ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕಷ್ಟಗಳಿಗೆ ಒಗ್ಗಿಕೊಂಡು...

Last Updated 15 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಕಷ್ಟಗಳೇ ಬರದಂತೆ ಬದುಕಿನಲ್ಲಿ ಸುಖದ ಪ್ರಾಪ್ತಿಯನ್ನು ದಯಪಾಲಿಸು ಎಂದು ದೇವರಲ್ಲಿ ಪಾರ್ಥಿಸುವವರೇ ಅಧಿಕ ಜನರು. ಆದರೆ ಕಷ್ಟಗಳಿಗೆ ಒಗ್ಗಿಕೊಂಡು ಜೀವನವನ್ನು ಪ್ರೀತಿಸುವವರಿಗೆ ತಿಳಿಯುತ್ತದೆ ಬದುಕಿನ ರೋಚಕತೆ! ಇಂತಹ ಜೀವನಕ್ಕೆ ಸಾಕ್ಷಿಯಾದವರ ಕಥೆಗಳು ಈ ಬಾರಿ

ಕಾಶ್ಮೀರ ಪಂಡಿತರು
ಉಗ್ರರ ಉಪಟಳ ಮತ್ತು ಪ್ರತ್ಯೇಕವಾದಿಗಳ ಕಿರುಕುಳದಿಂದ ಕಾಶ್ಮೀರ ಕಣಿವೆ ಬಿಟ್ಟು ದೇಶದ ವಿವಿಧ ಭಾಗಗಳಲ್ಲಿ ನೆಲೆಸಿರುವ ಕಾಶ್ಮೀರ ಪಂಡಿತರಿಗಾಗಿಯೇ ಆನ್‌ಲೈನ್‌ ಶಾಪಿಂಗ್‌ (ಇ–ಕಾಮರ್ಸ್‌) ಕಂಪೆನಿಯೊಂದು ಆರಂಭವಾಗಿದೆ. ಕಾಶ್ಮೀರದಿಂದ ಹರಿದು ಹಂಚಿ ಹೋಗಿರುವ ತಮ್ಮ ಸಮುದಾಯದವರಿಗಾಗಿಯೇ ಆನ್‌ಲೈನ್‌ ಶಾಪಿಂಗ್‌ ಆರಂಭಿಸಲಾಗಿದೆ ಎಂದು ಕಂಪೆನಿಯ ಮಾಲೀಕ ರೋಹಿತ್‌ ಭಟ್‌ ಹೇಳುತ್ತಾರೆ.

   ಪ್ರತ್ಯೇಕವಾದಿಗಳ ಕಿರುಕುಳದ ಭಯದಿಂದಾಗಿ 90ರ ದಶಕದಲ್ಲಿ ರೋಹಿತ್‌ ಭಟ್‌ ಕುಟುಂಬ ಶ್ರೀನಗರದಿಂದ ದೆಹಲಿಗೆ ವಲಸೆ ಬಂದಿತು. ಪಿಯುಸಿ ಓದಿದ್ದ ರೋಹಿತ್‌ ಕೊರಿಯರ್‌ ಕಂಪೆನಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡರು. ದೆಹಲಿಯಲ್ಲಿ ಕಷ್ಟಕರವಾದ ಜೀವನ ನಡೆಸಿದರು.

‘ಕಾಶ್ಮೀರದ ತಿನಿಸುಗಳು, ಆಹಾರ, ಅದಕ್ಕೆ ಬೇಕಾದ ಪದಾರ್ಥಗಳು, ಉಡುಪುಗಳು, ಧಾರ್ಮಿಕ ವಿಧಿವಿಧಾನಗಳಿಗೆ ಬೇಕಾಗಿದ್ದ ಸರಕುಗಳು ಸಿಗುತ್ತಿರಲಿಲ್ಲವಾದ್ದರಿಂದ ನಾವು ನಮ್ಮ ಸಂಸ್ಕೃತಿ ಬಿಟ್ಟು ಬದುಕಬೇಕಾಯಿತು. ದೇಶದ ವಿವಿಧ ಮೂಲೆಗಳಲ್ಲಿ ನೆಲೆಸಿರುವ ಪಂಡಿತರು ನಮ್ಮ ರೀತಿಯಲ್ಲೇ ಬದುಕುತ್ತಿದ್ದಾರೆ ಎಂಬುದು ಅರ್ಥವಾಯಿತು. ಹಾಗಾಗಿ ಇ–ಕಾಮರ್ಸ್‌ ಸಂಸ್ಥೆ ಸ್ಥಾಪಿಸುವ ಯೋಜನೆ ರೂಪಿಸಿದೆ’ ಎನ್ನುತ್ತಾರೆ ರೋಹಿತ್‌. ಕೊರಿಯರ್‌ ಕ್ಷೇತ್ರದಲ್ಲಿ ಹತ್ತು ವರ್ಷ ಅನುಭವ ಇದ್ದುದ್ದರಿಂದ ಕಂಪೆನಿ ಕಟ್ಟಲು ಸುಲಭವಾಯಿತು. ಜೊತೆಗೆ ರೋಹಿತ್‌ ಅಕ್ಕ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದರಿಂದ ವೆಬ್‌ಪೋರ್ಟಲ್‌ ಮತ್ತು ಅಪ್ಲಿಕೇಶನ್‌ಗಳನ್ನು ತಯಾರಿಸಿಕೊಟ್ಟರು. ಹೀಗೆ ಅತಿ ಕಡಿಮೆ ಬಂಡವಾಳದಲ್ಲಿ ಕಾಶ್ಮೀರಒನ್‌ಸ್ಟಾಪ್‌.ಕಾಮ್‌ ಕಂಪೆನಿ ಆರಂಭವಾಯಿತು.

ದೇಶದ ಯಾವುದೇ ಮೂಲೆಯಿಂದಾದರೂ ಪಂಡಿತರು ತಿನಿಸು, ಉಡುಪುಗಳನ್ನು ಬುಕ್‌ ಮಾಡಿದರೆ ಅವರಿಗೆ ಕೊರಿಯರ್‌ ಮೂಲಕ ಆ ವಸ್ತುಗಳನ್ನು ಕಡಿಮೆ ಬೆಲೆಗೆ ಕಳುಹಿಸಲಾಗುವುದು. ಸುಮಾರು 7 ಲಕ್ಷ ಪಂಡಿತರು ವಿದೇಶ ಸೇರಿದಂತೆ ದೇಶದ ವಿವಿಧ ಮೂಲೆಗಳಲ್ಲಿ ನೆಲೆಸಿದ್ದಾರೆ. ಅವರಿಗೆ ಎಲ್ಲಾ ರೀತಿಯ ನೆರವು ನೀಡುವುದು ಈ ಕಂಪೆನಿಯ ಉದ್ದೇಶ. ಪ್ರತಿ ನಿತ್ಯ ಸಾವಿರಕ್ಕೂ ಹೆಚ್ಚು ಆರ್ಡರ್‌ಗಳು ಬುಕ್‌ ಆಗುತ್ತಿದ್ದು, ಕಂಪೆನಿಗೆ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಕಾಶ್ಮೀರ ಸರ್ಕಾರ ಹಣಕಾಸು ನೆರವು ನೀಡುತ್ತಿವೆ ಎಂದು ರೋಹಿತ್‌ ಭಟ್‌ ಹೇಳುತ್ತಾರೆ.
www.kashmironestop.com

ಅಪೂರ್ವ ಗಿರಿ

ಬೆಂಗಳೂರು ಮೂಲದ ಅಪೂರ್ವ ಗಿರಿ ಅವರಿಗೆ ಮಹಿಳೆಯರು ಸ್ವಾವಲಂಬಿಗಳಾಗಬೇಕು ಮತ್ತು ತಮ್ಮ ಸುರಕ್ಷತೆ ಬಗ್ಗೆ ಜಾಗೃತರಾಗಿರಬೇಕು ಎಂಬ ಆಸೆ. ಈ ನಿಟ್ಟಿನಲ್ಲಿ ಗೆಳತಿಯರ ಜೊತೆ ಸೇರಿಕೊಂಡು ಮಹಿಳೆಯರ ಸುರಕ್ಷತೆ ಕುರಿತು ವಿಚಾರ ಸಂಕಿರಣಗಳು, ಕಾರ್ಯಾಗಾರಗಳನ್ನು ನಡೆಸುತ್ತಿದ್ದಾರೆ.

ಮಹಿಳಾ ಸುರಕ್ಷತೆ ಅಭಿಯಾನದಲ್ಲಿ ತೊಡಗಿರುವ ಅಪೂರ್ವ ದೇಶ ಸುತ್ತುತ್ತ ಜಾಗೃತಿ ಮೂಡಿಸುವ ಕಾಯಕದಲ್ಲಿ ನಿರತರಾಗಿದ್ದಾರೆ. ಅಪೂರ್ವಗೆ ಚಿಕ್ಕ ವಯಸ್ಸಿನಲ್ಲಿ ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂ ಅವರನ್ನು ಭೇಟಿ ಮಾಡುವ ಅವಕಾಶ ಲಭಿಸಿತ್ತು. ಈ ಸಂದರ್ಭದಲ್ಲಿ ನಾನು ಲಾಯರ್‌ ಆಗುತ್ತೇನೆ ಎಂದು ಅಪೂರ್ವ ಕಲಾಂ ಅವರಿಗೆ ಹೇಳಿದ್ದರು. ಆದರೆ  ಲಾಯರ್‌ ಆಗುವ ಬದಲಿಗೆ ಎಂಜಿನಿಯರ್‌ ಆದರು. ಅಪೂರ್ವ ತಂದೆ ಎರಡು ಮೂರು ವರ್ಷಕ್ಕೆ ವರ್ಗವಾಗುತ್ತಿದ್ದರಿಂದ ದೇಶ ಸುತ್ತುವ ಅವಕಾಶ ಸಿಕ್ಕಿತು. ಹಲವು ರಾಜ್ಯಗಳಲ್ಲಿ ವಿದ್ಯಾಭ್ಯಾಸ ಪಡೆದರು. ಅಲ್ಲಿನ ಜನ ಜೀವನ, ಸಂಸ್ಕೃತಿ ಜೊತೆಗೆ ಮಹಿಳೆಯರ ಸ್ಥಿತಿಗತಿಗಳನ್ನು ಅರಿತು ಮಹಿಳೆಯರಿಗಾಗಿ ದುಡಿಯುವ ಸಂಕಲ್ಪ ಮಾಡಿದರು. ಪ್ರಸ್ತುತ ಕ್ಲೌಡಿಂಗ್‌ ತಂತ್ರಜ್ಞಾನದ ಐವಿಜ್‌ ಕಂಪೆನಿಯಲ್ಲಿ ಸೆಕ್ಯೂರಿಟಿ ವಿಶ್ಲೇಷಕಿಯಾಗಿ ಕೆಲಸ ಮಾಡುತ್ತಿದ್ದಾರೆ.

ಏನನ್ನಾದರೂ ಸಾಧಿಸಬೇಕು ಎಂಬ ತುಡಿತವಿರುವ ಅಪೂರ್ವ ಸಣ್ಣದೊಂದು ಸಂಸ್ಥೆ ಕಟ್ಟಿಕೊಂಡು ಮಹಿಳೆಯರ ಸುರಕ್ಷತೆ ಕುರಿತಂತೆ ಜಾಗೃತಿ ಮೂಡಿಸುವ ಅಭಿಯಾನದಲ್ಲಿ ತೊಡಗಿಕೊಂಡಿದ್ದಾರೆ. ವಾರಾಂತ್ಯ ಮತ್ತು ರಜ ದಿನಗಳಲ್ಲಿ ಕಾರ್ಯಾಗಾರಗಳು, ವಿಚಾರಣ ಸಂಕಿರಣಗಳನ್ನು ನಡೆಸುತ್ತಿದ್ದಾರೆ.

ಹಲವಾರು ಮಹಿಳಾ ಮತ್ತು ಪ್ರಗತಿಪರ ಸಂಘಟನೆಗಳ ಜೊತೆ ಗುರುತಿಸಿಕೊಂಡಿರುವ ಅಪೂರ್ವ ಸಾಮಾಜಿಕ ಚಳವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ. ಇತ್ತೀಚೆಗೆ ಕೇರಳ ಮತ್ತು ಬೆಂಗಳೂರಿನಲ್ಲಿ ಮಹಿಳಾ ಜಾಗೃತಿ ಸಮ್ಮೇಳನಗಳನ್ನು ನಡೆಸಿದ್ದಾರೆ. ವಿಶ್ವ ಆರ್ಥಿಕತೆ ಅಧ್ಯಯನ ಮಾಡುತ್ತಿರುವ ಅಪೂರ್ವ ಭಾರತದಲ್ಲಿನ ಹಣದುಬ್ಬರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹೊಸ ವ್ಯಾಖ್ಯೆ ಅಥವಾ ಸೂತ್ರವೊಂದನ್ನು ಆವಿಷ್ಕರಿಸುವ ಕನಸು ಹೊಂದಿದ್ದಾರೆ.

ಅವಿರಾಲ್‌ ಗಾರ್ಗ್‌

ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛಭಾರತ ಅಭಿಯಾನ ದೇಶದಲ್ಲಿ ಹೊಸ ಆಯಾಮ ಕಲ್ಪಿಸಿದೆ. ಈ ಅಭಿಯಾನವನ್ನು ನಿರಂತರವಾಗಿ ನಡೆಸಲು ಹಲವಾರು ಸಂಘ ಸಂಸ್ಥೆಗಳು ಹುಟ್ಟಿಕೊಂಡಿವೆ. ಇನ್ನು ಕೆಲವರು ವಾರಾಂತ್ಯದ ದಿನಗಳಲ್ಲಿ ಸ್ವಯಂ ಪ್ರೇರಿತರಾಗಿ ಸ್ವಚ್ಛ ಭಾರತ ಅಭಿಯಾನದಲ್ಲಿ ತೊಡಗಿಸಿಕೊಂಡವರು ಇದ್ದಾರೆ. ಬುದ್ಧಿಜೀವಿಗಳು, ಯುವಕರು ಮತ್ತು ಹಿರಿಯ ನಾಗರಿಕರು ಈ ಅಭಿಯಾನದಲ್ಲಿ ಹೆಚ್ಚು ಹೆಚ್ಚಾಗಿ ಭಾಗವಹಿಸುತ್ತಿದ್ದಾರೆ. ಕಾನ್ಪುರದ ಪಿಯುಸಿ ವಿದ್ಯಾರ್ಥಿ ವಿಭಿನ್ನ ರೀತಿಯಲ್ಲಿ ಸ್ವಚ್ಛ ಭಾರತ ಅಭಿಯಾನದಲ್ಲಿ ತೊಡಗಿಕೊಂಡಿರುವುದು ವಿಶೇಷ.  ವಿದ್ಯಾರ್ಥಿ ಅವಿರಾಲ್‌ಗೆ ಕಾರು ಮತ್ತು ಜೀಪುಗಳ ಮೇಲೆ ಹದ್ದಿನ ಕಣ್ಣು. ಸ್ವಂತ ವಾಹನಗಳಲ್ಲಿ ಪ್ರಯಾಣಿಸುವವರು ತಿಂಡಿ ಪೊಟ್ಟಣಗಳು ಮತ್ತು ತಂಪು ಪಾನೀಯಗಳ ಡಬ್ಬಿಗಳನ್ನು ಕಾರಿನ ಕಿಟಿಕಿಯ ಮೂಲಕ ಎಲ್ಲೆಂದರಲ್ಲಿ ಬಿಸಾಡುತ್ತಾರೆ. ಇದರಿಂದ ಪರಿಸರ ಹಾಳಾಗುವುದಲ್ಲದೆ ನಗರದ ಸೌಂದರ್ಯ ಹದಗೆಡುತ್ತದೆ. ಇದನ್ನು ತಪ್ಪಿಸಲು ಆ ವಾಹನಗಳಲ್ಲಿ ಕಸದ ಚೀಲ ಇಡುವ ಬಗ್ಗೆ ಅವಿರಾಲ್‌ ಯೋಚಿಸಿದರು. ಕಾರಿನಲ್ಲಿ ಇಡಬಹುದಾದ ಕಸದ ಬುಟ್ಟಿ ಅಥವಾ ಪ್ಲಾಸ್ಟಿಕ್‌ ಚೀಲದ ತಯಾರಿಕೆ ಬಗ್ಗೆ ಆನ್‌ಲೈನ್‌ನಲ್ಲಿ ತಿಳಿದುಕೊಂಡು ನೂರು ಚೀಲಗಳನ್ನು ತಯಾರಿಸಿದರು. ಆಕರ್ಷಕವಾಗಿ ವಿನ್ಯಾಸಗೊಂಡ ಚೀಲಗಳನ್ನು ಕಾರಿನ ಮಾಲೀಕರಿಗೆ ಉಚಿತವಾಗಿ ನೀಡಿ ಅವುಗಳನ್ನು ಬಳಸುವ ಬಗ್ಗೆ ಅವಿರಾಲ್‌ ಹೇಳಿ ಕೊಡುತ್ತಾರೆ.

ಈ ವಿಷಯ ಪರಿಸರ ಸ್ನೇಹಿ ಸಂಘಟನೆಗಳಿಗೆ ಗೊತ್ತಾಗಿ ಅವರು ಕೂಡ  ಹತ್ತು ಸಾವಿರ ಚೀಲಗಳನ್ನು ಅವಿರಾಲ್‌ ನೆರವಿನೊಂದಿಗೆ ತಯಾರಿಸುತ್ತಾರೆ. ರಜ ದಿನಗಳಲ್ಲಿ ವಾಹನಗಳ ಮಾಲೀಕರಿಗೆ ನೀಡಿ ಅವುಗಳ ಬಳಕೆ ಬಗ್ಗೆ ವಿವರಿಸುವುದು ಅವಿರಾಲ್‌ ಮುಖ್ಯ ಕೆಲಸ. ಕಾನ್ಪುರದಲ್ಲಿ ನಡೆದ ಮ್ಯಾರಥಾನ್‌ ಸಂದರ್ಭದಲ್ಲಿ ಸುಮಾರು ಐವತ್ತು ಸಾವಿರ ಚೀಲಗಳನ್ನು ಉಚಿತವಾಗಿ ಹಂಚಲಾಗಿದೆ. ಕಾನ್ಪುರದ ಬಹುತೇಕ ಎಲ್ಲಾ ವಾಹಗಳಲ್ಲೂ ಇಂತಹ ಚೀಲಗಳಿವೆ. ಅವಿರಾಲ್‌ ಅವರ ಒಂದು ಸಣ್ಣ ಐಡಿಯಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದ್ದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT