ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂರಕ್ಷಣೆಗೇ ಆದ್ಯತೆ ಇರಲಿ

Last Updated 31 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಅರಣ್ಯ ಹಾಗೂ ಪರಿಸರ ಕಾನೂನುಗಳನ್ನು ಸರಳಗೊಳಿಸಬೇಕು, ಅಭಿವೃದ್ಧಿ ಆದ್ಯತೆಗಳಿಗೆ ಸ್ಪಂದಿಸಬೇಕು, ಪರಿಸರ ರಕ್ಷಣೆಗೂ ಮಹತ್ವ ಸಿಗಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರದ ಪರಿಸರ ಅರಣ್ಯ ಸಚಿವಾಲಯ ಅರಣ್ಯ ಪರಿಸರ ಕಾಯ್ದೆಗಳಿಗೆ ತಿದ್ದುಪಡಿ ಸೂಚಿಸಲು ಉನ್ನತ ಮಟ್ಟದ ಸಮಿತಿಯನ್ನು ಆಗಸ್ಟ್ 29ರಂದು ರಚಿಸಿತು. ಹಿಂದಿನ ಕ್ಯಾಬಿನೆಟ್ ಸೆಕ್ರೆಟರಿ ಟಿ.ಎಸ್.ಆರ್. ಸುಬ್ರಹ್ಮಣ್ಯನ್ ಅವರ ಅಧ್ಯಕ್ಷತೆಯಲ್ಲಿ  ಆರು ಜನ ತಜ್ಞರ ಸಮಿತಿ ಕಳೆದ ವರ್ಷ ಎಂದರೆ 2014ರ ನವೆಂಬರ್‌ನಲ್ಲಿ ಕೇಂದ್ರ ಪರಿಸರ ಅರಣ್ಯ ಸಚಿವಾಲಯಕ್ಕೆ ತನ್ನ ಶಿಫಾರಸುಗಳನ್ನು ಸಲ್ಲಿಸಿದೆ.  ಪರಿಸರ ಕಾಯ್ದೆ 1986, ಅರಣ್ಯ ಕಾಯ್ದೆ 1980, ವನ್ಯಜೀವಿ ಕಾಯ್ದೆ 1972, ಜಲಮಾಲಿನ್ಯ ತಡೆ ಕಾಯ್ದೆ 1974, ವಾಯುಮಾಲಿನ್ಯ ತಡೆ ಕಾಯ್ದೆ 1981, ಭಾರತೀಯ ಅರಣ್ಯ ಕಾಯ್ದೆ 1927 – ಈ ಕಾನೂನುಗಳಿಗೆ ಉನ್ನತ ಮಟ್ಟದ ಈ ಸಮಿತಿ ತಿದ್ದುಪಡಿ ಸೂಚಿಸಿದೆ. ಇದೀಗ ಕೇಂದ್ರ ಸರ್ಕಾರದ ಈ ಉನ್ನತ ಮಟ್ಟದ ಸಮಿತಿ ಮಂಡಿಸಿದ 55 ಅಂಶಗಳು ಹಾಗೂ ಶಿಫಾರಸುಗಳ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳಬೇಕಾಗಿದೆ.

ಸುಬ್ರಹ್ಮಣ್ಯನ್ ಸಮಿತಿ ನೀಡಿದ ಶಿಫಾರಸುಗಳಲ್ಲಿ ಹಲವು ಸಂಗತಿಗಳು ಅರಣ್ಯ ರಕ್ಷಣೆಗೆ ಪೂರಕವಾಗಿವೆ. ಇದು ಸ್ವಾಗತಾರ್ಹ. ವನ್ಯಜೀವಿ ಸಂರಕ್ಷಣೆಗೆ ಆದ್ಯತೆ ನೀಡುವುದು, ಆಡಳಿತದಲ್ಲಿ ಸರಳೀಕರಣ, ಭಾರತೀಯ ಪರಿಸರ ಸೇವೆ (ಭಾರತೀಯ ಅರಣ್ಯ ಸೇವೆಯ ರೀತಿಯಲ್ಲಿ) ಜಾರಿಗೆ ತರುವುದು ಇತ್ಯಾದಿ ಶಿಫಾರಸುಗಳೆಲ್ಲಾ ಮುಖ್ಯವಾದವು.

ಆದರೆ ಈ ಸಮಿತಿಯ ಕೆಲವು ಶಿಫಾರಸುಗಳು ಮಾತ್ರ ತುಂಬಾ ಗೊಂದಲಮಯವಾಗಿವೆ. ಅರಣ್ಯ-ಪರಿಸರ ಸಂರಕ್ಷಣೆಗೆ ಪ್ರತಿಗಾಮಿಯಾಗಿ ಕಾಣುತ್ತವೆ. ಉದಾಹರಣೆಗೆ, ಉದ್ದಿಮೆಗಳ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅರಣ್ಯ ಇಲಾಖೆಗೆ ಭೂಮಿ ನೀಡುವಾಗ ಅಥವಾ ಒಪ್ಪಿಗೆ ನೀಡುವಾಗ ಗ್ರಾಮಸಭೆಯ ಒಪ್ಪಿಗೆ ಪಡೆಯುವ ಅವಶ್ಯಕತೆ ಇರಬೇಕಿಲ್ಲ ಎಂಬಂಥ  ಶಿಫಾರಸು ಮಾಡಲಾಗಿದೆ. ಅದೇ ರೀತಿ ವಿವಿಧ ಯೋಜನೆಗಳಿಗೆ ಅರಣ್ಯ ನಾಶವಾದಾಗ ಬದಲೀ ಅರಣ್ಯ ವನ್ನು ಬೆಳೆಸಲು ಕೇಂದ್ರ ಸರ್ಕಾರ ನೀಡುವ ಅನುದಾನವನ್ನು ಖಾಸಗಿ ಪ್ರದೇಶಗಳಿಗೆ ವಿಸ್ತರಿಸಬೇಕು ಎಂಬಂಥ ಶಿಫಾರಸು ಮಾಡಲಾಗಿದೆ.

ಉದ್ಯಮ ಅಥವಾ ಯೋಜನೆಗಳ ಪ್ರಸ್ತಾವಗಳಲ್ಲಿ ಮಂಡಿತವಾಗುವ ಅಂಶಗಳು ಹಾಗೂ ವಿವರಗಳ ಬಗ್ಗೆ ವಿಶ್ವಾಸ ಇಡಬೇಕು ಮತ್ತು ಅವನ್ನು ಸ್ವೀಕರಿಸಬೇಕು. ಯೋಜನೆಗೆ ಅರಣ್ಯ  ಹಾಗೂ ಪರಿಸರ ಇಲಾಖೆ ಒಪ್ಪಿಗೆ ನೀಡಬೇಕು ಎಂಬಂತಹ  ಸಲಹೆಯನ್ನೂ ನೀಡಲಾಗಿದೆ. ಅದೇ ರೀತಿ ಸಾರ್ವಜನಿಕ ಅಹವಾಲು ಸಭೆ, ಸಲಹಾ ರೂಪದಲ್ಲಿ ಇರಬೇಕೆಂಬ  ಶಿಫಾರಸನ್ನೂ ಮಾಡಲಾಗಿದೆ. ಹೀಗೆ ಸುಬ್ರಹ್ಮಣ್ಯನ್ ಸಮಿತಿಯ ಹಲವು ತಿದ್ದುಪಡಿಗಳು ದೇಶದ ಅರಣ್ಯ ಹಾಗೂ ಪರಿಸರ ಸಂರಕ್ಷಣೆಗೆ ಮಾರಕವಾಗಿವೆ. ಪ್ರಜಾಪ್ರಭುತ್ವ ಹಾಗೂ ವಿಕೇಂದ್ರೀಕರಣದ ಆಶಯಗಳಿಗೆ ವಿರುದ್ಧವಾಗಿವೆ.

ವನ್ಯಜೀವಿ ಸಂರಕ್ಷಿತ ಪ್ರದೇಶದಲ್ಲಿ ಬೃಹತ್ ಯೋಜನೆಗಳಿಗೆ ಅವಕಾಶ ನೀಡಬಾರದು ಎಂಬ ಸಮಿತಿಯ ಸಲಹೆ ಸಮಾಧಾನವನ್ನುಂಟು  ಮಾಡುವಂತಹದ್ದು. ಆದರೆ ದೇಶದ ಉಳಿದ ಶೇ 95ರಷ್ಟು ಸಾಮಾನ್ಯ ಅರಣ್ಯ ಪ್ರದೇಶದಲ್ಲಿ ಬೃಹತ್ ಉದ್ದಿಮೆಗಳಿಗೆ ಪ್ರವೇಶ ನೀಡಲು  ಅವಕಾಶ ಕಲ್ಪಿಸಬಹುದು ಎಂಬ ಶಿಫಾರಸು  ಆಘಾತಕಾರಿ ಸಂಗತಿ.

ರಾಷ್ಟ್ರೀಯ ಪರಿಸರ ನಿರ್ವಹಣಾ ಪ್ರಾಧಿಕಾರ ಹಾಗೂ ರಾಜ್ಯ ಪರಿಸರ ನಿರ್ವಹಣಾ ಪ್ರಾಧಿಕಾರ ರಚನೆ ಪ್ರಸ್ತಾವಗಳು ಮೇಲ್ನೋಟಕ್ಕೆ ಸ್ವಾಗತಾರ್ಹ ಎನಿಸಿದರೂ ಇವು ಇನ್ನಷ್ಟು ಚರ್ಚೆಗಳ ನಂತರವೇ ನಿರ್ಧಾರವಾಗಬೇಕಾದ ಮಹತ್ವದ ಅಂಶಗಳಾಗಿವೆ. ಏಕಗವಾಕ್ಷಿ ಪದ್ಧತಿ ಬಗ್ಗೆ ಸಮಗ್ರ ಪರಿಸರ ನಿರ್ವಹಣಾ ಕಾನೂನು ರಚನೆ ಬಗ್ಗೆ ಶಿಫಾರಸು ಮಾಡಲಾಗಿದೆ. ಇವೆಲ್ಲ ಚರ್ಚೆಗೆ ಒಳಪಡಬೇಕಾದ ಸಂಗತಿಗಳಾಗಿವೆ.

ಭಾರತದ ಅರಣ್ಯ-ಪರಿಸರ ಕಾಯ್ದೆಗಳು ಈ ನೆಲದ ರಕ್ಷಣೆಗೆ ಇರುವ ಬಹುಮಹತ್ವದ ಕಾನೂನುಗಳು. ಹಲವು ಸಂದರ್ಭಗಳಲ್ಲಿ ಸುಪ್ರೀಂ ಕೋರ್ಟ್‌, ಅರಣ್ಯ ಕಾನೂನಿನ ರಕ್ಷಣೆಗೆ ಮುಂದಾಗಿದೆ. ಅದಕ್ಕಾಗಿ ಹಸಿರು ನ್ಯಾಯಪೀಠದ ರಚನೆ ಆಗಿದೆ. ಅಭಿವೃದ್ಧಿ ಜೊತೆ ಪರಿಸರ ಸಂರಕ್ಷಣೆ ಎಂಬ  ಮಂತ್ರವನ್ನು ಸದಾ ಪಠಿಸುವ ರಾಜ್ಯ- ಕೇಂದ್ರ ಸರ್ಕಾರಗಳು ಅರಣ್ಯ ಪರಿಸರ ಕಾಯ್ದೆಗಳನ್ನು ಮೆತ್ತಗೆ ಮಾಡುವ ಪ್ರಯತ್ನ ಮಾಡುತ್ತಿವೆ ಎಂಬ ಅಭಿಪ್ರಾಯಗಳು ವ್ಯಕ್ತ ವಾಗುತ್ತಿವೆ.

ಪಶ್ಚಿಮ ಘಟ್ಟ ರಕ್ಷಣೆ ಬಗ್ಗೆ ಡಾ. ಮಾಧವ ಗಾಡ್ಗೀಳ್ ವರದಿ  ಹಾಗೂ ಡಾ. ಕಸ್ತೂರಿ ರಂಗನ್ ಸಮಿತಿ ವರದಿ ಎಲ್ಲವೂ ಮೂಲೆಗುಂಪಾಗುತ್ತಿವೆ. ಕರ್ನಾಟಕ ಸರ್ಕಾರವೇ ರಚಿಸಿದ ಪಶ್ಚಿಮ ಘಟ್ಟ ಕಾರ್ಯಪಡೆ ನೀಡಿದ ವರದಿಯೂ ಅರಣ್ಯ ಭವನದಲ್ಲಿ ‘ಕುಳಿತು’ಬಿಟ್ಟಿದೆ.

ಅರಣ್ಯ ಪರಿಸರ ಕಾಯ್ದೆಗಳಿಗೆ ತಿದ್ದುಪಡಿ ತರುವ ವಿಷಯ ಕೇಂದ್ರ ಸರ್ಕಾರದ ಮುಂದಿದೆ. ಇಲ್ಲಿ ತಜ್ಞರು, ಸಂಸ್ಥೆಗಳು, ರೈತರು ಹಾಗೂ ವನವಾಸಿಗಳ ಅಭಿಪ್ರಾಯ ಕೇಳಬೇಕು. ದೇಶದ ಪ್ರಜ್ಞಾವಂತ ಜನರು ತಮ್ಮ ಅಭಿಪ್ರಾಯ ಮಂಡಿಸಲೇಬೇಕಾದ ಸಂದರ್ಭವಿದು. ಕೇಂದ್ರ ಅರಣ್ಯ ಪರಿಸರ ಕಾನೂನುಗಳು ಬಲಹೀನವಾಗದಂತೆ ನಾಗರಿಕರು ಧ್ವನಿ ಎತ್ತಬೇಕಾದ ಅವಶ್ಯಕತೆ ಇದೆ. ಭೂಸ್ವಾಧೀನ ಕಾಯ್ದೆ ತಿದ್ದುಪಡಿ ವಿಷಯದಲ್ಲಿ ರೈತರ ಜೊತೆ ರಾಜಕೀಯ ಪಕ್ಷಗಳು ಧ್ವನಿ ಎತ್ತುತ್ತವೆ. ಆದರೆ ಅದೇ ಅರಣ್ಯ - ಪರಿಸರ ಕಾನೂನುಗಳ ತಿದ್ದುಪಡಿ ವಿಚಾರದಲ್ಲಿ ಅರಣ್ಯ ಹಾಗೂ ಪರಿಸರ ಸಂರಕ್ಷಣೆಯ ಪರ ವಾದ ಮಾಡುವವರು ಯಾರು? ನದಿ,ಕಣಿವೆ, ಬೆಟ್ಟ, ಕೆರೆಗಳಿಗೆ ಮತ್ತು ವೃಕ್ಷಗಳಿಗೆ ಮತ ಹಾಕುವ ಅಧಿಕಾರ ಇಲ್ಲ, ಅವುಗಳಿಗೆ ಧ್ವನಿಯೂ ಇಲ್ಲ. ರಾಜಕೀಯ ಪಕ್ಷಗಳು ಅರಣ್ಯ ರಕ್ಷಣೆ ಪರ ಎದ್ದು ನಿಲ್ಲುತ್ತವೆಯೇ? ವಿವಿಧ ರಾಜ್ಯಗಳ ಅರಣ್ಯ ಇಲಾಖೆಗಳು ಏಕೆ ತಿದ್ದುಪಡಿಗಳ ಬಗ್ಗೆ ಚಕಾರ ಎತ್ತುತ್ತಿಲ್ಲ? ಕಡೇಪಕ್ಷ ರಾಜ್ಯದಲ್ಲಿರುವ ಜೀವವೈವಿಧ್ಯ ಮಂಡಳಿ, ಮಾಲಿನ್ಯ ನಿಯಂತ್ರಣ ಮಂಡಳಿಗಳಾದರೂ ಈ ಬಗ್ಗೆ ಎಂದಾದರೂ ಧ್ವನಿ ಎತ್ತಿವೆಯೆ?

ವಿಶಾಲವಾದ ಭಾರತ ದೇಶದ ಎಲ್ಲೆಡೆ ಸಂಚರಿಸಿ ಸುಬ್ರಹ್ಮಣ್ಯನ್ ಸಮಿತಿ ಅಭಿಪ್ರಾಯ ಕ್ರೋಡೀಕರಿಸಿದೆಯೆ? ಯಾವುದೇ ಸಮಿತಿ ಕೇವಲ 4 ತಿಂಗಳಲ್ಲಿ  ಏನು ತಾನೆ ಮಾಡಲು ಸಾಧ್ಯ? ಕೇಂದ್ರ ಸರ್ಕಾರದ  ಅರಣ್ಯ - ಪರಿಸರ  ಸಚಿವಾಲಯ  ಸುಬ್ರಹ್ಮಣ್ಯನ್ ಸಮಿತಿಯ ವರದಿಯನ್ನು ವ್ಯಾಪಕ ಚರ್ಚೆಗೆ ಒಳಪಡಿಸಬೇಕು. ರಾಜ್ಯಗಳ ಅರಣ್ಯ ಪರಿಸರ ಇಲಾಖೆಗಳು ಅಂಥ ಚರ್ಚೆಗೆ ಅವಕಾಶ ಕಲ್ಪಿಸಬೇಕು. ದೇಶದ ಸುಸ್ಥಿರ ಅಭಿವೃದ್ಧಿ, ನೈಸರ್ಗಿಕ ಸಂಪನ್ಮೂಲಗಳ ಉಳಿವಿನ ಜೊತೆ ಬೆಸೆದುಕೊಂಡಿದೆ. ಆದ್ದರಿಂದ ಕೇವಲ ಅಭಿವೃದ್ಧಿಗಾಗಿ ಕಾನೂನು ತಿದ್ದುಪಡಿ ಎನ್ನಬಾರದು. ಪರಿಸರ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ಸಮತೂಕದ ತಿದ್ದುಪಡಿ ಎಂಬ ನೀತಿ ಅನುಸರಿಸಬೇಕು.
-ಲೇಖಕರು ಪಶ್ಚಿಮ ಘಟ್ಟ ಕಾರ್ಯಪಡೆಯ ಮಾಜಿ ಅಧ್ಯಕ್ಷರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT