ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರುಪೇಟೆ ಬಲವರ್ಧನೆ ಕ್ರಮ

Last Updated 27 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಷೇರುಪೇಟೆ ವಹಿವಾಟಿನಲ್ಲಿ ಹೆಚ್ಚಿನ ಪಾರದರ್ಶಕತೆ ತರಲು ಭಾರ­ತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಪ್ರಕಟಿಸಿದೆ. ಈ ಕ್ರಮಗಳು ಪೇಟೆಯಲ್ಲಿ ಸದ್ಯಕ್ಕೆ ಚಾಲ್ತಿಯಲ್ಲಿ ಇರುವ ಹಲವಾರು ಅವ್ಯವಹಾರಗಳಿಗೆ ಕಡಿವಾಣ ಹಾಕುವು­ದರ ಜತೆಗೆ, ಪೇಟೆಯ ವಹಿವಾಟನ್ನು ಇನ್ನಷ್ಟು ಸಶಕ್ತಗೊಳಿಸಲು ನೆರವಾಗ­ಲಿವೆ.

ಒಳ ವ್ಯಾಪಾರ ನಿಯಂತ್ರಣ ಕ್ರಮಗಳಲ್ಲಿ ಮಹತ್ವದ ಬದ­ಲಾವಣೆ ಮತ್ತು ಪೇಟೆ­­ಯಲ್ಲಿ ವಹಿವಾಟು ನಡೆ­ಸುವ ಮತ್ತು ವಹಿವಾಟಿನಿಂದ ಹಿಂದೆ ಸರಿ­ಯು­ವುದರ ನಿಯಮಗಳೂ ಒಳ­ಗೊಂಡಿವೆ. ಪೇಟೆ­ಯಲ್ಲಿ ಈಗಾ­ಗಲೇ ಹಲವಾರು ನಿಯಂತ್ರಣ ಕ್ರಮಗಳು ದಶಕಗಳಿಂದ ಜಾರಿಯಲ್ಲಿದ್ದರೂ, ಹಲ­ವಾರು ಬಗೆಯ ಅವ್ಯವ­ಹಾರ ತಡೆ­ಗಟ್ಟುವಲ್ಲಿ ಅವು ಪರಿಣಾಮಕಾರಿ­ಯಾಗಿ ಬಳಕೆಯಾಗಿಲ್ಲ. ಎರಡು ದಶಕಗಳ ಅವಧಿಯಲ್ಲಿ ದೇಶಿ ಬಂಡವಾಳ ಪೇಟೆ ಗಮನಾರ್ಹವಾಗಿ ಬೆಳೆದಿದೆ. ಒಳವ್ಯಾಪಾರ ನಿಷೇಧವು 1992­ರಿಂದಲೇ ಜಾರಿಯಲ್ಲಿದ್ದರೂ, ಈ ಅಕ್ರಮ ಸ್ವರೂಪದ ವಹಿವಾಟು ಎಗ್ಗಿ­ಲ್ಲದೇ ನಡೆಯುತ್ತಲೇ ಬಂದಿದೆ. ಈ ಅಕ್ರಮಕ್ಕೆ ಕಡಿವಾಣ ವಿಧಿಸುವ ಕಠಿಣ ಕ್ರಮಗಳು ಸ್ವಾಗತಾರ್ಹ­ವಾಗಿವೆ. ಸದ್ಯಕ್ಕೆ ಜಾರಿಯಲ್ಲಿ ಇರುವ ನಿಯಂತ್ರಣ ಕ್ರಮಗಳ ಸಮಗ್ರ ಅಧ್ಯಯನ ನಡೆಸಿ ವರದಿ ಸಲ್ಲಿಸಿರುವ ನ್ಯಾ. ಸೋಧಿ ಸಮಿತಿಯ ಬಹುತೇಕ ಶಿಫಾರಸುಗಳನ್ನು ಜಾರಿಗೆ ತರುವ ಮೂಲಕ ಸೆಬಿ ದಿಟ್ಟಹೆಜ್ಜೆ ಇರಿಸಿದೆ.

ಹೊಸ ನಿಯಮ ‘ಒಳ­ಗಿ­ನ­ವರು’ ಎನ್ನು­ವುದರ ಅರ್ಥ­ವ್ಯಾಪ್ತಿಯನ್ನೂ ಹಿಗ್ಗಿಸಿದೆ. ವಹಿವಾಟಿನ ಸಂಪೂರ್ಣ ಸ್ವರೂಪ­­ವನ್ನು ಅಧಿ­ಕಾರಿ­ಗಳು ಬಹಿರಂಗಪಡಿ­ಸುವುದನ್ನು ಕಡ್ಡಾಯ ಮಾಡ­ಲಾಗಿದೆ. ಸಂಸ್ಥೆಯ ಷೇರು ಬೆಲೆಗೆ ಸಂಬಂಧಿಸಿದಂತೆ ಪ್ರಕಟಿಸ­ಲಾಗದ ಸೂಕ್ಷ್ಮ ಮಾಹಿತಿ ಗೊತ್ತಿರುವ­ವರೆಲ್ಲ ‘ಒಳಗಿನವರು’ ಎಂದೂ ವ್ಯಾಖ್ಯಾ­ನಿ­ಸಲಾಗಿದೆ. ಇದ­ರಲ್ಲಿ ನಿರ್ದೇಶಕರ ಸಂಬಂಧಿಕರು, ಉದ್ಯೋಗಿಗಳು ಮತ್ತು ಇಂತಹ ಒಳ­ಗುಟ್ಟು ತಿಳಿದುಕೊಂಡಿ­ರುವ ಇತರರು ಕೂಡ ಸೇರಲಿದ್ದಾರೆ. ಆದರೆ, ನೀತಿ ನಿರ್ಧಾರ ಕೈಗೊಳ್ಳುವ ಅಧಿಕಾರ ಹೊಂದಿರುವ ಅಥವಾ ನಿರ್ವಹಿಸು­ತ್ತಿರುವ ಹುದ್ದೆಯ ದೆಸೆಯಿಂದಾಗಿಯೇ ಇಂತಹ ಸೂಕ್ಷ್ಮ ಮಾಹಿತಿ ಪಡೆದು­ಕೊಳ್ಳುವ ಸರ್ಕಾರಿ ನೌಕರರು, ಸಚಿವರು ಮತ್ತು ನ್ಯಾಯಾಧೀಶರು ಹೊಸ ಅರ್ಥ ವ್ಯಾಪ್ತಿ­ಯಲ್ಲಿ ಬರುತ್ತಿಲ್ಲ. ಈ ಬಗ್ಗೆ ನ್ಯಾ. ಸೋಧಿ ಸಮಿತಿಯ ಶಿಫಾರಸನ್ನು ಸೆಬಿ ಪಾಲಿ­ಸದಿರುವುದು ಅಚ್ಚರಿಯ ವಿಚಾರ. ‘ಒಳಗಿನವರು’, ಷೇರು­ ವಹಿವಾಟು ನಡೆ­ಸು­­ವಾಗ ಅನುಸರಿಸ­ಬೇಕಾದ ನಿಯಮಗಳನ್ನೂ ಈಗ ಸ್ಪಷ್ಟಪ­ಡಿಸ­ಲಾ­ಗಿದ್ದು, ತಮ್ಮ ವಹಿವಾಟಿನ ಬಗ್ಗೆ ಷೇರುಪೇಟೆಗೆ ಮುಂಚಿತವಾಗಿಯೇ ತಿಳಿ­ಸು­ವುದನ್ನು ಕಡ್ಡಾಯ ಮಾಡ­ಲಾಗಿದೆ.

ಷೇರುಪೇಟೆಯಲ್ಲಿ ವಹಿವಾಟು ಆರಂಭಿ­­ಸಲು ಮುಂದಾಗುವ ಸಂಸ್ಥೆಗಳು ನೀಡುವ ಮಾಹಿತಿ ಬಹಿರಂಗಕ್ಕೆ ಸಂಬಂಧಿ­ಸಿದ ನಿಯಮಗಳನ್ನೂ ಈಗ ಕಠಿಣ­ಗೊ­ಳಿಸಲಾಗಿದೆ. ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಘೋಷಿಸುವ ಮುನ್ನ ಸಂಸ್ಥೆಯ ಹಣಕಾಸಿನ ಸ್ವರೂಪದ ಸಂಪೂರ್ಣ ವಿವರಗಳನ್ನು ಬಹಿರಂಗ­ಗೊಳಿಸುವುದನ್ನು ಕಡ್ಡಾಯಗೊಳಿ­ಸಲಾ­ಗಿದೆ. ಈ ನಿಬಂಧನೆ ಈಗಾ­ಗಲೇ ಜಾರಿ­ಯಲ್ಲಿದ್ದರೂ ಸಂಸ್ಥೆಗಳು ಅದನ್ನು ಕಟ್ಟು­ನಿಟ್ಟಾಗಿ ಪಾಲಿಸು­ತ್ತಿಲ್ಲ. ಸಂಸ್ಥೆ­ಯೊಂದರ ನೈಜ ಹಣಕಾಸಿನ ಸ್ವರೂಪದ ವಿವರಗಳು ಹೂಡಿಕೆದಾರರು ಷೇರು ಖರೀದಿ ಅಥವಾ ಮಾರಾಟಕ್ಕೆ ಕೈಗೊಳ್ಳುವ ನಿರ್ಧಾರಕ್ಕೆ ಅಗತ್ಯವಾಗಿ ಬೇಕಾಗಿ­ರು­ತ್ತದೆ. ಸಂಸ್ಥೆಯೊಂದು ಷೇರು­ ವಹಿವಾಟಿ­ನಿಂದ ಹಿಂದೆ ಸರಿಯುವ ಕ್ರಮ­ಗಳೂ ಈಗ ಹೆಚ್ಚು ಸ್ಪಷ್ಟವಾಗಿವೆ. ಈ ಎಲ್ಲ ಹೊಸ ಕಠಿಣ ಕ್ರಮಗಳ ಜಾರಿಗೆ ಸೆಬಿ ಮತ್ತು ಷೇರುಪೇಟೆಗಳು ಹೆಚ್ಚು ಕಾಳಜಿ­ ವಹಿಸಿದರೆ ಮಾತ್ರ ಷೇರು­ಪೇಟೆ ವಹಿ­ವಾಟು ಇನ್ನಷ್ಟು ಪಾರದರ್ಶಕ­ವಾಗಿ ನಡೆದು ಹೂಡಿಕೆ­ದಾರರ ಹೆಚ್ಚಿನ ವಿಶ್ವಾಸಕ್ಕೂ ಪಾತ್ರವಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT