ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕ್ರಾಂತಿಯ ಶಂಕರಂ ಜಗದ್ಗುರು ನೃತ್ಯ

ನಾದ ನೃತ್ಯ
Last Updated 25 ಜನವರಿ 2015, 19:30 IST
ಅಕ್ಷರ ಗಾತ್ರ

ಸೇವಾ ಸದನದಲ್ಲಿ ಪ್ರಕೃತಿ (ಜರ್ಮನಿ) ಅವರ ಭರತನಾಟ್ಯದ ಕಾರ್ಯಕ್ರಮ ಮೆರಗು ತಂದಿತು. ಸಂಕ್ರಾತಿ ಹಬ್ಬದ ಮೆರುಗು ಹೆಚ್ಚಿಸಲು ಈ ನೃತ್ಯವನ್ನು ಅಂತರರಾಷ್ಟ್ರೀಯ ಕಲಾ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ (ಶ್ರೀವತ್ಸ ನೇತೃತ್ವದಲ್ಲಿ) ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿಯಾಗಿ ಆಯೋಜಿಸಿದ್ದವು.

ಪ್ರತಿ ಬಾರಿ ಬೆಂಗಳೂರಿನ ತವರಿಗೆ ಬಂದಾಗ ನೂತನವಾಗಿ ಸಂಯೋಜಿಸಿದ ನೃತ್ಯವನ್ನು ರಸಿಕರಿಗೆ ಪ್ರದರ್ಶಿಸುವಾಗ ಬಹಳಷ್ಟು ತವಕ ಹಾಗೂ ಖುಷಿಯಿರುತ್ತದೆ ಎಂಬ ಮಾತನ್ನು ಹೇಳುವಾಗ ಪ್ರಕೃತಿ ಬಹಳ ಭಾವುಕರಾದರು. ಲವಲವಿಕೆಯ ಪುಷ್ಪಾಂಜಲಿಯ ಪ್ರಸ್ತುತಿ ಹಾಗೂ ದೇವಿ ಪರಾಶಕ್ತಿಯನ್ನು ವರ್ಣಿಸುವ ಕೃತಿಯಲ್ಲಿ ಕಲಾವಿದೆಯ ಅಭಿನಯವು ಹದವರಿತಂತೆ ಇತ್ತು. ವಿವಿಧ ನೃತ್ಯ ಭಂಗಿ ಹಾಗೂ ಭಾವಾಭಿನಯದ ಮೂಲಕ ಪ್ರಕೃತಿ ಇಡೀ ರೂಪಕ್ಕೆ ಜೀವ ತುಂಬಿದರು.

ಜಾವಳಿಯಲ್ಲಿ ಶೃಂಗಾರ ರಸದ ಭಾವನೆಯನ್ನು ನರ್ತಕಿ ವಿಶಿಷ್ಟ ರೀತಿಯಲ್ಲಿ ರಸಿಕರು ಆಹ್ಲಾದಿಸುವಂತೆ ಮಾಡಿದರು. ಕನಕದಾಸರ ಕೃತಿ ದೇವರನಾಮ ‘ನನ್ನಿಂದದ ನಾನೇ ಜನಿಸಿಬಂದೆ ಕೃಷ್ಣ’ ಎನ್ನುವ ಕೃತಿಯಲ್ಲಿ ಅಂತಿಮ ನೃತ್ಯ ಅಭಿನಯಕ್ಕೆ ಹೆಚ್ಚು ಒತ್ತು ನೀಡಲಾಯಿತು. ನಟುವಾಂಗದಲ್ಲಿ ಪ್ರಸನ್ನ ಕುಮಾರ್,  ಶ್ರೀಹರಿ ರಂಗಸ್ವಾಮಿ (ಮೃದಂಗ), ಜಯರಾಮ್ (ಕೊಳಲು) ಮತ್ತು  ಶ್ರೀವತ್ಸ ತಮ್ಮ ಸುಮದುರ ಕಂಠದಿಂದ ಕಾರ್ಯಕ್ರಮಕ್ಕೆ ಮೆರಗು ನೀಡಿದರು.

‘ಶಂಕರಂ ಜಗದ್ಗುರು’ ಎಂಬ ನೃತ್ಯರೂಪಕವನ್ನು ಕಲಾಸಂಪದ ವೀಣಾ ಹಾಗೂ ನೃತ್ಯ ತಂಡ ಪ್ರಸ್ತುತಪಡಿಸಿತು. ಶಂಕರಂ ವಿಜಯಂ ಶಂಕರಚಾರ್ಯರ ಕುರಿತಾದ ನೃತ್ಯ ರೂಪಕ ನಂತರ ಶಂಕರಚಾರ್ಯರ ಪ್ರಸಿದ್ಧವಾದ ‘ಭಜ ಗೋವಿಂದಂ’ಗೆ ರಸಿಕ ಮಿತ್ರರು ತಾಳ ಹಾಕಲು ಮರೆಯಲಿಲ್ಲ. ಶನ್ಮತೆ ಹಾಗೂ ತಿಲ್ಲಾನಗಳು ಕಾರ್ಯಕ್ರಮದ ಸುಸಂಪನ್ನತೆಯನ್ನು ಒದಗಿಸಿದವು.

ನೃತ್ಯ ರೂಪಕದಲ್ಲಿ ಸಹಕಾರಿಸಿದ ಕಲಾವಿದರು : ಸುಷ್ಮಾ, ಅಪರ್ಣ, ಶ್ರೀಕಲಾ, ಸುಜಾ ಸಂದೀಪ್, ಲಾವಣ್ಯ, ಅದಿತಿ, ಶ್ರುತಿ, ಶಾಶ್ವತ್, ಸಂಯುಕ್ತ, ಬೃಂದಾರಾಜು, ಸ್ಮಿತಾ, ತನುಶ್ರೀ, ಅರ್ಚನ ಹಾಗೂ ಹೇಮಲತಾ. ನಟುವಾಂಗದಲ್ಲಿ ದ್ವಾರಿತಾ ವಿಶ್ವನಾಥ್, ಬಾಲಸುಬ್ರಹ್ಮಣ್ಯ ಶರ್ಮ (ಹಾಡುಗಾರಿಕೆ),  ಶ್ರೀಹರಿ ರಂಗಸ್ವಾಮಿ (ಮೃದಂಗ), ನರಸಿಂಹ ಮೂರ್ತಿ (ಕೊಳಲು) ಮತ್ತು  ಕಾರ್ತೀಕ್ ದಾತರ್ (ರಿದಂ ಪ್ಯಾಡ್)  ಕಾರ್ಯಕ್ರಮಕ್ಕೆ ಸೂಕ್ತ ಸಾಥ್ ನೀಡಿದರು.

ಭರತನಾಟ್ಯದ ನೃತ್ಯ–ಕೂಚಿಪುಡಿ -ಜುಗಲ್ಬ೦ದಿ
ನೃತ್ಯ ಕಲಾವಿದ ಗುರು ಸಂಜಯ್ ಶಾಂತಾರಾಮ್ ಮಾರ್ಗದರ್ಶನದಲ್ಲಿ ಪಳಗಿದ ಶಿಷ್ಯಂದಿರಾದ ನಿಖಿಲಾ ಲೋಕೇಶ್ ಹಾಗೂ ಶಿವಾನಿ ಶಿವಕುಮಾರ್ ಭರತನಾಟ್ಯ ಹಾಗೂ ಕೂಚಿಪುಡಿ -ಜುಗಲ್ಬಂದಿಯನ್ನು ಇತ್ತೀಚೆಗೆ ಯವನಿಕಾ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಆರಂಭಿಕ ಪ್ರಸ್ತುತಿ ಪುಪ್ಪಾಂಜಲಿ. ಮೃದು ಮಂದಹಾಸ, ಲಯಬದ್ಧ, ಚುರುಕಾದ ಚಲನೆಯಿಂದ ಜನರನ್ನು ಮುದಗೊಳಿಸುತ್ತಾ ನಿಖಿಲಾ ಲೋಕೇಶ್ ಹಾಗೂ ಶಿವಾನಿ ಶಿವಕುಮಾರ್ ನರ್ತಿಸಿದರು. ‘ರಂಜನಿಮಾಲಾ -ರಾಧಮಾಲಿಕ’ದಲ್ಲಿ ಜತಿಗಳ ಜೋಡಣೆ ಪ್ರಬುದ್ಧವಾಗಿತ್ತು.

ನಂತರ ಸಂಚಾರಿಯ ನೃತ್ಯಬಂಧ ‘ಮಹಾದೇವ ಶಿವಾ ಶಂಭೂ’ವಿನಲ್ಲಿ ಶಿವನ ಅಮೋಘ ರೂಪ ಪ್ರರ್ದಶಿಸುವಲ್ಲಿ ಸಂಚಾರಿ ಭಾವ ಪ್ರಶಂಸನೀಯವಾಗಿತ್ತು, ಕಾರ್ಯಕ್ರಮದಲ್ಲಿ ಮುಂದಿನ ಪ್ರಸ್ತುತಿ ‘ಗುಮ್ಮನ ಕರೆಯದಿರೆ ಅಮ್ಮ’. ಈ ದೇವಿಸುತ್ತಿಯಲ್ಲಿ ಜತಿಗಳ ಜೋಡಣೆ ವಿಶಿಷ್ಟವಾಗಿತ್ತು. ತರಂಗಮ  ಹಂಸನಂದಿ ರಾಗದಲ್ಲಿ ಮೂಡಿಬಂದಿತ್ತು. ಕಲಾವಿದೆಯರು ಅರ್ಥಪೂರ್ಣವಾಗಿ ಅಭಿವ್ಯಕ್ತಪಡಿಸಿದರು. ಮಂಗಳಂ ಕೃತಿಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.

ಸಶಕ್ತ ಗುರುವಿನ ಮಾರ್ಗದರ್ಶನ, ನೃತ್ಯ ಸಂಯೋಜನೆ, ನಟುವಾಂಗ ಹಾಗೂ ಹಾಡುಗಾರಿಕೆಯ ಸಂಜಯ್ ಶಾಂತಾರಾಮ್ ಸಾಧನೆ ಗಮನಾರ್ಹ. ಕೊಳಲಿನಲ್ಲಿ ಗಣೇಶ ಅವರ ಮಾಧುರ್ಯ ಹಾಗೂ ಮೃದಂಗದಲ್ಲಿ ಬೆಂಗಳೂರು ಬಾಲಕೃಷ್ಣನ್ ಅವರ ಸ್ಪಷ್ಟ ನುಡಿತವನ್ನು ಮೆಚ್ಚಲೇಬೇಕು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT