ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕಟದ ಮೂಸೆಯಲ್ಲಿ ಭರವಸೆಯ ಬೆಳಕು

ಬೆಳದಿಂಗಳು
Last Updated 25 ನವೆಂಬರ್ 2015, 19:46 IST
ಅಕ್ಷರ ಗಾತ್ರ

ಭಾಷೆಯ ಬೆಳವಣಿಗೆಯಲ್ಲಿ ಕೆಲವೊಮ್ಮೆ ಸೂಕ್ಷ್ಮಗಳು ಕಾಣೆಯಾಗಿಬಿಡುತ್ತವೆ. ಧರ್ಮಕ್ಕೆ ಸಂಭವಿಸಿದ್ದೂ ಇದುವೇ. ಧರ್ಮ ಎಂಬ ಪರಿಕಲ್ಪನೆಗೆ ಬಹಳ ದೊಡ್ಡ ಅರ್ಥವಿದೆ. ಆದರೆ ಇಂದು ಈ ಪದ ಬಳಕೆಯಲ್ಲಿರುವುದು ‘ಮತ’ ಎಂಬ ಪದಕ್ಕೆ ಪರ್ಯಾಯವಾಗಿ. ಧರ್ಮ ಸಂಕಟ ಎಂಬುದು ಖಂಡಿತವಾಗಿಯೂ ಒಂದು ಮತಕ್ಕೆ ಸಂಬಂಧಿಸಿದ ಸಂಕಟವಲ್ಲ. ಧರ್ಮ ಸಂಕಟವನ್ನು ಅರ್ಥ ಮಾಡಿಕೊಳ್ಳಬೇಕಾದರೆ ಧರ್ಮವೆಂದರೆ ಏನು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.

ಧರ್ಮ ಎಂಬುದನ್ನು ಕರ್ತವ್ಯ ಎಂಬ ಅರ್ಥದಲ್ಲಿ ಗ್ರಹಿಸಿದರೆ ನಮಗೆ ಇದು ಹೆಚ್ಚು ಸ್ಪಷ್ಟವಾಗಿ ತಿಳಿಯುತ್ತದೆ. ಮನುಷ್ಯ ಧರ್ಮ ಎಂಬ ಪದವನ್ನು ತೆಗೆದುಕೊಳ್ಳೋಣ. ಏನಿದು ಮನುಷ್ಯನಾಗಿ ಒಬ್ಬ ಹೇಗೆ ಇರಬೇಕೋ ಅದನ್ನು ಮನುಷ್ಯ ಧರ್ಮ ಎಂಬ ಪದ ಧ್ವನಿಸುತ್ತದೆ.

ಸರಳವಾಗಿ ಹೇಳುವುದಾದರೆ ಮನುಷ್ಯ ಪ್ರಾಣಿಯಂತೆ ಬದುಕಬಾರದು. ಅಂದರೆ ತನ್ನೊಳಗೆ ಪ್ರಾಣಿ ಸಹಜವಾದ ಎಲ್ಲವನ್ನೂ ನಿಯಂತ್ರಣದಲ್ಲಿಟ್ಟುಕೊಂಡು ಬದುಕಬೇಕು. ಇದರಲ್ಲಿ ಹಸಿವು, ನಿದ್ರೆ, ನೀರಡಿಕೆಯಂಥ ವಿಚಾರಗಳಿಂದ ಆರಂಭಿಸಿ ಕಾಮ, ಕ್ರೋದ, ಮೋಹ ಇತ್ಯಾದಿಗಳೆಲ್ಲವೂ ಸೇರುತ್ತದೆ.

ಈ ನಿಯಂತ್ರಣದ ಬದುಕು ಯಾಕೆ ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಉದ್ಭವಿಸಿರಬಹುದು. ಅದು ನಾವೇ ಸೃಷ್ಟಿಸಿಕೊಂಡಿರುವ ಸಮಾಜ ನಮಗೆ ಹಾಕಿಕೊಟ್ಟಿರುವ ಚೌಕಟ್ಟು. ಈ ಚೌಕಟ್ಟಿನ ಮಿತಿಗಳೇನೇ ಇದ್ದರೂ ಇಂದು ನಾವು ಕಾಣುತ್ತಿರುವ, ನಾವು ಬದುಕುತ್ತಿರುವ ಮನುಷ್ಯ ಸಮಾಜಕ್ಕೆ ಈ ನಿಯಮಗಳು ಮತ್ತು ನಿಯಂತ್ರಣಗಳು ಅಗತ್ಯ. ಇದನ್ನು ನಮ್ಮಷ್ಟಕ್ಕೆ ನಾವೇ ಅರಿತು ಆಚರಿಸುವುದು ಮತ್ತು ಶೋಷಣಾತ್ಮಕ ಅಥವಾ ಮಾನುಷಿಕವಲ್ಲ ಎಂದು ಅನ್ನಿಸುವ ನಿಯಮಗಳನ್ನು ವಿರೋಧಿಸಿ ಸೆಟೆದು ನಿಲ್ಲುವುದನ್ನು ಮನುಷ್ಯ ಧರ್ಮ ಎನ್ನಬಹುದು.

ಈ ಮನುಷ್ಯ ಧರ್ಮವನ್ನು ಆಧಾರವಾಗಿಟ್ಟುಕೊಂಡೇ ಉಳಿದೆಲ್ಲಾ ಧರ್ಮಗಳೂ ಹುಟ್ಟಿಕೊಳ್ಳುತ್ತವೆ. ಅದು ವೃತ್ತಿಗೆ ಅಥವಾ ಅಂಥ ಯಾವುದೇ ಜವಾಬ್ದಾರಿಗೆ ಸಂಬಂಧಿಸಿದ ಧರ್ಮಗಳೆಲ್ಲವೂ ಅವನ ಮಾನುಷಿಕ ವರ್ತನೆಯನ್ನು ಆಧಾರವಾಗಿಟ್ಟುಕೊಂಡು ವ್ಯಾಖ್ಯಾನಿತವಾಗಿರುತ್ತವೆ.

ಹೀಗೆ ವ್ಯಾಖ್ಯಾನಿತವಾಗಿರುವ ಧರ್ಮವೊಂದನ್ನು ಅನುಸರಿಸುವ ಕ್ರಿಯೆಯಲ್ಲಿ ಎದುರಾಗುವ ಸಂಕಟವನ್ನು ಧರ್ಮ ಸಂಕಟ ಎನ್ನುತ್ತೇವೆ. ಸುಳ್ಳು ಹೇಳಬಾರದು ಎಂಬುದು ಧರ್ಮ. ಆದರೆ ಜೀವವೊಂದನ್ನು ರಕ್ಷಿಸುವುದಕ್ಕಾಗಿ ಸುಳ್ಳನ್ನು ಹೇಳಬೇಕಾದ ಸಂದರ್ಭ ಬಂದರೆ ಒಬ್ಬಾತ ಎದುರಿಸುವ ಸಂಕಟವನ್ನು ಈ ಧರ್ಮ ಸಂಕಟದ ಪರಿಧಿಯೊಳಕ್ಕೆ ತರಬಹುದೇನೋ?

ಇಂಥ ಸಂಕಟಗಳನ್ನು ಎದುರಿಸುವ ಪ್ರಕ್ರಿಯೆ ಕೆಲವು ಇತ್ಯಾತ್ಮಕ ಮೌಲ್ಯಗಳ ಹುಟ್ಟಿಗೆ ಕಾರಣವಾಗುತ್ತದೆ. ತನ್ನಂತೆಯೇ ಪರರನ್ನು ಬಗೆವುದು ಎಂಬ ದೊಡ್ಡ ತಾತ್ವಿಕತೆ ಹುಟ್ಟುವುದು ಧರ್ಮ ಸಂಕಟವೊಂದರ ಫಲ. ಗುಲಾಮಗಿರಿಯನ್ನೇ ಧರ್ಮವೆಂದು ಒಪ್ಪಿಕೊಂಡಿದ್ದರೆ ಇಂಥದ್ದೊಂದು ದೊಡ್ಡ ಮೌಲ್ಯವೇ ಹುಟ್ಟುತ್ತಿರಲಿಲ್ಲ.

ಅಂದರೆ ಮೂಲತಃ ಮನುಷ್ಯ ಧರ್ಮವೆಂದರೆ ಎಲ್ಲರನ್ನೂ ಎಲ್ಲವನ್ನೂ ಸಮಾನವಾಗಿ ಒಳಗೊಳ್ಳುವುದು. ಈ ಮೂಲಧರ್ಮಕ್ಕೆ ವಿರುದ್ಧವಾದ ಯಾವುದಾದರೂ ಆಚರಣಾತ್ಮಕ ಧರ್ಮದಲ್ಲಿ ಎದುರಾಗುವ ಸ್ಥಿತಿಯನ್ನೂ ಧರ್ಮ ಸಂಕಟ ಎಂಬ ಸ್ಥಿತಿಗೆ ಹೋಲಿಸಬಹುದು ಅನ್ನಿಸುತ್ತದೆ. ಈ ಧರ್ಮ ಸಂಕಟದಿಂದ ಹೊರಬರುವ ಪ್ರಕ್ರಿಯೆಯಲ್ಲಿ ಹೊಸತೊಂದು ಬೆಳವಣಿಗೆ ನಡೆದಿರುತ್ತದೆ. ಅರ್ಥಾತ್ ಧರ್ಮದ ಪುನರ್ ವ್ಯಾಖ್ಯಾನ ನಡೆಯುತ್ತದೆ. ಇದನ್ನು ಗೀತೆಯಲ್ಲೂ ಕಾಣಬಹುದು. ಹಾಗೆಯೇ ಬುದ್ಧನಲ್ಲಿಯೂ ಕಾಣಬಹುದು. ಧರ್ಮ ಸಂಕಟವನ್ನು ಎದುರಿಸಬೇಕಾಗಿರುವುದೇ ಅರ್ಜುನ ಎದುರಿಸಿದಂತೆ. ಆ ಸಂಕಟದ ಮೂಸೆಯಲ್ಲಿ ಭರವಸೆಯ ಬೆಳಕು ಹುಟ್ಟುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT