ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಘರ್ಷದಲ್ಲಿ ಹಿತ ಹುಡುಕುವ ಉಮೇದು ಬೇಡ

Last Updated 27 ಜೂನ್ 2015, 20:09 IST
ಅಕ್ಷರ ಗಾತ್ರ

ನೆಮ್ಮದಿ,  ಸಮಾಧಾನಗಳು ಆಗಿಬರದ ರಾಜಕಾರಣಿಗಳಿಗೆ ನಮ್ಮಲ್ಲಿ ಕೊರತೆ ಇಲ್ಲ. ಸುತ್ತಲಿನ ಪರಿಸರ ನೆಮ್ಮದಿಯಿಂದ ಇದೆ ಎಂದಕೂಡಲೇ ಅವರು ಚಡಪಡಿಸಲಾರಂಭಿಸುತ್ತಾರೆ. ಆಗ, ದಿಗ್ಗನೆ ಎದ್ದು ಯಾವುದೋ ಒಂದು ವಿಷಯವನ್ನು ಎಳೆದುತಂದು ಅದಕ್ಕೆ ಕಿಡಿ ಮುಟ್ಟಿಸುತ್ತಾರೆ. ಅದು ಧಗಧಗಿಸಿ, ಜನರ ನೆಮ್ಮದಿ ಕದಡಿದಾಗ ಇವರು ಖುಷಿಪಡುತ್ತಾರೆ.

ಅಂತಹ ಮುಖಂಡರ ಸಂಖ್ಯೆ ಅವಿಭಜಿತ ಆಂಧ್ರಪ್ರದೇಶದಲ್ಲಿ ಹಲವು ಪಟ್ಟು ಹೆಚ್ಚಿಗೆ ಇದ್ದಂತಿದೆ. ಕಳೆದ ಒಂದು ದಶಕದ ಅವಧಿಯ ಅಲ್ಲಿನ ರಾಜಕೀಯ ವಿದ್ಯಮಾನಗಳನ್ನು ಅವಲೋಕಿಸಿದರೆ ಇಂತಹ ಮನಸ್ಥಿತಿಗೆ ನೂರೆಂಟು ನಿದರ್ಶನಗಳು ಕಾಣಸಿಗುತ್ತವೆ. ಉಲ್ಬಣಿಸಿದ್ದ ಈ ‘ವ್ಯಾಧಿ’, ರಾಜ್ಯ ವಿಭಜನೆಯ ನಂತರ ಗುಣ ಕಾಣಬಹುದು ಎಂದು ರಾಜಕೀಯ ಪಂಡಿತರು ಭಾವಿಸಿದ್ದರು. ಆ ನಿರೀಕ್ಷೆಯೂ ಈಗ ಹುಸಿಯಾಗಿದೆ. ತೆಲಂಗಾಣ–ಆಂಧ್ರಪ್ರದೇಶ ಮಧ್ಯೆ ರಾಜಕೀಯ ಸಂಘರ್ಷ ಪುನಃ ಕುದಿಬಿಂದು ಮುಟ್ಟಿದೆ.

ಪ್ರತ್ಯೇಕ ತೆಲಂಗಾಣಕ್ಕೆ ಆಗ್ರಹಿಸಿ ಜರುಗಿದ ಹೋರಾಟದಿಂದ ಆಂಧ್ರ ನಲುಗಿಹೋಗಿತ್ತು.  ನಂಜೇರಿಸುವ ಮಾತು, ಬಂದ್‌, ಬಹಿಷ್ಕಾರಗಳಿಂದ ಜನರು ರೋಸಿಹೋಗಿದ್ದರು. ವಿಭಜನೆ ಹೊರತು ಬೇರೆ ಪರಿಹಾರವೇ ಇಲ್ಲ ಎಂಬ ಸ್ಥಿತಿ ಉಂಟಾಗಿತ್ತು. ಯುಪಿಎ ಸರ್ಕಾರ ತನ್ನ ಆಡಳಿತ ಅವಧಿಯ ಕೊನೆಗಾಲದಲ್ಲಿ ವಿಭಜನೆಗೆ ಅಸ್ತು ಎಂದಿತು. ಜನರು ಹೊಸ ಭರವಸೆಯೊಂದಿಗೆ ತೆಲಂಗಾಣದಲ್ಲಿ ತೆಲಂಗಾಣ ರಾಷ್ಟ್ರ ಸಮಿತಿಗೆ (ಟಿಆರ್‌ಎಸ್‌) ಹಾಗೂ ವಿಭಜನೋತ್ತರ ಆಂಧ್ರದಲ್ಲಿ ತೆಲುಗುದೇಶಂ ಪಕ್ಷಕ್ಕೆ (ಟಿಡಿಪಿ) ತಮ್ಮನ್ನು ಮುನ್ನಡೆಸುವ ಹೊಣೆ ವಹಿಸಿದರು.

ಈ ಪಕ್ಷಗಳ ನೇತೃತ್ವದ ಆಡಳಿತಕ್ಕೆ ಈಗ ವರ್ಷ ತುಂಬಿದೆ. ಈ ಅವಧಿಯಲ್ಲಿ ಆಡಳಿತಕ್ಕೆ, ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳಿಗಿಂತ ಸೋದರ ರಾಜ್ಯಗಳ ಮಧ್ಯೆ ಉಂಟಾದ ಘರ್ಷಣೆ ಸುದ್ದಿ ಆದದ್ದೇ ಹೆಚ್ಚು. ಯಾವುದೋ ನೆಪದಡಿ ಪಕ್ಕದ ರಾಜ್ಯಕ್ಕೆ ಸವಾಲು ಎಸೆಯುವುದೇ ಆಡಳಿತ ಪಕ್ಷಗಳ ಮುಖಂಡರ ದಿನಚರಿ ಎಂಬಂತಾಗಿದೆ. ವರ್ಷದ ಹಿಂದೆ ವಿಭಜನೆಯ ಹೆಸರಿನಲ್ಲಿ ಕೆಸರು ಎರಚಾಟ. ವಿಭಜನೆಯ ನಂತರ ಹಕ್ಕಿಗಾಗಿ ಕಾದಾಟ.

ರಾಜ್ಯ ವಿಭಜನೆಗೆ ರಾಜಧಾನಿ ಹೈದರಾಬಾದ್‌ ತೊಡರುಗಾಲಾಗಿ ಪರಿಣಮಿಸಿತ್ತು. ವಿಭಜನೆ ನಂತರದ ಜಗಳ ತಾರಕಕ್ಕೆ ಏರಲು ಮತ್ತೆ ಇದೇ ರಾಜಧಾನಿ ಕಾರಣವಾಗಿದೆ. ಎರಡೂ ರಾಜ್ಯಗಳಿಗೆ ಹತ್ತು ವರ್ಷಗಳ ಅವಧಿಗೆ ಹೈದರಾಬಾದ್‌ ಜಂಟಿ ರಾಜಧಾನಿ. ಅಲ್ಲಿನ ಜನರ ಆಸ್ತಿಪಾಸ್ತಿ ರಕ್ಷಣೆ, ಶಾಂತಿ–ಸುವ್ಯವಸ್ಥೆ ಕಾಪಾಡುವ ಹೊಣೆ ರಾಜ್ಯಪಾಲರದು. ವಿಭಜನೆ ಕಾಯ್ದೆಯ ಸೆಕ್ಷನ್‌ ಎಂಟರಲ್ಲಿ ಇದಕ್ಕೆ ಅವಕಾಶ ಕಲ್ಪಿಸಲಾಗಿದೆ.

ಆದರೆ ಈ ಸೆಕ್ಷನ್‌ ಇಲ್ಲಿಯವರೆಗೂ ಅನುಷ್ಠಾನಗೊಂಡಿಲ್ಲ. ಅದರ ಕಟ್ಟುನಿಟ್ಟು ಜಾರಿಗೆ ಈಗ ಟಿಡಿಪಿ ಪಟ್ಟು ಹಿಡಿದಿದೆ. ಕೇಂದ್ರ ಸರ್ಕಾರದ ಮೇಲೆ ಒತ್ತಡವನ್ನೂ ಹೇರುತ್ತಿದೆ. ಇದಕ್ಕೆ ಟಿಆರ್‌ಎಸ್‌ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಸೆಕ್ಷನ್‌ ಜಾರಿಗೊಳಿಸಲು ಮುಂದಾದರೆ ಆಮರಣ ಉಪವಾಸ ಕೈಗೊಳ್ಳುವುದಾಗಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್‌ ಬೆದರಿಕೆ ಹಾಕಿದ್ದಾರೆ. ಈ ಮೂಲಕ ತಮ್ಮ ಹಳೇ ವರಸೆಯನ್ನು ಪುನಃ ಪ್ರದರ್ಶಿಸಿದ್ದಾರೆ.   

ರಾಜಧಾನಿಯ ಶಾಂತಿ–ಸುವ್ಯವಸ್ಥೆ  ಪ್ರಶ್ನೆ ಮುನ್ನೆಲೆಗೆ ಬರಲು ಕಾರಣವಾಗಿದ್ದು ‘ವೋಟಿಗಾಗಿ ನೋಟು’ ಪ್ರಕರಣ. ತೆಲಂಗಾಣ ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಜರುಗಿದ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಪರ ಮತ ಚಲಾಯಿಸಲು ಆಂಗ್ಲೊ ಇಂಡಿಯನ್‌ ಸಮುದಾಯಕ್ಕೆ ಸೇರಿದ ನಾಮನಿರ್ದೇಶಿತ ಸದಸ್ಯ ಎಲ್ವಿಸ್‌ ಸ್ಟೀಫನ್ಸನ್‌ ಅವರಿಗೆ ಹಣದ ಆಮಿಷವೊಡ್ಡಿದ ಪ್ರಕರಣದಲ್ಲಿ ತೆಲುಗುದೇಶಂ ಶಾಸಕ ರೇವಂತ್‌ ರೆಡ್ಡಿ ಅವರನ್ನು ತೆಲಂಗಾಣದ ಭ್ರಷ್ಟಾಚಾರ ನಿಗ್ರಹ ದಳ ಬಂಧಿಸಿದ್ದರಿಂದ ಎರಡೂ ರಾಜ್ಯಗಳ ಆಡಳಿತ ಪಕ್ಷಗಳು ಹಾವು–ಮುಂಗುಸಿಯಂತೆ ಕಚ್ಚಾಡಲು  ಆರಂಭಿಸಿದವು.

ಆ ಪ್ರಕರಣದಲ್ಲಿ ರೇವಂತ್‌ ಒಬ್ಬರೇ ಸಿಲುಕಿದ್ದರೆ ಅದು ಇಷ್ಟೊಂದು ಮಹತ್ವ ಮತ್ತು ತಿರುವುಗಳನ್ನು ಪಡೆಯುತ್ತಿರಲಿಲ್ಲವೇನೊ?  ಅವರೊಂದಿಗೆ ಆಂಧ್ರ ಮುಖ್ಯಮಂತ್ರಿ ನಾರಾ ಚಂದ್ರಬಾಬು ನಾಯ್ಡು ಅವರ ಹೆಸರನ್ನೂ ಟಿಆರ್‌ಎಸ್‌ ಎಳೆದುತಂದಿತು. ಸ್ಟೀಫನ್ಸನ್‌ ಜತೆ ಬಾಬು ಮಾತನಾಡಿದ್ದಾರೆ ಎನ್ನಲಾದ ಧ್ವನಿಸುರುಳಿಯೊಂದು ಟಿ.ವಿ. ವಾಹಿನಿಯೊಂದರಲ್ಲಿ ಬಿತ್ತರಗೊಂಡಿದ್ದು ಟಿಡಿಪಿಯನ್ನು ಮುಜುಗರಕ್ಕೆ ಸಿಲುಕಿಸಿತು. ಮೌಲ್ಯಗಳ ಬಗ್ಗೆ ಮಾತನಾಡುವ ಅನುಭವಿ ರಾಜಕಾರಣಿ ಚಂದ್ರಬಾಬು  ಇಂತಹ ಅನೈತಿಕ ಹಾದಿ ಹಿಡಿಯಬಾರದಿತ್ತು ಎಂಬ ಟೀಕೆಗಳು ವ್ಯಕ್ತವಾದವು. ಇದರಿಂದ ಬಾಬು ವರ್ಚಸ್ಸಿಗೂ ಧಕ್ಕೆ  ಉಂಟಾಯಿತು.

ಈ ಹಾನಿ ತಡೆಯುವ ಮಾರ್ಗೋಪಾಯವಾಗಿ ಟಿಡಿಪಿ, ದೂರವಾಣಿ ಕದ್ದಾಲಿಕೆಯ ಅಸ್ತ್ರ ಪ್ರಯೋಗಿಸಿತು. ತಮ್ಮ ಸರ್ಕಾರದ 120 ಮಂದಿ ಗಣ್ಯರ ದೂರವಾಣಿಗಳನ್ನು ಟಿಆರ್‌ಎಸ್‌ ನೇತೃತ್ವದ ಸರ್ಕಾರ ಕದ್ದಾಲಿಸುತ್ತಿದೆ ಎಂದು  ಟಿಡಿಪಿ ಗಂಭೀರ ಆರೋಪ ಮಾಡಿತು. ಈ ಸಂಬಂಧ ದೆಹಲಿಗೂ ದೂರು ಮುಟ್ಟಿಸಿತು. ಅಲ್ಲಿಯವರೆಗೂ ಸೆಕ್ಷನ್‌ ಎಂಟರ ಜಾರಿ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದ ಟಿಡಿಪಿಗೆ ಅದರ ಅಗತ್ಯ ಮನದಟ್ಟಾಯಿತು. ಹೈದರಾಬಾದ್‌ನಲ್ಲಿ ವಾಸವಿರುವ ಆಂಧ್ರ ಮೂಲದವರಿಗೆ ಸೂಕ್ತ ರಕ್ಷಣೆ ಸಿಗುತ್ತಿಲ್ಲ ಎಂದು ಆ ಪಕ್ಷದ ಮುಖಂಡರು ಟಿಆರ್‌ಎಸ್‌ ವಿರುದ್ಧ ಪ್ರತಿದಾಳಿ ಆರಂಭಿಸಿದರು. ಅವರು ಇವರ ವಿರುದ್ಧ, ಇವರು ಅವರ ವಿರುದ್ಧ ಕೇಸುಗಳನ್ನು ದಾಖಲಿಸಿದರು. ರಾಜಕೀಯ ರಂಪಾಟ, ಬೀದಿ ಜಗಳವಾಗಿ ಮಾರ್ಪಟ್ಟಿತು.

ರೇವಂತ್‌ ಬಂಧನವಾಗಿ 27 ದಿನಗಳು ಉರುಳಿವೆ. ಅಲ್ಲಿಂದೀಚೆಗೆ  ಹಬ್ಬಿದ ಗಾಳಿಸುದ್ದಿಗಳು ಟಿ.ವಿ. ನೋಡುಗರಿಗೆ ಮತ್ತು ಪತ್ರಿಕೆ ಓದುಗರಿಗೆ ನಿಮಿಷಕ್ಕೊಂದು ತಿರುವು ಪಡೆಯುವ ಸಿನಿಮಾ ನೋಡಿದ ಇಲ್ಲವೇ ಕಾದಂಬರಿ ಓದಿದ ಅನುಭೂತಿ ಒದಗಿಸಿವೆ. ‘ಚಂದ್ರಬಾಬು ಅವರಿಗೆ ನೋಟಿಸ್‌ ಕೊಡ್ತಾರಂತೆ. ಅವರು ರಾಜೀನಾಮೆ ನೀಡ್ತಾರಂತೆ. ಅವರ ಸ್ಥಾನಕ್ಕೆ ಇನ್ಯಾರೊ ಬರ್ತಾರಂತೆ’ ಎಂದೆಲ್ಲ ಸುದ್ದಿ ಹಬ್ಬಿತು. ರಾಜಕೀಯ ನೇತಾರರ ಒಡೆತನಕ್ಕೆ ಸೇರಿದ ಒಂದೆರಡು ಚಾನೆಲ್‌ಗಳಲ್ಲಿ ಕಲ್ಪನೆಯ ಕಥೆಗಳು ರೆಕ್ಕೆ ಬಿಚ್ಚಿ ಹಾರಾಡಿದವು.

ಇದಕ್ಕೂ ಮೊದಲು ವಿದ್ಯುತ್‌ ಹಂಚಿಕೆ, ಅಧಿಕಾರಿಗಳ ಹಂಚಿಕೆ ವಿಷಯದಲ್ಲಿ ಎರಡೂ ಸರ್ಕಾರಗಳ ಮಧ್ಯೆ ಹಗ್ಗಜಗ್ಗಾಟ ನಡೆಯಿತು. ವಿದ್ಯಾರ್ಥಿಗಳ ಶುಲ್ಕ ಮರುಪಾವತಿ, ಪ್ರವೇಶ ಪರೀಕ್ಷೆ ಕುರಿತ ತಗಾದೆಗಳು ಕೋರ್ಟ್‌ ಮೆಟ್ಟಿಲೇರಿದವು. ಈಗ ಜಲವಿವಾದ ಹೆಡೆ ಎತ್ತಿದೆ.

ಎರಡೂ ರಾಜ್ಯಗಳಿಗೆ ಸಂಬಂಧಿಸಿದ ಪ್ರತೀ ಸಣ್ಣ ವಿಷಯ ವಿವಾದದ ಸ್ವರೂಪ ಪಡೆಯುತ್ತಿದೆ. ಸಂಧಾನದ ಮೂಲಕ ಸುಲಭವಾಗಿ ಬಗೆಹರಿಸಿಕೊಳ್ಳಬಹುದಾದ ವಿಷಯಗಳೂ ಸಂಘರ್ಷಕ್ಕೆ ಕಾರಣವಾಗುತ್ತಿವೆ.  ಇದರ ಹಿಂದೆ ರಾಜ್ಯದ ಹಕ್ಕಿನ ರಕ್ಷಣೆ ಪ್ರಶ್ನೆ ಮಾತ್ರ ಅಡಕಗೊಂಡಿದ್ದರೆ ಅದನ್ನು ಬೇರೆ ರೀತಿ ವಿಶ್ಲೇಷಿಸಬಹುದಿತ್ತು. ರಾಜಕೀಯವಾಗಿ ಲಾಭ ಪಡೆಯುವ ತಂತ್ರಗಾರಿಕೆಯೇ ಇಲ್ಲಿ ಪ್ರಧಾನ ಪಾತ್ರ ವಹಿಸುತ್ತಿದೆ.  ದೂರದೃಷ್ಟಿಯ ಲೆಕ್ಕಾಚಾರಗಳು ಚೋದಕಶಕ್ತಿಯಾಗಿ ಕೆಲಸ ಮಾಡುತ್ತಿವೆ.

ತೆಲಂಗಾಣದಲ್ಲೂ ಟಿಡಿಪಿ ಹಿಡಿತ ಹೊಂದಿದೆ. ವಿಶೇಷವಾಗಿ ಹೈದರಾಬಾದ್‌, ರಂಗಾರೆಡ್ಡಿ, ಖಮ್ಮಂ ಮೊದಲಾದ ಜಿಲ್ಲೆಗಳಲ್ಲಿ ಆ ಪಕ್ಷದ ಪ್ರಾಬಲ್ಯ ಇದೆ. ಅದನ್ನು ಕಾಪಾಡಿಕೊಳ್ಳಲು ಟಿಡಿಪಿ ತನ್ನ ಸಾಮರ್ಥ್ಯವನ್ನು ಪಣಕ್ಕೆ ಒಡ್ಡಿದೆ. ಆದರೆ ಟಿಡಿಪಿ ಇರುವಿಕೆಯನ್ನು ಟಿಆರ್‌ಎಸ್‌ ಮಗ್ಗುಲು ಮುಳ್ಳು ಎಂದೇ ಭಾವಿಸಿದೆ. ಟಿಡಿಪಿ ಬಲಗೊಂಡರೆ ಭವಿಷ್ಯದಲ್ಲಿ ತನಗೆ ತೊಂದರೆ ತಪ್ಪಿದ್ದಲ್ಲ ಎಂದು ಭಾವಿಸಿ, ಅದರ ಬೇರುಗಳನ್ನು ಸಡಿಲಗೊಳಿಸಲು ದೊರೆತ ಯಾವ ಅವಕಾಶವನ್ನೂ ಅದು ಕೈಬಿಡುತ್ತಿಲ್ಲ. ಟಿಡಿಪಿ ಶಾಸಕರನ್ನು ಸೆಳೆದುಕೊಳ್ಳುತ್ತಿದೆ. ಮುಖಂಡರಿಗೂ, ಕಾರ್ಯಕರ್ತರಿಗೂ ಅಧಿಕಾರದ ಆಮಿಷವೊಡ್ಡುತ್ತಿದೆ.

ಟಿಡಿಪಿ ಚಿಹ್ನೆಯಡಿ ಗೆದ್ದುಬಂದ ತಲಸಾನಿ ಶ್ರೀನಿವಾಸ ಯಾದವ್‌ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸಿದೆ. ಪಕ್ಷಾಂತರಿಗಳ ಅನರ್ಹತೆ ಪ್ರಶ್ನೆ ಸ್ಪೀಕರ್‌ ಎದುರು ಇತ್ಯರ್ಥವಾಗದೆ ಬಿದ್ದಿದೆ. ರೇವಂತ್‌ ರೆಡ್ಡಿ ಅವರು ಟಿಡಿಪಿ ಶಾಸಕಾಂಗ ಪಕ್ಷದ ಉಪನಾಯಕ. ಸಂಘಟನೆಯಲ್ಲಿ ಚುರುಕು. ಶಾಸನಸಭೆಯಲ್ಲಿ ಧ್ವನಿ ಎತ್ತಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಯತ್ನಿಸಿದ್ದಾರೆ. ಅವರ ಮೇಲೆ ಆಡಳಿತ ಪಕ್ಷ ಹದ್ದಿನ ಕಣ್ಣು ಇಟ್ಟಿತ್ತು. ಬಲೆ ಬೀಸಿತು. ಸಿಕ್ಕಿಬಿದ್ದಿದ್ದಾರೆ.

ವೋಟಿಗಾಗಿ ನೋಟು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನಿನಡಿ ಕ್ರಮ ಜರುಗಲಿ. ಆದರೆ ಅದರ ಹೆಸರಿನಲ್ಲಿ ಜನರಲ್ಲಿ ಪ್ರಾದೇಶಿಕ ಭಾವನೆಗಳನ್ನು ಕೆರಳಿಸುವುದು ಸಲ್ಲದು. ಎತ್ತಿಕಟ್ಟುವ ಪ್ರವೃತ್ತಿ ಆಡಳಿತ ಪಕ್ಷಗಳಿಗೆ ಶೋಭೆ ತರುವುದಿಲ್ಲ. ಈ ಪ್ರಕರಣ ಹೊರಬಿದ್ದ ನಂತರದ ಬೆಳವಣಿಗೆಗಳಲ್ಲಿ ಎರಡೂ ಕಡೆಯವರು ಭಾವನೆಗಳನ್ನು ಉದ್ದೀಪಿಸುವ ಕೆಲಸ ಮಾಡಿದ್ದಾರೆ.  ತಮ್ಮ ಪಕ್ಷದ ಉಳಿವೇ ರಾಜ್ಯದ ಉಳಿವು ಎಂಬಂತೆ ಬಿಂಬಿಸುವ ಪ್ರಯತ್ನ ನಡೆದಿದೆ.  ಇಂತಹ ಆಟ ಬಹಳ ಕಾಲ ನಡೆಯದು ಎಂಬುದನ್ನು ಎರಡೂ ಪಕ್ಷಗಳ ಮುಖಂಡರು ಎಷ್ಟು ಬೇಗ ಅರಿತರೆ ಅಷ್ಟರಮಟ್ಟಿಗೆ ಅವರಿಗೇ ಒಳ್ಳೆಯದು. 

ವಿಭಜನೆಯ ನಂತರ ಎರಡೂ ರಾಜ್ಯಗಳ ಆರ್ಥಿಕ ಸ್ಥಿತಿ, ಸವಾಲು, ಜನರ ಆಕಾಂಕ್ಷೆಗಳು ಬೇರೆ ಬೇರೆ ಬಗೆಯದಾಗಿವೆ. ಆಂಧ್ರ ವಿತ್ತೀಯ ಕೊರತೆಯನ್ನು ಎದುರಿಸುತ್ತಿದೆ. ಸಂಪನ್ಮೂಲ ಕ್ರೋಡೀಕರಣಕ್ಕೆ ಆದ್ಯತೆ ನೀಡಬೇಕಾಗಿದೆ. ಮಿಗಿಲಾಗಿ ಹೊಸದಾಗಿ ರಾಜಧಾನಿಯನ್ನು ನಿರ್ಮಿಸಬೇಕು. ಅದಕ್ಕೆ ದೊಡ್ಡ ಮೊತ್ತದ ನೆರವು ಬೇಕು. ಕೇಂದ್ರ ಸರ್ಕಾರದಿಂದ ನಿರೀಕ್ಷಿಸಿದ ರೀತಿಯಲ್ಲಿ ನೆರವು ಸಿಗುತ್ತಿಲ್ಲ. ರಾಜಧಾನಿ ನಿರ್ಮಿಸುವುದೇ ಆಂಧ್ರಕ್ಕೆ ಬಹುದೊಡ್ಡ ಸವಾಲಾಗಿದೆ.

ತೆಲಂಗಾಣ ಸರ್ಕಾರಕ್ಕೆ ರೈತರ ಆತ್ಮಹತ್ಯೆಗಳು ತಲೆನೋವಾಗಿ ಪರಿಣಮಿಸಿವೆ. ವಿಭಜನೆ ಬಳಿಕ ತಮಗೆ ಅವಕಾಶಗಳ ಬಾಗಿಲು ತೆರೆದುಕೊಳ್ಳಲಿದೆ ಎಂದು ವಿದ್ಯಾವಂತ ನಿರುದ್ಯೋಗಿಗಳು ತುದಿಗಾಲ ಮೇಲೆ ನಿಂತಿದ್ದಾರೆ.

ಲಕ್ಷಗಳ ಲೆಕ್ಕದಲ್ಲಿ ನೇಮಕಾತಿ ನಡೆಸುವುದಾಗಿ ಹೇಳಿ, ಪ್ರತ್ಯೇಕ ರಾಜ್ಯದ ಹೋರಾಟಕ್ಕೆ ಅವರ ಬೆಂಬಲ ಪಡೆದಿದ್ದ ಮುಖಂಡರು ಮಾತಿಗೆ ತಪ್ಪಿದರೆ ಅವರ ಸಿಟ್ಟಿಗೂ ಗುರಿಯಾಗಬೇಕಾಗುತ್ತದೆ. ಗುತ್ತಿಗೆ ಆಧಾರದ ಮೇಲೆ ನೌಕರಿ ಮಾಡುತ್ತಿರುವವರು ತಮ್ಮ ಸೇವೆ ಕಾಯಂ ಆಗಲಿದೆ ಎಂದು ಎದುರುನೋಡುತ್ತಿದ್ದಾರೆ. ಈ ನೆಲೆಯಲ್ಲಿ ಆಂಧ್ರಕ್ಕಿಂತ ತೆಲಂಗಾಣ ಸರ್ಕಾರದ ಮೇಲೆ ಈಗ ಹೆಚ್ಚಿನ ಒತ್ತಡ ಇದೆ. 

ಅವಿಭಜಿತ ಆಂಧ್ರಪ್ರದೇಶ ರಾಜಕೀಯ ವಿದ್ವೇಷವನ್ನೇ ಹಾಸಿ–ಹೊದ್ದು ಹೊರಳಾಡಲು ಆರಂಭಿಸಿ ಹಲವು ವರ್ಷಗಳೇ ಉರುಳಿವೆ. ಪ್ರತ್ಯೇಕ ತೆಲಂಗಾಣಕ್ಕಾಗಿ ಜರುಗಿದ ಹೋರಾಟ ತೀವ್ರ ಸ್ವರೂಪ ಪಡೆದ ಮೇಲಂತೂ ಭಾಷೆಗೆ ಇದ್ದಿರಬಹುದಾದ ಲಜ್ಜೆಯಲ್ಲಿ ಲವಲೇಶವನ್ನೂ ಉಳಿಯಗೊಡಲಿಲ್ಲ. ನಾಯಕರೆನಿಸಿಕೊಂಡವರು ಏನು ಮಾತನಾಡಿದರೂ ಹೇಗೆ ಮಾತನಾಡಿದರೂ ಸಲ್ಲುವಂಥ ಸ್ಥಿತಿ ಒದಗಿತು. ಅದನ್ನು ಸಮರ್ಥಿಸುವಂಥ ಬೆಂಬಲಿಗರ ಪಡೆಯೂ ಹುಟ್ಟಿಕೊಂಡಿತು. ಅದು ಇನ್ನೂ ಮುಂದುವರಿದಿರುವುದು ಅಪಾಯಕಾರಿ ಸೂಚನೆ. ಅದಕ್ಕೆ ಕೂಡಲೇ ತಡೆಯೊಡ್ಡಬೇಕು.

ಮಾತಿನ ನಂಜು ಜನಸಾಮಾನ್ಯರ ಮಟ್ಟಕ್ಕೂ ಇಳಿದರೆ ಪರಿಣಾಮಗಳು ಎರಡೂ ಕಡೆಯವರಿಗೆ ಹಿತಕರವಾಗಿರುವುದಿಲ್ಲ. ನಾಯಕರು ಸಂಯಮ ರೂಢಿಸಿಕೊಳ್ಳಬೇಕು. ‘ಬೇರೆಯಾಗೋಣ. ಬಳಿಕ ಅಣ್ಣ–ತಮ್ಮಂದಿರಂತೆ ಅನ್ಯೋನ್ಯವಾಗಿ ಬದುಕೋಣ’ ಎಂದು ವಿಭಜನೆಗೆ ಮುಂಚೆ ಟಿಆರ್‌ಎಸ್‌ ಮುಖಂಡರೇ ಹೇಳಿದ್ದ ಮಾತು ಈಗ ಮನನ ಯೋಗ್ಯ. ನಾಯಕರು ಆ ಮಾತಿನಂತೆ ಈಗ ನಡೆದುಕೊಳ್ಳಬೇಕಾಗಿದೆ. ಆಂಧ್ರದ ರಾಜಕೀಯ ನಡೆ–ನುಡಿ ಕಳೆದುಕೊಂಡಿರುವ ಸೂಕ್ಷ್ಮತೆಯನ್ನು ಪುನಃ ತುಂಬಲು ಎರಡೂ ಪ್ರಾದೇಶಿಕ ಪಕ್ಷಗಳು ಪರಸ್ಪರ ಸಹಕಾರಹಸ್ತ ಚಾಚಬೇಕು. ರಾಜ್ಯಪಾಲರ ಮಧ್ಯಪ್ರವೇಶವನ್ನು ಕನಿಷ್ಠ ಮಟ್ಟಕ್ಕೆ ತರಬೇಕು. ವಿಭಜನೆ ಸಂದರ್ಭದಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಲು ಕೇಂದ್ರ ಸರ್ಕಾರವೂ ಬದ್ಧತೆ ಪ್ರದರ್ಶಿಸಬೇಕು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT