ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಾರಿ ಪ್ಲಾಸ್ಟಿಕ್ ಮನೆ ಪ್ರಯೋಗ ಮಾಡಿ!

Last Updated 2 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನೀರು ತುಂಬುವ ಪ್ಲಾಸ್ಟಿಕ್ ಟ್ಯಾಂಕ್‌ಗಳಲ್ಲಿಯೂ ಮನೆ ಮಾಡಿಕೊಂಡು ವಾಸಿಸಬಹುದೇ? ಇಲ್ಲ, ಅದು ಹೇಗೆ ಸಾಧ್ಯ? ಎನ್ನುತ್ತೀರಾ. ಅಂಥದೊಂದು ಅಪರೂಪದ ಪ್ರಕರಣ ಇಲ್ಲಿದೆ, ಓದಿ ನೋಡಿ. 

ಮೂರು ಸಾವಿರ ಲೀಟರ್ ಸಾಮರ್ಥ್ಯದ ಎರಡು ಟ್ಯಾಂಕುಗಳನ್ನು ಬಳಸಿಕೊಂಡು ಇತ್ತೀಚೆಗೆ ಒಂದು ಪುಟ್ಟ ಮನೆಯನ್ನು ನಿರ್ಮಿಸಲಾಗಿದೆ.  ಎರಡೂ ಟ್ಯಾಂಕುಗಳನ್ನು ಮರದ ಕಟ್ಟಿಗೆಯ ಚೌಕಟ್ಟೊಂದರ ಮೂಲಕ ಜೋಡಿಸಲಾಗಿದೆ.  ಈ ಮನೆ ನಿರ್ಮಿಸಲು ತೀರ ಹಗುರವಾದ ವಸ್ತುಗಳನ್ನೇ ಉಪಯೋಗಿಸಲಾಗಿದೆ. 

ಈ ಪುಟ್ಟ ಮನೆ ಎಷ್ಟು ಹಗುರವಾಗಿದೆ ಎಂದರೆ, ಒಬ್ಬ ಸಾಧಾರಣವಾದ ವ್ಯಕ್ತಿ  ಕೂಡ ಈ ಮನೆಯನ್ನು ಸುಲಭವಾಗಿ ಎಲ್ಲಿಗೆ ಬೇಕಾದರೂ ಎಳೆದುಕೊಂಡು ಹೋಗಬಹುದು.  ಒಂದು ಸೈಕಲ್ಲಿಗೆ ಕಟ್ಟಿ ದೂರದವರೆಗೂ ಸಾಗಿಸಬಹುದು.  ಬಹಳ ದೂರ ಹೋಗಬೇಕಾದರೆ ಕಾರು ಮೊದಲಾದ ಯಂತ್ರಚಾಲಿತ ವಾಹನಗಳನ್ನೂ ಬಳಸಬಹುದು.

ನೀರಿನ ಮೇಲೂ ಇರುತ್ತೆ!
ಇದೊಂದು ಸಂಚಾರಿ ಮನೆ.  ಈ ಮನೆಯ ಇನ್ನೊಂದು ವಿಶೇಷವೆಂದರೆ, ಇದು ಬರೀ ಭೂಮಿಯ ಮೇಲೆ ಮಾತ್ರ ಅಲ್ಲ; ಹಗುರವಾಗಿರುವುವದರಿಂದ ನೀರಿನ ಮೇಲೂ ತೇಲುತ್ತದೆ.  ಪುಟ್ಟ ನಾವೆ ಅಥವಾ ಯಂತ್ರಚಾಲಿತ ದೋಣಿಗಳಿಗೆ ಜೋಡಿಸಿ ಈ ಮನೆಯನ್ನು ನೀರಿನ ಮೇಲೂ ಎಲ್ಲೆಂದರಲ್ಲಿಗೆ ಎಳೆದುಕೊಂಡು ಹೋಗಬಹುದು.

ಈ ಮನೆಯ ನಿರ್ಮಾಣಕ್ಕೆ ಬಳಸಿರುವುದು ಎರಡು ಹಳೆಯ ನೀರಿನ ಟ್ಯಾಂಕುಗಳನ್ನು. ಈ ಮನೆ ಅಮೆರಿಕಾ ದೇಶದ ನ್ಯೂಯಾರ್ಕ್‌ ಪಟ್ಟಣದಲ್ಲಿದೆ.  ಅಲ್ಲಿನ ಒಂದು ಡಿಜೈನ್ ಸಂಸ್ಥೆ ಈ ಪ್ರಯೋಗ ಮಾಡಿ ಯಶಸ್ವಿಯಾಗಿದೆ.  ಮಾರ್ಸೆಲೊ ಹಾಗೂ ಸಾರಾ ವೆಲೆಂಟ ಎನ್ನುವವರೇ ಈ ಮನೆಯ ನಿರ್ಮಾತೃಗಳು.

ಈ ಮನೆಯ ಒಟ್ಟು ವಿಸ್ತೀರ್ಣ ಒಂಬತ್ತು ಚದರ ಮೀಟರ್ ಅಥವಾ ೯೬ ಚದರ ಅಡಿಗಳು.  ಹಿಂದೆ, ಮುಂದೆ, ಮೇಲೆ ಹಾಗೂ ಎರಡೂ ಪಕ್ಕಗಳಲ್ಲಿ ಕಿಟಕಿಗಳನ್ನು ಅಳವಡಿಸಲಾಗಿದೆ.  ಹೀಗಾಗಿ ಈ ಮನೆ ಗಾಳಿ -ಬೆಳಕು ಮುಕ್ತ ಪ್ರವೇಶಕ್ಕೆ ಪ್ರಶಸ್ತವಾಗಿದೆ.  ಪ್ರವೇಶಕ್ಕೆ ಮಾತ್ರ ಒಂದೇ ಬಾಗಿಲು. ಎರಡು-ಮೂರು ಜನ ಈ ಪುಟ್ಟ ಮನೆಯಲ್ಲಿ ಕೈಕಾಲು ಚಾಚಿಕೊಂಡು ಆರಾಮವಾಗಿ ಮಲಗಬಹುದು.

ಒಂದು ಪುಟ್ಟ ಸ್ಟೂಲ್ ಹಾಗೂ ಪುಟ್ಟ ಟೇಬಲ್ ಈ ಮನೆಯಲ್ಲಿಡಬಹುದು. ಕೆಳಭಾಗದಲ್ಲಿ ಕೆಲವು ಸಾಮಾನುಗಳನ್ನು ಇಡಲು ಒಂದು ಸ್ಟೋರ್ ರೂಮ್ ಕೂಡ ಇದೆ. ಸೂರ್ಯನ ಶಕ್ತಿಯನ್ನು ಬಳಸಿಕೊಂಡು ಉರಿಯುವ ಎಲ್‌ಇಡಿ ದೀಪಗಳನ್ನು ಇಲ್ಲಿ ಅಳವಡಿಸಲಾಗಿದೆ.  ಟಾಕು ಟ್ಯಾಂಕ್‌ ಹೆಸರಿನ ಈ ಮನೆಯಲ್ಲಿ ಶೌಚಾಲಯ ಇಲ್ಲದಿರುವುದೊಂದು ದೊಡ್ಡ ಕೊರತೆ. ಎಲ್ಲವನ್ನೂ ಅಳವಡಿಸಿದರೆ ಈ ಹಗುರ ಮನೆ ಭಾರವಾಗಬಹುದು ಎಂದು ಆಲೋಚಿಸಿ ಬಿಟ್ಟಿರಬಹುದೇನೋ!      
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT