ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತದ ‘ಯಂಗ್‌ ಮೇಸ್ಟ್ರೊ’ ಗಾನ ಕಥನ

Last Updated 13 ಏಪ್ರಿಲ್ 2016, 19:51 IST
ಅಕ್ಷರ ಗಾತ್ರ

ಗೋವಾ ಆಕಾಶವಾಣಿ ಸ್ಟುಡಿಯೊದಲ್ಲಿ ರೆಕಾರ್ಡಿಂಗ್‌ನಲ್ಲಿದ್ದಾಗ ಕಚೇರಿಗೊಂದು ಕರೆ ಬಂತು. ಆ ಯುವ ಗಾಯಕ ರಿಸೀವರ್‌ ತೆಗೆದುಕೊಳ್ಳುತ್ತಿದ್ದಂತೆ, ಆ ಕಡೆಯಿಂದ ‘ನಾನು ಭೀಮಸೇನ ಜೋಶಿ ಮಾತನಾಡುತ್ತಿದ್ದೇನೆ’ ಎಂಬ ಶಬ್ದ ಕಿವಿಗೆ ಬಿತ್ತು. ಅದನ್ನು ಕೇಳುತ್ತಿದ್ದಂತೆ ಮಾತೇ ಹೊರಡಲಿಲ್ಲ. ದೇವರೆಂದೇ ಪೂಜಿಸುತ್ತಿದ್ದ ಭೀಮಣ್ಣನನ್ನು ಏನೆಂದು ಕರೆಯಬೇಕು ಎಂಬುದೇ ಅವರಿಗೆ ತಿಳಿಯಲಿಲ್ಲ.

ಹಾ... ಎನ್ನುವಷ್ಟರಲ್ಲಿ ಭೀಮಸೇನರು, ‘ಪುಣೆಯಲ್ಲಿ ಸವಾಯಿ ಗಂಧರ್ವರ ಸಂಗೀತೋತ್ಸವ ಇದೆ. ನೀನು ಬಂದು ಹಾಡಬೇಕು’ ಎಂದು ಫೋನ್‌ ಇಟ್ಟುಬಿಟ್ಟರು.ಬೆವತುಹೋಗಿದ್ದ ಅವರು ಕೆನ್ನೆಯನ್ನೊಮ್ಮೆ ಜಿಗುಟಿಕೊಂಡರು. ಕನಸಲ್ಲ, ವಾಸ್ತವ ಎಂಬ ಅರಿವಾಯಿತು. 22 ವರ್ಷ ವಯಸ್ಸಿನ ಆ ಯುವ ಸಂಗೀತಗಾರನಿಗೆ ಅದು ದೊಡ್ಡ ಅವಕಾಶವಾಗಿತ್ತು. ಆ ಯುವಕನೇ ಜಯತೀರ್ಥ ಮೇವುಂಡಿ.

‘ಪುಣೆ ಜನ ಸಂಗೀತ ಕೇಳಿ ವ್ಹಾ ಎಂದರೆ ಇಡೀ ಜಗತ್ತು ವ್ಹಾ ಎನ್ನುತ್ತದೆ’ ಎಂಬ ಮಾತು ಪದೇ ಪದೇ ಅನುರಣಿಸುತ್ತಿತ್ತು. ಪುಣೆಯ ಸವಾಯಿ ಗಂಧರ್ವ ಸಂಗೀತೋತ್ಸವ ಆರಂಭವಾಯಿತು. ಮುಂಜಾನೆ ಭೀಮಸೇನರ ಆಶೀರ್ವಾದ ಪಡೆದು ವೇದಿಕೆ ಹತ್ತಿದ್ದರು. 40 ನಿಮಿಷಕ್ಕಿಂತ ಹೆಚ್ಚು ಹಾಡಕೂಡದೆಂಬ ಭೀಮಣ್ಣನ ಆಜ್ಞೆ ತಲೆಯೊಳಗಿತ್ತು. ಆದರೆ ಆ ಕ್ಷಣದಲ್ಲಿ ಎದೆ ಬಡಿತ ತಾಳ ತಪ್ಪಿತ್ತು. 25 ಸಾವಿರಕ್ಕೂ ಹೆಚ್ಚು ಮಂದಿಯ ಕಂಡೊಡನೆ ಕಣ್ಣು ಮಂಜಾದವು.

ದಿಗ್ಗಜರಾದ ಜಗದೀಶ್‌ ಪ್ರಸಾದ್‌, ಶಿವಕುಮಾರ್‌ ಶರ್ಮಾ, ಗಂಗೂಬಾಯಿ ಹಾನಗಲ್‌ ಅವರನ್ನು ಕಂಡಾಗ ಆಕಾಶವೇ ತಲೆ ಮೇಲೆ ಬಿದ್ದಂತಾಯಿತು. ‘ಈ ಅವಕಾಶ ಯಾಕಾದರೂ ಬಂತಪ್ಪ...’ ಎಂದು ಶಪಿಸಿಕೊಳ್ಳುತ್ತಿರುವಾಗ ವೇದಿಕೆ ಮೇಲೆ ಬಂದ ಭೀಮಸೇನರು ತಂಬೂರ ಶೃತಿಗೊಳಿಸಿ ಮುಂದೆಯೇ ಕುಳಿತರು. ಭಯ ನೂರ್ಮಡಿಯಾಯಿತು.

ಸಹಸ್ರ ನೋಟಗಳು ಇವರ ಮೇಲೇ ನೆಟ್ಟಿದೆ, ಶೃತಿ ನುಡಿಯುತ್ತಿದೆ, ಸಾಥಿಗಳು ಸಜ್ಜಾಗಿದ್ದಾರೆ. ಆದರೆ ಗಾಯಕ ‘ಯಮನ್‌’ ಆಲಾಪ ಆರಂಭಿಸುವಷ್ಟರಲ್ಲಿ ಸ್ವರಗಳೇ ನಾಲಗೆ ಮೇಲೆ ಬರುತ್ತಿಲ್ಲ. ಹುಡುಗನ ಪರದಾಟ ಕಂಡ ಭೀಮಣ್ಣ ‘ಹಾಡುವುದಕ್ಕೆ ಮೊದಲು ನಾನು ತಾನ್‌ಸೇನನ ಅಪ್ಪ ಎಂದುಕೊಂಡೇ ಹಾಡಬೇಕು’ ಎಂದು ಘರ್ಜಿಸಿ ಪಕ್ಕಕ್ಕೆ ಹೋಗಿ ಕುಳಿತರು.

ಯುವಕನಿಗೆ ಧೈರ್ಯ ಬಂದಂತಾಗಿ ಕಣ್ಣುಮುಚ್ಚಿ ಯಮನ್‌ ಆರಂಭಿಸಿದರು. ಆ ಹಾಡಿಗೆ ಪುಣೆ ಜನರು ತಲೆದೂಗಿದರು. ‘ಒನ್ಸ್‌ ಮೋರ್‌’ ಎಂಬ ದನಿ ಸಭಾಂಗಣದೊಳಗೆ ಮೊಳಗಿತು. ಮೂರು ಬಾರಿ ಯಮನ್‌ ಆಲಿಸಿದ ಸಂಗೀತಪ್ರಿಯರು ಆ ಯುವಕನ ಅಭಿಮಾನಿಗಳಾದರು. ‘ಪಿಯಾಕಿ ನಜರಿಯಾ’ ಆಲಾಪಕ್ಕೆ ಜನರ ಮನಸ್ಸು ಕರಗಿ ಹೋಗಿತ್ತು.

ಕಛೇರಿ ಮುಗಿದೊಡನೆ ಭೀಮಣ್ಣ ಯುವಕನ ಬೆನ್ನು ತಟ್ಟಿದರು, ಜನರು ಸಾಲಾಗಿ ಬಂದು ಆಟೊಗ್ರಾಫ್‌ ಪಡೆದುಕೊಂಡರು. ಯುವ ವಿದ್ವಾಂಸ ಜಯತೀರ್ಥ ಮೇವುಂಡಿ ಅವರ ಸಂಗೀತ ಯಾತ್ರೆಗೆ ಅಲ್ಲಿ ಮುನ್ನುಡಿ ಬರೆದಾಗಿತ್ತು!

1995ರಲ್ಲಿ ಪುಣೆಯಲ್ಲಿ ಸಂಗೀತ ಯಾತ್ರೆ ಆರಂಭಿಸಿದ ಪಂ. ಜಯತೀರ್ಥ ಮೇವುಂಡಿ ಅವರು ಇಲ್ಲಿಯವರೆಗೂ ಹಿಂದೆ ತಿರುಗಿ ನೋಡಿಲ್ಲ. ಹಿಂದೂಸ್ತಾನಿ ಶಾಸ್ತ್ರಿಯ ಸಂಗೀತದ ಮೇರು ಸಂಗೀತಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಅವರು ವಿಶ್ವದಾದ್ಯಂತ ಲಕ್ಷಾಂತರ ಹೃದಯಗಳಲ್ಲಿ ಹಾಡಿನಿಂದ ಆನಂದ ತುಂಬಿದ್ದಾರೆ. ಕಿರಾಣಾ ಘರಾಣೆಯಲ್ಲಿ ದಾಖಲೆ ಸೃಷ್ಟಿಸಿದ್ದಾರೆ. ಪೂರ್ವಿ, ಬಿಹಾಗ್‌, ಮಾರ್ವಾ, ಮಾಲ್‌ಕೌಂಸ್‌ ಮುಂತಾದ ರಾಗಗಳನ್ನು ಹೂವಿನ ದಳ ಬಿಡಿಸುವಂತೆ ಬಿಚ್ಚಿಡುವ ಅವರು ಹೃದಯಕ್ಕೆ ಆಪ್ತರಾಗುತ್ತಾರೆ.

ಸಂಗೀತದ ಗಂಧಗಾಳಿಯೂ ಇಲ್ಲದ ಕುಟುಂಬದಲ್ಲಿ ಹುಟ್ಟಿದ ಅವರು ಹುಬ್ಬಳ್ಳಿಯ ಅಮಟೆ ಚಾಳದ ಪುಟ್ಟ ಮನೆಯೊಳಗೆ ಸ್ವರ ಅಭ್ಯಾಸ ಮಾಡುತ್ತಿರುವಾಗ ಅಕ್ಕಪಕ್ಕದವರ ಕೊಂಕು ಮಾತಿಗೆ ಜಗ್ಗಿದವರಲ್ಲ, ಕಿವಿ ಮುಚ್ಚಿಕೊಂಡವರನ್ನು ಲೆಕ್ಕಕ್ಕೆ ತೆಗೆದುಕೊಂಡವರಲ್ಲ. ಹಟಬಿಡದ ತ್ರಿವಿಕ್ರಮನಂತೆ ಸಂಗೀತಾಭ್ಯಾಸ ಮಾಡಿದ ಮೇವುಂಡಿ ಅವರ ಬದುಕು ತಪಸ್ಸು.

ದೇಶದ ಪ್ರಮುಖ ಸಭಾಗಳು, ಉತ್ಸವ ಮಾತ್ರವಲ್ಲದೆ ಮಹಾರಾಷ್ಟ್ರದ ಹಳ್ಳಿಹಳ್ಳಿಗಳು, ರಾಜಸ್ತಾನದ ಕುಗ್ರಾಮಗಳ ಶಾಲೆಗಳು, ಕಾಶಿಯ ಪವಿತ್ರ ತಪೋಭೂಮಿಯಲ್ಲಿ ಜಯತೀರ್ಥರು ಸಂಗೀತ ಸುಧೆ ಹರಿಸಿದ್ದಾರೆ. ಮಹಾರಾಷ್ಟ್ರದ ‘ತೇರ್‌’ನಲ್ಲಿರುವ ಭಕ್ತ ಕುಂಬಾರನ ಸಮಾಧಿ ಸ್ಥಳದಲ್ಲಿ ಹಾಡಿ ಹಳ್ಳಿ ಜನರ ಕಣ್ಣಲ್ಲಿ ನೀರು ತುಂಬಿಸಿದ್ದಾರೆ. ತುಳಸೀದಾಸರು ಹನುಮಾನ್‌ ಚಾಲಿಸ್‌ ಬರೆದ ‘ಸಂಕಟ ಮೋರ್ಚಾ ಹನುಮಾನ್‌’ ಭೂಮಿಯಲ್ಲಿ ಭಕ್ತಿಯ ಅಲೆ ಸೃಷ್ಟಿಸಿದ್ದಾರೆ.

ಭೀಮಸೇನ ಜೋಶಿ ಅವರ ನಂತರ ಅದೇ ಗತಿಯಲ್ಲಿ ಹಾಡುವ ಇನ್ನೊಬ್ಬ ಕಲಾವಿದ ಜಯತೀರ್ಥ ಮೇವುಂಡಿ ಎಂದು ಗುರುತಿಸಿಕೊಂಡಿರುವ ಇವರು ಶುದ್ಧ ಸ್ವರಸ್ಥಾನಕ್ಕೆ ಹೆಸರುವಾಸಿಯಾದವರು. ಮೇವುಂಡಿ ಅವರ ಕಛೇರಿಗಳೆಂದರೆ ಸಂಪೂರ್ಣ ಶಾಸ್ತ್ರಬದ್ಧವಾಗಿ ನುಡಿಯುತ್ತವೆ. ಅಖಂಡ ಕಛೇರಿಯಲ್ಲಿ ಅಭಂಗ್‌, ಬಂದಿಶ್‌, ದೇವರನಾಮ ಹಾಡುವಾಗಲೂ ಲಘು ಧಾಟಿಗೆ ಅವರು ಮಾರುಹೋದವರಲ್ಲ.

ಎ.ಆರ್‌. ರೆಹಮಾನ್‌ ಹೇಳಿದ್ದೇನು ಗೊತ್ತಾ?
‘ನನ್ನ ಬದುಕಿನಲ್ಲಿ ಇಬ್ಬರು ವ್ಯಕ್ತಿಗಳು ಪ್ರಭಾವ ಬೀರಿದ್ದಾರೆ. ಬರಾಕ್‌ ಒಬಾಮ ಅವರ ಯಶಸ್ಸಿಗೆ ಕಾರಣದಾದ ಮಿಷೆಲ್‌ ಒಬಾಮ ಒಬ್ಬರು.  ಇನ್ನೊಬ್ಬರು ಹುಬ್ಬಳ್ಳಿಯ ಪಂ. ಜಯತೀರ್ಥ ಮೇವುಂಡಿ...!’ ಈ ಮಾತು ಹೇಳಿದವರು ಬೇರಾರೂ ಅಲ್ಲ, ಖ್ಯಾತ ಸಂಗೀತ ನಿರ್ದೇಶಕ ಎ.ಆರ್‌. ರೆಹಮಾನ್‌. ಅವರು ‘ಪೀಪಲ್‌’ ನಿಯತಕಾಲಿಕೆಗೆ ನೀಡಿದ ಸಂದರ್ಶನದಲ್ಲಿ ಜಯತೀರ್ಥ ಮೇವುಂಡಿ ಅವರ ಗಾನ ಮಾಧುರ್ಯದ ಬಗ್ಗೆ ಗಮನ ಸೆಳೆದಿದ್ದರು.

‘ಜಯತೀರ್ಥರು ಹಾಡುತ್ತಿದ್ದರೆ ನರಗಳಲ್ಲಿ ವಿದ್ಯುತ್‌ ಸಂಚಾರವಾಗುತ್ತದೆ. ಕಣ್ಣುಮುಚ್ಚಿದರೆ ಮುಂದೆ ನದಿ ಹರಿದಂತಾಗುತ್ತದೆ’ ಎಂದು ರೆಹಮಾನ್‌ ವರ್ಣಿಸಿರುವುದು ಮೇವುಂಡಿ ಅವರ ಗಾನ ಪ್ರತಿಭೆಗೆ ಕನ್ನಡಿ ಹಿಡಿದಂತಿದೆ.

‘ಎ.ಆರ್‌. ರೆಹಮಾನ್‌ ಬಹಳ ಭಾವುಕರು, ಸರಳ ಜೀವಿ. ಸಮಯ ಸಿಕ್ಕಾಗಲೆಲ್ಲ ನನ್ನನ್ನು ಚೆನ್ನೈನ ಸ್ಟುಡಿಯೊಗೆ ಆಹ್ವಾನಿಸಿ ಸಂಗೀತ ಕೇಳುತ್ತಾರೆ. ಸಂಗೀತ ಆಲಿಸುತ್ತ ಗಂಟೆಗಟ್ಟಲೆ ಕಣ್ಣುಮುಚ್ಚಿ ಕುಳಿತುಕೊಳ್ಳುತ್ತಾರೆ. ರಾಗದ ಬಗ್ಗೆ, ಸ್ವರ ಸ್ಥಾನದ ಬಗ್ಗೆ ಚರ್ಚೆ ನಡೆಸುತ್ತಾರೆ’ ಎಂದು ಹೇಳುವ ಜಯತೀರ್ಥರು ‘ರೆಹಮಾನ್‌ ಅವರಿಗೆ ನೀವು ಮಾಡಿದ ಮೋಡಿಯೇನು’ ಎಂದು ಕೇಳಿದರೆ ನಗುತ್ತಾ ಗುರುಗಳೆಡೆಗೆ ಕೈ ತೋರುತ್ತಾರೆ.

ರೆಹಮಾನ್‌ ಮಾತ್ರವಲ್ಲದೆ ಲತಾ ಮಂಗೇಶ್ಕರ್‌, ಪಂ. ರವಿಶಂಕರ್‌, ಅಮ್ಜದ್‌ ಅಲಿಖಾನ್‌, ಜಸ್‌ರಾಜ್‌, ಹರಿಹರನ್‌, ಜೇಸುದಾಸ್‌ ಮುಂತಾದವರು ಮೇವುಂಡಿ ಹಾಡಿಗೆ ಮನಸೋತಿದ್ದಾರೆ. ಮೇವುಂಡಿ ಅವರ ಗಾನದಲ್ಲಿರುವ ಅಧ್ಯಾತ್ಮ ಶಕ್ತಿಯನ್ನು  ಮೆಚ್ಚಿಕೊಂಡವರು ಲೆಕ್ಕಕ್ಕಿಲ್ಲ. ಭಾರತದಲ್ಲಿ ಮಾತ್ರವಲ್ಲ, ಅಮೆರಿಕಾ, ಇಂಗ್ಲೆಂಡ್‌, ದುಬೈ, ಮಲೇಷ್ಯಾ, ಅಬುದಾಬಿ, ಸಿಂಗಪುರ ಮಂತಾದ ದೇಶದಲ್ಲೂ ಮೇವುಂಡಿ ಅಭಿಮಾನಿಗಳಿದ್ದಾರೆ.

ಅದು ‘ಯಂಗ್‌ ಮೇಸ್ಟ್ರೊಇನ್‌ ಮ್ಯೂಸಿಕ್‌’ ಪ್ರಶಸ್ತಿ ಸ್ವೀಕರಿಸುವ ಕ್ಷಣ. ರಾಷ್ಟ್ರಪತಿಯಾಗಿದ್ದ ಅಬ್ದುಲ್‌ ಕಲಾಂ ಅವರು ಮೇವುಂಡಿ ಅವರ ಗಾಯನಕ್ಕೆ ಮಗುವಿನಂತೆ ಆನಂದ ಪಟ್ಟಿದ್ದರು. ‘ಅಬ್ದುಲ್‌ ಕಲಾಂ ಅವರು ವೇದಿಕೆ ಮೇಲೆ ಬಂದು ಕೈ ಕುಲುಕಿದಾಗ ನನಗೆ ರೋಮಾಂಚನವಾಯಿತು. ಅದೊಂದು ಶ್ರೇಷ್ಠ ಸನ್ನಿವೇಶ’ ಎಂದು ಹೇಳುವ ಜಯತೀರ್ಥರು, ಅಬ್ದುಲ್‌ ಕಲಾಂ ಅವರ ಪ್ರೀತಿಗೆ ಪಾತ್ರರಾದವರು.

ಮಹಾರಾಷ್ಟ್ರ ಭೂಷಣ...
ಪುಣೆಯ ಸವಾಯಿ ಗಂಧರ್ವ ಉತ್ಸವದ ನಂತರ ಜಯತೀರ್ಥ ಮೇವುಂಡಿ ಅವರು ಮಹಾರಾಷ್ಟ್ರದಲ್ಲಿ ಮನೆ ಮಾತಾದರು. ಮಹಾರಾಷ್ಟ್ರದೆಲ್ಲೆಡೆ ಇವರ ಕಛೇರಿಗಳು ನಡೆದವು.  ‘ಮಹಾರಾಷ್ಟ್ರ ಭೂಷಣ’ ಎಂದು ಬಿರುದಾಂಕಿತರಾದರು. ಮರಾಠಿ ಕಲಿತ ಅವರು ಮರಾಠಿ ಅಭಂಗ್‌ಗಳನ್ನು ಹಾಡಿದರು. ಇದು ಮಹಾರಾಷ್ಟ್ರ ಮಂದಿಗೆ ಬಹಳ ಹಿಡಿಸಿತು. 23ನೇ ವಯಸ್ಸಿನಲ್ಲಿ ಅವರು ಪಂ.ಜಸ್‌ರಾಜ್‌ ಪ್ರಶಸ್ತಿ ಪಡೆದರು. ‘ಸಂಗೀತ ಲೋಕದಲ್ಲಿ ಈ ಹುಡುಗನಿಗೆ ಉಜ್ವಲ ಭವಿಷ್ಯವಿದೆ’ ಎಂದು ಜಸ್‌ರಾಜ್‌ ಹರಸಿದರು. 

ತಿರುವು ಕೊಟ್ಟ ಶಶಿ ವ್ಯಾಸ್‌...
ಖ್ಯಾತ ಸಂಗೀತಗಾರ ಪಂ. ಸಿ.ಆರ್‌. ವ್ಯಾಸ್‌ ಅವರ ಪುತ್ರ ಹಾಗೂ  ಈವೆಂಟ್‌ ಮ್ಯಾನೇಜ್‌ಮೆಂಟ್‌ ಕಂಪೆನಿಯೊಂದರ ಮುಖ್ಯಸ್ಥ ಶಶಿ ವ್ಯಾಸ್‌, ಜಯತೀರ್ಥರ ಸಂಗೀತ ಯಾತ್ರೆಗೆ ತಿರುವು ಕೊಟ್ಟರು. ಮೇವುಂಡಿ ಅವರ ಅಭಿಮಾನಿಯೂ ಆಗಿದ್ದ ಶಶಿ, ಉತ್ಸವಗಳಿಗೆ ಕಲಾವಿದರನ್ನು ಆಯ್ಕೆ ಮಾಡುವಾಗ ನಡೆಯುವ ರಾಜಕಾರಣ ಚೆನ್ನಾಗಿ ಅರಿತಿದ್ದವರು.

ಹೀಗಾಗಿ  ಮೇವುಂಡಿ ಅವರಿಗೆ ಮುಖ್ಯ ಸಭಾ, ಉತ್ಸವಗಳಲ್ಲಿ ಹಾಡುವ ಅವಕಾಶ ಕಲ್ಪಿಸಿದರು. ಉಸ್ತಾದ್‌ ಜಾಕೀರ್‌ ಹುಸೇನ್‌, ಅಮ್ಜದ್‌ ಅಲಿ ಖಾನ್‌, ಶಿವ್‌ಜೀ, ಹರಿಜೀ ಮುಂತಾದ ವಿದ್ವನ್ಮಣಿಗಳ ಮುಖ್ಯ ಕಛೇರಿಗೂ ಮೊದಲು ನಡೆಯುವ ಯುವ ಸಂಗೀತಗಾರರ ಕಛೇರಿಗೆ ಇವರನ್ನು ಆರಿಸುವಲ್ಲಿ ಯಶಸ್ವಿಯಾದರು. ಮೇವುಂಡಿ ಅವರ ಮುಂದೆ ಅವಕಾಶಗಳ ಪ್ರಪಂಚವೇ ತೆರೆದುಕೊಂಡಿತು. ಶಶಿ ಅವರ ಜೊತೆ ಮೇವುಂಡಿ ಇಡೀ ಜಗತ್ತು ಸುತ್ತಿ ಗಾನ ದುಂದುಭಿ ನುಡಿಸಿದರು.

‘ನನ್ನ ತಂದೆ–ತಾಯಿ, ಗುರುಗಳಲ್ಲದೇ ಬೇರಾವ ಗಾಡ್‌ಫಾದರ್‌ ನನಗಿಲ್ಲ. ನನ್ನ ಸಂಗೀತ ಮೆಚ್ಚಿಕೊಂಡಿದ್ದ ಶಶಿ ವ್ಯಾಸ್ ಅವರೇ ನನ್ನ ಗಾಡ್‌ಫಾದರ್‌’ ಎನ್ನುವ ಮೇವುಂಡಿ ಅವರು ಶಶಿ ಅವರ ಬಗ್ಗೆ ಕೃತಜ್ಞತಾ ಭಾವ ವ್ಯಕ್ತಪಡಿಸುತ್ತಾರೆ.

‘ಪ್ರತಿಭೆಯಲ್ಲಿ ಅವರು ರಾಕ್ಷಸರು’ ಎಂದು ಕರ್ನಾಟಕ ಸಂಗೀತ ಸಾಧಕರನ್ನು ಗುರುತಿಸುವ ಮೇವುಂಡಿ ಅವರು ತಮ್ಮ ಜುಗಲ್‌ಬಂದಿ ಕಛೇರಿಗಳಲ್ಲಿ ಹಲವು ದಕ್ಷಿಣಾದಿ ಸಂಗೀತಗಾರರ ಜೊತೆಯಾಗಿದ್ದಾರೆ. ಆ ಭಕ್ತಿಪ್ರಧಾನ ಸಂಗೀತದಲ್ಲಿರುವ ಶ್ರದ್ಧೆ, ಭಕ್ತಿಯನ್ನು ತಮ್ಮ ಸಂಗೀತ ಬದುಕಿನಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಿರುವ ಮೇವುಂಡಿ ಅವರು ಭಾವ ಪ್ರಧಾನವಾಗಿರುವ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಭಕ್ತಿಯ ಅಲೆ ಉಕ್ಕಿಸುವಲ್ಲಿ ಯಶಸ್ವಿಯಾಗಿದ್ದಾರೆ.

20ಕ್ಕೂ ಹೆಚ್ಚು ಆಲ್ಬಂ, ಕೆಸೆಟ್‌ಗಳಲ್ಲಿ ಹಾಡಿರುವ ಮೇವುಂಡಿ ಅವರು ‘ಆಜ್‌ ಸಾ ದಿವಸ್‌ ಮಾಜಾ’ ಸೇರಿ ಹಲವು ಮರಾಠಿ ಚಿತ್ರಗಳಲ್ಲಿ ಹಾಡಿದ್ದಾರೆ. ‘ಕಲ್ಲರಳಿ ಹೂವಾಗಿ’ ಕನ್ನಡ ಚಿತ್ರಕ್ಕೂ ಹಾಡಿದ್ದಾರೆ. ಟೈಮ್ಸ್ ಮೂಸಿಕ್‌ ಸಂಸ್ಥೆ ವತಿಯಿಂದ ‘ರೋಗಕ್ಕಾಗಿ ರಾಗ’ ಪರಿಕಲ್ಪನೆಯಡಿ ವೈದ್ಯಕೀಯ ಗುಣವುಳ್ಳ ರಾಗಗಳ ‘ಹೀಲಿಂಗ್‌ ಮಂತ್ರ’ಗಳನ್ನು ಹಾಡಿರುವ ಅವರು ಸಂಗೀತದಿಂದ ರೋಗ ಗುಣಪಡಿಸುವ ಶಕ್ತಿಯನ್ನು ಬಲವಾಗಿ ಪ್ರತಿಪಾದಿಸುತ್ತಾರೆ. ಭಾರತ ಸರ್ಕಾರದ ‘ಸ್ಪೀಕ್‌ ಮೈಕೆ’ ಸಂಸ್ಥೆ ವತಿಯಿಂದ ಭಾರತದ ಹಲವು ಹಳ್ಳಿಗಳಲ್ಲಿ ಪ್ರವಾಸ ಮಾಡಿರುವ ಅವರು ಮಕ್ಕಳಲ್ಲಿ ಸಂಗೀತದ ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ.

ಮನೆಯೇ ಮ್ಯೂಸಿಯಂ...
ಜಯತೀರ್ಥರು ತಮ್ಮೆಲ್ಲಾ ಸಾಧನೆಯ ಪ್ರತಿರೂಪವಾಗಿ ಹುಬ್ಬಳ್ಳಿಯ ಲಕ್ಷ್ಮಿನಾರಾಯಣ ನಗರದಲ್ಲಿರುವ ಮನೆಗೆ ಮ್ಯೂಸಿಯಂ ರೂಪ ಕೊಟ್ಟಿದ್ದಾರೆ.  ಪ್ರಶಸ್ತಿ ಫಲಕಗಳು, ಅಪರೂಪದ ವಾದ್ಯಗಳು, ಸಾಧಕರೊಂದಿಗೆ ಕಳೆದ ಸನ್ನಿವೇಶದ ಭಾವಚಿತ್ರಗಳನ್ನು ಸಂಗ್ರಹಿಸಿಟ್ಟಿದ್ದಾರೆ. ಸಂಗೀತದ ಅಪರೂಪದ ಪುಸ್ತಕಗಳು ಅಲ್ಲಿವೆ. ಪತ್ನಿ ಮಧುವಂತಿ, ಸಂಗೀತ ವಿದ್ಯಾರ್ಥಿ ಮಗ ಲಲಿತ್‌ ಅವರ ಜೊತೆ ನಾದಲೋಕದಲ್ಲಿ ಸುಂದರ ಜೀವನ ಕಟ್ಟಿಕೊಂಡಿದ್ದಾರೆ.

ಹೊಸ ಹೆಜ್ಜೆ
‘ಕುಗ್ರಾಮಗಳಲ್ಲೂ ಸಂಗೀತಗಾರರು ಹುಟ್ಟಬೇಕು, ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಬೇಕು’ ಎಂಬ ಆಶಯದೊಂದಿಗೆ ‘ರುತ್ವಿಕ್‌ ಫೌಂಡೇಶನ್‌’ ಏಪ್ರಿಲ್ 8ರಂದು ಹುಬ್ಬಳ್ಳಿ–ಧಾರವಾಡ ಅವಳಿನಗರದ ನಡುವಿನ ವೀರೇಂದ್ರ ಹೆಗಡೆ ಕಲಾಕ್ಷೇತ್ರದಲ್ಲಿ ಉದ್ಘಾಟನೆಗೊಂಡಿತು. ಟಾಟಾ ಕ್ಯಾಪಿಟಲ್‌ನ ಸಿಇಓ ಪ್ರವೀಣ್‌ ಕಡ್ಲಿ ಕಟ್ಟಿರುವ ಸಂಸ್ಥೆಗೆ ಅಂದು ಜಯತೀರ್ಥ ಮೇವುಂಡಿ ಸಾರಥ್ಯ ವಹಿಸಿಕೊಂಡರು. ಉದ್ಘಾಟನಾ ಸಮಾರಂಭದಲ್ಲಿ ಅಹೋರಾತ್ರಿ ಸಂಗೀತೋತ್ಸವ ನಡೆಯಿತು. ಬೇಸಿಗೆಯಲ್ಲಿ ನಡೆದ ಸಂಗೀತೋತ್ಸವ ರಸಿಕರ ಮನದಲ್ಲಿ ತಂಗಾಳಿ ಹರಿಸಿತು.

ಅಮ್ಮ ಹಾಕಿದ ಹಾದಿ...
ಜಯತೀರ್ಥ ಮೇವುಂಡಿ ವಸಂತರಾವ್‌– ಸುಧಾಬಾಯಿ ದಂಪತಿಯ ಏಕೈಕ ಪುತ್ರ. ಇಬ್ಬರು ಅಕ್ಕಂದಿರು. ತಾಯಿ ಸುಧಾಬಾಯಿ ಸಂಗೀತಪ್ರಿಯರು. ಮಗನನ್ನು ಸಂಗೀತಗಾರನನ್ನಾಗಿ ಮಾಡುವ ಹಟ ತೊಟ್ಟವರು. ಬಾಲ್ಯದಲ್ಲಿ ಬ್ಯಾಂಕರ್‌ ಮಾಸ್ತರ ಎನ್ನುವ ಸಂಗೀತ ಶಿಕ್ಷಕರ ಬಳಿ ಸಂಗೀತ ಪಾಠಕ್ಕೆ ಮಗನನ್ನು ಸೇರಿಸಿದ್ದರು. ಮೇವುಂಡಿ ಚಾಳದಲ್ಲಿ ಕುಳಿತು ಹಾಡುವಾಗ ಅಕ್ಕಪಕ್ಕದವರು ಆಡಿಕೊಳ್ಳುತ್ತಿದ್ದರು. ಯಾವಾಗಲು ಆ... ಎಂದು ಅಳುತ್ತಾನೆ, ಅವನು ಹಾಳಾಗುತ್ತಿದ್ದಾನೆ ಎಂದು ಭಯ ಹುಟ್ಟಿಸುತ್ತಿದ್ದರು.

ಆದರೆ ತಾಯಿ ಮಾತ್ರ ‘ನನ್ನ ಮಗ ಭಿಕ್ಷೆ ಬೇಡಿದರೂ ಸಂಗೀತದಲ್ಲೇ ಬೇಡಲಿ’ ಎಂಬ ಹಟ ಇಟ್ಟುಕೊಂಡಿದ್ದರು. ಬ್ಯಾಂಕರ್‌ ಮಾಸ್ತರ ಬಳಿ ಆರಂಭಿಕ ಪಾಠ ಕಲಿತ ಮೇವುಂಡಿ ನಂತರ ಸುರೇಂದ್ರ ಸಾ ನಾಕೋಡ ಅವರ ಬಳಿ ಸಂಗೀತಾಭ್ಯಾಸದಲ್ಲಿ ತೊಡಗಿದರು. ನಂತರ ಅರ್ಜುನ್‌ ಸಾ ನಾಕೋಡರ ಬಳಿ 10 ವರ್ಷ ಸಂಗೀತಾಭ್ಯಾಸ ಮಾಡಿದರು.

ಇಲ್ಲಿಂದ ಮೇವುಂಡಿ ಅವರ ಬದುಕು ಸಂಪೂರ್ಣವಾಗಿ ಸಂಗೀತ ಲೋಕದೆಡೆಗೆ ತೆರಳಿತು. ಆ ನಂತರ ಪಂ. ಭೀಮಸೇನ ಜೋಶಿ ಅವರ ಶಿಷ್ಯ ಪಂ. ಶ್ರೀಪತಿ ಪಾಡಿಗಾರ್‌ ಅವರ ಬಳಿ ಅಭ್ಯಾಸ ಮುಂದುವರಿಸಿದರು. 

1993ರಲ್ಲಿ ಗೋವಾ ಆಕಾಶವಾಣಿಯಲ್ಲಿ ನಿಲಯ ಕಲಾವಿದರಾಗಿ ಗೋವಾ ಸೇರಿದರು. ಆಗಲೂ ಓಣಿಯ ಜನರು ವ್ಯಂಗ್ಯ ಮಾಡಿದರು. ‘ಮಗ ಗೋವಾಕ್ಕೆ ಹೋದರೆ ಕುಡಿತ ಕಲಿತು ಹಾಳಾಗುತ್ತಾನೆ’ ಎಂದರು. ಆದರೆ ತಾಯಿ ಎಂದೂ ಸಂಗೀತ ಯಾತ್ರೆಗೆ ಅಡ್ಡಿಯಾಗಲಿಲ್ಲ. ಮೇವುಂಡಿ ಅವರು 12 ವರ್ಷ ಗೋವೆ ಆಕಾಶವಾಣಿಯಲ್ಲಿ ಕಲಾವಿದರಾಗಿ ದುಡಿದರು.

ದೇಶದ ಎಲ್ಲ ಆಕಾಶವಾಣಿ ಕೇಂದ್ರಗಳಲ್ಲಿ ಅವರ ಗಾಯನ ಪ್ರಸಾರಗೊಳ್ಳುತ್ತಿತ್ತು. ಅವರ ವೇದಿಕೆ ಕಾರ್ಯಕ್ರಮಗಳು ಹೆಚ್ಚಾದಂತೆ ಆಕಾಶವಾಣಿ ತ್ಯಜಿಸಿ ಸ್ವತಂತ್ರ ಸಂಗೀತಗಾರರಾಗಿ ನೆಲೆ ಕಂಡುಕೊಂಡರು.

‘ನನ್ನ ತಾಯಿ ಹೇಳಿದ ಮಾತೇ ಸತ್ಯವಾಯಿತು. ನಾನು ಸಂಗೀತದಲ್ಲೇ ಜೀವನ ಕಂಡುಕೊಂಡೆ. ಅಪ್ಪ ನನ್ನ ಎಲ್ಲ ಗೆಲುವು ಕಂಡು ಹೋದರು. ಆದರೆ ಅಮ್ಮ ನಾನು ಗೆಲ್ಲುವಷ್ಟರಲ್ಲಿ ನನ್ನನ್ನು ಬಿಟ್ಟು ಹೋಗಿದ್ದರು. ಈ ನನ್ನ ಸಂಗೀತ ಜೀವನ ತಾಯಿ ಕೊಟ್ಟ ಪ್ರೀತಿ’ ಎನ್ನುವ ಮೇವುಂಡಿ ಅವರು ತಂದೆ– ತಾಯಿಯ ಚಿತ್ರ ದಿಟ್ಟಿಸುತ್ತಾ ಕಣ್ಣಲ್ಲಿ ನೀರು ತುಂಬಿಕೊಂಡರು. ಪಂ. ಜಯತೀರ್ಥ ಮೇವುಂಡಿ ಅವರನ್ನು ಸಂಪರ್ಕಿಸಲು ಮೊ: 8496911177 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT