ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾ: ಅಸಮಾಧಾನದ ಹೊಗೆ

ವಿದೇಶ ವಿದ್ಯಮಾನ
Last Updated 31 ಮೇ 2015, 19:30 IST
ಅಕ್ಷರ ಗಾತ್ರ

ಶ್ರೀಲಂಕಾದ ಉತ್ತರ ಪ್ರಾಂತ್ಯದಲ್ಲಿ ನೆಲೆಸಿರುವ ತಮಿಳರಲ್ಲಿ ಅಸಮಾಧಾನ ಹೊಗೆಯಾಡುತ್ತಿದ್ದು, ಯಾವ ಕ್ಷಣದಲ್ಲಿ ಏನಾಗುತ್ತದೊ ಎಂಬ ಆತಂಕದ ಸ್ಥಿತಿ ಇದೆ.

ಸಿಂಹಳಿಯರು ಮತ್ತು ತಮಿಳರ ನಡುವಿನ ಆಂತರಿಕ ಕದನ 2009ರಲ್ಲಿ ಅಂತ್ಯವಾದ ಬಳಿಕ ಉತ್ತರ ಮತ್ತು ಪೂರ್ವ ಪ್ರಾಂತ್ಯದಲ್ಲಿ ಶಾಂತಿ ನೆಲೆಸಿತ್ತು. ಆದರೆ, ಆ ಸಂದರ್ಭದಲ್ಲಿ ನೀಡಿದ್ದ ಭರವಸೆಗಳನ್ನು  ಸರ್ಕಾರ ಇದುವರೆಗೂ ಈಡೇರಿಸದ ಕಾರಣ ತಮಿಳರು ಮತ್ತೆ ಸಂಘರ್ಷದ ಹಾದಿ ಹಿಡಿಯಬಹುದು ಎಂಬ ಮಾತು ಕೇಳಿಬರುತ್ತಿದೆ.

ಉಭಯ ಪ್ರಾಂತ್ಯಗಳಲ್ಲಿ ಮೇಲ್ನೋಟಕ್ಕೆ ಶಾಂತಿ ನೆಲೆಸಿದ್ದರೂ, ಸಿಂಹಳಿಯರು ಮತ್ತು ತಮಿಳರ ನಡುವೆ ಸಾಮರಸ್ಯ ಇಲ್ಲ. ಮಸೀದಿಗಳ ಮೇಲೆ ದಾಳಿ ಸೇರಿದಂತೆ ಅಲ್ಲ್ಲಲ್ಲಿ ಸಣ್ಣಪುಟ್ಟ ಅಹಿತಕರ ಘಟನೆಗಳು ನಡೆಯುತ್ತಲೇ ಇವೆ. ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಂಡಿರುವ ಅಸಮಾಧಾನ  ಮುಂದಿನ ದಿನಗಳಲ್ಲಿ ಭುಗಿಲೆದ್ದು ಎಲ್‌ಟಿಟಿಇ ಸಂಘಟನೆ ಮರು ಹುಟ್ಟುಪಡೆಯಬಹುದು ಎಂಬ ಹೆದರಿಕೆ ಅಂತೂ ಇದ್ದೇ ಇದೆ.

ಆಂತರಿಕ ಕದನ ಅಂತ್ಯವಾಗಿ ಇಷ್ಟು ವರ್ಷವಾದರೂ  ನಾಲ್ಕು ಲಕ್ಷಕ್ಕೂ ಅಧಿಕ ನಿರಾಶ್ರಿತರಿಗೆ ಇದುವರೆಗೂ ಮೂಲ ಸ್ಥಾನಗಳಿಗೆ ಹಿಂತಿರುಗಲು  ಸಾಧ್ಯವಾಗಿಲ್ಲ.  90 ಸಾವಿರ ಮಂದಿ ಸೂರಿಲ್ಲದೆ ಪರದಾಡುತ್ತಿದ್ದು, ಸರ್ಕಾರದ ವಿರುದ್ಧ ತಿರುಗಿಬೀಳಲು ಅವರೆಲ್ಲ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.  ಹೀಗಾಗಿ ಮುಂದೆ ಏನಾಗುತ್ತದೋ ಎಂಬ ಭಯ ಉಭಯ ಪ್ರಾಂತ್ಯಗಳ ಜನರಲ್ಲಿ ಇದೆ.

ನಾಲ್ಕು ತಿಂಗಳ ಹಿಂದೆಯಷ್ಟೆ ಅಧಿಕಾರ ಕಳೆದುಕೊಂಡಿರುವ ಶ್ರೀಲಂಕಾದ ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರು ನೀಡಿರುವ ಹೇಳಿಕೆಗಳು ಇದಕ್ಕೆ ಮತ್ತಷ್ಟು ಪುಷ್ಟಿ ನೀಡುತ್ತವೆ.

ಪ್ರತ್ಯೇಕ ತಮಿಳು ರಾಷ್ಟ್ರಕ್ಕಾಗಿ ಹೋರಾಟ ನಡೆಸಿದ್ದ ಎಲ್‌ಟಿಟಿಇ ಮತ್ತೆ ಸಂಘಟಿತಗೊಂಡು ಯುದ್ಧಕ್ಕೆ  ಮುಂದಾಗುವ ಅಪಾಯ ಇದೆ ಎಂದು ಅವರು ಬಹಿರಂಗವಾಗಿಯೇ ಹೇಳಿದ್ದಾರೆ. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದರೆ ಉತ್ತರ ಪ್ರಾಂತ್ಯದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಈಗಲೂ ಜೀವಂತ: ಶ್ರೀಲಂಕಾದ ಉತ್ತರ ಪ್ರಾಂತ್ಯದಲ್ಲಿ ತಮಿಳರ ಪ್ರಾಬಲ್ಯವಿದ್ದು, ಅವರ ಮೇಲೆ ಘೋಷಿಸಿದ್ದ ಯುದ್ಧ ಅಂತ್ಯವಾಗಿ ಆರು ವರ್ಷವಾಗಿದೆ. ಆದರೆ, ಅವರಿಗೆ ಸ್ಥಳೀಯವಾಗಿ ಅಧಿಕಾರ ನೀಡಬೇಕು ಎಂಬ ಬೇಡಿಕೆ ಈಗಲೂ ಜೀವಂತವಾಗಿದೆ.

ತಮಿಳರಿಗೆ ಪ್ರಜಾಪ್ರಭುತ್ವಕ್ಕೆ ಅನುಗುಣವಾಗಿ ಯಾವುದೇ ಅಧಿಕಾರ ನೀಡಿಲ್ಲ.  ಯುದ್ಧದಲ್ಲಿ ಎಲ್ಲವನ್ನೂ ಕಳೆದುಕೊಂಡು ನಿರಾಶ್ರಿತರಾದವರಿಗೆ ಪುನರ್ವಸತಿ ಕಲ್ಪಿಸಿಲ್ಲ.   ಯುದ್ಧ ಅಂತ್ಯವಾದಾಗ ನೀಡಿದ್ದ ಯಾವ ಭರವಸೆಗಳೂ ಈಡೇರಿಲ್ಲ. ಇದರಿಂದಾಗಿ ತಮಿಳರು ಒಳಗೊಳಗೇ ಕುದಿಯುತ್ತಿದ್ದು, ಯಾವಾಗ ಬೇಕಾದರೂ ಅಸಮಾಧಾನ ಸ್ಫೋಟಗೊಳ್ಳಬಹುದು. ಎಲ್‌ಟಿಟಿಇ ಸಂಘಟನೆ ಮತ್ತೆ ಸಕ್ರಿಯವಾಗಬಹುದು ಎಂಬ ಸಂದೇಹ ಬಲಗೊಳ್ಳುತ್ತಿದೆ.

ಉತ್ತರ ಪ್ರಾಂತ್ಯದಲ್ಲಿ ಅಧಿಕಾರ ವಿಕೇಂದ್ರೀಕರಣ ಆಗಬೇಕು. ತಮಿಳರಿಗೆ ಅಧಿಕಾರ ಕೊಡಬೇಕು. ಅಲ್ಲಿಂದ ಸೇನೆಯನ್ನು ವಾಪಸ್‌ ಕರೆಸಿಕೊಳ್ಳಬೇಕು. ನಾಶವಾಗಿರುವ ಪ್ರದೇಶಗಳನ್ನು ಪುನರ್‌ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿ ತಮಿಳರು ಹಲವು ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದಾರೆ. 

ಶ್ರೀಲಂಕಾದ ನೂತನ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಚುನಾವಣೆ ಸಂದರ್ಭದಲ್ಲಿ ತಮಿಳರಿಗೆ ಹೆಚ್ಚಿನ ಸ್ವಾತಂತ್ರ್ಯ, ಉತ್ತರ ಪ್ರಾಂತ್ಯದಲ್ಲಿ ಅಧಿಕಾರ ವಿಕೇಂದ್ರೀಕರಣದ ಬಗ್ಗೆ ಮಾತನಾಡಿದ್ದರು. ಆದರೆ, ಅಧಿಕಾರಕ್ಕೆ ಬಂದು ನಾಲ್ಕು ತಿಂಗಳಾದರೂ ಈ ಬಗ್ಗೆ ಚಕಾರ ಎತ್ತಿಲ್ಲ.

ಉತ್ತರ ಮತ್ತು ಪೂರ್ವ ಪ್ರಾಂತ್ಯದ ಜನರ ನಡುವೆ ಸಾಮರಸ್ಯ ಮೂಡಿಸುವ, ಸಿಂಹಳಿಯರು ಮತ್ತು ತಮಿಳರ ನಡುವೆ ಇರುವ ಅಸಮಾಧಾನವನ್ನು ಹೋಗಲಾಡಿಸಲು ಅಧ್ಯಕ್ಷರಿಗೆ ಮನಸ್ಸಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.

ಅಮೆರಿಕ ಮೂಲದ ಓಕ್ಲ್ಯಾಂಡ್ ಸಂಸ್ಥೆ ಈಚೆಗೆ ನಡೆಸಿರುವ  ಅಧ್ಯಯನ ವರದಿಯಲ್ಲಿ ಈ ಸಂಗತಿಗಳನ್ನು ಪ್ರಸ್ತಾಪಿಸಿದ್ದು, ಸರ್ಕಾರದ ನಿಲುವನ್ನು ಕಟುವಾಗಿ ಟೀಕಿಸಲಾಗಿದೆ.

ಸರ್ಕಾರವು ಉತ್ತರ ಪ್ರಾಂತ್ಯದಿಂದ ಸೇನೆಯನ್ನು ವಾಪಸ್‌ ಕರೆಸಿಕೊಳ್ಳದೆ ಹಳೆಯ ನಿಲುವಿಗೆ ಅಂಟಿಕೊಂಡಿರುವುದು ಸರಿಯಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕಾಳಜಿ ಇಲ್ಲ: ತಮಿಳರು ಅಥವಾ ಅಲ್ಪಸಂಖ್ಯಾತರಿಗೆ ಸಹಾಯ ಮಾಡುವ ಇಚ್ಛಾಶಕ್ತಿ  ಶ್ರೀಲಂಕಾದ ಕೇಂದ್ರ  ಸರ್ಕಾರಕ್ಕೆ ಇಲ್ಲ ಎಂದು ಉತ್ತರ ಪ್ರಾಂತ್ಯದ ಮುಖ್ಯಮಂತ್ರಿ ಸಿ.ವಿ. ವಿಜ್ಞೇಶ್ವರನ್‌ ಅವರು ನೇರವಾಗಿ ಆರೋಪ ಮಾಡಿದ್ದಾರೆ.

ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ ಎಂದು ಓಕ್ಲ್ಯಾಂಡ್ ಸಂಸ್ಥೆಯ ವರದಿಯನ್ನು ಉಲ್ಲೇಖಿಸಿ ಮಾತನಾಡಿರುವ ಅವರು, ತಮಿಳರು, ಅಲ್ಪಸಂಖ್ಯಾತರು ಒತ್ತಡ ಹೇರದ ಹೊರತು ಕೇಂದ್ರವು ಏನನ್ನೂ ಮಾಡುವುದಿಲ್ಲ.  ಅಂತರರಾಷ್ಟ್ರಿಯ ಮಟ್ಟದಲ್ಲೂ ಒತ್ತಡ ಹೇರುವ ಅಗತ್ಯವಿದೆ ಎಂದು  ಪ್ರತಿಪಾದಿಸಿದ್ದಾರೆ.

ಫಲವತ್ತಾದ ಭೂಮಿ, ಪಂಚತಾರಾ ಹೋಟೆಲ್‌ಗಳ ಮೇಲೆ ಈಗಲೂ ಸೇನೆಯ ಹಿಡಿತವಿದೆ. ಅನುಪಯುಕ್ತ ಭೂಮಿಯನ್ನು ಮಾತ್ರ ಬಿಟ್ಟುಕೊಡಲಾಗಿದೆ ಎಂಬ ಸಂಗತಿಯನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಕುರಿತು ಮಾತನಾಡಿರುವ ವಿಜ್ಞೇಶ್ವರನ್‌, ಅಧ್ಯಕ್ಷ ಸಿರಿಸೇನಾ ಅವರು ರಾಜಕೀಯ ಇಚ್ಛಾಶಕ್ತಿ  ಪ್ರದರ್ಶಿಸಿ ಸಿಂಹಳಿಯರು ಮತ್ತು ತಮಿಳರ ನಡುವೆ ಸಾಮರಸ್ಯ ಮೂಡಿಸಬೇಕು ಎಂದು ಒತ್ತಿ ಹೇಳಿದ್ದಾರೆ.

ದೊರೆಯದ ಬೆಂಬಲ: ಉತ್ತರ ಪ್ರಾಂತ್ಯದಲ್ಲಿ ತಮಿಳರು ಬಹುಸಂಖ್ಯಾತರಾಗಿದ್ದು, ಬೌದ್ಧರು ಮತ್ತು ಮುಸಲ್ಮಾನರು ಅಲ್ಪಸಂಖ್ಯಾತರಾಗಿದ್ದಾರೆ.

ಪ್ರತ್ಯೇಕ ತಮಿಳು ರಾಷ್ಟ್ರಕ್ಕಾಗಿ ಹಿಂದೆ ಹೋರಾಟ ನಡೆದಾಗ ಮುಸಲ್ಮಾನರು ಮತ್ತು ಬೌದ್ಧರು ತಮಿಳರಿಗೆ ಬೆಂಬಲ ನೀಡಿರಲಿಲ್ಲ.  ತಮಿಳರು ಸರ್ವಾಧಿಕಾರಿಗಳ ಹಾಗೆ  ವರ್ತಿಸುತ್ತಾರೆ. ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ ಎಂಬುದು ಅಲ್ಪಸಂಖ್ಯಾತರ ಆರೋಪವಾಗಿತ್ತು.

ತಮಿಳರು, ಮುಸಲ್ಮಾನರು ಮತ್ತು ಬೌದ್ಧರ ನಡುವಿನ ಒಡಕಿನ ಲಾಭ ಪಡೆದ ಸಿಂಹಳಿಯ ಸೈನಿಕರು ಸುಲಭವಾಗಿ ಎಲ್‌ಟಿಟಿಇಯನ್ನು ಮಣಿಸಿದ್ದರು. ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಕಾರಣ ತಮಿಳರಿಗೂ  ಹಿನ್ನಡೆಯಾಗಿತ್ತು.
ಪ್ರಭಾಕರನ್‌ ಹತ್ಯೆಯ ನಂತರ ಕ್ರಮೇಣವಾಗಿ ಎಲ್‌ಟಿಟಿಇ ಧ್ವನಿ ಕ್ಷೀಣಿಸಿತು. 2006ರ ನಂತರ ದೊಡ್ಡ ಪ್ರಮಾಣದಲ್ಲಿ ಹೋರಾಟ ಮಾಡಿದ ಸೇನೆಯು ಶ್ರೀಲಂಕಾದ ಪೂರ್ವ ಭಾಗದಿಂದ ತಮಿಳರನ್ನು ಹೊರ ಹಾಕುವಲ್ಲಿ ಯಶಸ್ವಿಯಾಗಿತ್ತು.

ಈಡೇರದ ಭರವಸೆ: ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀಲಂಕಾ ಪ್ರವಾಸ ಸಂದರ್ಭದಲ್ಲಿ ತಮಿಳರೇ ಹೆಚ್ಚಾಗಿರುವ ಜಾಫ್ನಾಗೆ ಭೇಟಿ ನೀಡಿದಾಗ ಅಲ್ಲಿರುವ ತಮಿಳರಿಗೆ ಕೇಂದ್ರ ಸರ್ಕಾರದ ನೆರವಿನಿಂದ 27 ಸಾವಿರ ಮನೆಗಳನ್ನು ನಿರ್ಮಿಸಿಕೊಡುವ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಆ ನಿಟ್ಟಿನಲ್ಲಿ ಯಾವುದೇ ಪ್ರಗತಿಯಾಗಿಲ್ಲ.

‘ಜಾಫ್ನಾಗೆ ಭೇಟಿ ನೀಡಿರುವುದು ನನ್ನ ಸೌಭಾಗ್ಯ. ನಿರಾಶ್ರಿತರಿಗೆ ಸೂರು ಕಲ್ಪಿಸಲು ಬದ್ಧರಾಗಿದ್ದೇವೆ. ಶ್ರೀಲಂಕಾ ಸರ್ಕಾರದ ಸಹಕಾರದೊಂದಿಗೆ ಮನೆಗಳನ್ನು ನಿರ್ಮಾಣ ಮಾಡುತ್ತೇವೆ’ ಎಂದು ನೀಡಿದ್ದ ಭರವಸೆ ಸದ್ಯಕ್ಕಂತೂ ಭರವಸೆಯಾಗಿಯೇ ಉಳಿದಿದೆ.

ಹೋರಾಟದ ಹಾದಿ...
ಮೂರು ದಶಕಗಳಿಗೂ ಹೆಚ್ಚು ಕಾಲ ಎಲ್‌ಟಿಟಿಇ ನಡೆಸಿದ ಹೋರಾಟ 2009ರಲ್ಲಿ ಅಂತ್ಯವಾಯಿತು. ಸಿಂಹಳಿಯರ ಸೇನೆ ಎಲ್‌ಟಿಟಿಇಯನ್ನು ಮಣಿಸುವಲ್ಲಿ ಯಶಸ್ವಿಯಾಯಿತು. ಈ ಹೋರಾಟದಲ್ಲಿ ಕನಿಷ್ಠ ಒಂದು ಲಕ್ಷ ಜನ ಸಾವನ್ನಪ್ಪಿದ್ದರು.

1983ರಲ್ಲಿ ಸ್ವಾತಂತ್ರ ತಮಿಳ್‌ ಈಳಂ ಹೆಸರಿನಲ್ಲಿ ಪ್ರತ್ಯೇಕ ತಮಿಳು ರಾಷ್ಟ್ರಕ್ಕಾಗಿ ಆಗ್ರಹಿಸಿ ಹೋರಾಟ ಶುರುವಾಗಿತ್ತು. ತಮಿಳರನ್ನು ಮಣಿಸಲು 1987ರಿಂದ 90ರವರೆಗೆ ಭಾರತವು ಶ್ರೀಲಂಕಾಗೆ ಸೇನೆಯನ್ನು ನಿಯೋಜಿಸಿತ್ತು. ಆಗಿನ ಪ್ರಧಾನಿ ದಿವಂಗತ ರಾಜೀವ್‌ಗಾಂಧಿ ಅವರು ತೆಗೆದುಕೊಂಡ ಈ ತೀರ್ಮಾನಕ್ಕೆ ಎಲ್‌ಟಿಟಿಇಯಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT