ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪುಟದಲ್ಲಿ ಸಪ್ತ ಸಚಿವೆಯರು

Last Updated 26 ಮೇ 2014, 19:54 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್‌):  ಮೋದಿ ಸಂಪುಟದಲ್ಲಿ ಏಳು ಮಹಿಳೆಯರಿದ್ದಾರೆ. ಇವರಲ್ಲಿ ಒಬ್ಬರು ಮಹತ್ವದ ಭದ್ರತಾ ಸಂಪುಟ ಸಮಿತಿಯ (ಸಿಸಿಎಸ್‌) ಸದಸ್ಯೆ­ಯಾಗುವ ಸಾಧ್ಯತೆ ನಿಚ್ಚಳವಾಗಿದೆ.

ಸುಷ್ಮಾ ಸ್ವರಾಜ್‌, ಉಮಾ ಭಾರತಿ, ನಜ್ಮಾ ಹೆಫ್ತುಲ್ಲಾ, ಮೇನಕಾ ಗಾಂಧಿ, ಸ್ಮೃತಿ ಇರಾನಿ, ಹರ್‌­ಸಿಮೃತ್‌ ಕೌರ್‌ ಬಾದಲ್‌ ಮತ್ತು  ನಿರ್ಮಲಾ ಸೀತಾರಾಮನ್‌ ಅವರು ಮೋದಿ ಸಂಪುಟದಲ್ಲಿ ಇರುವ ಮಹಿಳೆಯರು.

ಇವರಲ್ಲಿ ರಾಜ್ಯ ಖಾತೆ ಸಚಿವೆ (ಸ್ವತಂತ್ರ) ಆಗಿ ಪ್ರಮಾಣ ವಚನ ಸ್ವೀಕರಿಸಿರುವ ನಿರ್ಮಲಾ ಸೀತಾ­ರಾಮನ್‌  ಹೊರ­ತಾಗಿ ಉಳಿದವರೆಲ್ಲಾ ಸಂಪುಟ ದರ್ಜೆ ಸಚಿವರಾಗಿದ್ದಾರೆ.

ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಎಂದೇ ಬಿಂಬಿತರಾಗಿರುವ ಸುಷ್ಮಾ ಸ್ವರಾಜ್‌ ಅವರು ಸಿಸಿಎಸ್‌ನ ಸದಸ್ಯ­ರಾಗುವ ಸಾಧ್ಯತೆ ಇದೆ. ಸಿಸಿಎಸ್‌ನಲ್ಲಿ ಪ್ರಧಾನಿ, ಗೃಹ ಖಾತೆ, ರಕ್ಷಣಾ, ಹಣಕಾಸು ಮತ್ತು ವಿದೇಶಾಂಗ ವ್ಯವಹಾರಗಳ ಸಚಿವರು ಇರುತ್ತಾರೆ.

ಹೆಫ್ತುಲ್ಲಾ ಅತಿ ಹಿರಿಯ, ಇರಾನಿ ಕಿರಿಯ ಸಚಿವೆ: 1980ರಿಂದ ರಾಜ್ಯಸಭಾ ಸದಸ್ಯರಾಗಿರುವ ನಜ್ಮಾ ಹೆಫ್ತುಲ್ಲಾ (74) ಅವರು ಹೊಸ ಸರ್ಕಾರ­ದಲ್ಲಿರುವ ಅತ್ಯಂತ ಹಿರಿಯ ಸಚಿವೆ. ನಟರಾಗಿ ಜನಪ್ರಿಯಗೊಂಡಿರುವ ಸ್ಮೃತಿ ಇರಾನಿ (38) ಕಿರಿಯ ಸಚಿವೆ. ಮಧ್ಯಪ್ರದೇಶದಿಂದ ಬಿಜೆಪಿಯನ್ನು ಪ್ರತಿನಿಧಿಸುತ್ತಾ ಬಂದಿರುವ ಹೆಫ್ತುಲ್ಲಾ ಅವರು ಮೋದಿ ಸಂಪುಟದಲ್ಲಿ­ರುವ ಏಕೈಕ ಮುಸ್ಲಿಂ ಮುಖ.
ಅಕಾಲಿ ದಳದ ಸಂಸದೆ ಹರ್‌ಸಿಮೃತ್‌ ಕೌರ್‌ ಬಾದಲ್‌  (48) ಅವರು ಬಿಜೆಪಿಯ ಮೈತ್ರಿ ಪಕ್ಷ­ವೊಂದರ ಏಕೈಕ ಸಂಪುಟ ದರ್ಜೆ ಸಚಿವೆಯಾಗಿದ್ದಾರೆ.

ಮನಮೋಹನ್‌ ಸಿಂಗ್‌ ನೇತೃತ್ವದ 71 ಸದಸ್ಯರ ಸಂಪುಟದಲ್ಲಿ ಏಳು ಮಹಿಳೆಯರಿಗೆ ಮಾತ್ರ ಅವಕಾಶ ದೊರಕಿತ್ತು. ಅದರಲ್ಲೂ ಗಿರಿಜಾ ವ್ಯಾಸ ಮತ್ತು ಚಂದ್ರೇಶ್‌ ಕಟೋಚ್‌ ಮಾತ್ರ ಸಂಪುಟ ದರ್ಜೆ ಹೊಂದಿದ್ದರು.

ಮೋದಿ ಅವರು ಶೀಘ್ರದಲ್ಲಿ ಸಂಪುಟ ವಿಸ್ತರಿಸಲಿರು­ವು­ದರಿಂದ ಸಚಿವೆಯರ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.ಹೊಸ ಸರ್ಕಾರದಲ್ಲಿ 60 ವರ್ಷಕ್ಕಿಂತ ಹೆಚ್ಚು ವಯಸ್ಸಾದ ನಾಲ್ವರು ಸಚಿವರಿ­ದ್ದಾರೆ. ರಾಜನಾಥ್‌ ಸಿಂಗ್‌, ಸುಷ್ಮಾ ಸ್ವರಾಜ್‌ ಇಬ್ಬರದೂ 62 ವರ್ಷ. ಅರುಣ್‌ ಜೇಟ್ಲಿ 61 ಮತ್ತು ವೆಂಕಯ್ಯ ನಾಯ್ಡು 64 ವರ್ಷ.

ಸಚಿವ ಸ್ಥಾನ ಪಡೆದಿರುವ ಮತ್ತೊಬ್ಬ ಮುಖಂಡ ಕಾಲ್‌ರಾಜ್‌ ಮಿಶ್ರಾ ಅವರ ವಯಸ್ಸು 72 ವರ್ಷ.

ಹಿಂದೆ ಕಡು ವಿರೋಧಿ: ಈಗ ಸಂಪುಟ ಸಹೋದ್ಯೋಗಿ
ಪಟ್ನಾ (ಐಎಎನ್‌ಎಸ್‌):
ಗೋಧ್ರಾ ಗಲಭೆಗೆ ನರೇಂದ್ರ ಮೋದಿಯೇ ಕಾರಣ ಎಂದು ಕಟುವಾಗಿ ಟೀಕಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಎನ್‌ಡಿಎ ತೊರೆದುಬಂದಿದ್ದ ಎಲ್‌ಜೆಪಿ ಮುಖ್ಯಸ್ಥ ರಾಂ ವಿಲಾಸ್‌ ಪಾಸ್ವಾನ್‌ ಅವರು ಈಗ ಅದೇ ಮೋದಿ ಅವರ ನೇತೃತ್ವದ ಸಂಪುಟದಲ್ಲಿ ಸಚಿವರಾಗಿದ್ದಾರೆ.

1969ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎಸ್‌ಎಸ್‌ಪಿ ಅಭ್ಯರ್ಥಿ ವಿರುದ್ಧ ಗೆಲುವು ಸಾಧಿಸಿದ್ದ  ಪಾಸ್ವಾನ್‌, 1977ರಲ್ಲಿ ಹಾಜಿಪುರ ಲೋಕಸಭಾ ಕ್ಷೇತ್ರದಿಂದ ದಾಖಲೆಯ ಅಂತರದಿಂದ  (4.24 ಲಕ್ಷ) ಜಯಗಳಿಸಿದ್ದರು. 1989ರಲ್ಲಿ ವಿ.ಪಿ. ಸಿಂಗ್‌, 1996ರಲ್ಲಿ ಎಚ್‌.ಡಿ.ದೇವೇಗೌಡ, ನಂತರ ಐ.ಕೆ. ಗುಜ್ರಾಲ್‌, ತದನಂತರ ವಾಜಪೇಯಿ ಅವರ ನೇತೃತ್ವದ ಎನ್‌ಡಿಎ ಹಾಗೂ ಯುಪಿಎ–1 ಸರ್ಕಾರಗಳಲ್ಲಿ ಸಚಿವರಾಗಿದ್ದರು.

ಪ್ರಮಾಣವಚನ ಸಮಾರಂಭದ ನಂತರ...
ನವದೆಹಲಿ (ಪಿಟಿಐ):
ಪ್ರಮಾಣವಚನ ಸಮಾರಂಭದ ನಂತರ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಸಾರ್ಕ್ ದೇಶದ ಗಣ್ಯರಿಗೆ ಭವ್ಯ ಔತಣ ಕೂಟ ಏರ್ಪಡಿಸಿದ್ದರು.

ಪ್ರಧಾನಿ ಮೋದಿ ಹಿರಿಯ ಅಧಿಕಾರಿಗಳ ಜತೆ ರಾತ್ರಿ ಸಭೆ ನಡೆಸಿದರು. ಸಾರ್ಕ್‌ ನಾಯಕರ ಜತೆ ಮಂಗಳವಾರ ನಡೆಯಲಿರುವ ಮಾತುಕತೆ ಕುರಿತು ಮೋದಿ ಚರ್ಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT