ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕೀರ್ಣತೆಯ ಸಂಕಟದಲ್ಲಿ ಸಂಭ್ರಮಿಸಿದವರು...

Last Updated 22 ಆಗಸ್ಟ್ 2014, 19:42 IST
ಅಕ್ಷರ ಗಾತ್ರ

ಯು.ಆರ್‌.ಅನಂತಮೂರ್ತಿ ಅವರಲ್ಲಿ ನನಗೆ ತುಂಬಾ ಇಷ್ಟವಾದ ಗುಣವೆಂದರೆ ಸೈದ್ಧಾಂತಿಕ ಭಿನ್ನಾಭಿಪ್ರಾಯ­ಗಳನ್ನು ಯಾವತ್ತೂ ವ್ಯಕ್ತಿ ವಿರೋಧವಾಗಿ ಪರಿಗಣಿಸದ ವೈಯಕ್ತಿಕ ದ್ವೇಷಕ್ಕೆ ತಿರುಗಿಸದ ಮನೋಮೌಲ್ಯ. ಇದೊಂದು ಅಪರೂಪದ ಅಂಶ. ಯಾಕೆಂದರೆ ಇದು ಭಿನ್ನಾಭಿಪ್ರಾಯಗಳನ್ನು ಬಹುಪಾಲು ಬೀದಿ­ಜಗಳವಾಗ­ಿಸುತ್ತಿರುವ ಸಂದರ್ಭ. ಅನಂತಮೂರ್ತಿ ಅವರ ಅಭಿಪ್ರಾಯಗಳನ್ನು ಬೀದಿ­ಗೆಳೆದು ತಂದು ಪ್ರಶ್ನಿಸು­ವವರ ನಡುವೆಯೂ ಅವರು ಬೀದಿಜಗಳಕ್ಕೆ ಬರಲಿಲ್ಲ. ತಮ್ಮ ಸಾಂಸ್ಕೃತಿಯ ಸಂಯಮವನ್ನು ಕಾಪಾಡಿ­ಕೊಂಡರು. ಆದರೆ, ಪ್ರತಿಕ್ರಿಯೆ ಮಾಡುವುದನ್ನು ನಿಲ್ಲಿಸಲಿಲ್ಲ. ತಮ್ಮ ಕೊನೆಯುಸಿರಿನವರೆಗೂ ಸಾಮಾಜಿಕ, ರಾಜಕೀಯ ವಿಷಯಗಳಿಗೆ ಪ್ರತಿಸ್ಪಂದಿಸುತ್ತ, ಪ್ರತಿಕ್ರಿಯೆ ದಾಖಲಿಸುತ್ತ ಬಂದರು.

ನಾವು ಬಂಡಾಯ ಸಾಹಿತ್ಯ ಚಳವಳಿಯನ್ನು ಕಟ್ಟಿದಾಗ ಸಹಜವಾಗಿಯೇ ನವ್ಯ ಸಾಹಿತಿಗಳಿಗೆ ಆಂತಕವುಂಟಾಗಿತ್ತು. ಇದರ ಫಲವಾದ ಅಲ್ಪಪ್ರಮಾಣದ ಅಸಹನೆಯೂ ಇತ್ತು. ಲಂಕೇಶ್ ಅವರು ಬಹಿರಂಗವಾಗಿಯೇ ಮೊದಲನೇ ಬಂಡಾಯ ಸಾಹಿತ್ಯ ಸಮ್ಮೇಳನವನ್ನು ಬೆಂಬಲಿಸಿ ಹೇಳಿಕೆ ಕೊಟ್ಟರು. ಅನಂತರದ ದಿನಗಳಲ್ಲಿ ‘ಡಂಬಾಯ’ ಎಂದು ಕರೆಯುತ್ತಲೇ ನಮ್ಮ ಚಳವಳಿಯನ್ನು ಪ್ರೀತಿಸುತ್ತಲೇ ಟೀಕೆಗೊಡ್ಡಿದ್ದರು. ಅನಂತಮೂರ್ತಿಯವರು ಬಹಿರಂಗವಾಗಿ ಬೆಂಬಲಿಸಲಿಲ್ಲ. ಹಾಗೆಂದು ವಿರೋಧಿಸಲೂ ಇಲ್ಲ.

ಎಲ್ಲದರಲ್ಲೂ ಏನಾದರೂ ಅರ್ಥವಂತಿಕೆಯನ್ನು ಗುರುತಿಸುವ ಗುಣ ಹೊಂದಿದ್ದ ಅವರು ಸ್ವಲ್ಪ ಕಾಲಾನಂತರ ‘ಕನ್ನಡ ಸಂಸ್ಕೃತಿಯನ್ನು

ಕಟ್ಟುವಲ್ಲಿ ನಿಮ್ಮ ಪಾತ್ರ ಪ್ರಮುಖ’ ಎಂದು ನನಗೆ ಹೇಳಿದರು. ಜೊತೆಗೆ ತಾವು ಸಾಂಸ್ಕೃತಿಕ ಕ್ಷೇತ್ರದಲ್ಲಿ ಯಾವತ್ತೂ ಕಳೆದು ಹೋಗದಂತೆ ಕಾಳಜಿ ವಹಿಸುತ್ತ ಸಮಕಾಲೀನ ಸಂವಾದಗಳನ್ನು ನಡೆಸುತ್ತ ಜೀವನೋತ್ಸಾಹವನ್ನು ದಿನಮಾನದ ಪ್ರತೀಕವಾಗಿಸಿಕೊಂಡರು. ಅವರ ಕೊನೆಯ ದಿನಗಳಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದಾಗಲೂ ಮನದ ಮಾತುಗಳನ್ನು ಮುಚ್ಚಿಡಲಿಲ್ಲ. ಪ್ರತಿರೋಧಗಳಿಗೆ ಹಿಂಜರಿಯಲಿಲ್ಲ.


ಹೇಳಬೇಕಾದ್ದನ್ನು ಹೇಳಿಯೇ ತೀರುತ್ತೇನೆ ಎಂಬ ಹಟದಿಂದ ಬದುಕಿದರು. ಅವರ ಅಭಿಪ್ರಾಯಗಳನ್ನು ಎಲ್ಲರೂ ಒಪ್ಪಬೇಕಾಗಿರಲಿಲ್ಲ. ಆದರೆ ಮಾನಸಿಕ ಹಿಂಸೆ ಕೊಡುವ ನಡವಳಿಕೆಗಳನ್ನು ಕೆಲವರು ತೋರಬೇಕಾಗಿರಲಿಲ್ಲ. ನರೇಂದ್ರ ಮೋದಿಯವರ ಬಗ್ಗೆ ಅವರು ಆಡಿದ ಮಾತಿಗೆ ಮೂಲಭೂತವಾದಿ ಮನೋಧರ್ಮದವರಿಂದ ಬಂದ ಪ್ರತಿರೋಧ ಪ್ರಜಾಸತ್ತಾತ್ಮಕವಾಗಿರಲಿಲ್ಲ. ಆದರೆ, ಅನಂತಮೂರ್ತಿ ಅವರು ಸಣ್ಣತನದ ಪ್ರತಿಕ್ರಿಯೆ ತೋರಿಸದೆ ಸಂಕಟದಲ್ಲಿ ನೋಯುತ್ತ ಹಿರಿತನವನ್ನು ಮೆರೆದರು.

ಕಾಕತಾಳೀಯವೆಂದರೆ ಅನಂತಮೂರ್ತಿಯವರು ಮೋದಿಯವರ ಬಗ್ಗೆ ಮಾತನಾಡಿದ್ದು ನನ್ನ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ. ಪುಸ್ತಕ ಬಿಡುಗಡೆ ಮಾಡಿ ನಮ್ಮ ಒಟ್ಟು ಸಂದರ್ಭದ ಬಗ್ಗೆ ಮಾತಾಡುತ್ತ ‘ಮೋದಿ ಪ್ರಧಾನಮಂತ್ರಿಯಾದರೆ ನಾನು ಬದುಕಬಾರದು ಅನ್ನಿಸುತ್ತೆ’ ಎಂದು ಭಾವೋದ್ವೇಗದಿಂದ ಮಾತಾಡಿದರು. ಅವರು ದೇಶ ಬಿಟ್ಟು ಹೋಗುವ ಮಾತನ್ನು ಅಂದು ಆಡಿರಲಿಲ್ಲ.

ಆಮೇಲೆ  ಆಡಿರಬಹುದೇನೋ ಗೊತ್ತಿಲ್ಲ. ಆದರೆ ನನ್ನ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಆಡಿದ ಭಾವೋದ್ವೇಗದ ಮಾತು ತನ್ನ ಸಾಂಕೇತಿಕ ಅರ್ಥವನ್ನು ಕಳೆದುಕೊಂಡು ವಾಚ್ಯವಾಗಿ ವಿವಾದವಾಗಿ ಪರಿಣಮಿಸಿತು. ಇದು ಬೇರೆ ವಿಷಯ. ನನ್ನ ಪುಸ್ತಕಕ್ಕೆ ಸಂಬಂಧಿಸಿದಂತೆ ಕಡಿಮೆ ಮಾತಾಡಿದ ಅನಂತಮೂರ್ತಿಯವರು ‘ಬರಗೂರ್‌ಗೆ ನಾವು ಅನ್ಯಾಯ ಮಾಡಿದೆವು. ಯಾಕೆಂದರೆ ಇವರು ಬಂಡಾಯ ಚಳವಳಿ ಕಟ್ಟಿದಾಗ ನಾವೇನು ಕಡಿಮೆ, ನಾವೂ ಬಂಡಾಯಗಾರರೇ ಎಂದು ಭಾವಿಸಿದ್ದೆವು.

ಹೀಗಾಗಿ ಬರಗೂರರನ್ನು ನಿರ್ಲಕ್ಷಿಸಿದೆವು’ ಎಂದು ‘ಸತ್ಯದ ಮಾತು’ ಆಡಿದರು. ಇದು ನನ್ನ ಬಗೆಗಷ್ಟೇ ಅಲ್ಲ ಬಂಡಾಯ ಸಾಹಿತ್ಯ ಚಳವಳಿಯನ್ನು ಕುರಿತ ನಿಲುವು ಎಂದರೆ ತಪ್ಪಾಗಲಾರದು. ಆದರೆ ಬರಬರುತ್ತ ಸತ್ಯ ಹೊರಬಂತು. ಇದೇ ಅನಂತಮೂರ್ತಿಯವರ ದೊಡ್ಡತನ. ಹಾಗೆ ನೋಡಿದರೆ ನವ್ಯ ಸಾಹಿತ್ಯದ ಸಂದರ್ಭದಲ್ಲಿ ಸಾಮಾಜಿಕ ಪ್ರತಿಕ್ರಿಯೆಯ ದೃಷ್ಟಿಯಿಂದ ಅನಂತಮೂರ್ತಿ ಬಂಡಾಯ ಮನೋಧರ್ಮದವರೇ ಆಗಿದ್ದರು. ಇವರಿಗಿಂತ ಭಿನ್ನವಾದ ಲಂಕೇಶ್‌, ತೇಜಸ್ವಿಯವರು ನವ್ಯದಲ್ಲೇ ‘ಬಂಡಾಯ ಬರಹ ಬೀಜ’ ಬಿತ್ತಿದ್ದರು.

ಇವೆಲ್ಲ ಚಾರಿತ್ರಿಕ ಪ್ರತಿಕ್ರಿಯೆಗಳು. ಅನಂತಮೂರ್ತಿಯವರ ಬಂಡಾಯ ಮನೋಧರ್ಮಕ್ಕೂ ಲಂಕೇಶ್‌, ತೇಜಸ್ವಿಯವರ ಬಂಡಾಯ ಮನೋಧರ್ಮಕ್ಕೂ ವ್ಯತ್ಯಾಸವಿದೆ. ಬಂಡಾಯ ಸಾಹಿತ್ಯ ಸಂಘಟನೆಯು ಇವರ ವಿಚಾರಧಾರೆಯ ಚಾರಿತ್ರಿಕತೆಯನ್ನು ಗೌರವಿಸುತ್ತಲೇ ಹೆಚ್ಚು ಸೈದ್ಧಾಂತಿಕ ಬಂಡಾಯ ನೆಲೆ–ನಿಲುವುಗಳನ್ನು ರೂಪಿಸಿದೆ. ಬಂಡಾಯ ಸಾಹಿತಿಗಳ ಕೃತಿಗಳನ್ನು ಅನಂತಮೂರ್ತಿ ಎಷ್ಟು ಓದಿದರೊ ನನಗೆ ಮಾಹಿತಿ ಇಲ್ಲ. ಆದರೆ ಅವರಿಗೆ ಖುದ್ದು ಕೊಟ್ಟ ಪುಸ್ತಕಗಳನ್ನು ಓದಿ ವೈಯಕ್ತಿಕವಾಗಿ ಪ್ರತಿಕ್ರಿಯಿಸುವ ಪುಸ್ತಕ ಪ್ರೀತಿ ಅವರಲ್ಲಿತ್ತು.

ಅನಂತಮೂರ್ತಿಯವರ ಒಂದು ಪುಸ್ತಕದ ಹೆಸರು ‘ಪ್ರಶ್ನೆ’. ಅನಂತ ಮೂರ್ತಿಯವರು ಸದಾ ಪ್ರಶ್ನೆಯ ರೂಪಕವಾಗಿದ್ದರು, ಪ್ರಶ್ನಿಸುತ್ತಲೇ ಉತ್ತರ ಹುಡುಕುವ ಪ್ರಕ್ರಿಯೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದರು. ಭಿನ್ನಾಭಿ­ಪ್ರಾಯಗಳನ್ನು ಸಂವಾದವಾಗಿ, ಸಂವಾದವನ್ನು ಸಂವೇದವಾಗಿ ಸಾಂಸ್ಕೃತಿಕ­ಗೊಳಿಸಿದರು. ಸಾಹಿತ್ಯದಾಚೆಗಿನ ಸಾಮಾಜಿಕ ರಾಜಕೀಯ ಸಂಗತಿಗಳಿಗೆ ಮನದ ಮೂಲದಿಂದ ಪ್ರತಿಕ್ರಿಯಿಸುತ್ತ ಬಂದರು. ಮನತುಂಬಿ ಪ್ರಶಂಸಿಸುವ ಔದಾರ್ಯದ ಜೊತೆಗೆ ಮನತುಂಬಿ ಪ್ರತಿರೋಧಿಸುವ ಪ್ರವೃತ್ತಿಯಿಂದ ಸಂಕೀರ್ಣವಾಗುತ್ತ ಹೋದರು.

ಈ ಸಂಕೀರ್ಣತೆಯ ಸಂಕಟದಲ್ಲಿ ಸಂಭ್ರಮಿಸಿದರು. ಅನಂತಮೂರ್ತಿಯವರಂತೆ ಸಂಕಟ ಮತ್ತು ಸಂಭ್ರಮಗಳನ್ನು ಒಟ್ಟಿಗೆ ಜೀವಿಸಿದ ಇನ್ನೊಬ್ಬ ಸಾಂಸ್ಕೃತಿಕ ವ್ಯಕ್ತಿ ಸಿಗುವುದು ವಿರಳ. ನಾವು ಪ್ರೀತಿಯಿಂದ ಸಂವಾದಿಸುವ, ಭಿನ್ನಾಭಿಪ್ರಾಯವನ್ನು ಗೌರವದಿಂದ ಹಂಚಿಕೊಳ್ಳುವ, ಮತ್ತು ಸ್ವತಃ ಗೌರವಿಸುವ ಜೀವಶಕ್ತಿ ಇನ್ನಿಲ್ಲ ಎಂಬುದನ್ನು ಹೇಗೆ ಕಲ್ಪಿಸಿಕೊಳ್ಳುವುದು? ಚಿಂತನೆಯ ಚಿಲುಮೆಯೊಂದು ಭೌತಿಕವಾಗಿ ಬತ್ತಿ ಹೋದದ್ದನ್ನು ಹೇಗೆ ನೋಡುವುದು?

ಅನಂತಮೂರ್ತಿಯವರನ್ನು ನಮ್ಮೊಳಗೆ ಕಟ್ಟಿಕೊಳ್ಳುತ್ತ ಮಾತಾಡೋಣ. ವಾದ, ಪ್ರತಿವಾದ, ವಾಗ್ವಾದಗಳ ವಿವೇಕವನ್ನು ಈ ಮೌನ ಮಾತುಕತೆಯಲ್ಲಿ ಬದುಕಿಸಿಕೊ­ಳ್ಳೋಣ, ಬದುಕೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT