ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಾರ ನಿಯಮ: ಉಲ್ಲಂಘನೆಗೆ ಭಾರಿ ದಂಡ

ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಕರಡು ಪ್ರಕಟ
Last Updated 13 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಸಂಚಾರ ನಿಯಮಗಳ ಉಲ್ಲಂಘನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿ­ಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ತಪ್ಪೆಸಗುವ ವಾಹನ ಸವಾರರಿಗೆ  ಜೈಲು ಶಿಕ್ಷೆ ಮತ್ತು  ಗರಿಷ್ಠ ರೂ. ೩ ಲಕ್ಷದಷ್ಟು ದುಬಾರಿ ದಂಡ,  ಮದ್ಯದ ಅಮಲಿನಲ್ಲಿ ವಾಹನ ಓಡಿಸುವವರ ಚಾಲನಾ ಪರವಾನಗಿ ಅಮಾನತು ಸೇರಿದಂತೆ  ತೀವ್ರ ಕ್ರಮಕ್ಕೆ  ಮುಂದಾಗಿದೆ.

ಸಚಿವ ನಿತಿನ್‌ ಗಡ್ಕರಿ ಅವರ ನೇತೃತ್ವದ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಸಂಸತ್ತಿ­ನಲ್ಲಿ ಮಂಡಿಸಲು ಉದ್ದೇಶಿಸಿರುವ ‘ರಸ್ತೆ ಸುರಕ್ಷತೆ ಮತ್ತು ಸಂಚಾರ ಮಸೂದೆ– ೨೦೧೪’ರಲ್ಲಿ ಈ ಪ್ರಸ್ತಾವಗಳು ಸೇರಿವೆ.

ನಾಗರಿಕರಿಂದ ಸಲಹೆಗಳನ್ನು ಆಹ್ವಾನಿಸುವ ಸಲು­ವಾಗಿ ಈ ಕರಡು ಮಸೂದೆಯನ್ನು ಶನಿವಾರ ಬಿಡುಗಡೆ ಮಾಡಲಾಯಿತು.

ಏನು ಶಿಕ್ಷೆ: ಕುಡಿದ ವಾಹನ ಚಲಾಯಿಸಿದ ಮೊದಲ ಪ್ರಕರಣದಲ್ಲಿ ರೂ. ೨೫ ಸಾವಿರ ದಂಡ ಅಥವಾ ೩ ತಿಂಗಳ ಅವಧಿಗೆ ಮೀರದಂತೆ ಜೈಲು ಶಿಕ್ಷೆ ಅಥವಾ ಇವೆರ­ಡನ್ನೂ ವಿಧಿಸಬಹುದು. ಜತೆಗೆ ಈ ತಪ್ಪಿಗಾಗಿ ಆರು ತಿಂಗಳು ಲೈಸನ್‌್ಸ ಅಮಾನತುಗೊಳಿಸಲಾಗುವುದು.

ಮೊದಲ ಪ್ರಕರಣ ನಡೆದ ಮೂರು ವರ್ಷಗಳೊಳಗೆ ಮತ್ತೆ ಇದೇ ತಪ್ಪು ಮಾಡಿದಲ್ಲಿ ರೂ. ೫೦ ಸಾವಿರ ದಂಡ ಅಥವಾ ಒಂದು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಬಹುದು. ಅಲ್ಲದೆ ಚಾಲನಾ ಲೈಸನ್‌್ಸನ್ನು ಒಂದು ವರ್ಷದವರೆಗೆ ಅಮಾನತಿನಲ್ಲಿ ಇರಿಸಲಾಗುವುದು.

ಇದೇ ತಪ್ಪನ್ನು ಮೂರನೇ ಸಲ ಎಸಗಿದರೆ ಚಾಲನಾ ಲೈಸನ್‌್ಸನ್ನು ಕಾಯಂ ರದ್ದುಗೊಳಿಸಿ ವಾಹನವನ್ನು ೩೦ ದಿನಗಳ ವರೆಗೆ ಜಪ್ತಿ ಮಾಡಲಾಗುತ್ತದೆ.

ಯಾವ ತಪ್ಪು? ಏನು ಶಿಕ್ಷೆ?

*ಕುಡಿದು ಓಡಿಸಿದರೆ ಮೊದಲ ಸಲ  ರೂ. 25 ಸಾವಿರ ದಂಡ, ಮೂರು ತಿಂಗಳು ಶಿಕ್ಷೆ

*ಕುಡಿದು ಓಡಿಸಿದ 3ನೇ ಪ್ರಕರ­ಣಕ್ಕೆ ಲೈಸನ್ಸ್ ಕಾಯಂ ರದ್ದು
*ಮಕ್ಕಳ ಸಾವಿಗೆ ಕಾರಣವಾಗುವ ಚಾಲಕರಿಗೆ ಕನಿಷ್ಠ 7 ವರ್ಷ ಜೈಲು, ರೂ. 3 ಲಕ್ಷ ದಂಡ
*ವಾಹನಗಳಲ್ಲಿ ದೋಷಪೂರಿತ ವಿನ್ಯಾಸ ಕಂಡುಬಂದರೆ ಪ್ರತಿ ವಾಹನಕ್ಕೆ ರೂ. 5 ಲಕ್ಷ ದಂಡ
*ಯರ್ರಾಬಿರ್ರಿ, ಬೇಕಾಬಿಟ್ಟಿ ವಾಹನ ಚಾಲನೆಗೆ ಲೈಸನ್‌್ಸ ರದ್ದು
*ಶಾಲಾ ವಾಹನಗಳ ಚಾಲಕರು ಕುಡಿದು ಚಲಾಯಿಸಿದರೆ ರೂ. 50 ಸಾವಿರ ದಂಡ, ಮೂರು ವರ್ಷ ಜೈಲು
*ಸಂಚಾರ ದೀಪಗಳ ಸಂಕೇತಗಳನ್ನು ಮೂರು ಸಲ ಉಲ್ಲಂಘಿಸಿದವರಿಗೆ (ಸಿಗ್ನಲ್‌ ಜಂಪ್‌ಗೆ) ರೂ. 15 ಸಾವಿರ ದಂಡ, ಒಂದು ತಿಂಗಳವರೆಗೆ ಲೈಸನ್‌್ಸ ರದ್ದು

ಕೆಲವು ನಿರ್ದಿಷ್ಟ ಸನ್ನಿವೇಶಗಳಲ್ಲಿ ಮಕ್ಕಳ ಸಾವಿಗೆ ಕಾರಣವಾಗುವ ಚಾಲಕರಿಗೆ ಕನಿಷ್ಠ ೭ ವರ್ಷ ಜೈಲು ಮತ್ತು ರೂ. 3 ಲಕ್ಷ ದಂಡ ವಿಧಿಸುವುದು ಈ ಮಸೂದೆಯ ಮತ್ತೊಂದು ಮುಖ್ಯ ಪ್ರಸ್ತಾವ.

ವಿದ್ಯಾರ್ಥಿಗಳ ಸುರಕ್ಷತೆ: ಶಾಲಾ ವಾಹನಗಳ ಚಾಲ­ಕರು ಕುಡಿದು ಸಿಕ್ಕಿಬಿದ್ದರೆ ರೂ. ೫೦ ಸಾವಿರ ದಂಡ ಹಾಗೂ 3 ವರ್ಷ ಸೆರೆವಾಸ ವಿಧಿಸಲಾಗು­ವುದು. ಅಪ­ಘಾತ ಎಸಗಿದ ಶಾಲಾ ವಾಹನಗಳ ಚಾಲ­ಕರು ೧೮ ರಿಂದ ೨೫ ವರ್ಷದೊಳಗಿನವರಾಗಿ­ದ್ದರೆ ಅಂಥ­­ವರ ಚಾಲನಾ ಲೈಸನ್‌್ಸನ್ನು ತಕ್ಷಣವೇ ರದ್ದುಗೊಳಿಸಲಾಗುವುದು.

ವಾಹನಗಳಲ್ಲಿ ದೋಷಪೂರಿತ ವಿನ್ಯಾಸ ಕಂಡು­ಬಂದರೆ ಅದಕ್ಕೆ ಕಾರಣರಾದವರಿಗೆ ಪ್ರತಿ ವಾಹನಕ್ಕೆ ರೂ. ೫ ಲಕ್ಷ ದಂಡ, ಯರ್ರಾಬಿರ್ರಿ ಹಾಗೂ ಬೇಕಾಬಿಟ್ಟಿ ವಾಹನ ಚಾಲನೆ ಮಾಡಿದವರ ಲೈಸನ್‌್ಸ ರದ್ದುಗೊಳಿ­ಸುವಿಕೆ ಸೇರಿ ಹಲವು ಬಿಗಿ ಕ್ರಮಗಳು ಇದರಲ್ಲಿ ಸೇರಿವೆ.

ಅಸುರಕ್ಷಿತ ಸ್ಥಿತಿಯಲ್ಲಿರುವ ವಾಹನವನ್ನು ಬಳಸಿದರೆ ರೂ. ೧ ಲಕ್ಷದವರೆಗೆ ದಂಡ ಅಥವಾ ೬ ತಿಂಗಳ ಸೆರೆ­ವಾಸ ವಿಧಿಸಬೇಕು ಎಂಬ ಅಂಶ ಕರಡಿನಲ್ಲಿ ಇದೆ.

ಲೈಸನ್‌್ಸಗಳ ನಕಲು ತಡೆಯಲು ಏಕೀಕೃತ ಬಯೋಮೆಟ್ರಿಕ್‌ ಆಧಾರಿತ ವ್ಯವಸ್ಥೆ, ಸ್ವಯಂಚಾಲಿತ ಚಾಲನಾ ಲೈಸನ್‌್ಸ ನೀಡುವ  ಸರಳವಾದ ಏಕಗವಾಕ್ಷಿ ಕ್ರಮವನ್ನು ಜಾರಿಗೊಳಿಸಲಾಗುವುದು.
ಉದ್ದೇಶ: ಇನ್ನು ಐದು ವರ್ಷಗಳ ಅವಧಿಯಲ್ಲಿ ರಸ್ತೆ ಅಪಘಾತಗಳಿಂದ ಸಂಭವಿಸುತ್ತಿರುವ ಸಾವಿನ ಸಂಖ್ಯೆಯನ್ನು ೨ ಲಕ್ಷದಷ್ಟು ತಗ್ಗಿಸುವುದು ಈ ಮಸೂದೆಯ ಉದ್ದೇಶ.

ದೇಶದಲ್ಲಿ ವರ್ಷಕ್ಕೆ ಈಗ ಸುಮಾರು ೫ ಲಕ್ಷ ಅಪಘಾತಗಳು ಸಂಭವಿಸುತ್ತಿದ್ದು ಅಂದಾಜು ೧.68 ಲಕ್ಷ ಜನ ಸಾವಿಗೀಡಾಗುತ್ತಿದ್ದಾರೆ. ಅಂದರೆ, ಅಪಘಾತ­ದಿಂದಾಗಿ ಸರಾಸರಿ ಪ್ರತಿ ಮೂರು ನಿಮಿಷಕ್ಕೆ ಒಬ್ಬರು ವ್ಯಕ್ತಿ ಸಾವಿಗೀಡಾಗುತ್ತಿದ್ದಾರೆ.

ಪರಿಹಾರ ನಿಧಿ: ಎಲ್ಲ ವಾಹನ ಸವಾರರಿಗೂ ಕಡ್ಡಾಯ­ವಾಗಿ ವಿಮೆ ಸೌಲಭ್ಯ ಒದಗಿಸಲು ‘ವಾಹನ ಅಪಘಾತ ಪರಿಹಾರ ನಿಧಿ’ ಸ್ಥಾಪಿಸಲಾಗುವುದು. ಅಪಘಾತ ಸಂಭವಿಸಿದ ಮೊದಲ ಒಂದು ಗಂಟೆಯೊಳಗೆ ಗಾಯಾಳು­ಗಳಿಗೆ ಚಿಕಿತ್ಸೆ ಸಿಗುವುದು ಮುಖ್ಯ. ಅಂದರೆ ಆಸ್ಪತ್ರೆ­ಗಳು ಗಾಯಾಳುಗಳ ಬಳಿ ಚಿಕಿತ್ಸಾ ವೆಚ್ಚ ಭರಿಸಲು ಹಣ ಇದೆಯೋ, ಇಲ್ಲವೋ ಎಂದು ಯೋಚಿಸುತ್ತಾ ಕೂರದೆ ತಕ್ಷಣವೇ ಚಿಕಿತ್ಸೆ ಕೊಡಬೇಕಾಗುತ್ತದೆ. ಇದನ್ನು ಖಾತ್ರಿಗೊಳಿಸುವುದು ‘ಅಮೂಲ್ಯ ಅವಧಿ’ ನೀತಿಯ ಉದ್ದೇಶ.

ತಂತ್ರಜ್ಞಾನ ಅಳವಡಿಕೆ
ಸಂಚಾರ ಸುರಕ್ಷತೆ ಹೆಚ್ಚಿಸುವ ನಿಟ್ಟಿನಲ್ಲಿ ಆಧುನಿಕ ತಾಂತ್ರಿಕ ಸಾಧನಗಳನ್ನು ಬಳಸಿಕೊಂಡು ಸ್ವಯಂ ವೇಗ ಹೊಂದಾಣಿಕೆ, ಚಾಲಕ ಜಾಗೃತಿ ನಿಯಂತ್ರಣ ವ್ಯವಸ್ಥೆ, ಮಂಪರು ನಿಗಾ ಶೋಧಕ­ಗಳು, ವಾಹನಗಳ ನಡುವಿನ ಸುರಕ್ಷಾ ಅಂತರದ ಲೆಕ್ಕಾಚಾರ ಹಾಕುವ ವ್ಯವಸ್ಥೆ, ಹಸಿರು ಪೆಟ್ಟಿಗೆ ಮೇಲ್ವಿಚಾರಣೆ ಹಾಗೂ ಪದೇಪದೇ ನಿಯಮ ಉಲ್ಲಂಘಿಸುವವರನ್ನು ಎಲೆಕ್ಟ್ರಾನಿಕ್‌ ಕಣ್ಗಾವಲು ವ್ಯವಸ್ಥೆಯಿಂದ ಪತ್ತೆ ಹಚ್ಚುವಿಕೆಯ ಪ್ರಸ್ತಾವಗಳನ್ನು ಮಸೂದೆ ಒಳಗೊಂಡಿದೆ.

ಸಂಚಾರ ನಿಯಮಗಳ ಉಲ್ಲಂಘನೆಗೆ ಈಗ ೧೯೮೮ರ ಮೋಟಾರು ವಾಹನ ಕಾಯ್ದೆ ಪ್ರಕಾರ ವಿಧಿಸುತ್ತಿರುವ ದಂಡ ಹಾಗೂ ಕೈಗೊಳ್ಳುತ್ತಿರುವ ಕ್ರಮಗಳಿಂದ ಏನೇನೂ ಪ್ರಯೋಜನವಿಲ್ಲ ಎಂಬ ಟೀಕೆ ಎಲ್ಲೆಡೆ ಕೇಳಿಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT