ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಯಮದ ಕೈಚಳಕ, ದಣಿವರಿಯದ ಪುಳಕ

Last Updated 1 ಏಪ್ರಿಲ್ 2015, 20:03 IST
ಅಕ್ಷರ ಗಾತ್ರ

ಬೆಂಗಳೂರು: ಕಣ್ಮುಚ್ಚಿ ತುಟಿಯಲ್ಲಿ ಮಂದಸ್ಮಿತ ನಗು ತುಳುಕಿಸುವ ಬುದ್ಧ, ಗರಿಗೆದರಿ ನಿಂತ ಮಯೂರ, ಜಗದ ಕ್ರೌರ್ಯದ ಬಿಸಿಗೆ ಮೇಣದಂತೆ ಕರಗುತ್ತಿರುವ ಮಹಿಳೆ, ಕಂದನನ್ನು ಬರಸೆಳೆದು ಬಿಗಿದಪ್ಪಿದ ವಾತ್ಸಲ್ಯಮಯಿ, ಕಟುಕ ಕೃತ್ಯ ನೆನೆದು ಗೋಳಿಡುತ್ತಿರುವ ಗೂಳಿ...
ನಗರದ ಚಿತ್ರಕಲಾ ಪರಿಷತ್ತಿನ ಅಂಗಳದಲ್ಲಿ ಕೆಲ ದಿನಗಳ ಹಿಂದಷ್ಟೇ ಕಾಣುತ್ತಿದ್ದ ಕಲ್ಲಿನ ಬಂಡೆಗಳು ಬುಧವಾರ ಕಂಡಾಗ ಅವುಗಳಲ್ಲಿ ಮೈದಳೆದ ರೂಪಗಳಿವು.

ಚಿತ್ರಕಲಾ ಪರಿಷತ್ತು ಮತ್ತು ಚಿತ್ರಕಲಾ ಮಹಾವಿದ್ಯಾಲಯದ ಸುವರ್ಣ ಸಂಭ್ರಮಾಚರಣೆ ಅಂಗವಾಗಿ ಮಾರ್ಚ್‌ 23ರಂದು ಆಯೋಜಿಸಿದ್ದ ‘ರಾಷ್ಟ್ರೀಯ ಮಟ್ಟದ ಶಿಲ್ಪಕಲಾ ಶಿಬಿರ’ಕ್ಕೆ ಬುಧವಾರ ತೆರೆಬಿತ್ತು.

ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರು,

ರಾಜ್ಯದಲ್ಲಿ ಕಲಾವಿದರಿಗೆ ಬರವಿಲ್ಲ. ಆದರೆ, ಅವರಿಗೆ ಸೂಕ್ತ ವೇದಿಕೆಯ ಕೊರತೆ ಇದೆ. ಪ್ರತಿ ಕಲಾವಿದನಿಗೆ ವೇದಿಕೆ ಕಲ್ಪಿಸುವ ಕೆಲಸ ನಡೆಯಲಿ.
ಭಾವನಾ
ಬಾಲಭವನ ಅಧ್ಯಕ್ಷೆ

‘ಸಾಮಾನ್ಯನನ್ನು ಅಸಾಮಾನ್ಯನನ್ನಾಗಿ ರೂಪಿಸುವ ಪ್ರತಿ ಕಲೆಯ ಹಿಂದೆ ತನ್ನದೇ ಆದ ಶ್ರಮವಿದೆ.  ಈ ಹಿಂದೆ ಮೇಲ್ವರ್ಗಕ್ಕೆ ಮಾತ್ರ ಸೀಮಿತವಾದಂತಿದ್ದ ಅನೇಕ ಕಲಾಪ್ರಕಾರಗಳು ಇಂದು ಜನಸಾಮಾನ್ಯನನ್ನು ತಲುಪುವ ಜತೆಗೆ ಆತನನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಏರಿಸುತ್ತಿವೆ’ ಎಂದರು.

‘ನಮ್ಮ ದೇಶಿಯ ಕಲೆಗಳು ತನ್ನದೇ ಆದ ವೈಶಿಷ್ಟ್ಯ ಹೊಂದಿವೆ. ಅವುಗಳನ್ನು ಹೊರ ಜಗತ್ತಿಗೆ ಪರಿಚಯಿಸುವ ಜತೆಗೆ ವಿಶಾಲ ಹೃದಯದಿಂದ ಕೊಡುಕೊಳ್ಳುವಿಕೆಯನ್ನು ಮಾಡಬೇಕಿದೆ. ಅದರಿಂದ ನಮ್ಮ ಕಲೆಗಳನ್ನು ಉಳಿಸಿಕೊಳ್ಳಲು ಮತ್ತು ಬೆಳೆಸಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

‘ಪರಿಷತ್ತಿನ ಮೂಲಕ ರಾಜ್ಯದಲ್ಲಿ ಅನೇಕ ವರ್ಷಗಳ ಕಾಲ ಕಲಾ ಸಂಸ್ಕೃತಿಯನ್ನು ಪೋಷಿಸಿಕೊಂಡು ಬಂದ ಫಲವಾಗಿ ಇಂದು ನಗರದ ಚಿತ್ರಸಂತೆ ಅಂತರರಾಷ್ಟ್ರೀಯ ಮಟ್ಟದ ಖ್ಯಾತಿ ಗಳಿಸಿದೆ. ಸರ್ಕಾರದಿಂದ ಪರಿಷತ್ತಿಗೆ ನೀಡುವ ಅನುದಾನ ಸಂಪೂರ್ಣವಾಗಿ ಸದುಪಯೋಗವಾಗುತ್ತಿದೆ’ ಎಂದು ಅವರು ಅಭಿಪ್ರಾಯಪಟ್ಟರು.

ಪರಿಷತ್ತಿನ ಉಪಾಧ್ಯಕ್ಷ ಡಾ.ಕೆ.ಇ. ರಾಧಾಕೃಷ್ಣ ಅವರು ಮಾತನಾಡಿ, ‘ಈ ಶಿಲ್ಪಕಲಾ ಶಿಬಿರದಲ್ಲಿ ರಾಜ್ಯ ಮತ್ತು ಹೊರರಾಜ್ಯದ ಕಲಾವಿದರು ಸೇರಿ ರಚಿಸಿರುವ ಪ್ರತಿಯೊಂದು ಶಿಲ್ಪದ ಹಿಂದೆ ತನ್ನದೇ ಆದ ಒಂದೊಂದು ಭಾವ, ಸಾಮಾಜಿಕ ವ್ಯಾಖ್ಯಾನ, ಚರಿತ್ರೆ, ವರ್ತಮಾನದ ತಲ್ಲಣ ಪರಿಚಯಿಸುವ ತವಕವಿದೆ’ ಎಂದು ಬಣ್ಣಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್‌. ನಾಗಾಂಬಿಕಾ ದೇವಿ ಅವರು ಮಾತನಾಡಿ, ‘ಕಲೆ ಬಂದಿಯಾಗಿರದೇ ಪ್ರತಿಯೊಬ್ಬರಿಗೂ ತಲುಪುವಂತಾಗಬೇಕು. ಈ ವಿಚಾರದಲ್ಲಿ ಚಿತ್ರಸಂತೆ ನಗರಕ್ಕೆ ಜಾಗತಿಕ ಮನ್ನಣೆಯನ್ನೇ ತಂದು ಕೊಟ್ಟಿದೆ. ಪರಿಷತ್ತಿಗೆ ಸಹಾಯ ಮಾಡಲು ಸರ್ಕಾರ ಸದಾ ಸಿದ್ಧವಿರುತ್ತದೆ’ ಎಂದು ಅವರು ಹೇಳಿದರು.

ಶಿಬಿರದಲ್ಲಿ ಭಾಗವಹಿಸಿದ್ದ ಕಲಾವಿದರು ಮತ್ತು ಸಹಾಯಕ ಶಿಲ್ಪಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ, ಪ್ರಮಾಣ ಪತ್ರ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT