ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಬಂಧಿಗಳು ಸೇರಿ 10 ಬಂಧನ

Last Updated 28 ಮೇ 2015, 19:40 IST
ಅಕ್ಷರ ಗಾತ್ರ

ಬೆಂಗಳೂರು: ಮಡಿವಾಳ ಸಮೀಪದ ಮಂಗಮ್ಮನಪಾಳ್ಯದಲ್ಲಿ ನಡೆದಿದ್ದ ತಾಯಿ–ಮಗನ ಕೊಲೆ ಪ್ರಕರಣವನ್ನು ಭೇದಿಸಿರುವ ಆಗ್ನೇಯ ವಿಭಾಗದ ಪೊಲೀ­ಸರು, ಮೃತರ ಮೂವರು ಸಂಬಂಧಿ­ಗಳು ಸೇರಿದಂತೆ ಹತ್ತು ಮಂದಿ­ಯನ್ನು ಬಂಧಿಸಿದ್ದಾರೆ.

ಮಹಮದ್ ಇಷಾನುಲ್ಲಾ ಅಲಿಯಾಸ್ ಬೈದು, ವಸೀಂ ಖಾನ್, ಮಹಮದ್ ಸಲ್ಮಾನ್, ಸೈಯ್ಯದ್ ಅಬ್ಬಾಸ್, ಇರ್ಫಾನ್, ಮಹಮದ್ ಫರಾಜ್, ಸೈಯ್ಯದ್‌ ಅಜ್ಮತ್ತುಲ್ಲಾ,  ಅಕ್ರಂ ಶರೀಫ್, ಮಹಮದ್ ಸಲೀಂ ಹಾಗೂ ಸೈಯ್ಯದ್ ಅಲಿ ಎಂಬುವರನ್ನು ಬಂಧಿಸ­ಲಾಗಿದೆ. ಆರೋಪಿಗಳು, ಮೇ26ರಂದು ಅಸ್ಮಾ ತಾಜ್  (36) ಹಾಗೂ ಅವರ ಮಗ ರುಮಾನುಲ್ಲಾ (16) ಅವರನ್ನು ಕತ್ತು ಸೀಳಿ ಕೊಲೆ ಮಾಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಅಸ್ಮಾ ತಾಜ್ ಅವರು ಪತಿ ಇರ್ಫಾನ್, ಮಗ ರುಮಾನುಲ್ಲಾ ಹಾಗೂ ಮಗಳು ಐಮನ್ ಜತೆ ಹಲವು ವರ್ಷಗಳಿಂದ ಮಂಗಮ್ಮನಪಾಳ್ಯದಲ್ಲಿ ನೆಲೆಸಿದ್ದರು. ಮನೆ ಸಮೀಪವೇ ಗುಜರಿ ಅಂಗಡಿ ಹಾಗೂ ಪಾತ್ರೆ ಮಾರಾಟ ಮಳಿಗೆ ಇಟ್ಟು­ಕೊಂಡಿದ್ದ ಇರ್ಫಾನ್, ಇದೇ ಜನವರಿ 15­ರಂದು ಹೃದಯಾಘಾತ­ದಿಂದ ಸಾವನ್ನ­ಪ್ಪಿ­ದ್ದರು.

ಆದರೆ, ಅಣ್ಣನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಆರೋಪಿ ಇಷಾನುಲ್ಲಾ, ‘ಅತ್ತಿಗೆ ಹಾಗೂ ಅವರ ಮಗ, ಆಸ್ತಿಗಾಗಿ  ವಿಷ ಬೆರೆಸಿದ ಊಟ ತಿನ್ನಿಸಿ ಅಣ್ಣನನ್ನು ಕೊಲೆ ಮಾಡಿದ್ದಾರೆ’ ಎಂದು ದೂರಿದ್ದರು.  ಈ ಆರೋಪ­ದಿಂ­ದಾಗಿ ಮತ್ತೊಂದು ಸಲ ಮರಣೋತ್ತರ ಪರೀಕ್ಷೆ ನಡೆಸಿದಾಗ ಇರ್ಫಾನ್ ಸಾವು ಹೃದಯಾಘಾತದಿಂದ ಸಂಭವಿಸಿದೆ ಎಂದು ವೈದ್ಯರು ಖಚಿತಪಡಿಸಿದ್ದರು.

ಕೆಲಸದಿಂದ ತೆಗೆದಿದ್ದಕ್ಕೆ ಕೋಪ: ಪತಿ ಸಾವಿನ ನಂತರ ಗುಜರಿ ಹಾಗೂ ಪಾತ್ರೆ ಮಾರಾಟ ಮಳಿಗೆಯ ವಹಿವಾಟನ್ನು ಅಸ್ಮಾತಾಜ್ ನೋಡಿಕೊಳ್ಳಲು ಆರಂಭಿಸಿ­ದರು. ಆ ಎರಡು ಮಳಿಗೆಗಳಲ್ಲಿ ಒಟ್ಟು 20 ಮಂದಿ ಕೆಲಸ ಮಾಡುತ್ತಿದ್ದರು. ಈ ನಡುವೆ ವ್ಯಾಪಾರದಲ್ಲಿ ನಷ್ಟ ಉಂಟಾಗಿ­ದ್ದರಿಂದ ಅಸ್ಮಾತಾಜ್ ಅವರು ಆರೋಪಿಗಳಾದ ಅಬ್ಬಾಸ್, ಅಜ್ಮುತ್ತುಲ್ಲಾ, ಇರ್ಫಾನ್, ಫರಾಜ್, ಶರೀಫ್, ಸಲೀಂ, ಅಲಿ ಸೇರಿದಂತೆ ಹತ್ತು ಮಂದಿಯನ್ನು ಕೆಲಸದಿಂದ ತೆಗೆದು ಹಾಕಿ­ದ್ದರು. ಏಕಾಏಕಿ ಕೆಲಸದಿಂದ ಕಿತ್ತುಹಾಕಿದ ಕಾರಣಕ್ಕೆ ಆರೋಪಿಗಳು ಕುಪಿತಗೊಂಡಿದ್ದರು.

ಮತ್ತೊಂದೆಡೆ ಅಣ್ಣನ ಸಾವಿನ ನಂತರ ಸಂಪೂರ್ಣ ಆಸ್ತಿ ಕಬಳಿಸಲು ಸಂಚು ರೂಪಿಸಿದ್ದ ಇಷಾನುಲ್ಲಾ, ಇದಕ್ಕೆ ಅಡ್ಡಿಯಾಗಿದ್ದ ಅತ್ತಿಗೆಯನ್ನು ಮುಗಿಸಲು ನಿರ್ಧರಿಸಿದ್ದ. ಇದಕ್ಕೆ ಸೋದರ ಸಂಬಂಧಿಗಳಾದ ವಸೀಂ ಖಾನ್ ಮತ್ತು ಮಹಮದ್ ಸಲ್ಮಾನ್ ಸಹ ನೆರವಾಗುವ ಭರವಸೆ ಕೊಟ್ಟರು. ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಸಿಟ್ಟಿನಲ್ಲಿದ್ದ ಏಳು ಮಂದಿಯೂ ಕೈಜೋಡಿಸುವುದಾಗಿ ಹೇಳಿದರು.
ಗೇಟ್‌ಗೆ ಬೀಗ ಹಾಕಿ ಕೃತ್ಯ: ಮೇ 26­ರಂದು ಬೆಳಿಗ್ಗೆಯೇ ಮಂಗಮ್ಮನಪಾಳ್ಯಕ್ಕೆ ತೆರಳಿದ ಹಂತಕರು, ಅಸ್ಮಾ ತಾಜ್ ಬಾಗಿಲು ತೆರೆಯುವುದನ್ನೇ ಕಾಯುತ್ತಿ­ದ್ದರು. 9.30ರ ಸುಮಾರಿಗೆ ಬಾಗಿಲು ತೆಗೆದ ಅವರು, ಮಗಳು ಐಮನ್‌ಳನ್ನು ಶಾಲೆಗೆ ಕಳುಹಿಸಿ ಒಳ ಹೋದರು. 

ಅವರ ಹಿಂದೆಯೇ ನುಗ್ಗಿದ ಮೂವರು, ಕತ್ತು ಸೀಳಿ ಅಸ್ಮಾ ತಾಜ್ ಅವರನ್ನು ಕೊಲೆ ಮಾಡಿದರು. ತಾಯಿಯ ಚೀರಾಟ ಕೇಳಿ ಕೋಣೆಯಿಂದ ಹೊರ ಬಂದ ಮಗ­ನನ್ನೂ ಭೀಕರವಾಗಿ ಹತ್ಯೆಗೈದಿದ್ದರು. ಈ ಸಂದರ್ಭದಲ್ಲಿ ಉಳಿದ ಆರೋಪಿ­ಗಳು, ಮನೆಯ ಗೇಟ್‌ಗೆ ಬೀಗ ಹಾಕಿ­ಕೊಂಡು ಹೊರಗೆ ಕಾಯುತ್ತಿದ್ದರು. ಶಾಲೆಗೆ ತೆರಳಿದ್ದ ಮಗಳು, ಮಧ್ಯಾಹ್ನ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಹಂತಕರ ಪತ್ತೆಗೆ ಪೊಲೀಸರ ಮೂರು ವಿಶೇಷ ತಂಡಗಳನ್ನು ರಚಿಸಲಾಗಿತ್ತು.

ಸಿ.ಸಿ ಟಿವಿ ಡಿವಿಆರ್ ಹೊತ್ತೊಯ್ದಿದ್ದರು
‘ತಾಯಿ ಮಗನನ್ನು ಕೊಲೆಗೈದ ನಂತರ ಆರೋಪಿಗಳು ಮನೆಯಲ್ಲಿದ್ದ ಸಿ.ಸಿ ಟಿ.ವಿ ಕ್ಯಾಮೆರಾ­ಗಳನ್ನು ಜಖಂ­ಗೊಳಿಸಿ, ಆ ದೃಶ್ಯಗಳು ದಾಖಲಾಗಿದ್ದ ಡಿವಿಆರ್ ಉಪಕರಣ­ವನ್ನು ತೆಗೆದು­ಕೊಂಡು ಹೋಗಿದ್ದರು. ಹೀಗಾಗಿ ಯಾವುದೇ ಸುಳಿವು ಇರಲಿಲ್ಲ’ ಎಂದು ಹಿರಿಯ ಅಧಿಕಾರಿ­ಗಳು ವಿವರಿಸಿದರು.

‘ಮೃತರ ಸಂಬಂಧಿಕರನ್ನು ವಿಚಾ­ರಣೆಗೆ ಒಳಪಡಿಸಿದಾಗ ಆಸ್ತಿ ವಿಚಾರಕ್ಕೆ ಇಷಾನುಲ್ಲಾ–ಅಸ್ಮಾತಾಜ್ ನಡುವೆ ವೈಮನಸ್ಸು ಇದ್ದ ಸಂಗತಿ ತಿಳಿಯಿತು. ಆತನನ್ನು ಠಾಣೆಗೆ ಕರೆದೊಯ್ದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬಾಯ್ಬಿಟ್ಟ. ಆತ ನೀಡಿದ ಮಾಹಿತಿ ಆಧರಿಸಿ ಉಳಿದ­ವ­ರನ್ನು ಪತ್ತೆ ಮಾಡ­ಲಾಯಿತು. ಕೃತ್ಯ ಎಸಗಿದರೆ ತಲಾ ₨ 20 ಸಾವಿರ ಕೊಡುವುದಾಗಿ ಇಷಾನುಲ್ಲಾ ತನ್ನ ಸಹಚರರಿಗೆ ಮಾತು ಕೊಟ್ಟಿದ್ದ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT