ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಜಯ್‌ ಗುಬ್ಬಿ ವನ್ಯಜೀವಿ ತಜ್ಞ

Last Updated 13 ಫೆಬ್ರುವರಿ 2016, 5:14 IST
ಅಕ್ಷರ ಗಾತ್ರ

ಸಮನ್ವಯದಿಂದ ಸಾಧನೆ
ಕೆಲವು ವರ್ಷಗಳ ಹಿಂದೆ ಮೈಸೂರಿನಲ್ಲಿ ಮಿತ್ರರೊಬ್ಬರು ಅರಣ್ಯಾಧಿಕಾರಿಯಾಗಿದ್ದರು. ಒಂದು ಸಲ ನಗರದೊಳಗೆ ಚಿರತೆ ನುಗ್ಗಿತು. ಅರಣ್ಯ ಇಲಾಖೆಗೆ ಸುದ್ದಿ ಬಂತು. ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸುವ ವೇಳೆಗೆ ನೂರಾರು ಜನ ಜಮಾಯಿಸಿದ್ದರು. ಜನರ ಗದ್ದಲದಿಂದ ಗಾಬರಿಗೊಂಡ ಚಿರತೆ ಎಲ್ಲೆಂದರಲ್ಲಿ ಸಂಚರಿಸುತ್ತಿತ್ತು. ಅಲ್ಲಿದ್ದ ಬಹುತೇಕ ಮಂದಿ ಚಿರತೆ ಹಿಡಿಯುವ ಕಾರ್ಯಾಚರಣೆಯಲ್ಲಿ ನಿರತರಾಗಿದ್ದರು. ಜನರನ್ನು ಚದುರಿಸಿ ಚಿರತೆಯನ್ನು ಸುರಕ್ಷಿತವಾಗಿ ಸೆರೆ ಹಿಡಿಯುವುದು ದೊಡ್ಡ ಸವಾಲಾಗಿತ್ತು. ಸಂಜೆಯವರೆಗೆ ಇದೇ ಪರಿಸ್ಥಿತಿ ಮುಂದುವರಿಯಿತು. ಪರಿಸ್ಥಿತಿ ಕೈಮೀರುತ್ತಿದ್ದುದನ್ನು ಗಮನಿಸಿದ ಅರಣ್ಯಾಧಿಕಾರಿ ‘ಸದ್ಯಕ್ಕೆ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ’ ಎಂದು ಘೋಷಿಸಿದರು. ಅಲ್ಲೇ ಒಂದು ಬೋನು ಇಟ್ಟು ನಿರ್ಗಮಿಸಿದರು. ರಾತ್ರಿಯ ವೇಳೆಗೆ ಚಿರತೆ ಅಲ್ಲಿಂದ ಪರಾರಿಯಾಯಿತು.

ಮುಂದಿನ ದಿನಗಳಲ್ಲೂ ಇಂತಹುದೇ ಸನ್ನಿವೇಶ ಎದುರಾದರೆ ಕಾರ್ಯಾಚರಣೆ ಕಷ್ಟ ಎಂದು ಅರಿತ ಅರಣ್ಯಾಧಿಕಾರಿ ಅದಕ್ಕೊಂದು ಯೋಜನೆ ರೂಪಿಸಿದರು. ಕಾರ್ಯಾಚರಣೆಯ ತಂಡದಲ್ಲಿದ್ದ ಸದಸ್ಯರೆಲ್ಲರಿಗೂ ಒಂದು ಜೊತೆ ವಿಶೇಷ ಸಮವಸ್ತ್ರ ಕೊಡಿಸಿದರು. ಅದರಲ್ಲಿ ‘ವಿಶೇಷ ಕಾರ್ಯಾಚರಣೆ ತಂಡ’ ಎಂದೂ ಬರೆಸಿದರು. ಕಚೇರಿಯ ಆವರಣದಲ್ಲೊಂದು ‘ಜಿಪ್ಸಿ’ ಇತ್ತು. ಅದನ್ನು ದುರಸ್ತಿ ಮಾಡಿಸಿ ಬಣ್ಣ ಬಳಿದರು.  ವಾಹನದ ಮೇಲೆ ದೊಡ್ಡದಾಗಿ ‘ವಿಶೇಷ  ಕಾರ್ಯಾಚರಣೆಯ ವಾಹನ’ ಎಂದು ದೊಡ್ಡದಾಗಿ ಹಾಕಿಸಿದರು.

ಕೆಲವೇ ದಿನಗಳಲ್ಲಿ ನಗರದೊಳಗೆ ಚಿರತೆ ನುಗ್ಗಿದ ಸುದ್ದಿ ಬಂತು. ಚಿರತೆ ಬಂದ ಸ್ಥಳದಲ್ಲಿ ಸಾವಿರಾರು ಜನ ಸೇರಿದ್ದರು. ಅರಣ್ಯಾಧಿಕಾರಿ ‘ವಿಶೇಷ ಕಾರ್ಯಾಚರಣೆಯ ತಂಡ’ವನ್ನು ಕಳುಹಿಸಿದರು. ಸ್ಥಳಕ್ಕೆ ತಂಡ ತಲುಪುತ್ತಿದ್ದಂತೆ ಜನ ‘ವಿಶೇಷ ತಂಡ ಬಂದಿದೆ, ದಾರಿ ಬಿಡಿ’ ಎಂದು ಪರಸ್ಪರ ಮನವಿ ಮಾಡಿಕೊಂಡರು. ಸ್ವಯಂಪ್ರೇರಿತರಾಗಿ ಸಹಕರಿಸಿದರು. ಕೆಲವೇ ಕ್ಷಣಗಳಲ್ಲಿ ತಂಡದವರು ಚಿರತೆಯನ್ನು ಸೆರೆ ಹಿಡಿದರು. ಯಾವುದೇ ಗಲಾಟೆ ಇಲ್ಲದೆ ಯಶಸ್ವಿಯಾಗಿ ಕಾರ್ಯಾಚರಣೆ ಪೂರ್ಣಗೊಂಡಿತು. ಅರಣ್ಯಾಧಿಕಾರಿ ಬಳಸಿದ ಸಣ್ಣ ತಂತ್ರದಿಂದ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿತು. ಇದೇ ರೀತಿ ನಾಲ್ಕಾರು ಪ್ರಕರಣಗಳಲ್ಲಿ ಅರಣ್ಯಾಧಿಕಾರಿ ಚಿರತೆಗಳನ್ನು ಸುಲಭದಲ್ಲಿ ಸೆರೆ ಹಿಡಿದರು. ಮಾನವ–ಪ್ರಾಣಿ ಸಂಘರ್ಷದ ಸಂದರ್ಭದಲ್ಲಿ ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸಲು ಮೂಲಸೌಕರ್ಯದ ಕೊರತೆ ಇದೆ ನಿಜ. ಆದರೆ, ಪ್ರತಿಕೂಲ ಸನ್ನಿವೇಶದಲ್ಲೂ ಅಧಿಕಾರಿಗಳು ತೆಗೆದುಕೊಳ್ಳುವ ನಿರ್ಧಾರಗಳಿಂದ ಅತ್ಯುತ್ತಮ ಫಲಿತಾಂಶಗಳು ಬರುತ್ತವೆ. ಪ್ರಾಣಿಗಳು ನಗರಕ್ಕೆ ನುಗ್ಗಿದಾಗ ಅರಣ್ಯ ಇಲಾಖೆಯನ್ನಷ್ಟೇ ಹೊಣೆ ಮಾಡುವುದು ಸರಿಯಲ್ಲ. ಅರಣ್ಯ, ಗೃಹ, ಪಶುಸಂಗೋಪನೆ, ಜಿಲ್ಲಾಡಳಿತ ಸೇರಿದಂತೆ ಐದಾರು ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಬೇಕು. ದುರಂತವೆಂದರೆ ಬಹುತೇಕ ಸಂದರ್ಭಗಳಲ್ಲಿ ಸಮನ್ವಯದ ಕೊರತೆ ಎದ್ದು ಕಾಣುತ್ತದೆ. ಇದಕ್ಕೆ ಇತ್ತೀಚೆಗೆ ನಡೆದ ಬೆಂಗಳೂರಿನ ಘಟನೆಯೇ ಸಾಕ್ಷಿ.

365 ದಿನಗಳೂ ಸನ್ನದ್ಧವಾಗಿರುವ ಸಂಘರ್ಷ ನಿಗ್ರಹ ದಳ ಸ್ಥಾಪಿಸಬೇಕು. ಇಂಥ ನಿರ್ಧಾರವನ್ನು ಅಧಿಕಾರಿಗಳ ಮಟ್ಟದಲ್ಲಿ ತೆಗೆದುಕೊಳ್ಳಲಾಗದು. ಒಂದು ಇಲಾಖೆ ಅಧಿಕಾರಿಯ ಮಾತನ್ನು ಇನ್ನೊಂದು ಇಲಾಖೆಯ ಅಧಿಕಾರಿ ಕೇಳುವುದಿಲ್ಲ. ಐದು ಇಲಾಖೆಗಳ ಸಚಿವರೂ ಸಭೆ ನಡೆಸಿ ನಿರ್ಧಾರಕ್ಕೆ ಬರಬೇಕು. ಕಾರ್ಯಾಚರಣೆ ವೇಳೆ ಮಾಧ್ಯಮಗಳು ಕ್ಷಣಕ್ಷಣಕ್ಕೂ ಬ್ರೇಕಿಂಗ್‌ ನ್ಯೂಸ್‌ ನೀಡುವುದನ್ನು ನಿಲ್ಲಿಸಬೇಕು. ಸುದ್ದಿ ನೋಡಿ ಜನ ಹಬ್ಬಕ್ಕೆ ಬಂದಂತೆ ಬರುವುದರಿಂದ ಅವರನ್ನು ನಿಯಂತ್ರಿಸುವುದು ಕಷ್ಟ.
-ಸಂಜಯ್‌ ಗುಬ್ಬಿ, ವನ್ಯಜೀವಿ ತಜ್ಞ (ನಿರೂಪಣೆ: ಮಂಜುನಾಥ ಹೆಬ್ಬಾರ್‌)

ಅರಣ್ಯ ಇಲಾಖೆ ಮಾದರಿ ಹೆಜ್ಜೆ
ವನ್ಯಜೀವಿಗಳು ಜನವಸತಿ ಪ್ರದೇಶಕ್ಕೆ ನುಗ್ಗುವಂತಹ  ಘಟನೆಗಳು ತೀರಾ ಆಕಸ್ಮಿಕವಾಗಿ ಸಂಭವಿಸುವಂಥವು. ಅಂತಹ ಘಟನೆಗಳನ್ನು ನಿಭಾಯಿಸುವ ತಂತ್ರಜ್ಞಾನ, ಉಪಕರಣ, ಮಾನವ ಸಂಪನ್ಮೂಲ ಎಲ್ಲವೂ ನಮ್ಮ ಅರಣ್ಯ ಇಲಾಖೆಗಿದೆ. ಇತರ ರಾಜ್ಯಗಳಿಗೂ ನಮ್ಮ ಇಲಾಖೆಯ ಕಾರ್ಯವೈಖರಿ ಮಾದರಿಯಾಗಿದೆ.

ಉದ್ವಿಗ್ನಗೊಂಡ ವನ್ಯಜೀವಿಯನ್ನು ಮತ್ತೆ ಅರಣ್ಯ ಸೇರುವಂತೆ ನೋಡಿಕೊಳ್ಳುವುದಕ್ಕೆ ಮೊದಲ ಆದ್ಯತೆ. ಹೀಗಾಗಿ ಘಟನೆ ನಡೆದ ಸ್ಥಳದಲ್ಲಿ ಕೈಗೊಳ್ಳುವ ಆ ಕ್ಷಣದ ನಿರ್ಧಾರಗಳು ಅತಿ ಮುಖ್ಯವಾಗಿವೆ. ವನ್ಯಜೀವಿಗಳು ನಾಡಿಗೆ ನುಗ್ಗುವಂತಹ ಘಟನೆ ನಿಭಾಯಿಸುವ ಸಲುವಾಗಿ ಪ್ರತ್ಯೇಕ ಘಟಕವನ್ನು ರಚಿಸುವ ಅಗತ್ಯ ಎದ್ದು ಕಾಣುವುದಿಲ್ಲ. ಬಿಬಿಎಂಪಿ ಅರಣ್ಯ ವಿಭಾಗದಲ್ಲಿ ಮಾತ್ರ ಬೇಕಾದರೆ ಅಂತಹದ್ದೊಂದು ಘಟಕ ರಚನೆ ಮಾಡಬಹುದು. ಆನೆಗಳ ಹಾವಳಿ ಹೆಚ್ಚಾಗಿರುವ ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ಆನೆಗಳನ್ನು ಮತ್ತೆ ಕಾಡಿಗೆ ಅಟ್ಟುವಂತಹ ಘಟಕಗಳಿವೆ. ಅಲ್ಲಿ ಸಮಸ್ಯೆ ನಿರಂತರವಾಗಿ ಕಾಡುವುದರಿಂದ ಇಂತಹ ಘಟಕಗಳು ಅಗತ್ಯ.
-ಎನ್‌.ಡಿ.ತಿವಾರಿ, ನಿವೃತ್ತ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ

ಇಟ್ಟಿರುವ ಹೆಜ್ಜೆ ಸಾಲದು
ಮಾನವ– ಪ್ರಾಣಿ ಸಂಘರ್ಷ ತಡೆಗಟ್ಟಲು ಅರಣ್ಯ ಇಲಾಖೆ ಹಲವು ಹೆಜ್ಜೆಗಳನ್ನು ಇಟ್ಟಿದೆ. ಅದು ಸಾಲದು. ಇನ್ನಷ್ಟು ಹೆಜ್ಜೆಗಳನ್ನು ಇಡಬೇಕಿದೆ. ಕಾರ್ಯಾಚರಣೆಗೆ ವಿಶೇಷ ತಂಡ ರಚಿಸಬೇಕು. ಇದು ಕರ್ನಾಟಕ ಮೀಸಲು ಪೊಲೀಸ್‌ ಪಡೆಯ ಮಾದರಿಯಲ್ಲೇ ಇರಬೇಕು. ಈ ತಂಡದ ಸದಸ್ಯರಿಗೆ ಅಗತ್ಯ ತರಬೇತಿ, ಸಲಕರಣೆ ಒದಗಿಸಬೇಕು. ಅನುದಾನವನ್ನೂ ನೀಡಬೇಕು. ಕಾರ್ಯಾಚರಣೆ ವೇಳೆ ಒಬ್ಬ ಅಧಿಕಾರಿ ಕಮಾಂಡರ್‌ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕು.
-ಪ್ರವೀಣ್‌ ಭಾರ್ಗವ್‌, ವೈಲ್ಡ್‌ಲೈಫ್‌ ಫಸ್ಟ್‌ ಮ್ಯಾನೇಜಿಂಗ್‌ ಟ್ರಸ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT