ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಬಂಧಗಳ ಸುಳಿಯಲ್ಲಿ...

Last Updated 26 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಅರ್ಜುನ್ ಸರ್ಜಾ ಬಹು ಭಾಷಾ ಚಿತ್ರಗಳ ನಿರ್ಮಾಣ, ನಿರ್ದೇಶನ, ವಿತರಣೆಯಲ್ಲಿ ‘ಬಿಝಿ’! ಜಾಗತಿಕ ಸಿನಿಮಾಗಳ ಸಾಲಿನಲ್ಲಿ ನಿಲ್ಲುವ ಹಿಂದಿ ಸಿನಿಮಾ ನಿರ್ಮಾಣ ಸೇರಿದಂತೆ ತಮ್ಮ ಹಲವು ಕನಸುಗಳನ್ನು ಅವರು ‘ಸಿನಿಮಾ ರಂಜನೆ’ ಜತೆ ಹಂಚಿಕೊಂಡಿದ್ದಾರೆ.

*‘ಅಭಿಮನ್ಯು’ ಬಳಿಕ ಇನ್ನು ಏನೇನೋ ಪ್ರಾಜೆಕ್ಟ್‌ ಮಾಡುವ ಯೋಚನೆಯಲ್ಲಿ ಇದ್ದಿರಿ. ಅವನ್ನೆಲ್ಲ ಪಕ್ಕಕ್ಕೆ ಸರಿಸಿ ಮತ್ತೆ ಕನ್ನಡದತ್ತ ಹೊರಳಿದ್ದೀರಿ?
‘ಗೇಮ್‌’ ಚಿತ್ರ ಮಾಡುವ ಉದ್ದೇಶವಾಗಲೀ ಆಸೆಯಾಗಲೀ ನನಗಿರಲೇ ಇಲ್ಲ. ಆದರೆ ಕಥೆ ಇದೆಯಲ್ಲ? ಅದು ಫೆಂಟಾಸ್ಟಿಕ್! ಅದಕ್ಕೋಸ್ಕರ ಒಪ್ಪಿಕೊಂಡೆ. ‘ಗೇಮ್’– ಇದೊಂದು ಮರ್ಡರ್ ಮಿಸ್ಟರಿ. ತನಿಖೆ ನಡೆಯುತ್ತ ಹೋದಂತೆಲ್ಲ ಕೊಲೆ ತಂತ್ರ ಹೇಗೆ ಬಿಚ್ಚಿಕೊಳ್ಳುತ್ತದೆ ಅನ್ನುವುದು ಚಿತ್ರಕಥೆ. ನಾನು ಈವರೆಗೆ ನೂರೈವತ್ತು ಸಿನಿಮಾ ಮಾಡಿದ್ದೇನೆ. ಆದರೆ ಈವರೆಗೆ ಇಂಥ ಪಾತ್ರ ಸಿಕ್ಕಿಲ್ಲ. ಇದು ಆ್ಯಕ್ಷನ್‌ ಓರಿಯಂಟೆಡ್ ಅಲ್ಲ. ಕೊಲೆಯನ್ನು ಭೇದಿಸುವ ಸೋಶಿಯಲ್ ಥ್ರಿಲ್ಲರ್. ಬರೀ ‘ಗೇಮ್’ ಅಲ್ಲ; ಇದೊಂದು ‘ಮೈಂಡ್ ಗೇಮ್’! ನಿರ್ದೇಶಕ ಎ.ಎಂ.ಆರ್. ರಮೇಶ್‌ ಬಹಳ ಜಾಣತನದಿಂದ ಹೆಣೆದ ಕಥೆ.

*ಕನ್ನಡ ಸೇರಿದಂತೆ ಮೂರು ಭಾಷೆಗಳಲ್ಲಿ ಮಾಡಿದ ‘ಅಭಿಮನ್ಯು’ವಿಗೆ ಸಿಕ್ಕ ಪ್ರತಿಕ್ರಿಯೆ ಹೇಗಿತ್ತು?
ಅದರ ಚಿತ್ರಕಥೆ ಒಂದು ನಿರ್ದಿಷ್ಟ ವರ್ಗದ ಜನರಿಗೆ ಹೇಳಿ ಮಾಡಿಸಿದಂತಿತ್ತು. ಕರ್ನಾಟಕ, ತಮಿಳುನಾಡು ಹಾಗೂ ಆಂಧ್ರದಲ್ಲಿ ನಾನೇ ವಿತರಣೆ ಮಾಡಿದೆ. ಕನ್ನಡ, ತಮಿಳು ಭಾಷೆಗಳಲ್ಲಿ ಸಾಕಷ್ಟು ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತು. ಆದರೆ ಆಂಧ್ರಪ್ರದೇಶದಲ್ಲಿ ಆ ಸಮಯದಲ್ಲಿ ಚಂಡಮಾರುತ ಸಂಭವಿಸಿದ್ದರಿಂದ ಅಲ್ಲಿ ಮಾತ್ರ ಸ್ವಲ್ಪ ಹಿನ್ನಡೆಯಾಯಿತು. ಇನ್ನು ವಿದೇಶಗಳಲ್ಲಿ ಅಲ್ಲಿನ ಭಾರತೀಯರು ಒಳ್ಳೆಯ ಸ್ಪಂದನ ನೀಡಿದರು. ಬಹುಶಃ ಆ ಚಿತ್ರಕಥೆ ಅವರನ್ನು ತೀವ್ರವಾಗಿ ತಟ್ಟಿದೆ. ಅದಾಗಿ ಸ್ವಲ್ಪ ದಿನ ನನಗೆ ಎಂಥೆಂಥ ಅನುಭವಗಳಾದವು ಅಂತೀರಾ! ನನ್ನನ್ನು ನೋಡಿದ ಕೂಡಲೇ ನಮಸ್ಕಾರ ಮಾಡುತ್ತಿದ್ದರು! ಅಂಥ ಮರ್ಯಾದೆ ತಂದು ಕೊಟ್ಟ ಸಿನಿಮಾ ಹಾಗೂ ಆ ಪಾತ್ರಕ್ಕಿಂತ ಇನ್ನೇನು ತೃಪ್ತಿ ಬೇಕು ಹೇಳಿ?

*ಈ ಚಿತ್ರ ಬಳಿಕ ಹಿಂದಿ ಸಿನಿಮಾ ಮಾಡುವುದಾಗಿ ಹೇಳಿದ್ದಿರಿ. ಆ ಯೋಜನೆ ಎಲ್ಲಿಯವರೆಗೆ ಬಂದಿದೆ?
ಅದಕ್ಕಿಂತ ಮೊದಲಿಗೆ ನನ್ನ ಮಗಳು ಐಶ್ವರ್ಯಳನ್ನು ನಾಯಕಿಯನ್ನಾಗಿ ಮಾಡಿ ಕನ್ನಡ ಹಾಗೂ ತಮಿಳಿನಲ್ಲಿ ಸಿನಿಮಾ ನಿರ್ಮಿಸಿ, ನಿರ್ದೇಶಿಸಲು ಸಿದ್ಧತೆ ನಡೆಸಿದ್ದೇನೆ. ಅದು ಪಕ್ಕಾ ಲವ್ ಸ್ಟೋರಿ. ಕಥೆ ಸಿದ್ಧವಿದೆ. ‘ಗೇಮ್’ ಮುಗಿದ ಕೂಡಲೇ ಅದು ಶುರುವಾಗಲಿದೆ. ಅದರಲ್ಲಿ ಹೊಸಬರನ್ನೇ ಹಾಕಿಕೊಳ್ಳುವುದು ನನ್ನ ಉದ್ದೇಶ. ಚಿರಂಜೀವಿ ಹಾಗೂ ಧ್ರುವ ಸರ್ಜಾ ಜತೆ ಪೌರಾಣಿಕ ಕಥಾವಸ್ತುವಿನ ಸಿನಿಮಾ ಮಾಡುವ ಯೋಚನೆಯಿದೆ. ಅದಕ್ಕೂ ಮುನ್ನ ಅತ್ಯಂತ ವಿಭಿನ್ನವಾಗಿರುವ ಹಿಂದಿ ಚಿತ್ರದತ್ತ ಗಮನ ಹರಿಸಲಿದ್ದೇನೆ.

*ಹಿಂದಿ ಸಿನಿಮಾದಲ್ಲಿ ಆ್ಯಕ್ಷನ್ ಇರಲಿದೆಯೇ? ಅಥವಾ ಪ್ರೀತಿ–ಪ್ರೇಮದ ಕಥೆಯೇ?
ಅವೆರಡೂ ಅಲ್ಲ! ಸಂಬಂಧಗಳ ಮೌಲ್ಯಗಳ ಬಗ್ಗೆ ಅದರಲ್ಲಿ ಹೇಳಲಿದ್ದೇನೆ. ಸಂಬಂಧಗಳ ಮೌಲ್ಯಗಳ ಬಗ್ಗೆ ಇರುವ ಸಿನಿಮಾ ಅದು. ಅದೊಂದು ಎಕ್ಸೈಟಿಂಗ್ ಪ್ರಾಜೆಕ್ಟ್. ನಾನೇ ನಿರ್ಮಿಸಿ, ನಿರ್ದೇಶಿಸಿ, ನಟಿಸಲಿದ್ದೇನೆ. ಬಜೆಟ್‌ಗಿಂತ ಗುಣಮಟ್ಟದ ಬಗ್ಗೆ ಹೆಚ್ಚು ಒತ್ತು ಕೊಡುತ್ತೇನೆ. ಜಗತ್ತಿನ ಇತರ ಭಾಷೆಗಳ ಸಿನಿಮಾಗಳ ಪರಿಕಲ್ಪನೆ ನನ್ನ ಮುಂದಿದೆ. ಹೀಗಾಗಿ ಆ ನನ್ನ ಹಿಂದಿ ಸಿನಿಮಾ ಯಾವ ದೇಶದಲ್ಲಿ ಪ್ರದರ್ಶನ ಕಂಡರೂ, ಅದು ತಮ್ಮನ್ನೇ ಉದ್ದೇಶಿಸಿ ಮಾಡಿದಂಥದ್ದು ಎಂಬ ಅನುಭವ ಪ್ರೇಕ್ಷಕರಿಗೆ ಸಿಗಬೇಕು. ಇಂಥ ವಿಭಿನ್ನ ಸಿನಿಮಾ ಮಾಡುವಾಗ ಎಲ್ಲ ಬಗೆಯ ಕಮರ್ಷಿಯಲ್ ಅಂಶಗಳನ್ನು ಅದರಲ್ಲಿ ಸೇರಿಸಲು ಅಸಾಧ್ಯ.

*ಹಲವು ಭಾಷೆಗಳಲ್ಲಿ ಚಿತ್ರ ನಿರ್ಮಾಣ, ನಿರ್ದೇಶನ, ಅಭಿನಯ, ವಿತರಣೆ... ಹೇಗೆ ಇವನ್ನೆಲ್ಲ ನಿಭಾಯಿಸುತ್ತೀರಿ? ಸಮಯ ಹೇಗೆ ಹೊಂದಿಸಿಕೊಳ್ಳುತ್ತೀರಿ?
ಮೊದಲೆಲ್ಲ ನಾನೂ ಹೀಗೇ ಅಂದುಕೊಳ್ಳುತ್ತಿದ್ದೆ. ಆದರೆ ಅದಕ್ಕೊಂದು ವ್ಯವಸ್ಥಿತ ರೂಪ ಕೊಟ್ಟರೆ ಎಲ್ಲವೂ ಸಾಧ್ಯ! ನಾನು ಮಾಡೋದು ಇಷ್ಟೇ: ಒಂದು ಕಾಗದದಲ್ಲಿ ನಾನು ಮಾಡಬೇಕಾದ ಕೆಲಸಗಳನ್ನು ಬರೆದುಕೊಳ್ಳುತ್ತೇನೆ. ಒಂದು ಕೆಲಸ ಮುಗಿದ ಬಳಿಕ, ‘ಇದಾಯ್ತು. ಮುಂದೆ..?’ ಅದೂ ಮುಗಿದ ಬಳಿಕ ಮತ್ತೊಂದು. ಅದಾದ ನಂತರ ಇನ್ನೊಂದು. ಹೀಗೆ... ಎಲ್ಲ ಕ್ಲೋಸ್! ಇದೆಲ್ಲ ಆದ ನಂತರ ಇನ್ನೂ ಜಾಸ್ತಿ ಟೈಮ್ ಉಳಿಯುತ್ತದೆ. ಇದು ನನ್ನ ಅನುಭವ.

*ಸಿನಿಮಾ ರಂಗದಲ್ಲಿ ನೀವು ಇಟ್ಟುಕೊಂಡಿದ್ದ ನಿರೀಕ್ಷೆಗಳೆಲ್ಲ ಈಡೇರಿವೆಯೇ? ಮುಂದಿನ ಗುರಿ ಏನು?
ಇಲ್ಲಿಗೆ ಬರುವ ಮುನ್ನ ನನಗೇನೂ ಗುರಿ ಇರಲಿಲ್ಲ. ಒಂದು ದಿನ ಯಾರೋ ನನ್ನನ್ನು ಮುಂದಕ್ಕೆ ತಳ್ಳಿಬಿಟ್ಟರು. ನೋಡಿದರೆ ದಿಢೀರೆಂದು ಕ್ಯಾಮೆರಾ ಎದುರು ನಿಂತಿದ್ದೆ. ನನಗೋ ಅಭಿನಯದ ಗಂಧಗಾಳಿಯೂ ಇರಲಿಲ್ಲ. ಬ್ರೂಸ್‌ ಲಿ ಥರ ಇದ್ದ ದೇಹವೊಂದೇ ನನಗೆ ಆಸರೆಯಾಗಿತ್ತು. ಅದಾದ ಮೇಲೆ ಇಲ್ಲೇ ನನ್ನ ಊಟ ಇದೆ ಅಂತ ಗೊತ್ತಾಗಲು ಬಹಳ ದಿನ ಬೇಕಾಯ್ತು. ಈಗಲೂ ನಿರ್ದಿಷ್ಟ ಗುರಿಯಿಲ್ಲ. ಏನಾದರೂ ಸಾಧಿಸಬೇಕು ಅಂತಷ್ಟೇ ನನ್ನ ಆಸೆ. ಈ ಸಿನಿಮಾ ಪಯಣದಲ್ಲಿ ಓಡುತ್ತ ಓಡುತ್ತ, ಆಗಾಗ್ಗೆ ಕೆಳಗೆ ಬಿದ್ದಿದ್ದೇನೆ. ಎದ್ದು ಸಾವರಿಸಿಕೊಂಡು ಮತ್ತೆ ಓಡುತ್ತೇನೆ. ಓಡುವುದು, ಬೀಳುವುದು ಸಹಜ ಅಲ್ಲವೇ? ಜೀವನ ಅಂದರೆ ಅದೇ ಅಂತ ನಾನು ನಂಬಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT