ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತಸದ ಬಾಲ್ಯಕ್ಕೆ ಕಾನೂನಿನ ಬಲ

ದತ್ತು ಯಾಕೀ ವಿಳಂಬ?
Last Updated 6 ಮಾರ್ಚ್ 2015, 20:27 IST
ಅಕ್ಷರ ಗಾತ್ರ

ದೇಶದ ಎಲ್ಲ ಮಕ್ಕಳು ಸಂತೋಷದಿಂದ ಕೂಡಿದ, ಆರೋಗ್ಯಕರ ಬಾಲ್ಯ ಅನುಭವಿಸಬೇಕು ಎಂಬುದು ಸಂವಿಧಾನದ ಆಶಯ. ಬಾಲ್ಯದಲ್ಲಿ ಅವರು ಶೋಷಣೆಗೆ, ದೌರ್ಜನ್ಯಕ್ಕೆ ಗುರಿಯಾಗಬಾರದು ಎಂಬ ಆಶಯವೂ ಇದರ ಜೊತೆಗೇ ಅಡಕವಾಗಿದೆ. ಮಗುವಿಗೆ ಒಂದು ಮನೆ ಇರಬೇಕು, ಅಲ್ಲಿ ಅದಕ್ಕೆ ತಂದೆ–ತಾಯಿಯ ಪ್ರೀತಿ ಸಿಗಬೇಕು ಎಂಬುದು ಸಂವಿಧಾನದ ಹಂಬಲ.

ಬಾಲ ನ್ಯಾಯ (ಆರೈಕೆ ಮತ್ತು ರಕ್ಷಣೆ) ಕಾಯ್ದೆ– 2000 ಎಂಬ ಕಾನೂನನ್ನು ಮಕ್ಕಳನ್ನು ದತ್ತು ಪಡೆಯುವ ಪ್ರಕ್ರಿಯೆ ಕುರಿತಂತೆ ರೂಪಿಸಲಾಗಿದೆ. ಇದು ಎಲ್ಲ ಧರ್ಮೀಯರಿಗೂ ಅನ್ವಯ ಆಗುವ ಕಾಯ್ದೆ. ಅನಾಥ, ಕಾನೂನಿನ ಜೊತೆ ಸಂಘರ್ಷಕ್ಕೆ ಗುರಿಯಾದ ಮಕ್ಕಳ ಆರೈಕೆ, ರಕ್ಷಣೆ, ಮಗುವಿನ ಬೆಳವಣಿಗೆಗೆ ಅಗತ್ಯವಿರುವುದನ್ನು ಪೂರೈಸುವ ಉದ್ದೇಶಗಳಿಂದ ಕೇಂದ್ರ ಸರ್ಕಾರ ಈ ಕಾಯ್ದೆ ರೂಪಿಸಿದೆ. ಅನಾಥ ಮಕ್ಕಳು ಹಾಗೂ ತಂದೆ–ತಾಯಿ ಇದು ತಮಗೆ ಬೇಡದ ಮಗು ಎಂದು ತಂದೊಪ್ಪಿಸಿದ ಮಕ್ಕಳನ್ನು ದತ್ತು ಪಡೆಯಬಹುದು ಎಂದು ಕಾಯ್ದೆ ಹೇಳುತ್ತದೆ.

ಕೆಲವು ತಂದೆ–ತಾಯಿ ‘ಇದು ನಮಗೆ ಬೇಡದ ಮಗು, ನಮ್ಮದಲ್ಲದ ಮಗು’ ಎಂದು ತಂದೊಪ್ಪಿಸಿದ ಉದಾಹರಣೆಗಳಿವೆ. ಅಂಥ ಮಕ್ಕಳು ಪ್ರೀತಿ, ಆರೈಕೆಯಿಂದ ವಂಚಿತವಾಗುತ್ತವೆ. ಆ ಮಕ್ಕಳನ್ನು ದತ್ತು ಪಡೆಯಬಹುದು. ಈ ಕಾಯ್ದೆಯ ಅಡಿ, ಪ್ರತಿ ಜಿಲ್ಲೆಯಲ್ಲಿ ಸ್ವಯಂ ಸೇವಾ ಸಂಸ್ಥೆಗಳು, ವಿಶೇಷ ಪರಿಣತಿ ಹೊಂದಿರುವ ದತ್ತು ಸಂಸ್ಥೆಗಳನ್ನು ರಾಜ್ಯ ಸರ್ಕಾರಗಳು ಗುರುತಿಸಬೇಕು. ಇಂಥ ಸಂಸ್ಥೆಗಳು ಮಾಧ್ಯಮಗಳ ಮೂಲಕ, ಮಗು ದತ್ತು ಸ್ವೀಕಾರಕ್ಕೆ ಲಭ್ಯವಿದೆ ಎಂಬ ಜಾಹೀರಾತು ನೀಡಬೇಕು.

ರಾಜ್ಯ ಸರ್ಕಾರಗಳು ಪ್ರತಿ ಜಿಲ್ಲೆಯಲ್ಲಿ ಅಥವಾ ಒಂದು ನಿರ್ದಿಷ್ಟ ಪ್ರದೇಶಕ್ಕೆ ಅನ್ವಯವಾಗುವಂತೆ ‘ಮಕ್ಕಳ ಅಭಿವೃದ್ಧಿ ಸಮಿತಿ’ಗಳನ್ನು ಬಾಲ ನ್ಯಾಯ ಕಾಯ್ದೆಯ ಅಡಿ ರಚಿಸಬೇಕು. ಈ ಸಮಿತಿಯಲ್ಲಿ ಅಧ್ಯಕ್ಷರೂ ಸೇರಿದಂತೆ ಐದು ಜನ ಇರುತ್ತಾರೆ. ಇವರಲ್ಲಿ ಒಬ್ಬರು ಮಹಿಳೆ ಇರಲೇಬೇಕು. ಮಕ್ಕಳಿಗೆ ಸಂಬಂಧಿಸಿದ ವಿಚಾರಗಳಲ್ಲಿ ಪರಿಣತಿ ಹೊಂದಿದ ಒಬ್ಬರು ಸದಸ್ಯರಾಗಿರುವುದೂ ಕಡ್ಡಾಯ.

ತಂದೆ–ತಾಯಿ, ಮಹಿಳೆ ಕೆಲವು ಷರತ್ತುಗಳನ್ನು ಪೂರೈಸಿದರೆ ಮಾತ್ರ ಅಂತಹವರಿಗೆ ಮಕ್ಕಳನ್ನು ದತ್ತು ನೀಡಬಹುದು ಎಂದು ಕಾಯ್ದೆ ಹೇಳುತ್ತದೆ. ಒಂದು ಮಗು ಕಾನೂನಿನ ದೃಷ್ಟಿಯಿಂದ ದತ್ತು ಸ್ವೀಕಾರಕ್ಕೆ ಅರ್ಹ ಎಂದು ಸಮಿತಿಯ ಕನಿಷ್ಠ ಇಬ್ಬರು ಸದಸ್ಯರು ಘೋಷಿಸಬೇಕು. ‘ಕಾನೂನಿನ ದೃಷ್ಟಿಯಿಂದ’ ಅಂದರೆ, ಆ ಮಗುವಿನ ನಿಜವಾದ ತಂದೆ–ತಾಯಿಯಿಂದ, ಅಥವಾ ಹತ್ತಿರದ ಸಂಬಂಧಿಗಳಿಂದ ಯಾವುದೇ ಆಕ್ಷೇಪ ಇರಬಾರದು.

ದತ್ತು ಪಡೆಯಲು ಮುಂದೆ ಬರುವ ತಂದೆ–ತಾಯಿ ಮಗುವನ್ನು ಚೆನ್ನಾಗಿ ನೋಡಿಕೊಳ್ಳಬಲ್ಲರೇ, ಮಗುವಿನ ಶೈಕ್ಷಣಿಕ ಅಗತ್ಯಗಳನ್ನು ಪೂರೈಸಬಲ್ಲರೇ ಎಂಬ ಅಂಶಗಳನ್ನೂ ಸಮಿತಿ ದತ್ತು ನೀಡುವ ಮುನ್ನ ಪರಿಗಣಿಸುತ್ತದೆ. ಏಕೆಂದರೆ ಮಕ್ಕಳನ್ನು ದತ್ತು ಪಡೆಯುವುದು ಎಂದರೆ ಸಾಕು ನಾಯಿ ತಂದಂತೆ ಅಲ್ಲ.

‘ಇದು ನನಗೆ ಬೇಡದ ಮಗು’ ಎಂದು ಮಕ್ಕಳ ಅಭಿವೃದ್ಧಿ ಸಮಿತಿಗೆ ತಂದೊಪ್ಪಿಸಿದ  ಮಗುವನ್ನು ದತ್ತು ನೀಡುವ ಮುನ್ನ, ದತ್ತು ಪಡೆಯಲು ಮುಂದೆ ಬಂದ ಪಾಲಕರಿಗೆ ಎರಡು ತಿಂಗಳ ಕಾಲಾವಕಾಶ ನೀಡಲಾಗುತ್ತದೆ. ಆ ಪಾಲಕರು ಮಗುವಿನ ಜೊತೆ ಉತ್ತಮ ಬಾಂಧವ್ಯ ಹೊಂದಬಹುದೇ ಎಂಬುದನ್ನು ಪರಿಶೀಲಿಸಲಾಗುತ್ತದೆ. ಪಾಲಕರು ಮಗುವಿಗೆ ಪ್ರೀತಿ ಕೊಡಬಲ್ಲರು ಎಂಬುದು ಸಮಿತಿಗೆ ಮನವರಿಕೆಯಾಗಬೇಕು. ಮನೋವೈಜ್ಞಾನಿಕ ದೃಷ್ಟಿಯಿಂದಲೂ ಇದು ಕಾನೂನಿನ ಪ್ರಮುಖ ಅಂಶ.

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವನ್ನು ಮಾತ್ರ ದತ್ತು ಪಡೆಯಬಹುದು. ಆದರೆ ದತ್ತು ಪಡೆಯಲು ಮುಂದೆ ಬರುವ ತಂದೆ–ತಾಯಿಗೆ ಇಷ್ಟೇ ವರ್ಷ ಆಗಿರಬೇಕು ಎಂಬ ನಿಯಮ ಇಲ್ಲ. ತಂದೆ–ತಾಯಿ ಮಗುವನ್ನು ಸಾಕುವ ಸಾಮರ್ಥ್ಯ ಹೊಂದಿದ್ದಾರೆಯೇ ಎಂಬುದನ್ನು ಸಮಿತಿ ಪರಿಶೀಲಿಸುತ್ತದೆ. 90 ವಸಂತ ಪೂರೈಸಿರುವ ವೃದ್ಧ ದಂಪತಿಗೆ ಮಗುವನ್ನು ದತ್ತು ನೀಡಲು ಸಮಿತಿ ಒಪ್ಪಲಿಕ್ಕಿಲ್ಲ!
ಒಂದು ವೇಳೆ ಮಗುವಿಗೆ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಸಾಮರ್ಥ್ಯ ಇದೆ ಎಂದಾದರೆ, ದತ್ತು ನೀಡುವ ಮುನ್ನ ಮಗುವಿನ ಮಾತನ್ನೂ ಆಲಿಸಲಾಗುತ್ತದೆ. ಮಗುವಿಗೆ ಐದು–ಆರು ವರ್ಷ ತುಂಬಿದ್ದರೆ, ‘ನನಗೆ ಇಂಥ ತಾಯಿ ಬೇಕು, ಇಂಥ ತಂದೆ ಬೇಕು. ತಂದೆ–ತಾಯಿ ಎಂದರೆ ನನ್ನ ದೃಷ್ಟಿಯಲ್ಲಿ ಹೀಗಿರಬೇಕು’ ಎಂಬ ಆಸೆಗಳನ್ನು ಮಗು ವ್ಯಕ್ತಪಡಿಸುವಂ­ತಿ­ದ್ದರೆ, ಮಗುವಿನ ಮಾತು ಆಲಿಸಿಯೇ ದತ್ತು ನೀಡುವ ವಿಚಾರ­ದಲ್ಲಿ ಮುಂದಡಿ ಇಡಲಾಗುತ್ತದೆ. ಇದನ್ನೂ ಕಾನೂನು ವಿವರವಾಗಿ ಹೇಳಿದೆ.

ಪುರುಷನಿಗೆ ಇಲ್ಲ ಈ ಹಕ್ಕು: ಗಂಡಸರು ಮಕ್ಕಳನ್ನು ದೌರ್ಜನ್ಯಕ್ಕೆ ಗುರಿಪಡಿಸಬಹುದು, ಶೋಷಿಸಬಹುದು. ಹಾಗಾಗಿ ಅವರು ಮಕ್ಕಳನ್ನು ದತ್ತು ಪಡೆಯಲು ಆಗದು. ತಾಯ್ತನದ ಭಾವ ಗಂಡಸರಲ್ಲಿ ಇರುವುದು ವಿರಳಾತಿವಿರಳ. ಹಾಗಾಗಿ, ನಮ್ಮ ಕಾನೂನು ನಿರ್ಮಾತೃಗಳು ಹೆಣ್ಣು ಮಾತ್ರ ಮಕ್ಕಳನ್ನು ದತ್ತು ಪಡೆಯಬಹುದು ಎಂಬ ನಿಯಮ ರೂಪಿಸಿದ್ದಾರೆ. ಮಕ್ಕಳಿಗೆ ಏನು ಬೇಕು ಎಂಬುದನ್ನು ತಾಯಿ ಮಾತ್ರ ಅರ್ಥ ಮಾಡಿಕೊಳ್ಳಬಲ್ಲಳು. ತಂದೆಯಾದವ ಆ ಆಸೆಗಳನ್ನು ಪೂರೈಸುವ ಸಾಮರ್ಥ್ಯವನ್ನು ಮಾತ್ರ ಪಡೆದಿದ್ದಾನೆ.

ಮದುವೆ ಆಗದ ಹೆಣ್ಣು, ತನಗೆ ಇಷ್ಟವಾದರೆ ಮಗುವನ್ನು ದತ್ತು ಪಡೆಯಬಹುದು. ಆದರೆ ಗಂಡಿಗೆ ಆ ಹಕ್ಕು ಇಲ್ಲ. ಮಗುವಿನ ಮೇಲೆ ದೌರ್ಜನ್ಯ ನಡೆಸಿದವರೆಲ್ಲ ಪುರುಷರೇ ಆಗಿದ್ದಾರೆ. ಹೆಣ್ಣು ಅಂಥ ಕೆಲಸ ಮಾಡಿಲ್ಲ. ಇದನ್ನೆಲ್ಲ ಗಮನಿಸಿ, ಕಾನೂನಿನಲ್ಲಿ ಇಂಥ ಅಂಶ ಸೇರಿಸಿರಬಹುದು. ಒಬ್ಬ ಪುರುಷ ಯಾವುದೇ ಕಾರಣಕ್ಕೂ ಮಗುವಿನ ಮೇಲೆ ದೌರ್ಜನ್ಯ ನಡೆಸುವುದಿಲ್ಲ ಎಂದು ಸಮಿತಿಗೆ ಮನವರಿಕೆ­ಯಾದರೆ ಆತನಿಗೆ ದತ್ತು ಪಡೆಯುವ ಹಕ್ಕು ಸಿಗಬಹುದು. ಆದರೆ, ಪುರುಷನಿಗೆ ಇದು ಹಕ್ಕಿನ ನೆಲೆಯಲ್ಲಿ ಸಿಗುವುದಿಲ್ಲ ಎಂಬುದನ್ನು ನೆನಪಿನಲ್ಲಿಡಬೇಕು. ಕಾನೂನಿಗೆ ಈ ನಿಟ್ಟಿನಲ್ಲಿ ಕೆಲವು ತಿದ್ದುಪಡಿಗಳು ಬೇಕು.

ಲಿವ್–ಇನ್ (ಮದುವೆ ಆಗದೆಯೇ ಒಟ್ಟಾಗಿರುವುದು) ಸಂಬಂಧಗಳಲ್ಲಿ ಬಾಳುತ್ತಿರುವ ಗಂಡು–ಹೆಣ್ಣು ದತ್ತು ಪಡೆಯುವ ಹಕ್ಕು ಹೊಂದಿಲ್ಲ. ಏಕೆಂದರೆ ಇಂಥ ಸಂಬಂಧವೇ ಅನಿರ್ದಿಷ್ಟ ಅವಧಿಯದ್ದು. ಎಷ್ಟು ದಿನ ಒಟ್ಟಿಗೆ ಇರುತ್ತೇವೆ ಎಂಬುದೇ ತಿಳಿಯದವರಿಗೆ ಮಕ್ಕಳನ್ನು ದತ್ತು ಪಡೆಯುವ ಅವಕಾಶ ನೀಡಿದರೆ, ಮುಂದೆ ಆ ಮಗುವಿನ ಭವಿಷ್ಯ ಏನಾಗಬಹುದು? ಈ ಕಾಯ್ದೆಯಲ್ಲಿ ನನಗೆ ದೋಷಗಳು ಕಾಣುತ್ತಿಲ್ಲ. ಸಮಿತಿ ಚೆನ್ನಾಗಿದ್ದರೆ ಕಾಯ್ದೆಯ ಎಲ್ಲ ಆಶಯಗಳೂ ಅನುಷ್ಠಾನಕ್ಕೆ ಬರುತ್ತವೆ.

ಯಾವುದು ‘ಬೇಡದ ಮಗು’?


ಸಮ್ಮತಿಯ ಲೈಂಗಿಕ ಸಂಪರ್ಕ, ವಿವಾಹೇತರ ಲೈಂಗಿಕ ಸಂಪರ್ಕದ ಕಾರಣ ಜನಿಸಿದ ಮಕ್ಕಳು; ತಂದೆ–ತಾಯಿಯ ಪೈಕಿ ಒಬ್ಬರು ಮೃತಪಟ್ಟಿದ್ದು, ಇನ್ನೊಬ್ಬರು ಮಾನಸಿಕ ಅಸ್ವಸ್ಥ ಅಥವಾ ದೈಹಿಕವಾಗಿ ಸಂಪೂರ್ಣವಾಗಿ ಅಸ್ವಸ್ಥ ಆಗಿದ್ದರೆ ಅಂಥ ಮಕ್ಕಳನ್ನು ಈ ಪ್ರವರ್ಗಕ್ಕೆ ಸೇರಿಸಲಾಗುತ್ತದೆ.  ಸಾಮಾಜಿಕ, ದೈಹಿಕ ಮತ್ತು ಆರ್ಥಿಕ ಕಾರಣ­ಗಳಿಂದ ಪಾಲಕರು ಮಗುವನ್ನು ತೊರೆದಿದ್ದರೆ ಅಂಥ ಮಕ್ಕಳನ್ನೂ ಇದೇ ಪ್ರವರ್ಗಕ್ಕೆ ಸೇರಿಸಲಾಗುತ್ತದೆ.

(ಲೇಖಕರು ವಕೀಲರು)
ನಿರೂಪಣೆ: ವಿಜಯ್‌ ಜೋಷಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT