ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಸಂದಿಗ್ಧ ಸ್ಥಿತಿಯಲ್ಲಿ ಪೊಲೀಸರು'

ನಗರ ಪೊಲೀಸ್ ಆಯುಕ್ತ ಎಂ.ಎನ್. ರೆಡ್ಡಿ ಮಾರ್ಮಿಕ ನುಡಿ
Last Updated 27 ಮಾರ್ಚ್ 2015, 19:35 IST
ಅಕ್ಷರ ಗಾತ್ರ

ಬೆಂಗಳೂರು: ‘ಅಪರಾಧ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದರೆ ತನಿಖೆ ನಡೆಸದೆ ಹೇಳಿಕೆ ನೀಡಬಾರದಿತ್ತು ಎನ್ನುತ್ತಾರೆ. ತಡ ಮಾಡಿದರೆ ಪೊಲೀಸರಿಗೆ ಮಾಹಿತಿಯೇ ಇಲ್ಲವೆಂದು ದೂರುತ್ತಾರೆ’ ಎಂದು ನಗರ ಪೊಲೀಸ್‌ ಕಮಿಷನರ್‌ ಎಂ.ಎನ್‌.ರೆಡ್ಡಿ ಮಾರ್ಮಿಕವಾಗಿ ನುಡಿದರು.

ರೌಂಡ್ ಟೇಬಲ್‌ ಮತ್ತು ಲೇಡೀಸ್‌ ಸರ್ಕಲ್‌ ಇಂಡಿಯಾ ಸಂಸ್ಥೆಯು ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ನೈಟ್ಸ್‌ ಇನ್‌ ಖಾಕಿ–2015’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಐಎಎಸ್‌ ಅಧಿಕಾರಿ ಡಿ.ಕೆ.ರವಿ ಸಾವಿನ ಪ್ರಕರಣ ಸಂಬಂಧ ರಾಜಕೀಯ ಮುಖಂಡರ ಹೇಳಿಕೆಗಳಿಗೆ ಪರೋಕ್ಷ ವಾಗಿ ಪ್ರತಿಕ್ರಿಯಿಸಿದರು.

‘ಪೊಲೀಸರಿಗೆ ಕಾರ್ಯ ಒತ್ತಡ ಹೆಚ್ಚಿದೆ. ಇದರಿಂದಾಗಿ ಸಿಬ್ಬಂದಿಯ ಜೀವನದಲ್ಲಿ ನಗು ಮರೆತುಹೋಗಿದೆ. ಅಪರಾಧ ಪ್ರಕರಣಗಳ ಬಗ್ಗೆ ತಕ್ಷಣವೇ ಮಾಹಿತಿ ನೀಡಿದರೂ ಅಥವಾ ಮಾಹಿತಿ ನೀಡದಿದ್ದರೂ ತೊಂದರೆ ಎದುರಿಸಬೇಕಾಗುತ್ತದೆ. ಮಾಹಿತಿ ನೀಡದಿದ್ದರೆ ಪ್ರಕರಣ ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸು ತ್ತಾರೆ. ಇಂತಹ ಸಂದಿಗ್ಧ ಸ್ಥಿತಿಯನ್ನು ನಿಭಾಯಿಸುವುದು ಕಷ್ಟ’ ಎಂದರು.

ಅಪರಾಧ ಪತ್ತೆ, ಸಂಚಾರ ನಿರ್ವಹಣೆ, ಕಾನೂನು ಸುವ್ಯವಸ್ಥೆ ಪಾಲನೆ, ಮಾದಕ ವಸ್ತುಗಳ ಮಾರಾಟ ಜಾಲದ ನಿಗ್ರಹ, ಗಣ್ಯ ವ್ಯಕ್ತಿಗಳ ಹಾಗೂ ವಿಮಾನ ನಿಲ್ದಾಣದ ಭದ್ರತೆ, ತಾಂತ್ರಿಕ ವಿಶ್ಲೇಷಣೆ ಹೀಗೆ ವಿವಿಧ ವಿಭಾಗಗಳಲ್ಲಿ ವಿಶೇಷ ಸೇವೆ ಸಲ್ಲಿಸಿದ ಕಾನ್‌ಸ್ಟೆಬಲ್‌ ದರ್ಜೆಯಿಂದ ಇನ್‌ಸ್ಪೆಕ್ಟರ್‌ ಹಂತದ ವರೆಗಿನ 20 ಮಂದಿ ಪೊಲೀಸ್‌ ಸಿಬ್ಬಂದಿಗೆ ಪ್ರಶಸ್ತಿ ನೀಡಿ ಸನ್ಮಾನಿಸ ಲಾಯಿತು.

ಆಡಳಿತ ವಿಭಾಗದ ಹೆಚ್ಚುವರಿ ಪೊಲೀಸ್‌ ಕಮಿಷನರ್‌ ಬಿ.ಎನ್‌.ಎಸ್‌. ರೆಡ್ಡಿ, ಭರತನಾಟ್ಯ ಕಲಾವಿದೆ ಸುಭಾಷಿಣಿ ವಸಂತ್,  ಬೆಂಗಳೂರು ರೌಂಡ್ ಟೇಬಲ್‌ ಸಂಸ್ಥೆಯ ಅಧ್ಯಕ್ಷ ರೋಹಿತ್‌ ಆರ್ಯ, ಪ್ರಾದೇಶಿಕ ಅಧ್ಯಕ್ಷ ರಾಜಾರಾಂಗೌಡ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT