ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಯುಕ್ತಾ ಕಲಿತ ಹೊಸ ಪಾಠಗಳು!

Last Updated 19 ನವೆಂಬರ್ 2015, 19:38 IST
ಅಕ್ಷರ ಗಾತ್ರ

‘ಇನ್ನೂ ಇಂಥ ಮೂರು ಚಿತ್ರಗಳಲ್ಲಿ ನಟಿಸು ಎಂದು ಅಮ್ಮ ಹೇಳುತ್ತಿದ್ದಾರೆ. ಅದಕ್ಕೆ ಕಾರಣ ಈ ಚಿತ್ರದಿಂದ ತಾಳ್ಮೆ–ಸಹನೆಯನ್ನು ನಾನು ರೂಢಿಸಿಕೊಂಡಿದ್ದು. ನನ್ನ ವ್ಯಕ್ತಿತ್ವದಲ್ಲಿಯೇ ಒಂದಿಷ್ಟು ಬದಲಾವಣೆಗಳಾಗಿವೆ. ತುಂಬಾ  ಕಲಿತಿದ್ದೇನೆ’– ಹೀಗೆ ಕೊಂಚ ನಗು–ಗಾಂಭೀರ್ಯದಿಂದ ನಟಿ ಸಂಯುಕ್ತಾ ಹೊರನಾಡು ಹೇಳುವುದು ‘ಮಾರಿಕೊಂಡವರು’ ಸಿನಿಮಾದ ತಮ್ಮ ಅನುಭವದ ಬಗ್ಗೆ. ‘ಒಗ್ಗರಣೆ’, ‘ಲೈಫು ಇಷ್ಟೇನೆ’ ರೀತಿಯ ವಿಭಿನ್ನ ಚಿತ್ರಗಳ ಮೂಲಕ ಸಹೃದಯರಿಗೆ ಪರಿಚಿತರಾದ ಸಂಯುಕ್ತಾ ಇದೀಗ ತಮ್ಮ ವೃತ್ತಿಜೀವನದ ಮತ್ತೊಂದು ಹೊರಳಿನಲ್ಲಿ ನಿಂತಿದ್ದಾರೆ. ಅದು ‘ಮಾರಿಕೊಂಡವರು’ ಚಿತ್ರದ ಲಕ್ಷ್ಮೀ (ಲಚುಮಿ) ಪಾತ್ರದ ಮೂಲಕ.

ಅಂದಹಾಗೆ, ಈ ಲಚುಮಿ ಶಿವರುದ್ರಯ್ಯ ನಿರ್ದೇಶನದ ‘ಮಾರಿಕೊಂಡವರು’ ಚಿತ್ರದ ಪಾತ್ರ. ಒಂದು ಕಡೆ ನಿರ್ದೇಶಕಿ ಸುಮನಾ ಕಿತ್ತೂರು, ಪೂರ್ಣಚಂದ್ರ ತೇಜಸ್ವಿ ಅವರ ‘ಕಿರಗೂರಿನ ಗಯ್ಯಾಳಿ’ಗಳಿಗೆ ಚಿತ್ರರೂಪ ಕೊಟ್ಟಿದ್ದಾರೆ. ದಾನಮ್ಮ, ಮಂಜುಳ– ಹೀಗೆ ಕೃತಿಯಲ್ಲಿದ್ದ ಪಾತ್ರಗಳು ತೆರೆಯ ಮೇಲೆ ತೊಡೆತಟ್ಟಲಿವೆ. ಮತ್ತೊಂದು ಕಡೆ ಶಿವರುದ್ರಯ್ಯ ದೇವನೂರ ಮಹಾದೇವರ ಕಥೆಗಳನ್ನು ಆಧಾರವಾಗಿಟ್ಟುಕೊಂಡು ಮಾರಿಕೊಂಡವರನ್ನು ಸೃಜಿಸಿದ್ದಾರೆ.

ಈ ಎರಡೂ ಚಿತ್ರಗಳಲ್ಲಿ ಗ್ಲಾಮರ್ ಬೊಂಬೆಗಳಂತಿದ್ದ ನಟಿಯರು ಡಿ–ಗ್ಲಾಮರ್ ಲುಕ್ಕಿನಲ್ಲಿ ಕಾಣಿಸಿಕೊಂಡಿದ್ದಾರೆ. ಚಿನಕುರಳಿತನ ತೊರೆದು ಮೌನಿಯಾಗಿದ್ದಾರೆ, ಜಗಳವಾಡಿದ್ದಾರೆ. ಒಟ್ಟಾರೆಯಾಗಿ ತಮ್ಮನ್ನು ತಾವೇ ಹಳ್ಳಿಯ ಎರಕದೊಳಗೆ ಒಡ್ಡಿಕೊಂಡಿದ್ದಾರೆ. ಸಂಯುಕ್ತಾ ಸಹ ಈ ಎರಕದಲ್ಲಿ ತಮ್ಮನ್ನು ತಾವು ಹೊಸ ರೂಪದಲ್ಲಿ ಕಂಡುಕೊಂಡಿದ್ದಾರೆ. ‘ಮಾರಿಕೊಂಡವರು’ ಚಿತ್ರದಲ್ಲಿ ಸಂಯುಕ್ತಾ ಹಳ್ಳಿಯ ಅನುಭವಗಳನ್ನು ದಟ್ಟವಾಗಿ ಅನುಭವಿಸಿದ್ದಾರೆ.

ಆ ಅನುಭವಗಳು ಅವರ ಸಂವೇದನೆಗಳಲ್ಲಿ ಒಂದಿಷ್ಟು ಬದಲಾವಣೆಗಳನ್ನೂ ತಂದಿವೆಯಂತೆ. ‘‘ಮೊದಲ ಬಾರಿಗೆ ಡಿ–ಗ್ಲಾಮರ್ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಈ ಹಿಂದೆ ನಟಿಸಿದ್ದ ಚಿತ್ರಗಳಲ್ಲಿ ಸ್ಕರ್ಟ್ ಹಾಕಿದ್ದೇನೆ, ಹೆಚ್ಚು ಮಾತನಾಡಿದ್ದೇನೆ. ಬಹುಪಾಲು ಕಾಲೇಜು ಹುಡುಗಿಯ ಪಾತ್ರಗಳವು. ಮಾರಿಕೊಂಡವರಲ್ಲಿ ಹರಿದ ಸೀರೆ–ಕುಪ್ಪಸ ತೊಟ್ಟು ದೊಡ್ಡ ಕುಂಕುಮ ಇಟ್ಟಿದ್ದೇನೆ. ಮಾತನಾಡಲೂ ನಾಚುವ ಹೆಣ್ಣಿನ ಪಾತ್ರ ನನ್ನದು.

ಈ ಚಿತ್ರ ತೆರೆಗೆ ಬಂದ ತರುವಾಯ ಇಂಥ ಮತ್ತಷ್ಟು ಪಾತ್ರಗಳು ಬರಬಹುದು ಎನ್ನುವ ನಿರೀಕ್ಷೆಯಿದೆ. ಹಾಂ, ಈ ಚಿತ್ರದಲ್ಲಿ ಮಾಡುತ್ತಿದ್ದೇನೆ ಎಂದಾಗಲೇ ತೆಲುಗಿನಲ್ಲಿ ಕೆಲವರು-ನೀವು ಆಧುನಿಕ ಪಾತ್ರಕ್ಕೆ ಹೊಂದುವವರು, ಈ ಪಾತ್ರ ನಿಮಗೆ ಸರಿ ಹೊಂದುತ್ತಾ ಎಂದು ಅನುಮಾನಿಸಿದ್ದರು. ಒಂದು ಪೇಂಟಿಂಗ್ ನೋಡಿದ ಅನುಭವ ಉಂಟಾಗುವಂತೆ ಶಿವರುದ್ರಯ್ಯ ಅವರು ನನಗೆ ಕತೆ ಹೇಳಿದರು. ದೃಶ್ಯ ದೃಶ್ಯಗಳನ್ನೂ ಮನಸ್ಸಿಗೆ ಇಳಿಸಿದರು. ನನ್ನ ಮನೆತನದ ಹಿನ್ನೆಲೆಯಲ್ಲಿ ಉತ್ತಮ ಕಲಾವಿದರಿದ್ದಾರೆ.

ನಾನು ಭಿನ್ನವಾಗಿ ಮಾಡಬೇಕು ಎನ್ನುವ ನಿರ್ಧಾರದಲ್ಲಿ ಲಚುಮಿಯಾದೆ. ದೇವನೂರರ ಕಥೆಗಳನ್ನು ಓದಿರಲಿಲ್ಲ. ಆದರೆ  ಚಿತ್ರದ ಸಂದರ್ಭದಲ್ಲಿ ಕಥೆಗಳನ್ನು ಓದಿದೆ. ಸಿನಿಮಾದಲ್ಲಿ ಊರ ಪಟೇಲನ ಹೆಂಡತಿ, ಬಡವರು– ಹೀಗೆ ಇವರೆಲ್ಲರೂ ಒಟ್ಟಿಗೆ ಎನ್ನುವ ಮಟ್ಟಕ್ಕೆ ಬರುತ್ತಾರೆ. ಇದು ಒಂದು ಆಧುನಿಕ ಚಿಂತನಾ ಕ್ರಮ. ಇಂದಿನ ಸಮಾಜಕ್ಕೆ ಇದು ಇರಬೇಕಾದದ್ದು ಅತ್ಯಗತ್ಯ’’ ಎಂದು ಸಂಯುಕ್ತಾ ಹೇಳುತ್ತಾರೆ.

ಪರಕಾಯ ಪ್ರವೇಶ
‘‘ನಾನು ಚಿತ್ರೀಕರಣಕ್ಕೆ ಹೋದಾಗ ಒಮ್ಮೆ ಡ್ರೆಸ್ ಬದಲಿಸಬೇಕಿತ್ತು. ಕೊಠಡಿಯ ಕಾವಲುಗಾರನಿಗೆ ಹೇಳಿ ಒಳಹೋದೆ. ಬಟ್ಟೆ ಬದಲಿಸಿ ಹೊರ ಬಂದ ಸ್ವಲ್ಪ ಹೊತ್ತಿನಲ್ಲಿ ಅವರು ಬಂದರು. ನನ್ನದು ಸೀರೆ, ಬಿಂದಿಯ ವೇಷ. ‘ಇಲ್ಲಿ ಒಂದು ಹುಡುಗಿ ಇತ್ತಲ್ಲ ಎಲ್ಲಿ ಹೋದರಮ್ಮ’ ಎಂದು ಕೇಳಿದರು. ಆಕೆ ನಾನೇ ಎಂದರೂ ಅವರು ನಂಬಲಿಲ್ಲ. ಸ್ವಲ್ಪ ಸಮಯದ ನಂತರ ಪುನಃ ಬಟ್ಟೆ ಬದಲಿಸಿ ಅವರ ಮುಂದೆ ನಿಂತಾಗ ನಂಬಿದರು. ಚಿತ್ರೀಕರಣಕ್ಕಾಗಿ ನಾನು ಮತ್ತು ನಟ ಸತ್ಯ ಬರಿಗಾಲಿನಲ್ಲಿ ಬೆಟ್ಟ ಹತ್ತುವಾಗ ಕಾಲಿಗೆ ಮುಳ್ಳು ತರಚಿದವು.

ಆ ಶಾಟ್ ಪೂರ್ಣಗೊಳಿಸಿ ಬಂದಾಗ ಚಿತ್ರೀಕರಣದಲ್ಲಿ ಇದ್ದವರಿಗೆ ಬೇಸರವಾಯಿತು. ಕುರಿ–ಹಸು–ಬೆಕ್ಕು ಸೇರಿದಂತೆ ಪ್ರಾಣಿಗಳ ಜತೆ ಲಚುಮಿಯ ಒಡನಾಟ ಹೆಚ್ಚು. ಕಮರ್ಷಿಯಲ್ ಸಿನಿಮಾಗಳಲ್ಲಿ ನಿದ್ದೆ ಬಿಟ್ಟು ಯೋಚನೆ ಮಾಡುತ್ತ ಕೆಲವು ಸಮಯ ತಾಳ್ಮೆಯನ್ನೂ ಕಳೆದುಕೊಳ್ಳಬೇಕಾಗುತ್ತದೆ. ಆದರೆ ಈ ಲಚುಮಿಗೆ ಇದಾವುದೂ ತಟ್ಟಲಿಲ್ಲ.

ಈ ಪಾತ್ರದಿಂದ ನನ್ನಲ್ಲಿನ ಸಹನೆ ಹೆಚ್ಚಾಯಿತು. ಒಂದು ರೀತಿಯಲ್ಲಿ ನನ್ನ ವ್ಯಕ್ತಿತ್ವದಲ್ಲಿಯೇ ಬದಲಾವಣೆ ಉಂಟಾಯಿತು. ಹಳ್ಳಿಯ ಹೆಂಗಸರು ಚಿಕ್ಕ ಚಿಕ್ಕ ಸಮಸ್ಯೆಗಳನ್ನು ಹೇಗೆ ಭಾವಿಸುತ್ತಾರೆ, ಅನುಭವಿಸುತ್ತಾರೆ, ಸರಳವಾಗಿರುವುದು ಎಷ್ಟು ಬ್ಯೂಟಿಫುಲ್ ಎನ್ನುವುದು ತಿಳಿಯಿತು’’– ಹೀಗೆ ‘ಮಾರಿಕೊಂಡವರು’ ಚಿತ್ರದ ಮೂಲಕ ತಮ್ಮಲ್ಲಿ ಆದ ಬದಲಾವಣೆಗಳನ್ನು ಸಂಯುಕ್ತಾ ಭಾವುಕವಾಗಿ ಬಣ್ಣಿಸುತ್ತಾರೆ.

ಕುದುರೆ ಸವಾರಿ
ವಿಜಯ್ ಸೂರ್ಯ, ಜೆಕೆ ಮತ್ತು ಸಂಯುಕ್ತಾ ನಟನೆಯ ‘ಮತ್ತೊಮ್ಮೆ ಶ್’ ಚಿತ್ರದಲ್ಲಿ ಸಂಯುಕ್ತ ಕುದುರೆ ಸವಾರಿ ಮಾಡಿದ್ದಾರಂತೆ. ಫೈಟ್ ಸಹ ಮಾಡಿದ್ದಾರೆ. ಹೀಗೆ ಸಾಹಸ ಪ್ರಧಾನ ಚಿತ್ರಗಳಲ್ಲಿ ನಟಿಸುವ ಆಸೆ ಮತ್ತು ಕನಸು ಅವರಿಗೆ ಬಹುದಿನಗಳಿಂದ ಇತ್ತಂತೆ. ಕನ್ನಡದಲ್ಲಿ ನಿರ್ಮಾಣಗೊಳ್ಳುತ್ತಿರುವ ತಮಿಳಿನ ‘ಜಿಗರ್ ಥಂಡಾ’ದ ರೀಮೇಕ್ ಚಿತ್ರದಲ್ಲೂ ಸಂಯುಕ್ತ ನಾಯಕಿ.

ಆ ಚಿತ್ರದಲ್ಲೂ ‘ಮಾರಿಕೊಂಡವರು’ ಚಿತ್ರದಲ್ಲಿ ಇದ್ದಂತೆಯೇ ಮೇಕಪ್ ಇಲ್ಲದ ಪಾತ್ರ. ಪಾತ್ರದ ಹೆಸರು ಕೂಡ ಲಕ್ಷ್ಮಿಯೇ. ಈಕೆ ಬೆಂಗಳೂರನ್ನು ಕಾಣಬೇಕು ಎನ್ನುವ ಕನಸುಳ್ಳ ಸೀರೆ ಕಳ್ಳಿ. ಬೆಂಗಳೂರಿಗೆ ಹೋಗುವ ಅವಕಾಶ ಸಿಕ್ಕುವುದಿಲ್ಲ. ಹಳ್ಳಿಗೆ ಬೆಂಗಳೂರು ಹುಡುಗ ಬರುತ್ತಾನೆ. ಅವನಿಂದ ಆಕೆ ಅಲ್ಲಿಗೆ ಹೋಗುವ ಕನಸು ಕಾಣುತ್ತಾಳೆ. ‘ಈ ಚಿತ್ರದಲ್ಲಿ ಹಳ್ಳಿ ಹುಡುಗಿಯಾದರೂ ತುಂಬಾ ಬೋಲ್ಡ್‌’ ಎನ್ನುತ್ತಾರೆ ಸಂಯುಕ್ತಾ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT