ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಿಗೆ ಮರದಡಿ...

Last Updated 26 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಸೂರಿ ನಿರ್ದೇಶನದ ‘ಕೆಂಡಸಂಪಿಗೆ’ ಚಿತ್ರದ ನಾಯಕಿ ಮಾನ್ವಿತ ಪ್ರತಿಭೆಯನ್ನು ನೆಚ್ಚಿಕೊಂಡ ಕಲಾವಿದೆ. ಸಿನಿಮಾದಲ್ಲಿ ತಾವು ಅವಕಾಶ ಪಡೆದುದು ಹೇಗೆ ಎನ್ನುವ ಅವರ ವಿವರಣೆ ಸಿನಿಮಾ ಕಥೆಯಂತೆ ಸ್ವಾರಸ್ಯಕರವಾಗಿದೆ. ಅದು ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ ವಾಸವಿದ್ದ ಕೂಡು ಕುಟುಂಬ. ಆ ಮನೆಯಲ್ಲಿದ್ದ ಮೂರ್ನಾಲ್ಕು ವರ್ಷದ ಹುಡುಗಿ ವಿಪರೀತ ತುಂಟಿ.

ಬಾಲಕಿಯ ತರಲೆ ಸಹಿಸದೆ ಆಕೆಯ ದೊಡ್ಡಪ್ಪ ಊರ ಮುಂದಿನ ಗೂಡಂಗಡಿಗೆ ತಂದು ಕೂರಿಸುತ್ತಿದ್ದರು. ಆ ಅಂಗಡಿಯ ಡಬ್ಬಿಯಲ್ಲಿದ್ದ ಮಿಠಾಯಿಗಳನ್ನು ಎಲ್ಲ ಮಕ್ಕಳಿಗೂ ಪುಕ್ಕಟೆಯಾಗಿ ತೆಗೆದುಕೊಟ್ಟು ಬಾಲಕಿ ಧಾರಾಳತನ ತೋರಿದಳು. ಕೊನೆಗೆ ಆ ದೊಡ್ಡಪ್ಪ ಕಳಸದ ಮಾರುತಿ ಚಿತ್ರಮಂದಿರದೊಳಗೆ ಹುಡುಗಿಯನ್ನು ಕೂರಿಸಿದರು. ‘ಈ ಮಗು ಸಂಜೆಯವರೆಗೂ ಇಲ್ಲೇ ಇರುತ್ತದೆ ಸ್ವಲ್ಪ ನೋಡಿಕೊಳ್ಳಪ್ಪ’ ಎಂದು ಬ್ಯಾಟರಿ ಬಿಡುವ ಹುಡುಗನಿಗೆ ಹೇಳಿ, ಸಂಜೆ ಆ ತುಂಟಿಯನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದರು. ಆ ಮಗು ಚಿತ್ರಮಂದಿರದ ಮಾಲೀಕನ ಕಣ್ಣಿಗೆ ಬಿದ್ದು ಪ್ರೊಜೆಕ್ಷನ್ ರೂಮಿನ ಸದಸ್ಯೆಯಾಯಿತು. ಹೀಗೆ ಎರಡು ಮೂರು ವರ್ಷಗಳ ಕಾಲ ಪುಕ್ಕಟೆಯಾಗಿ ಆ ಚಿತ್ರಮಂದಿರದ ತೆರೆಯನ್ನು ತದೇಕ ಚಿತ್ತದಿಂದ ನೋಡಿತು.

‘ಚಂದಮಾಮ’ದ ಕಥೆ ಕೇಳಿ, ಅಜ್ಜಿ ಅಜ್ಜನ ಮಡಿಲಲ್ಲಿ ಕಥೆ ಕೇಳಬೇಕಿದ್ದ ಕೂಸು ಕಣ್ತುಂಬಿಕೊಂಡಿದ್ದೆಲ್ಲವೂ ಸಿನಿಮಾಕಥೆಗಳನ್ನೇ! ಇಷ್ಟೆಲ್ಲ ಕಥೆ ಹೇಳಿದ್ದು ನಟಿ ಮಾನ್ವಿತ ಹರೀಶ್ ಬಗ್ಗೆ. ಈ ಮಾನ್ವಿತ ನಿರ್ದೇಶಕ ಸೂರಿ ಅವರ ‘ಕೆಂಡಸಂಪಿಗೆ’ ಚಿತ್ರದ ನಾಯಕಿ. ಮೊದಲ ಯತ್ನದಲ್ಲಿಯೇ ಸೂರಿ ಅವರಿಂದ ಸೈ ಎನಿಸಿಕೊಂಡು ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ. ಮಂಗಳೂರಿನಲ್ಲಿ ರೇಡಿಯೊ ಆರ್‌.ಜೆ. ಆಗಿದ್ದ ಮಾನ್ವಿತ ಸಿನಿಮಾ ಸಂಘಕ್ಕೆ ಸಿಲುಕಿದ್ದು ಆಕಸ್ಮಿಕವಾಗಿ. ಮೂಲತಃ ಮಂಗಳೂರಿನವರಾದರೂ ಈ ಚೆಲುವೆಯ ಬದುಕಿನ ಮುಖ್ಯಭಾಗ ಮೂಡಿಗೆರೆ ತಾಲ್ಲೂಕಿನ ಕಳಸ. ಅಲ್ಲಿಯೇ ಹತ್ತನೇ ತರಗತಿಯವರೆಗೂ ಓದಿದ್ದು, ಕಲಾಸಕ್ತಿಯನ್ನು ಬೆಳೆಸಿಕೊಂಡಿದ್ದು.

‘ಕಳಸದಲ್ಲಿ 90ರ ದಶಕದಲ್ಲಿ ಬಂದ ಎಲ್ಲ ಸಿನಿಮಾಗಳನ್ನು ನೋಡಿದ್ದೇನೆ. ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಭಾಸ್ಕರ ನೆಲ್ಲಿತೀರ್ಥ ಅವರು ಜನಪದ ನಾಟಕಗಳನ್ನು ಮಾಡುತ್ತಿದ್ದರು. ಅಲ್ಲಿ ಅಪ್ಪ–ಅಮ್ಮ ಪಾರ್ಟು ಮಾಡುತ್ತಿದ್ದರು. ನಾನೂ ‘ನಾಗಮಂಡಲ’, ಮಹಾಭಾರತದ ರೂಪಕಗಳು, ತುಣುಕುಗಳಲ್ಲಿ ಬಣ್ಣ ಹಚ್ಚಿದೆ, ಕಲಾಸಕ್ತಿ ಬೆಳೆಸಿಕೊಂಡೆ. ಕಾಲೇಜಿನಲ್ಲಿ ನಾಟಕಗಳಲ್ಲಿ ಅಭಿನಯಿಸಿದೆ’ ಎಂದು ಆರಂಭಿಕ ನಟನೆಯನ್ನು ಮಾನ್ವಿತ ನೆನಪು ಮಾಡಿಕೊಳ್ಳುವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಪದವಿ ಪಡೆದಿರುವ ಮಾನ್ವಿತ, ಪ್ರಸ್ತುತ ಸದ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಎಂಬಿಎ ವ್ಯಾಸಂಗದಲ್ಲಿ ನಿರತರು.

ಸುಳ್ಳು ಮತ್ತು ಸಿಹಿ
ಆರ್‌.ಜೆ. ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಮಾನ್ವಿತ ಸಿನಿಮಾ ಬಗ್ಗೆ ಕನಸುಗಳನ್ನು ಕಟ್ಟಿಕೊಂಡವರೇನೂ ಅಲ್ಲ. ಅವರು ಒಂದು ದಿನ ಸಹೋದ್ಯೋಗಿಗಳಿಗೆ ಹೇಳಿದ ಸುಳ್ಳು ಮತ್ತು ಅದರ ಹಿಂದೆಯೇ ಬಂದ ‘ಕೆಂಡಸಂಪಿಗೆ’ಯ ಸಿಹಿ ಅವರ ಬದುಕಿಗೆ ಹೊಸ ತಿರುವು ನೀಡಿದೆ.

‘‘ನನ್ನ ಸುತ್ತಲಿನ ವಾತಾವರಣ ಸದಾ ಖುಷಿಯಾಗಿರಬೇಕು ಎಂದು ಅಪೇಕ್ಷಿಸುವವಳು ನಾನು. ಒಂದು ದಿನ ಪುನೀತ್ ರಾಜ್‌ಕುಮಾರ್ ಅವರನ್ನು ವಿಮಾನ ನಿಲ್ದಾಣದಲ್ಲಿ ಸಂದರ್ಶನ ಮಾಡಿದೆ. ಆಫೀಸಿಗೆ ಬಂದವಳೇ ‘ನೀವು ಚೆನ್ನಾಗಿದ್ದೀರಿ. ಮುಂದಿನ ನಮ್ಮ ಸಿನಿಮಾದಲ್ಲಿ ನಿಮಗೆ ಚಾನ್ಸ್‌ ಕೊಡಿಸುತ್ತೇನೆ’ ಎಂದು ಪುನೀತ್ ಭರವಸೆ ನೀಡಿದ್ದಾರೆ ಎಂದು ಸುಳ್ಳು ಹೇಳಿದೆ. ಎಲ್ಲರೂ ನಂಬಿದರು. ಆಮೇಲೆ ಅದು ಸುಳ್ಳು ಎನ್ನುವುದನ್ನು ನಾನೇ ಹೇಳಿದೆ. ಇದಾದ ಎರಡು ಮೂರು ದಿನಕ್ಕೆ ಗಾಯಕಿ, ಸ್ನೇಹಿತೆ ಸಚಿನಾ ಹೆಗ್ಗಾರ್– ‘ನಿನ್ನ ಚಿತ್ರಗಳನ್ನು ಫೇಸ್‌ಬುಕ್‌ನಿಂದ ಡೌನ್‌ಲೋಡ್ ಮಾಡಿರುವೆ.

ಮತ್ತಷ್ಟನ್ನು ವಾಟ್ಸಫ್‌ನಲ್ಲಿ ಕಳುಹಿಸು’ ಎಂದಳು. ಆಕೆ ಉತ್ತಮ ವಸ್ತ್ರವಿನ್ಯಾಸಕಿ ಕೂಡ. ನನಗೂ ಒಳ್ಳೆಯ ಬಟ್ಟೆ ಡಿಸೈನ್ ಮಾಡಿಕೊಡಬಹುದು ಎಂದುಕೊಂಡೆ. ಅದಾದ ಸ್ವಲ್ಪದಿನಕ್ಕೆ ‘ನಿನ್ನ ಚಿತ್ರಗಳನ್ನು ಸೂರಿ ಅವರಿಗೆ ಕಳುಹಿಸಿದ್ದೆ, ಸ್ಕ್ರೀನ್ ಟೆಸ್ಟ್‌ಗೆ ಬಾ’ ಎಂದಳು. ಸ್ಟಾರ್ ನಿರ್ದೇಶಕನಿಂದ ಈ ಕರೆ! ಮನೆಯಲ್ಲಿ ಸಿನಿಮಾ ಎಂದರೆ ಒಪ್ಪುತ್ತಿರಲಿಲ್ಲ. ಸ್ನೇಹಿತೆ ಶಮಿತಾ ಹತ್ತಿರ ಎರಡು ಸಾವಿರ ಸಾಲ ಪಡೆದು ಮಂಗಳೂರಿನಿಂದ ಬೆಂಗಳೂರಿನ ಬಸ್ಸು ಹಿಡಿದೆ’’ ಎಂದು ಗಾಂಧಿನಗರ ಪ್ರವೇಶದ ವಿವರಗಳನ್ನು ಮಾನ್ವಿತ ನೆನಪಿಸಿಕೊಳ್ಳುತ್ತಾರೆ.

‘ಸೂರಿ ಅವರ ಕಚೇರಿಗೆ ಹೋದಾಗ ಅಲ್ಲಿ ತುಂಬಾ ಜನರು ಇದ್ದರು. ಸೂರಿ ಕನ್ನಡಕದೊಳಗಿನಿಂದ ನನ್ನನ್ನು ನೋಡಿದರು. ತುಂಬಾ ಸಮಯ ಮಾತನಾಡಿಸಿದರು. ತಾಯಿಯ ಪಾತ್ರಧಾರಿಯ ಜತೆ ಭಾವುಕವಾಗಿ ಮಾತನಾಡುವಂತೆ ಸೂಚಿಸಿದರು. ನಾನು ತುಂಬಾ ಫನ್ನಿ. ಆದರೆ ಗ್ಲಿಸರಿನ್ ಇಲ್ಲದೆ ಕಣ್ಣೀರು ಹಾಕಿಸಿದರು.

ಚಿತ್ರಕ್ಕೆ ಆಯ್ಕೆಯಾದ ಸ್ವಲ್ಪದಿನಗಳಲ್ಲಿಯೇ ಅಪ್ಪ ತೀರಿಕೊಂಡರು. ಸಿನಿಮಾದಿಂದ ಹಿಂದೆ ಸರಿಯುವ ನಿರ್ಧಾರ ಮಾಡಿದೆ. ಸೂರಿ ಅವರಿಂದ ದೂರವಾಣಿ ಕರೆ ಬಂದಿತು. ಬದುಕಿನ ಕೆಲವೊಂದಿಷ್ಟು ಸಂಕಷ್ಟಗಳ ಬಗ್ಗೆ ಮತ್ತು ಸೂರಿ ಅವರ ಅನುಭವಗಳನ್ನು ಶೀತಲ್ ಶೆಟ್ಟಿ ನನಗೆ ವಿವರಿಸಿ ಧೈರ್ಯ ತುಂಬಿದರು. ನಾನು ಮುಂದುವರೆದೆ ಎಂದು ಮಾನ್ವಿತ ಹೇಳುತ್ತಾರೆ.

‘ಕೆಂಡಸಂಪಿಗೆ’ಯಲ್ಲಿ ಮಾನ್ವಿತ ನೈಜ ಬಣ್ಣ ಕೊಂಚವೂ ಬದಲಾಗಿಲ್ಲ! ಅಂದರೆ ಈ ಚಿತ್ರದಲ್ಲಿ ಪೂರ್ಣವಾಗಿ ಮೇಕಪ್ ಇಲ್ಲದೆಯೇ ಅವರು ನಟಿಸಿದ್ದಾರೆ. ‘ಕಥೆ ಬೇಡುವುದೂ ಆ ರೀತಿಯನ್ನೇ’ ಎನ್ನುತ್ತಾರೆ ಅವರು. ‘ನಾನು ಚಿತ್ರಕ್ಕೆ ಆಯ್ಕೆಯಾದಾಗ ಫೋಟೊ ಶೂಟ್ ಮಾಡಿಸೋಣ ಎಂದು ನಿರ್ದೇಶಕರನ್ನು ಕೇಳಿದೆ. ಅವರು ಅಗತ್ಯವಿಲ್ಲ ಎಂದರು. ನಿರ್ದೇಶಕರಿಗೆ ನಾನು ಕೊಟ್ಟ ಚಿತ್ರಗಳಲ್ಲಿ ಮೇಕಪ್‌ ಇರಲಿಲ್ಲ. ಚಿತ್ರದಲ್ಲಿ ನಾನೇ ಡಬ್ಬಿಂಗ್ ಮಾಡಿದ್ದೇನೆ ಎಂದು ಮಾನ್ವಿತ ಹೇಳುತ್ತಾರೆ. ಸದ್ಯ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿರುವ ಮಾನ್ವಿತ  ಅವರಿಗೆ ‘ಪ್ರತಿಭೆಗೆ ಕನ್ನಡಿಗರು ಮನ್ನಣೆ ನೀಡುವರು’ ಎನ್ನುವ ನಂಬಿಕೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT