ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಘರ್ಷಕ್ಕೆ ಧರ್ಮದ ದುರ್ಬಳಕೆ ಬೇಡ

ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಕಿವಿಮಾತು
Last Updated 25 ಜನವರಿ 2015, 19:30 IST
ಅಕ್ಷರ ಗಾತ್ರ

ನವದೆಹಲಿ: ಸಂಘರ್ಷಕ್ಕೆ ಧರ್ಮ ಕಾರಣ­ವಾ­ಗ­ಬಾರದು. ವಿವಿಧ ಧರ್ಮಗಳ ನಡು­ವಣ ಸಹನೆ, ಒಳ್ಳೆಯ ಭಾವನೆಗೆ ಧಕ್ಕೆ ಬರ­ದಂತೆ ನಡೆದುಕೊಳ್ಳಬೇಕು ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಕಿವಿಮಾತು ಹೇಳಿದ್ದಾರೆ.

‘ಭಾರತವು, ಒಗ್ಗಟ್ಟಿನಲ್ಲಿ ಶಕ್ತಿಯಿದೆ. ದಬ್ಬಾಳಿಕೆಯಲ್ಲಿ ದೌರ್ಬಲ್ಯವಿದೆ ಎಂದು ಜಗತ್ತಿಗೆ ಸಾರಿದೆ. ನಾವು ಒಪ್ಪಿಕೊಂಡಿ­ರುವ ಸಂವಿಧಾನ ನಮ್ಮ ಪ್ರಜಾಪ್ರಭು­ತ್ವದ ಪವಿತ್ರ ಗ್ರಂಥ. ಅದು ಸಮಾಜದಲ್ಲಿರುವ ಬಹು ಸಂಸ್ಕೃತಿ ನಡುವಣ ಸಹನೆ, ಸಹಬಾಳ್ವೆ ಪ್ರತಿಪಾದಿಸುತ್ತದೆ. ಈ ಮೌಲ್ಯಗಳನ್ನು ಅತ್ಯಂತ ಜಾಗರೂಕತೆಯಿಂದ ಕಾಪಾಡಿ­ಕೊಂಡು ಬರಬೇಕಾಗಿದೆ’ ಎಂದು 66ನೇ ಗಣರಾಜ್ಯೋತ್ಸವದ ನಿಮಿತ್ತ ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಮನವಿ ಮಾಡಿದರು.

ಕೆಲವು ಬಲಪಂಥೀಯ ಪಕ್ಷಗಳು ಘರ್‌ ವಾಪಸಿ, ನಾಥೂರಾಂ ಗೋಡ್ಸೆ ಪ್ರತಿಮೆ ಅನಾವರಣ, ಹಿಂದೂ ಜನಸಂಖ್ಯೆ ಹೆಚ್ಚ­ಳಕ್ಕೆ ಮಹಿಳೆಯರು ಹತ್ತು ಮಕ್ಕಳನ್ನು ಹೆರ­ಬೇಕೆಂದು ಪ್ರತಿಪಾದಿಸುತ್ತಿರುವ ಸಮಯ­ದಲ್ಲಿ ರಾಷ್ಟ್ರಪತಿಗಳು ದೇಶದ ವೈವಿಧ್ಯತೆ ರಕ್ಷಣೆ ಕುರಿತು ಮಾತನಾಡಿದ್ದಾರೆ.

ಪ್ರಜಾಪ್ರಭುತ್ವ ವಿರೋಧಿ ಕ್ರಮ: ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಮಾರ್ಗ ಹಿಡಿದಿರುವ ಕುರಿತು ಎಚ್ಚರಿಸಿದ್ದ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ, ‘ಸಂಸತ್ತಿನೊಳಗೆ ಚರ್ಚಿಸದೆ ಕಾನೂನು­ಗಳನ್ನು ಮಾಡು­ವುದು ಜನರು ತೋರಿರುವ ವಿಶ್ವಾಸಕ್ಕೆ ದ್ರೋಹ ಬಗೆದಂತಷ್ಟೇ ಅಲ್ಲ, ಪ್ರಜಾ­ಪ್ರಭುತ್ವ ವಿರೋಧಿ ಕ್ರಮವೂ ಹೌದು’ ಎಂದು ಕಟುವಾಗಿ ಹೇಳಿದ್ದಾರೆ.

ಸುಸ್ಥಿರ ಸರ್ಕಾರ ಬೇಕೆಂದು ಅಪೇಕ್ಷಿಸಿ­ದ್ದಾರೆ. ದಕ್ಷ, ಶುದ್ಧ, ಪಾರದರ್ಶಕ, ಹೊಣೆ­­ಗಾರಿಕೆ ಮತ್ತು ನಾಗರಿಕ ಸ್ನೇಹಿ ಆಡಳಿತ ನಿರೀಕ್ಷಿಸಿ ಜನರು ಮತ ಹಾಕಿ­ದ್ದಾರೆ. ಅವರ ಕೆಲಸವನ್ನು ಮುತುವರ್ಜಿ­ಯಿಂದ ಮಾಡಿದ್ದಾರೆ. ಜನರ ವಿಶ್ವಾಸಕ್ಕೆ ಚ್ಯುತಿ ಬರದಂತೆ ನಡೆದುಕೊಳ್ಳುವುದು ಚುನಾಯಿತ ಸರ್ಕಾರದ ಕರ್ತವ್ಯ ಎಂದು ರಾಷ್ಟ್ರಪತಿ ತಿಳಿಸಿದರು.

ಶಾಸಕಾಂಗದ ಮಹತ್ವ ಕುರಿತು ಉಲ್ಲೇಖಿಸಿದ ರಾಷ್ಟ್ರಪತಿಗಳು, ಯಾವುದೇ ಮಸೂದೆ ಕಾಯ್ದೆ ಆಗುವ ಮುನ್ನ ಶಾಸನ ಸಭೆಯಲ್ಲಿ ಸಮಗ್ರವಾಗಿ ಚರ್ಚೆ ಆಗಬೇಕು. ಆ ಮಸೂದೆ ಬಗ್ಗೆ ಇರುವ ಎಲ್ಲ ಗೊಂದಲಗಳು, ಭಿನ್ನಾ­ಭಿಪ್ರಾಯಗಳು ನಿವಾರಣೆ ಆಗಬೇಕು. ಚರ್ಚೆ ಮಾಡದೆ ಕಾನೂನುಗಳನ್ನು ಮಾಡಿದರೆ ಸಂಸತ್ತಿಗೆ ಯಾವ ಮಹತ್ವ ಇರುವುದಿಲ್ಲ. ಜನರ ವಿಶ್ವಾಸಕ್ಕೂ ಭಂಗ ಬರಲಿದೆ ಎಂದು ಎಚ್ಚರಿಸಿದರು.

ಕೆಲ ದಿನಗಳ ಹಿಂದೆ ಪ್ರಣವ್‌ ಮುಖರ್ಜಿ ಸರ್ಕಾರ ಸುಗ್ರೀವಾಜ್ಞೆಗಳ ದಾರಿ ಹಿಡಿದಿರುವುದಕ್ಕೆ ಸೂಚ್ಯವಾಗಿ ಆಕ್ಷೇಪಿಸಿದ್ದರು.  ಸರ್ಕಾರಕ್ಕೆ ಇರುವ ಈ ಅಧಿಕಾರವನ್ನು ವಿಶಿಷ್ಟ ಉದ್ದೇಶಕ್ಕೆ ಮಾತ್ರ ಬಳಸಬೇಕು. ಅತ್ಯಂತ ವಿಶೇಷ ಸಂದರ್ಭ­ದಲ್ಲಿ ಉಪಯೋಗ ಮಾಡಬೇಕು ಎಂದು ಸಲಹೆ ಮಾಡಿದ್ದರು.

ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಏಳು ತಿಂಗಳಲ್ಲಿ ಹತ್ತು ಸುಗ್ರೀ­ವಾಜ್ಞೆ ಹೊರ­ಡಿಸಿರುವ ಕುರಿತು ರಾಷ್ಟ್ರಪತಿ­ಗಳು ಪುನಃ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಹಿಳೆಯರ ಘನತೆ: ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ಕುರಿತು ಕಳವಳ ವ್ಯಕ್ತಪಡಿಸಿರುವ ಪ್ರಣವ್‌ ಮುಖರ್ಜಿ, ಮಹಿಳೆಯರ ಅಪಹರಣ, ಅತ್ಯಾಚಾರ, ಕೊಲೆ, ವರದಕ್ಷಿಣೆ ಸಾವಿನ ಪ್ರಕರಣಗಳು ನಿಲ್ಲಬೇಕು. ಈ ಪ್ರಕರಣಗಳು ಮಹಿಳೆ­ಯರನ್ನು ಮನೆಯೊಳಗೇ ಭಯದಿಂದ ಬದುಕುವಂತೆ ಮಾಡಿವೆ. ಇಂತಹ ವಿಕೃತಗಳಿಗೆ ಕಡಿವಾಣ ಹಾಕುವ ಮೂಲಕ ಮಹಿಳೆಯರ ಗೌರವ ಎತ್ತಿ ಹಿಡಿಯಬೇಕೆಂದು ನಾಗರಿಕರಿಗೆ ಮನವಿ ಮಾಡಿದರು. ಮಹಿಳೆಯರನ್ನು ಗೌರವಿಸಿ, ಸಬಲಗೊಳಿಸುವ ದೇಶ ಮಾತ್ರ ಜಾಗತಿಕ ಶಕ್ತಿಯಾಗಿ ಬೆಳೆಯಲು ಸಾಧ್ಯ ಎಂದು ತಿಳಿಸಿದರು.

ರವೀಂದ್ರನಾಥ ಟ್ಯಾಗೋರ್‌ ಮಹಿಳೆಯರನ್ನು ಅತ್ಯಂತ ಗೌರವದಿಂದ ಕಾಣುತ್ತಿದ್ದರು. ಅವರನ್ನು ದೇವರೆಂದೇ ಭಾವಿಸಿದ್ದರು. ನಾವು ಪೋಷಕರಾಗಿ, ಶಿಕ್ಷಕರಾಗಿ ಮತ್ತು ನಾಯಕರಾಗಿ ವಿಫಲರಾಗಿರುವುದರಿಂದ ನಮ್ಮ ಮಕ್ಕಳು ಮಹಿಳೆಯರಿಗೆ ಗೌರವ ಕೊಡುವುದನ್ನು ಮರೆತಿದ್ದಾರೆ. ಸೌಜನ್ಯದ ನಡವಳಿಕೆಗೆ ತಿಲಾಂಜಲಿ ನೀಡಿದ್ದಾರೆಂದು ಅವರು ನುಡಿದರು.

ನಾವು ಈ ವರ್ಷ ಮಹತ್ಮಾ ಗಾಂಧೀಜಿ ದಕ್ಷಿಣ ಆಫ್ರೀಕಾದಿಂದ ಸ್ವದೇಶಕ್ಕೆ ಹಿಂತಿರುಗಿದ ಶತಮಾ­ನೋತ್ಸವ ಆಚರಿಸುತ್ತಿದ್ದೇವೆ. ಆದರೆ, ಮಹಾತ್ಮನನ್ನು ನೋಡಿ ಕಲಿಯುವ ಕೆಲಸ ಮಾಡಿಲ್ಲ. 1915ರಲ್ಲಿ ಅವರು ಮರಳಿದ ಬಳಿಕ ಮಾಡಿದ ಮೊದಲ ಕೆಲಸ ಕಣ್ಣು ತೆರೆದಿಟ್ಟುಕೊಂಡಿದ್ದು. ಬಾಯಿ ಬಂದ್‌ ಮಾಡಿಕೊಂಡಿದ್ದು. ಅವರಿಂದ ನಾವು ಕಲಿಯಬೇಕಾಗಿದೆ ಎಂದು ಕಿವಿಮಾತು ಹೇಳಿದರು.

ಭಯೋತ್ಪಾದನೆ: ಪಾಕಿಸ್ತಾನದ ಹೆಸರು ಹೇಳದೆ ಭಯೋತ್ಪಾದನೆ ಕುರಿತು ಕಟುವಾಗಿ ಟೀಕಿಸಿದ ಪ್ರಣವ್‌ ಮುಖರ್ಜಿ, ನಮ್ಮ ಪ್ರಗತಿಗೆ ಅಡ್ಡಿ ಉಂಟು ಮಾಡಲು ವಿರೋಧಿ­ಗಳು ಯಾವ ಕೆಲಸ ಮಾಡು­ವುದಕ್ಕೂ ಹೇಸುವುದಿಲ್ಲ ಎಂದರು. ರಾಷ್ಟ್ರ ರಾಷ್ಟ್ರಗಳ ನಡುವಿನ ಸಂಘರ್ಷ ಗಡಿಗಳಲ್ಲಿ ರಕ್ತದೋಕುಳಿಗೆ ಕಾರಣ­ವಾಗಿದೆ. ಭಯೋತ್ಪಾದನೆಯಂಥ ಸಾಮಾ­ಜಿಕ ಪಿಡುಗು ಬೆಳೆಯಲೂ ಪ್ರೇರಣೆಯಾಗಿದೆ ಎಂದರು.

ಗಡಿಗಳಲ್ಲಿ ಭಯೋತ್ಪಾದನೆ ಮತ್ತು ಹಿಂಸೆಗೆ ಪ್ರಚೋದನೆ ನೀಡುವ ಮೂಲಕ ನಮ್ಮ ಪ್ರಗತಿಗೆ ಅಡ್ಡಿಪಡಿಸುವುದನ್ನು ನೋಡಿಕೊಂಡು ಸುಮ್ಮನೆ ಕೂರಲಾ­ಗುವುದಿಲ್ಲ. ಶಾಂತಿ, ಸಮಾನತೆ ಮತ್ತು ಉತ್ತಮ ನೆರೆಹೊರೆ ನಮ್ಮ ವಿದೇಶಾಂಗ ನೀತಿ ಮೂಲ ಮಂತ್ರವಾಗಿದ್ದರೂ, ನಮ್ಮ ಮೇಲೆ ಪರೋಕ್ಷ ಯುದ್ಧ ನಡೆಸುವ ಶಕ್ತಿಗಳನ್ನು ಬಗ್ಗು ಬಡಿಯುವ ಶಕ್ತಿ, ಬದ್ಧತೆ ಮತ್ತು ವಿಶ್ವಾಸ ನಮಗಿದೆ ಎಂದು ಎಚ್ಚರಿಕೆ ನೀಡಿದರು.

ಆರ್ಥಿಕ ಕ್ಷೇತ್ರದ ಪ್ರಗತಿ ಕುರಿತು ಪ್ರಸ್ತಾಪಿಸಿದ ಮುಖರ್ಜಿ, 2015 ಆರ್ಥಿಕ ಪ್ರಗತಿ ದೃಷ್ಟಿಯಿಂದ ಆಶಾದಾಯಕ ವರ್ಷ. ಇದುವರೆಗೆ ದಾಖಲಾಗಿರುವ ಶೇ. 5ರಷ್ಟು ಪ್ರಗತಿ ಶೇ. 7– 8ರಷ್ಟು ಪ್ರಗತಿ ಗುರಿ ಮುಟ್ಟುವ ಆಶಾಭಾವನೆಯನ್ನು ಪುನಃ ಹುಟ್ಟಿಸಿದೆ ಎಂದು ರಾಷ್ಟ್ರಪತಿಗಳು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT