ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನ ಆಶಯದ ಉಲ್ಲಂಘನೆ

Last Updated 26 ಜೂನ್ 2014, 19:30 IST
ಅಕ್ಷರ ಗಾತ್ರ

ರಾಜ್ಯ ಸರ್ಕಾರ ಐವರನ್ನು ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡಿದೆ. ಇವರಲ್ಲಿ ನಟಿ ಜಯಮಾಲಾರನ್ನು ಹೊರತು­ಪಡಿ­ಸಿ­ದರೆ ಉಳಿದವರೆಲ್ಲರೂ ಸಕ್ರಿಯ ರಾಜಕಾರಣಿಗಳು. ಹೀಗೆ ಸಕ್ರಿಯ ರಾಜ­­ಕಾ­ರ­ಣಿ­ಗಳನ್ನು ಮೇಲ್ಮನೆಗೆ ನಾಮನಿರ್ದೇಶನ ಮಾಡುವುದು ಸಂವಿ­ಧಾನದ ಆಶ­ಯ­ಗಳಿಗೆ ಅಪಚಾರ ಮಾಡಿದಂತೆ.

ನಿಯ­ಮ­ಗಳ ಪ್ರಕಾರ, ಕಲೆ, ಸಾಹಿತ್ಯ, ವಿಜ್ಞಾನ, ಸಮಾಜ ಸೇವೆ,  ಸಹಕಾರ ಕ್ಷೇತ್ರಗ­ಳಲ್ಲಿ ವಿಷಯ ತಜ್ಞತೆ ಹಾಗೂ ಅನು­ಭವ ಇರುವವರನ್ನು ಮೇಲ್ಮನೆಗೆ ರಾಜ್ಯ­ಪಾ­ಲರು ನೇಮಕ ಮಾಡ­ಬೇಕು. ಚುನಾವಣಾ ಕಣಕ್ಕಿಳಿದು ಗೆಲ್ಲಲಾರದ ವಿವಿಧ ಕ್ಷೇತ್ರ­ಗಳ ಸಾಧಕರಿಗೆ ಅವ­ಕಾಶ ಕೊಡಬೇಕೆಂಬುದು ಇದರ ಉದ್ದೇಶ. ಆದರೆ ‘ಸಮಾಜ ಸೇವೆ’ ಹೆಸ­ರಲ್ಲಿ ಮೇಲ್ಮನೆಗೆ ರಾಜಕಾರಣಿಗಳನ್ನು ನಾಮ­ನಿರ್ದೇ­ಶನ ಮಾಡು­ವಂ­ತಹ ಕೆಟ್ಟ ಸಂಪ್ರದಾಯ ಬೆಳೆದುಬಂದಿದೆ. ಇದು ಸರಿಯಲ್ಲ.

ವಿಧಾ­ನಸಭೆ, ಸ್ಥಳೀಯ ಸಂಸ್ಥೆ ಅಥವಾ ಪದವೀಧರ ಕ್ಷೇತ್ರಗಳ ಮೂಲಕ ವಿಧಾನ ಪರಿ­ಷತ್ ಪ್ರವೇಶಕ್ಕೆ ರಾಜಕಾರಣಿಗಳಿಗೆ ಅವಕಾಶ ಇದ್ದೇ ಇದೆ. ಹೀಗಿದ್ದೂ ವಿಧಾನ ಪರಿಷತ್‌ನ ನಾಮನಿರ್ದೇಶನದ ಸ್ಥಾನಗಳನ್ನೂ ಕಬ­ಳಿ­ಸಲು ರಾಜ­ಕಾರ­ಣಿಗಳು ಮುಂದಾಗುತ್ತಿರುವುದು ಸರಿಯಲ್ಲ. ಈ ಕೆಟ್ಟ ಸಂಪ್ರದಾಯಕ್ಕೆ ಕಡಿ­ವಾಣ ಹಾಕಲೇಬೇಕು.

ಹಿಂದೆಲ್ಲಾ ಒಬ್ಬಿಬ್ಬರು ರಾಜಕಾರಣಿಗಳನ್ನು ಪರಿಷತ್‌ಗೆ ನಾಮನಿರ್ದೇಶನ ಮಾಡ­­ಲಾಗು­ತ್ತಿತ್ತು. ಉಳಿದಂತೆ ಆಯಾ ಕ್ಷೇತ್ರಗಳ ಗಣ್ಯರನ್ನೇ ನೇಮಕ ಮಾಡ­ಲಾಗುತ್ತಿತ್ತು. ಆದರೆ ಈಚಿನ ದಿನಗಳಲ್ಲಿ ಸಾರಾಸಗಟಾಗಿ ಎಲ್ಲಾ ಸ್ಥಾನ­ಗಳಿಗೂ ರಾಜ­ಕಾ­ರಣಿಗಳನ್ನೇ ನೇಮಕ ಮಾಡುವುದು ಚಟವೇ ಆಗಿದೆ. ಹಿಂದಿನ ಬಿಜೆಪಿ ಸರ್ಕಾ­ರವೂ ಇದನ್ನೇ ಮಾಡಿತ್ತು. ಸಿದ್ದರಾಮಯ್ಯ ನೇತೃತ್ವದ ಈಗಿನ ಸರ್ಕಾರ ಕೂಡ ಅದೇ ಹಾದಿ ಹಿಡಿದಿದೆ. ಇದರಿಂದ ಮೇಲ್ಮನೆಗೆ ಇರುವ ಚಿಂತಕರ ಚಾವಡಿ, ಹಿರಿಯರ ಮನೆ ಎಂಬಂಥ ಹೆಸರುಗಳು ಅರ್ಥ­ಹೀ­ನವಾಗುತ್ತವೆ.

ಯಾವುದೇ ಸರ್ಕಾರ, ರಾಜಕಾರಣಿಗಳನ್ನು ನೇಮಕ ಮಾಡಲು ಮುಂದಾದರೆ ಅದನ್ನು ತಡೆ­ಯುವುದು ರಾಜ್ಯಪಾಲರ ಕರ್ತವ್ಯ. ಈ ಹಿಂದೆ ಬಿಜೆಪಿಯಿಂದ ವಿ.ಸೋಮಣ್ಣ ಅವರನ್ನು ನಾಮನಿರ್ದೇಶನ ಮಾಡಲು ಯತ್ನಿಸಿದಾಗ ರಾಜ್ಯ­ಪಾಲರು ಅದನ್ನು ತಿರಸ್ಕರಿಸಿದ್ದರು. ಆದರೆ ನಂತ­ರದ ದಿನಗಳಲ್ಲಿ, ರಾಜಕಾ­ರ­ಣಿ­ಗಳನ್ನೇ ಬಿಜೆಪಿ ನಾಮನಿರ್ದೇಶನ ಮಾಡಿದಾಗ ಅದನ್ನು ಒಪ್ಪಿಕೊಂಡಿದ್ದರು. ಈಗಲೂ ಹಾಗೆಯೇ ಮಾಡಿ­ದ್ದಾರೆ. ಇಲ್ಲಿ ರಾಜ್ಯಪಾಲರ ನಡೆ ಶಂಕಾಸ್ಪದ­ವಾಗಿದೆ. ಈ ದ್ವಿಮುಖ ನೀತಿ ಸರಿ­ಯಲ್ಲ.

ರಾಜ್ಯಸಭೆ ನಾಮಕರಣಗಳಲ್ಲಿ ನಿಯ­ಮ­ಗಳ ಪಾಲನೆ ಸ್ವಲ್ಪ­ಮಟ್ಟಿಗಾದರೂ ಆಗುತ್ತಿದೆ. ಹೀಗಿದ್ದೂ ಮಣಿಶಂಕರ್‌ ಅಯ್ಯರ್‌ ಅವರಂತಹ  ರಾಜಕಾರಣಿ ರಾಜ್ಯಸಭೆಗೆ ನಾಮ ನಿರ್ದೇಶನಗೊಂಡ ಉದಾ­ಹರಣೆ ಇದೆ. ಆದರೆ ಸಚಿನ್‌ ತೆಂಡೂಲ್ಕರ್‌, ಲತಾ ಮಂಗೇಶ್ಕರ್‌, ರಾಜಾ­ರಾಮಣ್ಣ, ಆರ್.ಕೆ. ನಾರಾಯಣ್ ಮುಂತಾದ ವಿವಿಧ ಕ್ಷೇತ್ರಗಳ ಸಾಧಕರು ರಾಜ್ಯ­ಸಭೆಗೆ ನಾಮನಿರ್ದೇಶನಗೊಂಡಿದ್ದಾರೆ ಎಂಬು­ದನ್ನು ಮರೆಯು­ವಂತಿಲ್ಲ.

ಮೇಲ್ಮ­ನೆಗೆ ನಾಮನಿರ್ದೇಶನಗೊಳ್ಳುವವರಿಗೆ ಇರಬೇಕಾದ ಅರ್ಹತೆ, ಮಾನ­ದಂಡಗಳ ಕುರಿತಂತೆ ಸ್ಪಷ್ಟನೆ ಇದ್ದರೆ ಅದು ದುರ್ಬಳಕೆ ಆಗು­ವುದು ತಪ್ಪು­ತ್ತದೆ. ಮೇಲ್ಮನೆಗೆ ರಾಜಕಾರಣಿಗಳನ್ನೇ ನಾಮ­ನಿರ್ದೇಶನ ಮಾಡು­ವು­ದಾ­ದರೆ, ನಾಮನಿರ್ದೇಶನಗಳ ಕುರಿತಂತಹ ನಿಯಮ­ವಾ­ದರೂ ಯಾಕಿ­ರ­ಬೇಕು? ರಾಜಕಾರಣಿಗಳನ್ನು ಚುನಾವಣೆ ಮೂಲಕ ಮೇಲ್ಮನೆಗೆ ಗೆಲ್ಲಿಸಿ­ಕೊಳ್ಳಲಿ. ನಾಮನಿರ್ದೇಶನ ಪದ್ಧತಿಯನ್ನೇ ರದ್ದು ಮಾಡುವುದು ಒಳ್ಳೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT