ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಬಳ ತರುವ ಬರವಣಿಗೆಯ ನೆಚ್ಚಿ...

Last Updated 29 ಜನವರಿ 2015, 19:30 IST
ಅಕ್ಷರ ಗಾತ್ರ

ಕ್ರಿಸ್ಟೋಫರ್ ಕ್ಲೋಬಲ್ ಜರ್ಮನಿಯ ಸಾಹಿತಿ. ಕಾದಂಬರಿ, ನಾಟಕ, ಸಿನಿಮಾ ಸ್ಕ್ರಿಪ್ಟ್‌ ಹೀಗೆ ಅನೇಕ ಕ್ಷೇತ್ರಗಳಲ್ಲಿ ಅವರು ಕ್ರಿಯಾಶೀಲರಾಗಿ ತೊಡಗಿಕೊಂಡಿದ್ದಾರೆ. ಇವರ ನಾಟಕಗಳು ವಿಯೆನ್ನಾ ಮ್ಯೂನಿಚ್‌, ಹೈಡಲ್‌ಬರ್ಗ್‌, ನ್ಯೂರೇನ್‌ಬರ್ಗ್‌ಗಳಲ್ಲಿ ಪ್ರದರ್ಶಿತವಾಗಿವೆ.

ಇವರ ಮೊದಲ ಕಾದಂಬರಿ ‘ಅಮಂಗಸ್ಟ್‌ ಲೋನರ್‍ಸ್‌’ 2008ರಲ್ಲಿ ಪ್ರಕಟಿತವಾಯಿತು. ಎರಡನೇ ಕೃತಿ ‘ಎ ನಾಕ್‌ ಎಟ್‌ ದಿ ಡೋರ್‌’. ಇತ್ತೀಚೆಗಿನ ಕೃತಿ ‘ಆಲ್‌ಮೋಸ್ಟ್‌ ಎವರಿಥಿಂಗ್‌ ಈಸ್‌ ವೆರಿ ಫಾಸ್ಟ್‌’ ಅಮೆರಿಕದ ಪ್ರತಿಷ್ಠಿತ ಗ್ರೇಯ್‌ ವೂಲ್ಫ್‌ ಪ್ರೆಸ್‌ನಿಂದ ಪ್ರಕಟವಾಗಲಿದೆ. ಈ ಕೃತಿಯನ್ನು ಸಿನಿಮಾ ರೂಪು ಕೊಡುವ ಕಾರ್ಯದಲ್ಲಿಯೂ  ಕ್ರಿಸ್ಟೋಫರ್‌ ತೊಡಗಿಕೊಂಡಿದ್ದಾರೆ. ದೆಹಲಿಯ ಲೇಖಕಿಯನ್ನು ಜೀವನ ಸಂಗಾತಿಯನ್ನಾಗಿಸಿಕೊಳ್ಳುವ ಮೂಲಕ ಭಾರತದೊಂದಿಗೆ ನಂಟನ್ನು ಬೆಳೆಸಿಕೊಂಡಿದ್ದಾರೆ. ಭಾರತ ಸಾಹಿತ್ಯದ ಬಗ್ಗೆ ಅಪಾರ ಪ್ರೀತಿಯಿರಿಸಿಕೊಂಡಿರುವ ಕ್ರಿಸ್ಟೋಫರ್‌ ತನ್ನ ನಾಟಕ ‘ಸ್ಟಾಲೋವಾ ವೋಲಾ’ ಪ್ರದರ್ಶನದ ಪ್ರಯುಕ್ತ ಬೆಂಗಳೂರಿಗೆ ಬಂದಿದ್ದಾರೆ. ಈ ನಡುವೆ ಮೆಟ್ರೊದೊಂದಿಗೆ ಮಾತಿಗೆ ಸಿಕ್ಕ ಕ್ರಿಸ್ಟೋಫರ್‌ ಅನೇಕ ಹೊಳಹುಗಳನ್ನು ಹೊರಹಾಕಿದರು.

* ನಿಮ್ಮ ಪಾಲಿಗೆ ಬರವಣಿಗೆ ಏನು?
ಎಲ್ಲಕ್ಕಿಂತ ಹೆಚ್ಚಿನದಾಗಿ ಬರವಣಿಗೆ ನನ್ನ ವೃತ್ತಿ. ಅದಕ್ಕಾಗಿ ನಾನು ಸಂಬಳ ಪಡೆಯುತ್ತೇನೆ. ಹಾಗೆಯೇ ಅದು ನನ್ನ ದಿನಚರಿಯೂ ಹೌದು. ನಾವು ದಿನವೂ ಹಲ್ಲುಜ್ಜುತ್ತೇವಲ್ಲ, ಬರವಣಿಗೆಯೂ ನನಗೆ ಅಷ್ಟೇ ಸಹಜವಾದ ಕ್ರಿಯೆ. ಅದು ನನಗೆ ಯಾವತ್ತೂ ಅಹಿತಕರ ಅನಿಸಿದ್ದಿಲ್ಲ. ಒಂದು ದಿನ ಬರೆಯದೇ ಉಳಿದರೂ ನನ್ನೊಳಗೆ ಖಾಲಿತನದ ಭಾವ ತುಂಬುತ್ತದೆ.

* ನಿಮ್ಮ ಮೊದಲ ಪುಸ್ತಕ ಬರವಣಿಗೆಗೆ ಏನು ಪ್ರೇರೇಪಣೆ?
ನನಗೆ ನೆನಪಿಲ್ಲ. ನಾನು ಹರೆಯದ ಹುಡುಗನಾಗಿದ್ದಾಗ ತುಂಬಾ ಪುಸ್ತಕಗಳನ್ನು ಬರೆದಿದ್ದೆ. ಆದರೆ ಅವ್ಯಾವುದನ್ನೂ ಯಾರಿಗೂ ತೋರಿಸುವ ಧೈರ್ಯ ಮಾಡಿಲ್ಲ. ಯಾಕೆಂದರೆ ಅವು ಅಷ್ಟು ಭಯಂಕರವಾಗಿದ್ದವು!. ಆದ್ದರಿಂದ ಯಾವುದು ನನ್ನ ಮೊದಲ ಪುಸ್ತಕ ಎಂಬುದೂ ನನಗೆ ಗೊತ್ತಿಲ್ಲ. ನನ್ನ ಮೊದಲ ಪ್ರಕಟಿತ ಪುಸ್ತಕ ‘ಅಮಂಗಸ್ಟ್‌ ಲೋನರ್‍ಸ್‌’ ನನ್ನದೇ ಕುಟುಂಬದ ಅನೇಕ ಸಂಗತಿಗಳಿಂದ ಪ್ರೇರೇಪಿತವಾದ ಪುಸ್ತಕ.

      ‘ಸ್ಟಾಲೋವಾ ವೋಲಾ’ ಪ್ರದರ್ಶನ
ಗೋಥೆ ಇನ್‌ಸ್ಟಿಟ್ಯೂಟ್‌ ಮ್ಯಾಕ್ಸ್‌ ಮುಲ್ಲರ್‌ ಭವನದ ಸಹಯೋಗದಲ್ಲಿ ಜಾಗೃತಿ ಥಿಯೇಟರ್ ಕ್ರಿಸ್ಟೋಫರ್‌ ಕ್ಲೋಬಲ್‌ ಅವರ ‘ಸ್ಟಾಲೋವಾ ವೋಲಾ’ ನಾಟಕವನ್ನು ಪ್ರಸ್ತುತಪಡಿಸುತ್ತಿದೆ. 70 ನಿಮಿಷ ಅವಧಿಯ ಈ ನಾಟಕವನ್ನು ವಿವೇಕ್‌ ಮದನ್‌ ನಿರ್ದೇಶಿಸಿದ್ದಾರೆ.
ಇದೇ ಶುಕ್ರವಾರ, ಶನಿವಾರ ರಾತ್ರಿ 8ಗಂಟೆಗೆ ಮತ್ತು ಭಾನುವಾರ 3.30 ಹಾಗೂ 6.30ಕ್ಕೆ ವರ್ತೂರು ರಸ್ತೆಯ ರಾಮಗೊಂಡನಹಳ್ಳಿಯಲ್ಲಿನ ಜಾಗೃತಿ ಥಿಯೇಟರ್‌ನಲ್ಲಿ ನಾಟಕ ಪ್ರದರ್ಶನವಿದೆ.
ಟಿಕೆಟ್‌ಗಳು ಜಾಗೃತಿ ಥಿಯೇಟರ್‌ ಮತ್ತು bookmyshow.com ನಲ್ಲಿ ಲಭ್ಯ.                       

* ಪುಸ್ತಕ ಸಾಹಿತ್ಯ, ಸಿನಿಮಾ, ಭಾಷಾಂತರ, ರಂಗಭೂಮಿ ಹೀಗೆ ನೀವು ಅನೇಕ ಪ್ರಕಾರಗಳಲ್ಲಿ ಸಕ್ರಿಯರಾಗಿದ್ದೀರಿ. ನಿಮ್ಮ ನೆಚ್ಚಿನ ಪ್ರಕಾರ ಯಾವುದು?
ಯಾವುದೇ ಒಂದು ಅಂತಿಲ್ಲ. ಪ್ರತಿ ಪ್ರಕಾರಕ್ಕೂ ಅದರದ್ದೇ ಆದ ಶಕ್ತಿ ಮತ್ತು ಮಿತಿಗಳಿರುತ್ತವೆ. ನನ್ನ ಅದೃಷ್ಟ, ನಾನು ಎಲ್ಲ ಪ್ರಕಾರಗಳಲ್ಲಿಯೂ ಕೆಲಸ ಮಾಡುತ್ತಿದ್ದೇನೆ.

* ರಂಗಭೂಮಿ ಮತ್ತು ಸಾಹಿತ್ಯ, ಇವೆರಡರ ನಡುವಣ ಸಾಮ್ಯತೆ ಮತ್ತು ವ್ಯತ್ಯಾಸಗಳೇನು?
ಬಹುತೇಕ ಜನರು ಅಂದುಕೊಂಡಿರುವುದಕ್ಕಿಂತ ಆ ಎರಡು ಪ್ರಕಾರಗಳಲ್ಲಿ ವ್ಯತ್ಯಾಸಗಳಿವೆ. ಸಾಹಿತ್ಯ ಹೆಚ್ಚು ನಿಕಟವಾದದ್ದು. ಆದರೆ ಹಲವು ಜನರ ಸಂವಾದಗಳು ಒಟ್ಟಿಗೇ ಸೇರಿ ಕಥೆಯನ್ನು ಹುಟ್ಟಿಸುವುದು ರಂಗಭೂಮಿ.

* ನಿಮಗೆ ಹೊಳೆದ ವಿಷಯಕ್ಕೆ ನಾಟಕರೂಪ ಕೊಡಬೇಕೋ, ಕಾದಂಬರಿ ಬರೆಯಬೇಕೋ ಎಂಬ ಪ್ರಕಾರದ ಆಯ್ಕೆಯನ್ನು ನೀವು ಹೇಗೆ ಮಾಡಿಕೊಳ್ಳುತ್ತೀರಿ?
ಪ್ರಕಾರವನ್ನು ನಾನು ಆಯ್ಕೆ ಮಾಡಿಕೊಳ್ಳುವುದಿಲ್ಲ. ಕತೆಯೇ ಅದನ್ನು ಹೇಗೆ ಹೇಳಬೇಕು ಎಂಬುದನ್ನು ನಿರ್ಧರಿಸುತ್ತದೆ.

* ನೀವು ಭಾರತದತ್ತ ಆಕರ್ಷಿತರಾದದ್ದು ಹೇಗೆ?
ಆ ಕುರಿತು ಹೇಳಲು ತುಂಬ ವಿಷಯಗಳಿವೆ. ಎಲ್ಲಕ್ಕಿಂತ ಮುಖ್ಯ ಕಾರಣ ನನ್ನ ಪತ್ನಿ ಸಾಸ್ಕ್ಯಾ ಜೈನ್. ಅವಳೂ ಲೇಖಕಿ. ದೆಹಲಿಯವಳು. ನಾವು ಅರ್ಧ ವರ್ಷವನ್ನು ದೆಹಲಿಯಲ್ಲಿ ಕಳೆದರೆ ಇನ್ನರ್ಧ ವರ್ಷವನ್ನು ಬರ್ಲಿನ್‌ನಲ್ಲಿ ಕಳೆಯುತ್ತೇವೆ.

* ನಿಮ್ಮನ್ನು ಅತಿಯಾಗಿ ಪ್ರಭಾವಿಸಿದ ಲೇಖಕ ಯಾರು?
ಸ್ಟಿಫನ್‌ ಕಿಂಗ್‌! ನಾನು ಚಿಕ್ಕವನಾಗಿದ್ದಾಗ ಅವರ ಬರವಣಿಗೆಯಲ್ಲಿನ ಸೂಕ್ಷ್ಮ ವಿವರಗಳನ್ನು ತುಂಬ ಎಂಜಾಯ್‌ ಮಾಡ್ತಿದ್ದೆ. ನೂರಾರು ಪುಟಗಳಷ್ಟು ಸುದೀರ್ಘ ಅವಧಿಯಲ್ಲಿ ಅವರು ಓದುಗರ ಗಮನವನ್ನು ಕೊಂಚವೂ ಅತ್ತಿತ್ತ ಹೋಗದಂತೆ ಹಿಡಿದಿಡುತ್ತಿದ್ದ ರೀತಿ ತುಂಬ ಇಷ್ಟವಾಗುತ್ತಿತ್ತು. ಈಗೀಗ ಅವರ ಕೃತಿಗಳನ್ನು ಹೆಚ್ಚಾಗಿ ಓದುವುದಿಲ್ಲ. ಅವರ ಹೊರತಾಗಿಯೂ ನನ್ನನ್ನು ಪ್ರಭಾವಿಸಿದ ಲೇಖಕರ ಪಟ್ಟಿ ಇಲ್ಲಿ ಉಲ್ಲೇಖಿಸಲಾಗದಷ್ಟು ದೊಡ್ಡದಿದೆ.

* ಭಾರತ ಸಾಹಿತ್ಯ ಜಗತ್ತಿನ ಬಗ್ಗೆ ನಿಮ್ಮ ಅನಿಸಿಕೆ ಏನು?
ಜರ್ಮನಿಗಿಂತ ತುಂಬ ಭಿನ್ನವಾಗಿ ಇಲ್ಲಿನ ಸಾಹಿತ್ಯ ಜಗತ್ತು ಇನ್ನೂ ಬೆಳೆಯುತ್ತಲೇ ಇರುವುದನ್ನು ನೋಡಿದಾಗ ನನಗಂತೂ ಹೊಟ್ಟೆಕಿಚ್ಚಾಗುತ್ತದೆ. ಹೊಸಹೊಸ ಸಾಹಿತ್ಯೋತ್ಸವಗಳು, ಪ್ರಕಾಶಕರು ಇವೆಲ್ಲ ಇಲ್ಲಿನ ಸಮಾಜದ ಮುಖ್ಯ ಅಂಗವಾಗಿ ಬೆಳೆಯುತ್ತಿವೆ.

* ಬೆಂಗಳೂರಿನ ಬಗ್ಗೆ ಏನನಿಸುತ್ತದೆ? ಕನ್ನಡದ ಯಾವುದಾದರೂ ಲೇಖಕರ ಪರಿಚಯ ಇದೆಯಾ?
ಭಾರತದಲ್ಲಿರುವ ಸಮಯದಲ್ಲಿ ದೆಹಲಿಯನ್ನು ಬಿಟ್ಟರೆ ನಾನು ಹೆಚ್ಚು ಕಾಲ ಕಳೆದಿದ್ದು ಬೆಂಗಳೂರಿನಲ್ಲಿಯೇ. ಈ ನಗರವನ್ನು ಪ್ರೀತಿಸಲು ನನಗೆ ಸಾಕಷ್ಟು ಕಾರಣಗಳಿವೆ. ವಿಶೇಷವಾಗಿ ವ್ಯಾಪಕವಾಗಿ ಕಾಣಸಿಗುವ ವೈವಿಧ್ಯಮಯ ಮರಗಳು ಮತ್ತು ದಕ್ಷಿಣ ಭಾರತ ತಿನಿಸುಗಳು. ಕನ್ನಡದಲ್ಲಿ ನನಗೆ ವೈಯಕ್ತಿಕವಾಗಿ ತಿಳಿದಿರುವ ಮತ್ತು ನಾನು ಇಷ್ಟಪಡುವ ಸಾಹಿತಿ ಎಚ್‌.ಎಸ್‌. ಶಿವಪ್ರಕಾಶ್‌.

* ಜರ್ಮನಿ ಸಾಹಿತ್ಯ ಜಗತ್ತಿನಲ್ಲಿ ಸಮಕಾಲೀನ ವಿದ್ಯಮಾನಗಳ ಬಗ್ಗೆ ಕೊಂಚ ವಿವರಿಸುತ್ತೀರಾ?
ಈ ಪ್ರಶ್ನೆಗೆ ದೀರ್ಘವಾಗಿಯೇ ಉತ್ತರಿಸಬೇಕು. ಸಂಕ್ಷಿಪ್ತವಾಗಿ ಹೇಳುವುದಾದರೆ ಜರ್ಮನಿ ಸಾಹಿತ್ಯ ಜಗತ್ತು ಹೊರಪ್ರಪಂಚಕ್ಕೆ ಹೆಚ್ಚು ಹೆಚ್ಚು ತೆರೆದುಕೊಳ್ಳುತ್ತಿದೆ. ಓದುಗರೂ ಹೊರಜಗತ್ತಿನ ಲೇಖಕರ ಪುಸ್ತಕಗಳನ್ನು ಓದಲು ಆಸಕ್ತಿ ತೋರಿಸುತ್ತಿದ್ದಾರೆ.

* ಬರವಣಿಗೆಯ ಪ್ರಕ್ರಿಯೆಯಲ್ಲಿ ನಿಮಗೆ ಸವಾಲೆನಿಸುವ ಹಂತ ಯಾವುದು?
ಬರವಣಿಗೆಯಲ್ಲಿ ನಿರಂತರವಾಗಿ ಆತ್ಮವಿಶ್ವಾಸವನ್ನು ಸಂಭಾಳಿಸಿಕೊಂಡು ಹೋಗುವುದೇ ದೊಡ್ಡ ಸವಾಲು. ಅದೇ ಸಮಯದಲ್ಲಿ ನನ್ನ ಬೆಳವಣಿಗೆಗೆ ಪೂರಕವಾಗುವಂತೇ ನನ್ನನ್ನು ನಾನೇ ವಿಮರ್ಶಿಸಿಕೊಳ್ಳುವುದು.

* ಈಗ ಪ್ರದರ್ಶಿತವಾಗಲಿರುವ ‘ಸ್ಟಾಲೋವಾ ವೋಲಾ’ ನಾಟಕದ ಕುರಿತು ಹೇಳಿ.
‘ಸ್ಟಾಲೋವಾ ವೋಲಾ’ ಇದು ಪೋಲೆಂಡ್‌ನ ಸ್ಥಳವೊಂದರ ಹೆಸರು. ಅದು ಪೂರ್ವ ಜರ್ಮನಿಯಲ್ಲಿ ವಾಸಿಸುವ ಇತ್ತೀಚೆಗೆ ಹೆಂಡತಿಯನ್ನು ಕಳೆದುಕೊಂಡಿರುವ ಕಾರ್ಲ್‌ನ ನಿಗೂಢ ಪ್ರಯಾಣದ ಗುರಿಯೂ ಹೌದು. ಆ ಪಯಣದಲ್ಲಿ ಅವನು ಅನೇಕ ಅಡಚಣೆಗಳು ಮತ್ತು ವಿಚಿತ್ರ ವ್ಯಕ್ತಿಗಳನ್ನು ಭೇಟಿಯಾಗುತ್ತಾನೆ. ಇದೇ ಈ ನಾಟಕದ ಕಥನದ ಎಳೆ.

* ನಿಮ್ಮ ಮುಂದಿನ ಯೋಜನೆಗಳ ಬಗ್ಗೆ ಹೇಳುತ್ತೀರಾ?
ನಾನು ಇಂಗ್ಲಿಷ್‌ನಲ್ಲಿ ಬರೆದಿರುವ ಕಾದಂಬರಿಯೊಂದನ್ನು ತಿದ್ದುತ್ತಿದ್ದೇನೆ. ಅದು ಮುಂದಿನ ವರ್ಷ ಅಮೆರಿಕದಲ್ಲಿ ಪ್ರಕಟವಾಗಲಿದೆ. ಜರ್ಮನ್‌ ಭಾಷೆಯ ನನ್ನ ಹೊಸ ಕಾದಂಬರಿಯೂ ಅಂತಿಮ ಹಂತದಲ್ಲಿದೆ. ಅಲ್ಲದೇ ಹಲವಾರು ಸಿನಿಮಾಗಳಿಗೂ ಕೆಲಸ ಮಾಡುತ್ತಿದ್ದೇನೆ. ವಿಶೇಷವಾಗಿ ನನ್ನದೇ ಒಂದು ಕಾದಂಬರಿಗೆ ಸಿನಿಮಾ ರೂಪು ಕೊಡುವ ಕೆಲಸದಲ್ಲಿ ನಿರತನಾಗಿದ್ದೇನೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT