ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತಸದ ‘ಹರಿವು’

Last Updated 1 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ವಿಭಿನ್ನ ಸಿನಿಮಾವೊಂದನ್ನು ಮಾಡುವ ಆಸೆಗೆ ರಾಷ್ಟ್ರಮಟ್ಟದ ಮನ್ನಣೆ ದೊರಕಿರುವುದು ನಿರ್ದೇಶಕ ಮಂಸೋರೆ ಅವರನ್ನು ಪುಳಕಿತರನ್ನಾಗಿಸಿದೆ. ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ಡಾ. ಆಶಾ ಬೆನಕಪ್ಪ ಅವರ ಅಂಕಣದ ಬರಹವೊಂದನ್ನು ಆಧರಿಸಿ ನಿರ್ಮಿಸಿದ ‘ಹರಿವು’ ಚಿತ್ರಕ್ಕೆ ‘ಅತ್ಯುತ್ತಮ ಪ್ರಾದೇಶಿಕ ಚಿತ್ರ’ ಪ್ರಶಸ್ತಿ ಪ್ರಕಟವಾಗಿದೆ. ಈ ಸಂಭ್ರಮವನ್ನು ಹಂಚಿಕೊಳ್ಳಲು ಚಿತ್ರತಂಡ ಸಂತೋಷಕೂಟ ಆಯೋಜಿಸಿತ್ತು.

‘ನಾನು ಅವನಲ್ಲ ಅವಳು’ ಚಿತ್ರಕ್ಕೆ ಅತ್ಯುತ್ತಮ ನಟ ಪ್ರಶಸ್ತಿ ಪಡೆದ ‘ಸಂಚಾರಿ’ ವಿಜಯ್, ಹರಿವು ಚಿತ್ರದ ನಾಯಕ ಕೂಡ. ಅವರು ಹಾಜರಿದ್ದುದು ಚಿತ್ರತಂಡದ ಸಂತಸವನ್ನು ಇಮ್ಮಡಿಗೊಳಿಸಿತ್ತು. ಅವರೇ ಕಾರ್ಯಕ್ರಮದ ಕೇಂದ್ರ ಬಿಂದು ಆಗಿದ್ದುದಂತೂ ಹೌದು! ಈ ಚಿತ್ರದ ತಂಡದಲ್ಲಿ ಇರುವವರ ಪೈಕಿ ಹೆಚ್ಚು ಮಂದಿ ರಂಗಭೂಮಿ ಹಿನ್ನೆಲೆಯಿಂದ ಬಂದವರು. ಈ ಮಾತನ್ನು ವಿಜಯ್ ಹೆಮ್ಮೆಯಿಂದ ಹೇಳಿದರು.

ಚಿತ್ರೀಕರಣ ಆರಂಭವಾದ ಬಳಿಕ ಹಲವು ತೊಂದರೆಗಳು ಎದುರಾದವು. ಆಗಾಗ್ಗೆ ಚಿತ್ರೀಕರಣ ಸ್ಥಗಿತಗೊಂಡರೂ ಛಲ ಬಿಡದಂತೆ ಕೆಲಸಗಳೆಲ್ಲ ಸರಿ ದಾರಿಗೆ ಬರುವಂತೆ ಪ್ರಯತ್ನ ಮಾಡಿದ ನಿರ್ಮಾಪಕರನ್ನು ವಿಜಯ್ ಹೊಗಳಿದರು. ‘ಇಂಥ ಅರ್ಥಪೂರ್ಣ ಸಿನಿಮಾಗಳನ್ನು ಮಾಡುವ ನಿರ್ಮಾಪಕರ ಸಂಖ್ಯೆ ಇನ್ನಷ್ಟು ಮತ್ತಷ್ಟು ಹೆಚ್ಚಾಗಬೇಕು’ ಎಂಬುದು ಅವರ ಆಸೆ.

ನೈಜ ಘಟನೆ ಆಧರಿಸಿದ ತಮ್ಮ ಬರಹವೊಂದನ್ನು ಬೆಳ್ಳಿತೆರೆ ಮೇಲೆ ತಂದ ಮಂಸೋರೆ ಅವರನ್ನು ಡಾ. ಆಶಾ ಬೆನಕಪ್ಪ ಪ್ರಶಂಸಿಸಿದರು. ನಾಲ್ಕು ವರ್ಷಗಳ ಹಿಂದೆ ಆರಂಭವಾದ ಚಿತ್ರ, ಹಲವು ಅಡೆತಡೆ ಎದುರಿಸಿ ಕೊನೆಗೂ ಯಶಸ್ವಿಯಾದ ಬಗೆಯನ್ನು ಮಂಸೋರೆ ತೆರೆದಿಟ್ಟರು. ಮೊದಲು ಅವಿನಾಶ ಶೆಟ್ಟಿ ನಿರ್ಮಾಪಕರಾಗಿದ್ದು, ಸಮಸ್ಯೆ ಎದುರಾದಾಗ ಮತ್ತೆ ಮೂವರು ಅವರಿಗೆ ನೆರವಾಗಿದ್ದನ್ನು ಸ್ಮರಿಸಿದರು. ಚಿತ್ರ ನಿರ್ಮಾಣದಲ್ಲಿ ದುಡಿದ ಎಲ್ಲ ತಂತ್ರಜ್ಞರನ್ನೂ ವೇದಿಕೆಗೆ ಕರೆದು ಸನ್ಮಾನಿಸಿದರು.

ಕಲಾವಿದರಾದ ಶ್ವೇತಾ ದೇಸಾಯಿ, ಮಧುಶ್ರೀ, ಲೋಕೇಶ್‌ ಆಚಾರ್ಯ, ಹನುಮಂತ, ಶೋಯಿಬ್ ಇತರರು ಅನುಭವ ಹಂಚಿಕೊಂಡರು. ‘ನಮ್ಮ ಮೊದಲ ಚಿತ್ರಕ್ಕೇ ರಾಷ್ಟ್ರ ಪ್ರಶಸ್ತಿ ಬಂದಿರುವುದು ಖುಷಿ ಕೊಟ್ಟಿದೆ’ ಎಂದು ನಿರ್ಮಾಪಕ ನವೀನ್ ಪಟೇಲ್ ಹೇಳಿಕೊಂಡರು. ಸಹ ನಿರ್ಮಾಪಕರಾದ ಅವಿನಾಶ್ ಶೆಟ್ಟಿ, ಮಹೇಶ್ ಹಾಗೂ ಸುರೇಶ, ಛಾಯಾಗ್ರಾಹಕ ಆನಂದ್, ಸಂಗೀತ ನಿರ್ದೇಶಕ ಚರಣ್ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT