ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ ! ಎಡವಿಬಿದ್ದೆ...

Last Updated 24 ಜುಲೈ 2014, 19:30 IST
ಅಕ್ಷರ ಗಾತ್ರ

‘ಮಾಸ್ಟರ್ ಮೈಂಡ್‌’ ಸಿದ್ಧತೆಯಲ್ಲಿ ನಿಮ್ಮ ಮೈಂಡ್ ಎಷ್ಟರ ಮಟ್ಟಿಗೆ ಭಿನ್ನವಾಗಿ ಯೋಚಿಸಿದೆ?
ಮೊದಲ ಬಾರಿ ನಾನು ಚಿತ್ರ ನಿರ್ಮಾಣಕ್ಕಾಗಿ ಭಾರತದ ಗಡಿದಾಟಿ ಬ್ಯಾಂಕಾಕ್‌ಗೆ ಹೋಗಿದ್ದೇನೆ. ಈ ಸಿನಿಮಾವನ್ನು ಕನ್ನಡದಿಂದ ಬೇರೆ ಭಾಷೆಗೂ ಸುಲಭವಾಗಿ ತೆಗೆದುಕೊಂಡು ಹೋಗಬಹುದು. ಆರಂಭದಲ್ಲಿ ಸಂಭಾಷಣೆ ತುಂಬಾ ಕಡಿಮೆ. ಕನ್ನಡ ಬಜೆಟ್‌ನಲ್ಲಿ ಒಂದು ಇಂಗ್ಲಿಷ್ ಸಿನಿಮಾ ಮಾಡಿದ್ದೇನೆ ಎನ್ನುವ ತೃಪ್ತಿ ಇದೆ. ಹಾಲಿವುಡ್ ಸಿನಿಮಾ ರೀತಿ ‘ಮಾಸ್ಟರ್ ಮೈಂಡ್’ ಕಾಣುತ್ತದೆ.

ಟೈಟಲ್‌ ಕೇಳಿದರೆ ಬುದ್ಧಿವಂತಿಕೆ ಜತೆ ಕ್ರೈಂ ಲೋಕವೂ ಮೇಳೈಸಿದೆ ಎನಿಸುತ್ತದೆ?
ಶೀರ್ಷಿಕೆಗೆ ತಕ್ಕಂತೆ ಸಿನಿಮಾ ಮಾಡಲು ಸಾಧ್ಯವಿಲ್ಲ. ಆದರೆ ಟೈಟಲ್ ಕ್ಯಾಚಿ ಆಗಿರಬೇಕು ಅಲ್ಲವೇ. ಪ್ರತಿಯೊಬ್ಬರದ್ದು ಮಾಸ್ಟರ್ ಮೈಂಡ್. ಸಣ್ಣ ಕಾರ್ಖಾನೆಯಲ್ಲಿ ಕೆಲಸ ಮಾಡುವ ವ್ಯಕ್ತಿ ಮಾಲೀಕನಾಗಬೇಕು ಎನ್ನುತ್ತಾನೆ. ಅದೂ ಮಾಸ್ಟರ್ ಮೈಂಡ್‌. ಈ ರೀತಿಯ ಥಾಟ್‌ಗಳೇ ‘ಮಾಸ್ಟರ್ ಮೈಂಡ್’ ಸಿನಿಮಾದಲ್ಲಿ ಕಾಣಿಸುವುದು. ಸಿನಿಮಾದಲ್ಲಿ ಮಾಸ್ಟರ್ ಮೈಂಡ್ ಎನ್ನುವುದು ನಿರ್ಮಾಣ ಕಂಪೆನಿಯ ಹೆಸರು. ಅಲ್ಲಿನ ‘ಆಟ’ಗಳಲ್ಲಿ ಎಲ್ಲವೂ ಇರುತ್ತದೆ. 

ಸ್ಟುಡಿಯೊ ನಿರ್ಮಾಣದಲ್ಲಿ ತೊಡಗಿಕೊಂಡಿದ್ದೀರಂತೆ?
ಚಿತ್ರವೊಂದರ ರೀ ರೆಕಾರ್ಡಿಂಗ್, ಡಬ್ಬಿಂಗ್ ಸೇರಿದಂತೆ ಎಲ್ಲವೂ ಒಂದೇ ಕಡೆ ಸಾಧ್ಯವಾಗುವಂತಹ ಸ್ಟುಡಿಯೊ ನಿರ್ಮಾಣ ಮಾಡುತ್ತಿದ್ದೇನೆ. ಅಲ್ಲಿನ ಕೆಲಸಗಳು ಶೇ 80ರಷ್ಟು ಮುಗಿದಿವೆ. ನನ್ನ 21 ವರುಷಗಳ ವೃತ್ತಿ ಜೀವನದಲ್ಲಿ ಶಾರ್ಟ್‌ಕಟ್‌ ಎಲ್ಲೂ ಉಪಯೋಗಿಸಿಲ್ಲ. ನನ್ನ ಹಾರ್ಡ್‌ ಕೆಲಸಗಳ ಅನುಭವಗಳೆಲ್ಲವನ್ನು ಇಲ್ಲಿ ಧಾರೆ ಎರೆದಿದ್ದೇನೆ.

ಆರಂಭದಲ್ಲಿ ನಟನಾಗಿ ಭರವಸೆ ಮೂಡಿಸಿದ್ದ ನೀವು ನಂತರದ ದಿನಗಳಲ್ಲಿ ಏಕೆ ಆ ಭರವಸೆಗಳನ್ನು ಉಳಿಸಿಕೊಳ್ಳಲಿಲ್ಲ. ಕಥೆಗಳ ಆಯ್ಕೆಯಲ್ಲಿ ಎಡವಟ್ಟಾಯಿತೇ?
‘ಶ್’ ಸಿನಿಮಾ ನಂತರ ನಾನು ಖಂಡಿತಾ ಎಡವಿದೆ. ಒಂದು ಚಿತ್ರದ ಗೆಲುವಿನ ನಂತರ ಆ ಚಿತ್ರದ ನಾಯಕನ ಬಗ್ಗೆ ಜನರಲ್ಲಿ ನಿರೀಕ್ಷೆಗಳು ಅಪಾರವಾಗುತ್ತವೆ. ನಾಯಕ ಒಂದು ಪ್ರಾಡಕ್ಟ್‌ ಆಗುತ್ತಾನೆ. ಅವನ ಮೇಲೆ ಬಂಡವಾಳ ತೊಡಗಿಸಲು ಹಲವರು ಮುಂದೆ ಬರುತ್ತಾರೆ. ‘ಶ್’ ಗೆದ್ದ ನಂತರ ನನ್ನ ವೈಯಕ್ತಿಕ ಕಮಿಟ್‌ಮೆಂಟ್‌ಗಳಲ್ಲಿ ಪೂರ್ಣ ತೊಡಗಿದೆ. ಹಿಂದೆಯೇ ಮತ್ತೊಂದು ಚಿತ್ರ ಮಾಡಲು ಸಾಧ್ಯವಾಗಲಿಲ್ಲ.

ಅಲ್ಲೇ ನಾನು ಹೆಜ್ಜೆ ತಪ್ಪಿದ್ದು. ನನ್ನ ಸಿನಿಮಾ ಗಣಿತ ಏರುಪೇರಾಯಿತು. ಆ ನಂತರ ‘ಅನುರಾಗ ಸಂಗಮ’ ಬಂದಿತು. ನಂತರ ಕಥೆ ಆಯ್ಕೆ ಮಾಡಿಕೊಳ್ಳುವಲ್ಲಿ ಎಡವಿದೆ. ನನ್ನ ಚಿತ್ರಗಳನ್ನು ನಮ್ಮ ಮನೆಯವರೇ ನೋಡಿ ಮತ್ತಷ್ಟು ಚೆನ್ನಾಗಿ ಮಾಡಬಹುದಿತ್ತು ಎಂದರು.

ನಿಮಗೆ ನಿರ್ದೇಶಕನಾಗ ಬೇಕು ಎನಿಸಿದ್ದು ಏಕೆ?
ಈ ವಿಷಯದದಲ್ಲಿ ರವಿಚಂದ್ರನ್ ಅವರಿಗೆ ಕೃತಜ್ಞತೆ ಸಲ್ಲಿಸಬೇಕು. ತಮಿಳಿನಲ್ಲಿ ಕೋಕಿಲಾ ಮೋಹನ್ ಅಭಿನಯದ ‘ಪರಿಣವಿನ್ ಮುದಗಲೈ’ ಚಿತ್ರವನ್ನು ರೀಮೇಕ್ ಮಾಡಬೇಕು ಎಂದು ಸಜ್ಜಾದೆವು. ರವಿಚಂದ್ರನ್‌ ಅವರನ್ನು ನಾಯಕನಾಗಿಯೂ, ರಾಜೇಂದ್ರಬಾಬು ಅವರನ್ನು ನಿರ್ದೇಶಕರನ್ನಾಗಿಯೂ  ಆಯ್ಕೆ ಮಾಡಿಕೊಂಡೆ. ಆದರೆ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳಿಂದ ನಿರ್ಮಾಪಕ ಎನ್. ಕುಮಾರ್ ಅವರಿಗೆ ನಾನು ಆ ಚಿತ್ರದ ಹಕ್ಕುಗಳನ್ನು ಮಾರಾಟ ಮಾಡಿದೆ. ರಾಜೇಂದ್ರಬಾಬು ಅವರು ಈ ಸಿನಿಮಾ ಒಪ್ಪಿಕೊಳ್ಳದಿದ್ದಾಗ ಕಥೆಯನ್ನು ಸ್ವಲ್ಪ ಬದಲಾವಣೆ ಮಾಡಿಕೊಂಡು ರವಿಚಂದ್ರನ್ ಅವರಿಗೆ ಹೇಳಿದೆ. ಚೆನ್ನಾಗಿದೆ, ನೀನೇ ನಿರ್ದೇಶಿಸು ಎಂದರು. ಆ ಮಾತುಗಳೇ ನನಗೆ ನಿರ್ದೇಶನದತ್ತ ಮುಖಮಾಡಲು ಸ್ಫೂರ್ತಿ.

ಸಿನಿಮಾ ನಿರ್ಮಾಣದಲ್ಲಿ ತೃಪ್ತಿ ಇದೆಯೇ?
ಎಲ್ಲ ಚಿತ್ರಗಳು ದುಡ್ಡು ತಂದುಕೊಟ್ಟಿವೆ. ತೃಪ್ತಿಯ ಜತೆಗೆ ಭಯವೂ ಇದೆ. ಮೂರು ತಿಂಗಳಿಗೆ ಒಂದು ಸಿನಿಮಾವನ್ನು ನಾನು ಮಾಡಿಲ್ಲ. ಮಾಡಿದ ಎಲ್ಲ ಚಿತ್ರಗಳೂ ನನ್ನನ್ನು ಕಾಪಾಡಿಕೊಂಡು ಬಂದಿವೆ. ಬಂಡವಾಳ ಹೂಡಿ ಎರಡು ಕಾಸು ಸಂಪಾದಿಸಬೇಕು ಎಂದು ನಿರೀಕ್ಷಿಸುವುದು ಸಹಜ.
    
‘ಸತ್ಯ’ ಚಿತ್ರವನ್ನು ತೆಲುಗಿನಲ್ಲಿ ಮತ್ತೆ ನಿರ್ಮಿಸುತ್ತಿದ್ದೀರಂತೆ?
ಹೌದು. ಅಲ್ಲಿ ‘ಶಾಸ್ತ್ರಿ’ ಹೆಸರಿನಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಒಂದಷ್ಟು ದೃಶ್ಯಗಳನ್ನು ಕಾಶ್ಮೀರದಲ್ಲಿ ಚಿತ್ರೀಕರಿಸಲಾಗುತ್ತಿದೆ.

ಚಿತ್ರರಂಗದಲ್ಲಿ ನಿಮ್ಮನ್ನು ನೀವು ಹೇಗೆ ಗುರ್ತಿಸಿಕೊಳ್ಳಲು ಬಯಸುವಿರಿ?
ನಾನು ಕಿಂಗ್‌ಮೇಕರ್ ಆಗಿ ಗುರ್ತಿಸಿಕೊಳ್ಳುವೆ. ನನ್ನ ಬ್ಯಾನರ್‌ನಲ್ಲಿ ಐದು ಚಿತ್ರಗಳು ಬಂದಿವೆ. ಹೊಸಬರಿಗೆ ಅವಕಾಶ ಮಾಡಿಕೊಟ್ಟಿದ್ದೇನೆ. ನನಗೆ ಗಾಡ್ ಫಾದರ್/ಮದರ್ ಇಲ್ಲ. ಟ್ಯಾಲೆಂಟ್ ಇದ್ದವರಿಗಾಗಿ ಯಾವ ರಿಸ್ಕ್‌ ತೆಗೆದುಕೊಳ್ಳಲೂ ನಾನು ಸಿದ್ಧ. ‘ಮಾಸ್ಟರ್‌ ಮೈಂಡ್‌’ನಲ್ಲೂ ಹೊಸದಾಗಿ ಚಿತ್ರ ಸಾಹಿತಿ, ಸಂಕಲನಕಾರ, ಸಂಗೀತ ನಿರ್ದೇಶಕರನ್ನು ಪರಿಚಯಿಸಿದ್ದೇನೆ.

ಮುಂದೆ..?
‘ರುದ್ರತಾಂಡವ’ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿದ್ದೇನೆ. ನಿರ್ದೇಶಕರು ನೀವೇ ಸೂಕ್ತ ಎಂದರು, ಒಪ್ಪಿಕೊಂಡೆ. ಚಿತ್ರರಂಗದಲ್ಲಿ ನನ್ನದೇ ಆದ ತತ್ವಗಳನ್ನು ಇಟ್ಟುಕೊಂಡು ಬದುಕುತ್ತಿರುವವನು ನಾನು. ಇಲ್ಲಿಯೇ ಹೊಸ ಆಲೋಚನೆ–ಯೋಚನೆ ಮಾಡುವೆ. ಮತ್ತೊಂದು ಚಿತ್ರಕಥೆ  ಸಿದ್ಧಮಾಡಿಕೊಳ್ಳುತ್ತಿರುವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT