿಗೆ ಬಿಸಿಸಿಐ ಪದಾಧಿಕಾರಿಗಳ ಚುನಾವಣೆಯಲ್ಲಿ ಮತ ಹಾಕಲು ಅವಕಾಶವಿತ್ತು. ಆದರೆ ಹೊಸ ನಿಯಮದ ಪ್ರಕಾರ ಒಂದು ರಾಜ್ಯದಿಂದ ಒಂದು ಕ್ರಿಕೆಟ್‌ ಸಂಸ್ಥೆಗೆ ಮಾತ್ರ ಮತ ಚಲಾಯಿಸಲು ಸಾಧ್ಯವಿದೆ.

24ರಂದು ಸಭೆ: ‘ಸುಪ್ರೀಂ ಕೋರ್ಟ್‌ ತೀರ್ಮಾನಗಳ ಬಗ್ಗೆ ನಮಗೆ ಇನ್ನೂ ಪೂರ್ಣ ಮಾಹಿತಿ ಲಭ್ಯವಾಗಿಲ್ಲ. ಜುಲೈ 24ರಂದು ಸಂಸ್ಥೆಯ ಮಾಸಿಕ ಸಭೆ ನಡೆಯಲಿದೆ. ಆಗ ಇನ್ನೊಂದು ಸಭೆಯ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ಮುಂಬೈ ಕ್ರಿಕೆಟ್‌ ಸಂಸ್ಥೆಯ ಮೂಲಗಳು ತಿಳಿಸಿವೆ. 

ಘಟನೆಯ ಹಿನ್ನೆಲೆ: 2013ರ ಐಪಿಎಲ್‌ ಟೂರ್ನಿಯ ವೇಳೆ ಬೆಟ್ಟಿಂಗ್ ಮತ್ತು ಸ್ಪಾಟ್‌ ಫಿಕ್ಸಿಂಗ್ ಘಟನೆ ಬಯಲಾಗಿತ್ತು. ಆಗ ರಾಜಸ್ತಾನ ರಾಯಲ್ಸ್‌ ತಂಡದಲ್ಲಿದ್ದ ಮೂವರು ಆಟಗಾರರು ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದು ತನಿಖೆಯಿಂದ ಸಾಬೀತಾಗಿತ್ತು. ಎಸ್‌. ಶ್ರೀಶಾಂತ್‌, ಅಜಿತ್ ಚಾಂಡಿಲಾ ಮತ್ತು ಅಂಕಿತ್ ಚೌಹಾಣ್ ಅವರಿಗೆ ಶಿಕ್ಷೆಯೂ ಆಗಿದೆ.

ಈ ಘಟನೆ ಭಾರತದ ಕ್ರಿಕೆಟ್‌ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತಲ್ಲದೇ, ಬಿಸಿಸಿಐ ವಿರುದ್ಧ ಸುಪ್ರೀಂ ಕೋರ್ಟ್‌ ಗರಂ ಆಗಿತ್ತು. ಆದ್ದರಿಂದ ಆಗ ಕೋರ್ಟ್‌ ಮೊದಲು ಮುಕುಲ್‌ ಮುದ್ಗಲ್‌ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ ಸ್ಪಾಟ್‌ ಫಿಕ್ಸಿಂಗ್ ಘಟನೆಗಳ ಬಗ್ಗೆ ವಿಚಾರಣೆ ಮಾಡುವ ಜವಾಬ್ದಾರಿ ನೀಡಿತ್ತು.
ಮುದ್ಗಲ್‌ ಸಮಿತಿ ಕೆಲವು ತಿಂಗಳು ವಿಚಾರಣೆ ಮಾಡಿ ವರದಿ ಸಲ್ಲಿಸಿದ ಬಳಿಕ ಸುಪ್ರೀಂ ಕೋರ್ಟ್‌ ಬಿಸಿಸಿಐನಲ್ಲಿ ಆಡಳಿತ ಸುಧಾರಣೆಗೆ ಅಗತ್ಯವಿರುವ ಮಾರ್ಗಸೂಚಿಗಳನ್ನು ತಿಳಿಸಬೇಕೆಂದು ಲೋಧಾ ಸಮಿತಿಗೆ ಸೂಚಿಸಿತ್ತು. 

ಪಾರದರ್ಶಕತೆ ಮುಖ್ಯ: ಗೋಯಲ್‌
‘ಸುಪ್ರೀಂ ಕೋರ್ಟ್ ಸೂಚಿಸಿರುವಂತೆ ಎಲ್ಲಾ ಶಿಫಾರಸುಗಳನ್ನು ಬಿಸಿಸಿಐ ಅಳವಡಿಸಿಕೊಳ್ಳಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಮೊದಲು ಪಾರದರ್ಶಕ ಆಡಳಿತಕ್ಕೆ ಒತ್ತು ಕೊಡಬೇಕು’ ಎಂದು ಕೇಂದ್ರ ಕ್ರೀಡಾ ಸಚಿವ ವಿಜಯ್‌ ಗೋಯಲ್‌ ಹೇಳಿದ್ದಾರೆ.

‘ಬಿಸಿಸಿಐ ಆಡಳಿತದ ಅಭಿವೃದ್ಧಿಗೆ ಲೋಧಾ ಸಮಿತಿ ಮತ್ತು ಸುಪ್ರೀಂ ಕೋರ್ಟ್‌ ಏನು ಮಾಡಬೇಕೋ, ಅದೆಲ್ಲವನ್ನೂ  ಮಾಡಿದೆ. ಈಗ ಚೆಂಡು ಕ್ರಿಕೆಟ್‌ ಮಂಡಳಿಯ ಅಂಗಳದಲ್ಲಿದೆ’ ಎಂದೂ ಅವರು ನುಡಿದರು.

ಬಿಸಿಸಿಐ ಅನ್ನು ಮಾಹಿತಿ ಹಕ್ಕು ಕಾಯ್ದೆಯ ಅಡಿ ತರುವ ಬಗ್ಗೆ ಕೇಳಲಾದ ಪ್ರಶ್ನೆಗೆ ‘ಇದರ ಬಗ್ಗೆ ಏನೂ ಪ್ರತಿಕ್ರಿಯಿಸುವುದಿಲ್ಲ’ ಎಂದಷ್ಟೇ ಹೇಳಿದರು.

ಸಭೆ ನಡೆಸಿ ತೀರ್ಮಾನ: ಶುಕ್ಲಾ
‘ಸುಪ್ರೀಂ ಕೋರ್ಟ್‌ ನೀಡಿರುವ ಅದೇಶವನ್ನು ಗೌರವಿಸುತ್ತೇವೆ. ಶಿಫಾರಸುಗಳನ್ನು ಜಾರಿಗೆ ತರುವ ಕುರಿತು ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ಐಪಿಎಲ್‌ ಮುಖ್ಯಸ್ಥ ರಾಜೀವ್ ಶುಕ್ಲಾ ಹೇಳಿದ್ದಾರೆ.

‘ಶಿಫಾರಸುಗಳನ್ನು ಒಪ್ಪಿಕೊಳ್ಳುತ್ತೇವೆ ಎಂದು ಬಿಸಿಸಿಐ ಹೇಳಿರುವುದು ಸಂತೋಷದ ವಿಷಯ. ಭಾರತದ ಕ್ರಿಕೆಟ್‌ ವಲಯದಲ್ಲಿ ಇನ್ನಷ್ಟು ಆರೋಗ್ಯಕರ ಬೆಳವಣಿಯಾಗಲು ಈ ಎಲ್ಲಾ ಘಟನೆಗಳು ನೆರವಾಗಲಿವೆ. ನಮ್ಮ ದೇಶ ಕ್ರಿಕೆಟ್‌ನ ಘನತೆಯೂ ಹೆಚ್ಚಾಗಲಿದೆ’ ಎಂದು ಭಾರತ ತಂಡದ ಮಾಜಿ ನಾಯಕ ಬಿಷನ್‌ ಸಿಂಗ್ ಬೇಡಿ ಟ್ವಿಟ್‌ ಮಾಡಿದ್ದಾರೆ.

ಆಟಗಾರರ ಸಂಘ ಸ್ಥಾಪನೆಗೆ ಅಸ್ತು
ಬಿಸಿಸಿಐನ ಆರ್ಥಿಕ ನೆರವಿನೊಂದಿಗೆ  ಆಟಗಾರರ ಸಂಘವನ್ನು ಸ್ಥಾಪಿಸಬೇಕು ಎಂದು ಲೋಧಾ ಸಮಿತಿ ಮಾಡಿದ್ದ ಶಿಫಾರಸಿಗೆ ಸುಪ್ರೀಂ ಕೋರ್ಟ್‌ ಅಸ್ತು ಎಂದಿದೆ.

‘ಆಟಗಾರರ ಸಂಘ ಕೇಳುವ ಎಲ್ಲಾ ಸೌಲಭ್ಯಗಳನ್ನು ಮಂಡಳಿ ನೀಡಬೇಕು. ಆರ್ಥಿಕ ಸಹಾಯವನ್ನೂ ಒದಗಿಸಬೇಕು. ಸಂಘವನ್ನು ಪ್ರತಿನಿಧಿಸುವ ರಾಜ್ಯ ಸಂಸ್ಥೆಗಳ ಪ್ರತಿನಿಧಿಗಳಿಗೂ ಸೌಲಭ್ಯ ಕೊಡಬೇಕು’ ಎಂದು  ಮುಖ್ಯ ನ್ಯಾಯಮೂರ್ತಿ ಟಿ.ಎಸ್‌. ಠಾಕೂರ್‌ ತಾಕೀತು ಮಾಡಿದ್ದಾರೆ.
ಆಟಗಾರರ ಸಂಘದಲ್ಲಿ ಒಟ್ಟು ಒಂಬತ್ತು ಜನ ಇರಬೇಕು. ಇದರಲ್ಲಿ ಐದು ವಲಯಗಳಿಂದ ಆಯ್ಕೆಯಾದವರು, ಒಬ್ಬರು ಮಹಿಳೆ ಮತ್ತು ಒಬ್ಬರು ನಾಮ ನಿರ್ದೇಶಕ ಸದಸ್ಯರು ಇರಬೇಕೆಂದು ಸಮಿತಿ ಹೇಳಿತ್ತು.

ಲೋಧಾ ಸಮಿತಿ ಶಿಫಾರಸಿನ ನಂತರದ ಹಿನ್ನೋಟ...

2016

* ಜನವರಿ 4: ಬಿಸಿಸಿಐ ಆಡಳಿತದಲ್ಲಿ ಸುಧಾರಣೆ ತರುವ ಸಲುವಾಗಿ ನೇಮಕವಾಗಿದ್ದ ನಿವೃತ್ತ ನ್ಯಾಯಮೂರ್ತಿ ಆರ್. ಎಂ. ಲೋಧಾ ನೇತೃತ್ವದ ಸಮಿತಿಯಿಂದ ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಕೆ.
* ಜ. 22: ಲೋಧಾ ಸಮಿತಿ ಮಾಡಿರುವ ಶಿಫಾರಸುಗಳನ್ನು ಬಿಸಿಸಿಐ ಬೇಗನೆ ಜಾರಿಗೆ ತರಬೇಕೆಂದು ಸೂಚಿಸುವಂತೆ ಬಿಹಾರ ಕ್ರಿಕೆಟ್‌ ಸಂಸ್ಥೆಯಿಂದ ಸುಪ್ರೀಂ ಕೋರ್ಟ್‌ಗೆ ಅರ್ಜಿ.
* ಫೆ. 4: ಲೋಧಾ ಸಮಿತಿಯ ಶಿಫಾರಸುಗಳನ್ನು ಒಪ್ಪಿಕೊಳ್ಳುತ್ತೀರೊ ಅಥವಾ ನಾವೇ ಜಾರಿಗೆ ತರಬೇಕೊ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿತ್ತು.
* ಫೆ. 24: ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ರಾಜಸ್ತಾನ ರಾಯಲ್ಸ್ ತಂಡಗಳನ್ನು ಎರಡು ವರ್ಷ ಅಮಾನತು ಮಾಡಬೇಕೆಂದು ಸಮಿತಿ ಮಾಡಿದ್ದ ಶಿಫಾರಸನ್ನು ಪ್ರಶ್ನಿಸಿ  ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಸಮ್ಮತಿ
* ಮಾರ್ಚ್‌ 3: ಸಮಿತಿಯ ಶಿಫಾರಸುಗಳನ್ನು ಜಾರಿಗೆ ತರದ ಬಿಸಿಸಿಐಗೆ ಸುಪ್ರೀಂ ಕೋರ್ಟ್‌ ಚಾಟಿ. ರಾಜ್ಯ ಕ್ರಿಕೆಟ್‌ ಸಂಸ್ಥೆಗಳಿಗೆ ಅನುದಾನ ಹಂಚುವಾಗ ಆಗುತ್ತಿರುವ ತಾರತಮ್ಯದ ಬಗ್ಗೆ ಅಸಮಾಧಾನ.
* ಏ. 25: ಕ್ರಿಕೆಟ್‌ ಅನ್ನು ಬಿಸಿಸಿಐ  ವಾಣಿಜ್ಯ ವ್ಯವಹಾರವಾಗಿಸುವ ಮೂಲಕ ಕೆಲವೇ ಕೆಲವರು ಏಕಸ್ವಾಮ್ಯ ಮಾಡಿಕೊಂಡರೆ, ಮಹೇಂದ್ರ ಸಿಂಗ್ ದೋನಿ, ವಿರಾಟ್‌ ಕೊಹ್ಲಿ ಅವರಂತೆ ಆಗಬೇಕೆನ್ನುವ ಆಸೆ ಹೊತ್ತ ಸಾವಿರಾರು ಯುವ ಆಟಗಾರರ ಗತಿ ಏನು?  ಇದರಿಂದ ಅಂಥಹ ಆಟಗಾರರಿಗೆ ನಿರಾಸೆಯಾಗುವುದಿಲ್ಲವೆ ಎಂದು ಸುಪ್ರೀಂ ಕೋರ್ಟ್‌ನಿಂದ ಮತ್ತೆ ಚಾಟಿ
* ಮೇ 2: ಲೋಧಾ ಸಮಿತಿಯ ಶಿಫಾರಸುಗಳನ್ನು ಎಲ್ಲಾ ರಾಜ್ಯ ಕ್ರಿಕೆಟ್ ಸಂಸ್ಥೆಗಳು ಅಳವಡಿಸಿಕೊಳ್ಳಬೇಕು:  ಸುಪ್ರೀಂ ಕೋರ್ಟ್‌
* ಮೇ 3: ಬಿಸಿಸಿಐನಲ್ಲಿ ಪಾರದರ್ಶಕತೆ, ಸರಿಯಾದ ಲೆಕ್ಕಪತ್ರ ನಿರ್ವಹಣೆಯೇ ಇಲ್ಲ. ಇದನ್ನು ಸರಿಪಡಿಸಬೇಕೆಂದು ಸುಪ್ರೀಂ ಕೋರ್ಟ್‌ನಿಂದ ಚಾಟಿ.
* ಮೇ 5: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರರಾದ  ಬಿಷನ್‌ ಸಿಂಗ್ ಬೇಡಿ ಮತ್ತು ಕೀರ್ತಿ ಆಜಾದ್‌ ಅವರಿಂದ ಲೋಧಾ ಶಿಫಾರಸುಗಳಿಗೆ ಬೆಂಬಲ
* ಮೇ 18: ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ  ಅನುರಾಗ್ ಠಾಕೂರ್ ಮೇಲೆ ಭ್ರಷ್ಟಾಚಾರ ಆರೋಪವಿದೆ. ಇಂಥ ಕಳಂಕಿತ ವ್ಯಕ್ತಿಗೆ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅವಕಾಶ ಕೊಡಬಾರದು ಎಂದು ಸಿಎಬಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿತ್ತು.
* ಜೂನ್‌ 30:  ಲೋಧಾ ಸಮಿತಿಯ ಶಿಫಾರಸುಗಳ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಅಂತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT