ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪುಟ ಸರ್ಜರಿ ಸನ್ನಿಹಿತ

ಬುಧವಾರ ಮಹತ್ವದ ಮಂತ್ರಿ ಪರಿಷತ್‌ ಸಭೆ
Last Updated 14 ಜೂನ್ 2016, 4:15 IST
ಅಕ್ಷರ ಗಾತ್ರ

ಬೆಂಗಳೂರು/ ನವದೆಹಲಿ: ಬಹುಕಾಲದಿಂದ ನಿರೀಕ್ಷಿಸಲಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ  ಸಂಪುಟ ಪುನರ್ರಚನೆಗೆ ಕೊನೆಗೂ ಕಾಲ ಕೂಡಿ ಬಂದಿದ್ದು, ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರು ಇದೇ 16ರ ಬಳಿಕ ಹೈಕಮಾಂಡ್‌ ನಾಯಕರ ಜತೆ ದೆಹಲಿಯಲ್ಲಿ ಈ ಬಗ್ಗೆ ಚರ್ಚಿಸಲಿದ್ದಾರೆ.

ಸಿದ್ದರಾಮಯ್ಯ ಅವರು ಬುಧವಾರ ಮಂತ್ರಿ ಪರಿಷತ್‌ ಸಭೆ ಕರೆದಿದ್ದು, ಈ ಸಭೆಯಲ್ಲಿ ಸಚಿವ ಸಂಪುಟ ಪುನರ್ರಚನೆ ಕುರಿತು ತಮ್ಮ ಸಹೊದ್ಯೋಗಿಗಳಿಗೆ ಸುಳಿವು ನೀಡಲಿದ್ದಾರೆ.

ಪಕ್ಷ ಹಾಗೂ ಸರ್ಕಾರದ ಭವಿಷ್ಯದ ದೃಷ್ಟಿಯಿಂದ ಕೆಲವರನ್ನು ಸಚಿವ ಸ್ಥಾನದಿಂದ ಕದಲಿಸಿ, ಪಕ್ಷದ ಸಂಘಟನೆಗೆ ಬಳಸಿಕೊಳ್ಳುವ ಆಲೋಚನೆ ವರಿಷ್ಠರಿಗಿದೆ ಎಂದೂ ಮುಖ್ಯಮಂತ್ರಿ ಹೇಳಲಿದ್ದಾರೆ ಎಂದು ವಿಶ್ವಸನೀಯ ಮೂಲಗಳು ಸೋಮವಾರ ರಾತ್ರಿ 'ಪ್ರಜಾವಾಣಿ’ಗೆ ತಿಳಿಸಿವೆ.

ಮುಖ್ಯಮಂತ್ರಿಗಳು ಎಂಟರಿಂದ ಹತ್ತು ಸಚಿವರನ್ನು ಸಂಪುಟದಿಂದ ಕೈಬಿಡಲಿದ್ದಾರೆ. ನಾಲ್ಕು ಸ್ಥಾನಗಳು ಖಾಲಿ ಉಳಿದಿದ್ದು, ಡಜನ್‌ಗೂ ಹೆಚ್ಚು ಹೊಸಬರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲಿದ್ದಾರೆ ಎಂದೂ ಮೂಲಗಳು ಹೇಳಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರವೇ ದೆಹಲಿಗೆ ಹೋಗುವ ಕಾರ್ಯಕ್ರಮವಿತ್ತು. ವಿಧಾನಪರಿಷತ್‌ ಮತ್ತು ರಾಜ್ಯಸಭೆ ಚುನಾವಣೆ ಫಲಿತಾಂಶಗಳಿಂದಾಗಿ ಕಾರ್ಯಕ್ರಮ ತಡವಾಯಿತು. ಅಲ್ಲದೆ, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ದೆಹಲಿ ಹೊರಗಡೆ ಇರುವುದರಿಂದ 16ರ ಬಳಿಕ ರಾಜಧಾನಿಗೆ ಹೋಗಲು ನಿರ್ಧರಿಸಿದ್ದಾರೆ.

ಸಿದ್ದರಾಮಯ್ಯನವರ ಸರ್ಕಾರ 2013ರ ಮೇ 13ರಂದು ಅಧಿಕಾರಕ್ಕೆ ಬಂದಿದೆ. 2014ರ ಜನವರಿಯಲ್ಲಿ ಡಿ.ಕೆ. ಶಿವಕುಮಾರ್‌ ಮತ್ತು ರೋಷನ್‌ ಬೇಗ್ ಅವರನ್ನು ಸೇರ್ಪಡೆ ಮಾಡಿಕೊಂಡು ಸಂಪುಟ ಪುನರ್ರಚನೆ ಮಾಡಲಾಗಿದೆ. ಅನಂತರ ಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್‌ ಶಾಸಕರು ತೀವ್ರ ಲಾಬಿ ನಡೆಸುತ್ತಿದ್ದಾರೆ. ಮುಖ್ಯಮಂತ್ರಿಗಳು ಒಂದಿಲ್ಲೊಂದು ನೆಪ ಮಾಡಿಕೊಂಡು ಸಂಪುಟ ಪುನರ್ರಚನೆಯನ್ನು ಮುಂದೂಡುತ್ತಾ ಬಂದಿದ್ದಾರೆ.

ಸಂಪುಟ ಪುನರ್ರಚನೆ ಜತೆಗೇ ಪ್ರದೇಶ ಕಾಂಗ್ರೆಸ್‌ ಸಮಿತಿಗೆ ಹೊಸ ಅಧ್ಯಕ್ಷರ ನೇಮಕ ಆಗಲಿದೆ. ಸಿದ್ದರಾಮಯ್ಯನವರ ಸರ್ಕಾರದಲ್ಲಿ, ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್‌ ಗೃಹ ಸಚಿವರಾಗಿ ನೇಮಕಗೊಂಡ ಬಳಿಕ ಹೊಸ ಅಧ್ಯಕ್ಷರ ಹುಡುಕಾಟ ನಡೆದಿದೆ. 

2018ರಲ್ಲಿ ನಡೆಯುವ ರಾಜ್ಯ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಅನೇಕ ಮಹತ್ವದ ವಿಷಯಗಳನ್ನು  ಮಂತ್ರಿ ಪರಿಷತ್‌ ಸಭೆಯಲ್ಲಿ ಮುಖ್ಯಮಂತ್ರಿ ಚರ್ಚಿಸಲಿದ್ದಾರೆಂದು ಮೂಲಗಳು ವಿವರಿಸಿವೆ.

ರಾಜ್ಯದ ಉಸ್ತುವಾರಿ  ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್‌ ಸಿಂಗ್‌ ಅವರೂ ಈಚೆಗೆ ಸಂಪುಟ ಪುನರ್ರಚನೆ ಕುರಿತು ಸುಳಿವು ನೀಡಿದ್ದರು.
ಡಿ.ಕೆ. ಶಿವಕುಮಾರ್‌ ಅಥವಾ  ಎಸ್‌.ಆರ್‌. ಪಾಟೀಲ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನೇಮಿಸುವ ಸಾಧ್ಯತೆ ಇದೆ.

ಸೋಮವಾರ ಸಂಜೆ ನವದೆಹಲಿಗೆ ಬಂದಿರುವ ಎಸ್‌.ಆರ್‌. ಪಾಟೀಲ, ಸ್ವ–ವಿವರ ಒಳಗೊಂಡ ಅರ್ಜಿಯನ್ನು ಹೈಕಮಾಂಡ್‌ಗೆ ಔಪಚಾರಿಕವಾಗಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ ಎಂದು ಪಕ್ಷದ ವಿಶ್ವಸನೀಯ ಮೂಲಗಳು ತಿಳಿಸಿವೆ.

ದೆಹಲಿಗೆ ಆಕಾಂಕ್ಷಿಗಳ ದಂಡು
ಸಚಿವ ಸ್ಥಾನದ ಆಕಾಂಕ್ಷಿಗಳಾಗಿರುವ ಕಾಂಗ್ರೆಸ್‌ನ ಕೆಲವು ಶಾಸಕರು ಸೋಮವಾರ ಕರ್ನಾಟಕ ಭವನದಲ್ಲಿ ಬೀಡುಬಿಟ್ಟಿದ್ದು, ಡಾ.ಮಾಲಕರೆಡ್ಡಿ, ಕೆ.ಬಿ. ಕೋಳಿವಾಡ, ಸರ್ಕಾರದ ಮುಖ್ಯಸಚೇತಕ ಅಶೋಕ ಪಟ್ಟಣ, ಬಸವರಾಜ ರಾಯರೆಡ್ಡಿ, ಎಚ್‌.ವೈ. ಮೇಟಿ, ಜೆ.ಟಿ. ಪಾಟೀಲ, ಹಂಪನಗೌಡ ಬಾದರ್ಲಿ, ನಾರಾಯಣಸ್ವಾಮಿ ಮತ್ತಿತರರು ಅವರಲ್ಲಿ ಸೇರಿದ್ದಾರೆ.

ವಿವಿಧ ಪ್ರಕರಣಗಳಲ್ಲಿ ಸರ್ಕಾರವನ್ನು ಮುಜುಗರಕ್ಕೆ ಈಡುಮಾಡಿರುವ ಹಾಗೂ ಸಮರ್ಥವಾಗಿ ಆಡಳಿತ ನಡೆಸದ ಸಚಿವರನ್ನು ಕೈಬಿಡುವುದು ಅನಿವಾರ್ಯ. ಅಲ್ಲದೆ, ವಿವಿಧ ಸಮುದಾಯಗಳಿಗೂ ಆದ್ಯತೆ ನೀಡುವ  ಸಾಧ್ಯತೆ ಇದೆ.

ಅನೇಕ ವರ್ಷಗಳಿಂದ ಪಕ್ಷಕ್ಕಾಗಿ ದುಡಿದಿರುವ ಮುಖಂಡರಿಗೆ ಸಚಿವ ಸ್ಥಾನ ನೀಡಿ ಸಮಾಧಾನಪಡಿಸಲು ಮುಂದಾಗಿರುವ ಸಿದ್ದರಾಮಯ್ಯ ಅದಕ್ಕಾಗಿ ಹೈಕಮಾಂಡ್‌ನ ಒಪ್ಪಿಗೆ ಪಡೆಯಲಿದ್ದಾರೆ ಎಂದು ಪಕ್ಷದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಏತನ್ಮಧ್ಯೆ, ಸಚಿವರಾದ ರೋಷನ್‌ ಬೇಗ್‌, ಆರ್‌.ವಿ. ದೇಶಪಾಂಡೆ, ರಮಾನಾಥ ರೈ, ಎಚ್‌.ಕೆ. ಪಾಟೀಲ ಸೋಮವಾರ ದೆಹಲಿಗೆ ದೌಡಾಯಿಸಿದ್ದಾರೆ.

ಸಚಿವ ಸಂಪುಟದಲ್ಲಿ ಭಾರಿ ಬದಲಾವಣೆ ತರಲಿರುವ ಮುನ್ಸೂಚನೆ ದೊರೆತಿರುವ ಕಾರಣ ಕೆಲವು ಸಚಿವರು, ಸಂಪುಟ ಪುನರ್ರಚನೆ ವೇಳೆ ತಮ್ಮನ್ನು ಕೈಬಿಡದಂತೆ ಪಕ್ಷದ ವರಿಷ್ಠರ ಮನವೊಲಿಸುವ ಕಾರ್ಯದಲ್ಲಿ ತೊಡಗಿದ್ದರೆ, ಇನ್ನು ಕೆಲವರು ತಮ್ಮ ಆಪ್ತರಿಗೆ ಆದ್ಯತೆ ನೀಡುವಂತೆ ಕೋರುತ್ತಿದ್ದಾರೆ ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT